ಬೆಂಗಳೂರು: AI ತಂತ್ರಜ್ಞಾನ ಬಳಸಿ ಈ ವರ್ಷವೇ ಟೆಲಿ ರೆಡಿಯೋಲಾಜಿ, ಆಪ್ತಮಾಲೊಜಿ ಸೇವೆ ಮುಖಾಂತರ ರೋಗ ಪತ್ತೆ ಮಾಡುವ ನೂತನ ವ್ಯವಸ್ಥೆ ಜಾರಿಗೆ ತರಲು ಸಿದ್ದತೆ ನಡೆದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ತಿಳಿಸಿದರು.
ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಟೆಲಿಮೆಡಿಸಿನ್ ಸೊಸೈಟಿ ಆಫ್ ಇಂಡಿಯಾ ಅವರ 21 ನೇ ಅಂತರರಾಷ್ಟ್ರೀಯ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿ ಮಾತನಾಡಿದ ಅವರು, ಟೆಲಿ ಐಸಿಯು ಫೆಸಿಲಿಟಿ ಅತ್ಯಂತ ಆಸಕ್ತಿದಾಯಕ ವಿಷಯವಾಗಿದ್ದು, ಆರೋಗ್ಯ ಇಲಾಖೆ ಕೂಡ ಈ ನಿಟ್ಟಿನಲ್ಲಿ ಕರ್ನಾಟಕದಾದ್ಯಂತ ಕಾರ್ಯೋನ್ಮುಖವಾಗಿದೆ. ಅದಕ್ಕೆ ಬೇಕಾದ ಸಾಪ್ಟವೇರ್, ತಂತ್ರಜ್ಞಾನ ಸಹ ಲಭ್ಯವಿದ್ದು. ಅದನ್ನು ಸರಿಯಾಗಿ ಬಳಸಬೇಕಾಗಿದೆ.
ಟೆಲಿ ಐಸಿಯು ಫೆಸಿಲಿಟಿ 42 ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರಾರಂಭ:
ಆರೋಗ್ಯ ಇಲಾಖೆ ಈಗಾಗಲೇ ಟೆಲಿ ಐಸಿಯು ಫೆಸಿಲಿಟಿಯನ್ನು 42 ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರಾರಂಭಿಸಿದ್ದು, ಮುಂದಿನ ವರ್ಷದಲ್ಲಿ ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗಳಲ್ಲಿ ಪ್ರಾರಂಭಿಸಲು ಸಿದ್ಧತೆ ನಡೆಸಲಾಗಿದೆ. ಇದಕ್ಕೆ ಅತ್ಯುತ್ತಮ ದರ್ಜೆಯ ಕ್ಯಾಮರಾ ಬಳಸಲಾಗುತ್ತಿದ್ದು ದೂರದಲ್ಲಿದ್ದುಕೊಂಡೇ ತಜ್ಞ ವೈದ್ಯರು ಹಳ್ಳಿಯಲ್ಲಿರುವ ರೋಗಿಗೆ ಚಿಕಿತ್ಸೆ ನೀಡಲು ಸ್ಥಳೀಯ ವೈದ್ಯರಿಗೆ ನೆರವಾಗಬಹುದು.
ಟೆಲಿ ಕಾರ್ಡಿಯೋಲಾಜಿ ಮೂಲಕ ಜನರಿಗೆ ಆರೋಗ್ಯ ಸೇವೆ:
ಈಗಾಗಲೇ 82 ತಾಲ್ಲೂಕು ಅಸ್ಪತ್ರೆಗಳಲ್ಲಿ ಟೆಲಿ ಕಾರ್ಡಿಯೋಲಾಜಿ ವ್ಯವಸ್ಥೆ ಮೂಲಕ ಜನರಿಗೆ ಆರೋಗ್ಯ ಸೇವೆ ನೀಡುತ್ತಿದ್ದು, ದುಬಾರಿ ದರದ ಇಂಜೆಕ್ಷನ್ ಸಹ ಉಚಿತವಾಗಿ ನೀಡಲಾಗುತ್ತಿದೆ. ಇದರಿಂದ 600 ಜೀವಗಳನ್ನು ಕಳೆದ ಒಂದುವರೆ ವರ್ಷದಲ್ಲಿ ಉಳಿಸಲಾಗಿದೆ. ಕೇವಲ 8/9 ನಿಮಿಷದಲ್ಲಿ ಪರಿಣಿತ ವೈದ್ಯರು ಇಸಿಜಿ ಪರೀಕ್ಷಿಸಿ ಸೂಕ್ತ ಚಿಕಿತ್ಸೆ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದನ್ನು ರಾಜ್ಯದ ಎಲ್ಲ ತಾಲ್ಲೂಕು ಆಸ್ಪತ್ರೆಗೆ ಇದೇ ವರ್ಷ ಕಲ್ಪಿಸಲಾಗುತ್ತದೆ.
ಮೆಡಿಕಲ್ ಫೆಸಿಲಿಟಿ, ಟೂರಿಸಂನಲ್ಲಿ ಕರ್ನಾಟಕ ಮುಂಚೂಣಿ:
ಆರೋಗ್ಯ ಇಲಾಖೆ ಅರೋಗ್ಯ ಉಪಕರಣಗಳ ಮೆಂಟೆನೆನ್ಸ್ ಮಾಡಲು ತಂತ್ರಜ್ಞಾನ ಬಳಸಿಕೊಂಡು ಕೆಲಸ ಮಾಡುತ್ತಿದೆ. ನಾವು ಈ ಎಲ್ಲ ತಂತ್ರಜ್ಞಾನ ಬಳಸಿ ಹಳ್ಳಿಯಲ್ಲಿ ವಾಸಿಸುವವರಿಗೂ ಉತ್ತಮ ಚಿಕಿತ್ಸೆ ನೀಡಲು, ಪರಿಣಿತ ವೈದ್ಯರ ಸಲಹೆ ಸಿಗುವಂತೆ ಮಾಡಲು ಕಾರ್ಯೋನ್ಮುಖರಾಗಿದ್ದೇವೆ. ಇಲ್ಲಿರುವ ಪರಿಣಿತರು,
ನಮ್ಮ ಆರೋಗ್ಯ ಇಲಾಖೆಯ ತಜ್ಞರೊಂದಿಗೆ ಸಮಾಲೋಚನೆ ನಡೆಸೋಣ ಎಂದು ಆಹ್ವಾನ ನೀಡುತ್ತಿದ್ದೇನೆ. ಅದಕ್ಕೆ ನಾನೇ ಮುಂದೆ ನಿಂತು ವ್ಯವಸ್ಥೆ ಮಾಡುತ್ತೇನೆ. ನಿಮ್ಮ ಸಲಹೆ ಆರೋಗ್ಯ ಇಲಾಖೆಗೂ ಉಪಯೋಗ ಆಗಲಿ. ಕರ್ನಾಟಕ ಮೆಡಿಕಲ್ ಫೆಸಿಲಿಟಿ, ಟೂರಿಸಂ ಗೆ ಮುಂಚೂಣಿಯಲ್ಲಿದ್ದು ಬೇರೆ ಬೇರೆ ದೇಶಗಳಿಂದ ಜನರು ಇಲ್ಲಿಗೆ ಬರುತ್ತಿದ್ದಾರೆ. AI ಮತ್ತು ಡಿಜಿಟಲ್ ತಂತ್ರಜ್ಞಾನ ಹೆಚ್ಚಿನ ಜನಸಂಖ್ಯೆ ಇರುವ, ವಿಸ್ತಾರವಾಗಿರುವ ನಮ್ಮ ದೇಶಕ್ಕೆ ಬಹಳ ಉಪಯುಕ್ತ ಎಂದು ಹೇಳಿದರು.
