ಬೆಂಗಳೂರು: ಇತಿಹಾಸ ಮರೆತವನು ಇತಿಹಾಸ ಸೃಷ್ಟಿಸಲಾರ. ಮಾತೃಭಾಷೆ ಮರೆತವನು ತನ್ನ ಸಂಸ್ಕೃತಿ ಉಳಿಸಲಾರ. ನಿಮ್ಮ ಮುಂದಿನ ಪೀಳಿಗೆಗೆ ಅರೆಭಾಷಿಕರ ಸಂಸ್ಕೃತಿ, ಆಚಾರ, ವಿಚಾರಗಳನ್ನು ದಾಟಿಸಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ 2024ನೇ ಸಾಲಿನ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಬಾಗವಹಿಸಿ ಅವರು ಮಾತನಾಡಿದರು.
ಈ ವಿಶಾಲವಾದ ಪ್ರಪಂಚದಲ್ಲಿ ನಾವು ಎಲ್ಲಿ ಬೇಕಾದರೂ ಬದುಕಬಹುದು. ಆದರೆ ನಮ್ಮ ಮೂಲವನ್ನು ಮರೆಯಬಾರದು. ನಾವು ಎಲ್ಲೇ ಇದ್ದರು ನಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಕೆಲಸ ಮಾಡಬೇಕು ಎಂದರು.
ಒಂದು ಸಮಾಜ ಅಕ್ಷರ ಮರೆತರೆ ಕಲಿಸಬಹುದು. ಆದರೆ ಕಲೆ, ಸಂಸ್ಕೃತಿ ಮರೆತರೆ ಮತ್ತೆ ಕಲಿಸುವುದಕ್ಕೆ ಸಾಧ್ಯವಿಲ್ಲ. ನಮ್ಮ ಹುಟ್ಟು ಸಾವಿನ ಮಧ್ಯದಲ್ಲಿ ಮನುಷ್ಯ ಏನು ಸಾಧನೆ ಮಾಡುತ್ತಾನೆ ಎನ್ನುವುದು ಮುಖ್ಯ ಎಂದು ಹೇಳಿದರು.
ಜನಸಂಖ್ಯೆ ಕಡಿಮೆಯೆಂದು ಹಿಂಜರಿಕೆ ಬೇಡ:
ನಿಮ್ಮ ಜನಸಂಖ್ಯೆ ಕೇವಲ 4 ಲಕ್ಷ ಮಾತ್ರವಿದೆ ಎಂದು ಹಿಂಜರಿಕೆ ಬೇಡ. ಒಂದು ಪಬುದ್ಧ ನಾಯಕತ್ವ ಅಥವಾ ತೀರ್ಮಾನ ನಿಮ್ಮನ್ನು ಎಲ್ಲಿಗೆ ಬೇಕಾದರೂ ಕೊಂಡೊಯ್ಯಬಹುದು. ನಾಯಕನಾದವನಿಗೆ ಲಕ್ಷಾಂತರ ಜನ ಹಿಂಬಾಲಕರು ಬೇಡ. ಧೈರ್ಯ ಹಾಗೂ ತೀರ್ಮಾನ ಬೇಕು. ನಿಮ್ಮ ಜನಸಂಖ್ಯೆ ಕಡಿಮೆ ಇದ್ದರೂ ಅನೇಕರು ದೊಡ್ಡ ಸ್ಥಾನಕ್ಕೆ ಹೋಗಿಲ್ಲವೇ? ಕೇವಲ ನಾಯಕತ್ವ ಎಂದರೆ ರಾಜಕೀಯ ಮಾತ್ರವಲ್ಲ. ಔದ್ಯೋಗಿಕ, ಶಿಕ್ಷಣ, ಸಾಹಿತ್ಯ, ಸಂಗೀತ ಹೀಗೆ ಅನೇಕ ಕ್ಷೇತ್ರದಲ್ಲಿ ಅರೆಭಾಷಿಕರು ಸಾಧನೆ ಮಾಡಿದ್ದಾರೆ ಎಂದರು.
ಅರೆಭಾಷೆ ಸಂಘಟನೆಯವರು ತಮ್ಮ ಚಟುವಟಿಕೆಗಳನ್ನು ನಡೆಸಲು ನಿವೇಶನದ ಅವಶ್ಯಕತೆಯಿದೆ ಎಂದು ಮನವಿ ಸಲ್ಲಿಸಿದ್ದಾರೆ. ನನ್ನ ಭೇಟಿ ಮಾಡಿ ಮನವಿ ಸಲ್ಲಿಸಿದರೆ ಲಭ್ಯತೆ ನೋಡಿಕೊಂಡು ಜಾಗ ನೀಡಲಾಗುವುದು. ರಾಜಕೀಯ ಹೋಗುತ್ತದೆ, ಬರುತ್ತದೆ. ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದರು.
ವಿಧಾನಸಭೆಯಲ್ಲಿ ಎಲ್ಲ 224 ಶಾಸಕರ ಕನ್ನಡ ಸಮಾಗಮ:
ಬೆಳಗಾವಿ, ರಾಯಚೂರು, ಶಿವಮೊಗ್ಗ, ಮೈಸೂರು, ಬೆಂಗಳೂರು, ಮಂಗಳೂರು, ಕೊಡಗು ಸೀಮೆಯ ಕನ್ನಡ ಭಾಷೆಗಳೇ ಬೇರೆ ರೀತಿ. ನನ್ನ ಹುಟ್ಟೂರು ಕನಕಪುರದ ಕನ್ನಡ ಭಾಷೆ ಬೇರೆ. ಆದರೆ ವಿಧಾನಸಭೆಯಲ್ಲಿ ಎಲ್ಲ 224 ಶಾಸಕರ ಕನ್ನಡ ಒಂದೇ ಕಡೆ ಸಮಾಗಮ ಆಗುತ್ತದೆ ಎಂದು ತಿಳಿಸಿದರು.
ಜಗತ್ತಿನಲ್ಲಿ 7 ಸಾವಿರಕ್ಕೂ ಹೆಚ್ಚು ಭಾಷೆಗಳಿವೆ. ಅದರಲ್ಲಿ ಸುಮಾರು 2,845 ಭಾಷೆಗಳು ಕಣ್ಮರೆ ಆಗಿವೆ. ಅರೆಭಾಷೆ ಯಾವುದೇ ಕಾರಣಕ್ಕೂ ಕಣ್ಮರೆ ಆಗದಂತೆ ನೀವೆಲ್ಲರೂ ಕಾಪಾಡಿಕೊಳ್ಳಬೇಕು ಎಂದರು.
ಬೆಂಗಳೂರಿನಲ್ಲಿ ಸಾಕಷ್ಟು ಜನ ಬೇರೆ ಭಾಷಿಕರು ಇದ್ದಾರೆ. ಕೊಡಗಿನಲ್ಲೂ ಇದ್ದಾರೆ. ಬಿಹಾರ, ಅಸ್ಸಾಂ ಕಾರ್ಮಿಕರು ಕಾಫಿ ತೋಟಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಮೂಲ ನಿವಾಸಿಗಳು ಬೇರೆ ಕಡೆ ಹೋದಾಗ ಬೇರೆಯವರು ಬಂದು ಆಕ್ರಮಿಸುತ್ತಾರೆ. ವ್ಯವಸಾಯ ಕಾರಣಕ್ಕೆ ಈ ರೀತಿಯ ವಲಸೆ ಹೆಚ್ಚಾಗಿದೆ. ಆದರೆ ನಾವು ಸಂಸ್ಕೃತಿಯನ್ನು ಮರೆಯಬಾರದು ಎಂದು ಹೇಳಿದರು.
ಚರ್ಮ ವಾದ್ಯಕ್ಕೆ ಕುರಿ, ಮೇಕೆ ಹೀಗೆ ಒಂದಷ್ಟು ಪ್ರಾಣಿಗಳ ಚರ್ಮ ಬಳಸಲಾಗುತ್ತದೆ. ಆ ಪ್ರಾಣಿ ಬದುಕಿದ್ದಾಗ ಅದಕ್ಕೆ ಗೊತ್ತಿರುವುದಿಲ್ಲ ನನ್ನ ಚರ್ಮದಿಂದ ಈ ರೀತಿಯ ನಾದ ಬರುತ್ತದೆ ಎಂದು. ಗರಿಕೆ ಹುಲ್ಲನ್ನು ಸಗಣಿಗೆ ಸೇರಿಸಿ ಗಣಪತಿ ಎಂದು ಭಾವಿಸಿ ಪಿಳ್ಳಾರತಿ ಮಾಡುತ್ತೇವೆ. ಅದೇ ರೀತಿ ಅರೆಭಾಷಿಕರು ಕೇವಲ 4 ಲಕ್ಷ ಜನಸಂಖ್ಯೆ ಹೊಂದಿದ್ದೇವೆ ಎಂದು ಕೀಳರಿಮೆ ಬೇಡ ಎಂದರು.
ಏನಾನುಮಂ ಮಾಡು ಕೈಗೆ ದೊರೆತುಜ್ಜುಗವ/ ನಾನೇನು ಹುಲುಕಡ್ಡಿಯೆಂಬ ನುಡಿ ಬೇಡ/ ಹೀನಮಾವುದುಮಿಲ್ಲ ಜಗದ ಗುಡಿಯೂಳಿಗದಿ/ ತಾಣ ನಿನಗಿಹುದಿಲ್ಲಿ ಮಂಕುತಿಮ್ಮ. ಹೀಗೆ ಈ ಭೂಮಿಯಲ್ಲಿ ಒಂದಲ್ಲ ಒಂದು ಸ್ಥಾನ ಇದ್ದೇ ಇದೆ ಎಂದು ಮಂಕುತಿಮ್ಮನ ಕಗ್ಗ ವಾಚಿಸಿದರು.
ಶಾಸಕ ಮಂಥರ್ ಗೌಡ ಅವರು ನನಗೆ ಬೇರೆ ಕೆಲಸ ಇದ್ದರೂ ಈ ಕಾರ್ಯಕ್ರಮಕ್ಕೆ ಬರಲೇ ಬೇಕು ಎಂದು ಒತ್ತಾಯಿಸಿದರು. ಅರೆಭಾಷಿಕರು ನನ್ನ ಹಾಗೂ ಪೊನ್ನಣ್ಣ ಅವರ ಜೊತೆ ನಿಂತಿದ್ದಾರೆ ಎಂದರು. ನೀವುಗಳು ಇಬ್ಬರನ್ನು ಬೆಂಬಲಿಸಿದ ಕಾರಣಕ್ಕೆ ನಾನು ಇಲ್ಲಿ ನಿಂತಿದ್ದೇನೆ ಎಂದರು.
ನಾವು ನಿಮ್ಮ ಜೊತೆ ಇರುತ್ತೇವೆ ಎಂದು ಸಭಿಕರು:
ನನ್ನ ಉಸಿರು ಇರುವ ತನಕ ನಿಮ್ಮ ಜೊತೆ ಇರುತ್ತೇನೆ ಎಂದು ಡಿಸಿಎಂ ಅವರು ಹೇಳಿದಾಗ, ಸಭಿಕರೊಬ್ಬರು ನಾವೂ ನಿಮ್ಮ ಜೊತೆ ಇರುತ್ತೇವೆ ಎಂದಾಗ ಇಡೀ ಸಭಾಂಗಣವೇ ಜೋರಾಗಿ ಚಪ್ಪಾಳೆ ತಟ್ಟಿ ಸ್ವಾಗತಿಸಿತು.
