ಸಮಗ್ರ ಸುದ್ದಿ

ಉತ್ತಮ ಆರೋಗ್ಯಕ್ಕಾಗಿ ಪ್ರಕೃತಿ, ಪರಿಸರ ಸಂರಕ್ಷಣೆ ಅತ್ಯಗತ್ಯ: ಈಶ್ವರ ಖಂಡ್ರೆ

Share

ಜಮಖಂಡಿ: ಮಾಲಿನ್ಯದಿಂದ ರೋಗ ರುಜಿನ ಹೆಚ್ಚಳವಾಗುತ್ತಿದ್ದು, ಉತ್ತಮ ಆರೋಗ್ಯಕ್ಕಾಗಿ ಪ್ರತಿಯೊಬ್ಬರೂ ಪ್ರಕೃತಿ, ಪರಿಸರ ಸಂರಕ್ಷಣೆಗೆ ಮುಂದಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ.

ನಗರದಲ್ಲಿಂದು ಜಿರಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಇಂದು ಕಾಡು, ಹಸಿರು ಹೊದಿಕೆ ಕ್ಷೀಣಿಸುತ್ತಿದ್ದು, ಆಹಾರ, ನೀರು, ವಾಯುವಿನಲ್ಲಿ ಮಾಲಿನ್ಯ ಹೆಚ್ಚಾಗುತ್ತಿದೆ. ಆಧುನಿಕ ಯುಗದಲ್ಲಿ ನಾವು ಒತ್ತಡದಲ್ಲಿ ಬದುಕುತ್ತಿದ್ದು, ಇವೆಲ್ಲವೂ ಕಾಯಿಲೆಯ ಮೂಲವಾಗಿದೆ, ಹೀಗಾಗಿ ಪ್ರಕೃತಿ ಪರಿಸರ ಉಳಿದಾಗ ಮಾತ್ರ ಮನುಷ್ಯ ನೆಮ್ಮದಿಯ ಬದುಕು ನಡೆಸಲು ಸಾಧ್ಯ ಎಂದರು.

ವೈದ್ಯಕೀಯ ಸೇವೆ ಇಂದು ದುಬಾರಿಯಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಆಗುತ್ತಿದೆ. ಬಡ, ಮಧ್ಯಮವರ್ಗದವರಿಗೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಯನ್ನು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳು ನೀಡಬೇಕು ಎಂದರು.

ಅಡ್ಡ ಪರಿಣಾಮವಿಲ್ಲದ ಅದ್ಭುತ ವೈದ್ಯಪದ್ಧತಿ ಆಯುರ್ವೇದ: ಈಶ್ವರ ಖಂಡ್ರೆ

ಆಯುರ್ವೇದ ಜಗತ್ತಿನ ಪ್ರಾಚೀನ ವೈದ್ಯಪದ್ಧತಿಯಾಗಿದ್ದು, ಇದು ಭಾರತೀಯ ಋಷಿಮುನಿಗಳ ಕೊಡುಗೆಯಾಗಿದೆ. ನಮ್ಮ ಋಷಿಗಳಿಗೆ ಔಷಧೀಯ ಗಿಡಮೂಲಿಕೆಗಳ ಬಗ್ಗೆ ಅಪಾರ ಜ್ಞಾನ ಇತ್ತು. ಯಾವುದೇ ಅಡ್ಡ ಪರಿಣಾಮ ಇಲ್ಲದ ಆಯುರ್ವೇದದ ಬಗ್ಗೆ ಇತ್ತೀಚಿನ ದಿನಗಳಲ್ಲಿ ಜನರ ಒಲವು ಹೆಚ್ಚಾಗುತ್ತಿದೆ ಎಂದು ಹೇಳಿದರು.

ಭಾರತೀಯ ಸಂಸ್ಕೃತಿಯಲ್ಲಿ ರೋಗ ಗುಣಪಡಿಸುವ ಜೀವ ಉಳಿಸುವ ವೈದ್ಯರನ್ನು ದೇವರೆಂದು ಕಾಣುತ್ತಾರೆ. ವೈದ್ಯೋ ನಾರಾಯಣೋ ಹರಿಃ ಎನ್ನುತ್ತಾರೆ. ವೈದ್ಯರು ಕೂಡ ಸೇವಾ ಮನೋಭಾವದಿಂದ ಬಡ ಮತ್ತು ಮಧ್ಯಮವರ್ಗದ ರೋಗಿಗಳ ಪಾಲಿನ ಆಶಾಕಿರಣ ಆಗಬೇಕು ಎಂದರು.

ಜಮಖಂಡಿಗೂ ತಮಗೂ ಅವಿನಾಭಾವ ಸಂಬಂಧ ಇದೆ ಎಂದ ಖಂಡ್ರೆ, ಸಿದ್ದು ನ್ಯಾಮಗೌಡರು ಶಾಸಕರಾಗಿದ್ದಾಗ, ಹಲವು ಬಾರಿ ಜಮಖಂಡಿಗೆ ಬಂದಿದ್ದೆ. ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯಾಧ್ಯಕ್ಷನಾಗಿ ಉಪ ಚುನಾವಣೆಯ ಸಂದರ್ಭದಲ್ಲಿ ಉಸ್ತುವಾರಿಯಾಗಿ ಬಂದು, ಜಮಖಂಡಿಯ ಹಳ್ಳಿ ಹಳ್ಳಿಗಳಲ್ಲಿ ಪ್ರಚಾರ ಮಾಡಿದ್ದು, ಆಗ ಇಲ್ಲಿನ ಜನತೆ ತೋರಿದ ಪ್ರೀತಿ, ವಾತ್ಸಲ್ಯ, ವಿಶ್ವಾಸ, ಅಭಿಮಾನಕ್ಕೆ ತಾವು ಆಭಾರಿಯಾಗಿರುವುದಾಗಿ ಹೇಳಿದರು.

ಬಿಜೆಪಿ ಕಾರ್ಯಕಾಲದಲ್ಲಿ ಪ್ರವಾಹದಿಂದ ಸಂಕಷ್ಟ ಎದುರಾದ ಸಂದರ್ಭದಲ್ಲಿಯೂ ಇಲ್ಲಿಗೆ ಆಗಮಿಸಿ, ಜನರ ನೋವಿನಲ್ಲಿ ಭಾಗಿಯಾಗಿದ್ದೆ ಎಂದ ಅವರು, ಜನ, ಜಾನುವಾರ ಮೃತಪಟ್ಟ ಬಗ್ಗೆ ಅಧ್ಯಯನ ನಡೆಸಿ, ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾಗಿ ಅವರು ತಿಳಿಸಿದರು.

ಯುವಜನರು ಸಮಾಜದ ಆಧಾರಸ್ತಂಭ:

ಇಂದಿನ ಯುವಪೀಳಿಗೆ ನಮ್ಮ ಸಮಾಜದ ಆಧಾರಸ್ತಂಭವಾಗಿದ್ದು, ಅಧ್ಯಯನವೊಂದರ ಪ್ರಕಾರ ಶಂ.30ರಷ್ಟು ಯುವಜನರು ಮದ್ಯ, ಮಾದಕದ್ರವ್ಯ ವ್ಯಸನಿಗಳಾಗಿ ತಮ್ಮ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ ಮಾತೆಯರು, ಸೋದರಿಯರು, ಮಠಮಾನ್ಯಗಳು ಮಾರ್ಗದರ್ಶನ ನೀಡಿ, ಸರಿದಾರಿಗೆ ತರಬೇಕು ಎಂದರು.

ಉದ್ಯಾನದ ಅಭಿವೃದ್ಧಿಗೆ ಅನುದಾನ: ಈಶ್ವರ ಖಂಡ್ರೆ ಭರವಸೆ
ಇಲ್ಲಿನ ಉದ್ಯಾನವನ ಇನ್ನೂ ಹೆಚ್ಚಿನ ಅಭಿವೃದ್ಧಿ ಆಗಬೇಕು. ಮಹಿಳೆಯರು, ಮಕ್ಕಳು, ವೃದ್ಧರು ಎಲ್ಲರಿಗೂ ಅನುಕೂಲಕರ ವಾತಾವರಣ ಇರಬೇಕು. ಇದಕ್ಕೆ ಅರಣ್ಯ ಸಚಿವನಾಗಿ ಅಗತ್ಯವಾದ ಅನುದಾನ ನೀಡುವುದಾಗಿ ಅರಣ್ಯ ಸಚಿವ ಈಶ್ವರ ಖಂಡ್ರೆ ಭರವಸೆ ನೀಡಿದರು.


Share

You cannot copy content of this page