ಬೆಂಗಳೂರು: ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ ನಡೆಯಲಿರುವ ಭಾರತದ ರಾಷ್ಟ್ರೀಯ ಜನಗಣತಿ–2027 ಕಾರ್ಯದ ಅಂಗವಾಗಿ ಗಣತಿದಾರರು ಮತ್ತು ಮೇಲ್ವಿಚಾರಕರಾಗಿ ನೇಮಕಗೊಂಡಿರುವ ಎಲ್ಲಾ ಅಧಿಕಾರಿ ಮತ್ತು ನೌಕರರುಗಳು ಈ ಕೂಡಲೇ ತಮಗೆ ನಿಯೋಜಿಸಿರುವ ಗಣತಿ ಬ್ಲಾಕ್ ಹಾಗೂ ಮೇಲ್ವಿಚಾರಕರ ಸರ್ಕಲ್ ಗಳಲ್ಲಿ ಕಡ್ಡಾಯವಾಗಿ ಕೆಲಸಕ್ಕೆ ಹಾಜರಾಗಿ ಕರ್ತವ್ಯ ನಿರ್ವಹಿಸುವಂತೆ ಆಯುಕ್ತರು ಹಾಗೂ ಪ್ರಧಾನ ಜನಗಣತಿ ಅಧಿಕಾರಿ ಡಿ.ಎಸ್.ರಮೇಶ್ ಸೂಚಿಸಿದರು.
ನಿಯೋಜಿಸಲಾದ ಗಣತಿದಾರರು ಹಾಗೂ ಮೇಲ್ವಿಚಾರಕರುಗಳಿಗೆ ಅಂತಿಮ ಕರೆ
ಪೂರ್ವ ನಗರ ಪಾಲಿಕೆ ವ್ಯಾಪ್ತಿಯಲ್ಲಿ 3373-ಗಣತಿದಾರರನ್ನು ಮತ್ತು 557-ಮೇಲ್ವಿಚಾರಕರನ್ನು ರಾಷ್ಟ್ರೀಯ ಜನಗಣತಿ 2027ರ ಕಾರ್ಯಕ್ಕೆ ಈಗಾಗಲೇ ನಿಯೋಜಿಸಿ ಆದೇಶವನ್ನು ನೀಡಲಾಗಿರುತ್ತದೆ. ನಿಯೋಜಿತ ಎಲ್ಲಾ ಅಧಿಕಾರಿ ಮತ್ತು ನೌಕರರಿಗೆ ದಿನಾಂಕ 6.04.2026 ರಿಂದ 14.04.2026 ರವರೆಗೆ ಎರಡು ಹಂತಗಳಲ್ಲಿ ತರಬೇತಿಯನ್ನು ಸಹಾ ನೀಡಲಾಗಿರುತ್ತದೆ. ತರಬೇತಿಗೆ ಗೈರುಹಾಜರಾಗಿರುವ ಅಧಿಕಾರಿ ಮತ್ತು ನೌಕರರಿಗೆ ಈಗಾಗಲೇ ಕಾರಣ ಕೇಳಿ ಪತ್ರ ಜಾರಿಗೊಳಿಸಲಾಗಿರುತ್ತದೆ.
ತರಬೇತಿಗೆ ಗೈರುಹಾಜರಾಗಿರುವ ಹಾಗೂ ತರಬೇತಿಗೆ ಹಾಜರಾಗಿ ಕರ್ತವ್ಯಕ್ಕೆ ಗೈರುಹಾಜರಾಗಿರುವ ಗಣತಿದಾರರು ಮತ್ತು ಸೂಪರ್ ವೈಸರ್ಸ್ ಈ ಕೂಡಲೇ ನಿಯೋಜಿಸಲ್ಪಟ್ಟ ವಾರ್ಡ್ ವ್ಯಾಪ್ತಿಯಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಎಂದು ಆಯುಕ್ತರು ಎಚ್ಚರಿಸಿದರು.
ಗೈರುಹಾಜರಾತಿಗೆ ಶಿಸ್ತು ಕ್ರಮ
ಇದುವರೆಗೆ ನಿಯೋಜಿಸಲ್ಪಟ್ಟಿರುವ ಗಣತಿ ಬ್ಲಾಕ್ ಹಾಗೂ ಸೂಪರ್ವೈಸರ್ ಸರ್ಕಲ್ ಗಳಲ್ಲಿ ಕರ್ತವ್ಯಕ್ಕೆ ಹಾಜರಾಗದ ಗಣತಿದಾರರು ಮತ್ತು ಸೂಪರ್ವೈಸರ್ ಗಳ ವಿರುದ್ಧ ಜನಗಣತಿ ಕಾಯ್ದೆಯ1948ರ ಸೆಕ್ಷನ್ 11ರ ನಿಯಮಗಳ ಪ್ರಕಾರ, ಯಾವುದೇ ಜನಗಣತಿ ಅಧಿಕಾರಿ ಅಥವಾ ಜನಗಣತಿ ಕಾರ್ಯದಲ್ಲಿ ಸಹಾಯ ಮಾಡಲು ಕಾನೂನಿನ ಪ್ರಕಾರ ಕರೆಯಲ್ಪಟ್ಟ ಯಾವುದೇ ವ್ಯಕ್ತಿ. ಈ ಕಾಯ್ದೆ ಅಥವಾ ಅದರ ಅಡಿಯಲ್ಲಿ ಮಾಡಲಾದ ಯಾವುದೇ ನಿಯಮಗಳಿಂದ ವಿಧಿಸಲ್ಪಟ್ಟ ಕರ್ತವ್ಯವನ್ನು ನಿರಾಕರಿಸಿದರೆ, ಅಥವಾ ಮತ್ತೊಬ್ಬ ವ್ಯಕ್ತಿ ಅಂತಹ ಕರ್ತವ್ಯವನ್ನು ನಿರ್ವಹಿಸುವುದನ್ನು ತಡೆಯುವ ಅಥವಾ ಅಡ್ಡಿಪಡಿಸುವುವವರಿಗೆ ಕ್ರಮ ಕೈಗೊಳ್ಳಲಾಗುವುದು:
ರೂ.1000/- (ರೂಪಾಯಿ ಒಂದು ಸಾವಿರ ಮಾತ್ರ) ವರೆಗೆ ದಂಡ ವಿಧಿಸಲಾಗುತ್ತದೆ. *ಜೊತೆಗೆ 3 ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾಗೃಹ ಶಿಕ್ಷೆಯನ್ನೂ ವಿಧಿಸಲು ಅವಕಾಶವಿರುತ್ತದೆ.
ಗೈರುಹಾಜರಾತಿ ಅವಧಿಯನ್ನು ಡೈಸ್-ನಾನ್ (Dies-Non) ಎಂದು ಪರಿಗಣಿಸಲಾಗುವುದು. ಸೇವಾ ನಿಯಮಾವಳಿಯಂತೆ ಶಿಸ್ತು ಕ್ರಮ ಹಾಗೂ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಅಗತ್ಯವಿದ್ದಲ್ಲಿ ಮೊಕದ್ದಮೆ ದಾಖಲಿಸಲಾಗುವುದು ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
ಆಯುಕ್ತರ ಎಚ್ಚರಿಕೆ
ಜನಗಣತಿ ಕಾರ್ಯವು ರಾಷ್ಟ್ರೀಯ ಮಹತ್ವದ ಕರ್ತವ್ಯವಾಗಿದ್ದು, ಎಲ್ಲಾ ನೇಮಕಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ತಕ್ಷಣವೇ ತಮಗೆ ನಿಯೋಜಿಸಲಪಟ್ಟ ವಾರ್ಡ ವ್ಯಾಪ್ತಿಯಲ್ಲಿನ ಚಾರ್ಜ್ ಅಧಿಕಾರಿಗಳಲ್ಲಿ ಕರ್ತವ್ಯಕ್ಕೆ ಹಾಜರಾಗಿ ಜನಗಣತಿ ಕಾರ್ಯವನ್ನು ಯಶಸ್ವಿಯಾಗಿ ಮತ್ತು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸುವ ಮೂಲಕ ಜವಾಬ್ದಾರಿಯುತವಾಗಿ ರಾಷ್ಟ್ರೀಯ ಕಾರ್ಯವನ್ನು ನಿರ್ವಹಿಸುವಂತೆ ಆಯುಕ್ತರು ಎಚ್ಚರಿಕೆ ನೀಡಿದರು.
