ಸಮಗ್ರ ಸುದ್ದಿ

ಜೀವನಶೈಲಿ ಕಾಯಿಲೆಗಳಿಗೆ ಹೋಮಿಯೋಪತಿ ಸಮಗ್ರ ಪರಿಹಾರ – ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

Share

ಬೆಂಗಳೂರು:ಭಾರತದಲ್ಲಿ ಹೋಮಿಯೋಪತಿ ಒಂದು ಶಕ್ತಿಶಾಲಿ ಮತ್ತು ಜನಪ್ರಿಯ ವೈದ್ಯಕೀಯ ಪದ್ಧತಿಯಾಗಿ ಸ್ಥಾಪಿಸಿಕೊಳ್ಳುತ್ತಿದೆ. ದೇಶಾದ್ಯಂತ ಲಕ್ಷಾಂತರ ಜನರು ಈ ಪದ್ಧತಿಯಿಂದ ಪ್ರಯೋಜನ ಪಡೆಯುತ್ತಿದ್ದಾರೆ. ಭಾರತ ಸರ್ಕಾರದ ಆಯುμï ಸಚಿವಾಲಯವು ಈ ದಿಕ್ಕಿನಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸುತ್ತಿದ್ದು, ಇಂದಿನ ಜೀವನಶೈಲಿ ಕಾಯಿಲೆಗಳಿಗೆ ಹೋಮಿಯೋಪತಿ ಸಮಗ್ರ ಪರಿಹಾರವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಹೇಳಿದರು.

ಹೋಮಿಯೋಪತಿ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಸಹಯೋಗದಲ್ಲಿ ಆಯೋಜಿಸಿದ್ದ ಕರ್ನಾಟಕ “ವಿಶ್ವ ಹೋಮಿಯೋಪತಿ ದಿನ – 2026” ಆಚರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯದಲ್ಲಿ ಉತ್ತಮ ಗುಣಮಟ್ಟದ ವೈದ್ಯಕೀಯ ಶಿಕ್ಷಣ, ಸಮರ್ಪಿತ ವೈದ್ಯರು ಮತ್ತು ಸಂಶೋಧನಾ-ಆಧಾರಿತ ವಿಧಾನವು ಹೋಮಿಯೋಪತಿಯ ಬೆಳವಣಿಗೆಗೆ ಸಹಕಾರ ನೀಡುತ್ತಿದೆ ಎಂದರು.

ವಿಶ್ವ ಹೋಮಿಯೋಪತಿ ದಿನವನ್ನು ಪ್ರತಿ ವರ್ಷ ಏಪ್ರಿಲ್ 10 ರಂದು ಆಚರಿಸಲಾಗುತ್ತದೆ. ಇದು ಲಕ್ಷಾಂತರ ಜನರನ್ನು ತಲೆಮಾರುಗಳಿಂದ ಬೆಂಬಲಿಸಿರುವ ಮತ್ತು ಆರೋಗ್ಯ  ಗುಣಪಡಿಸುವಿಕೆಗೆ ಸೌಮ್ಯ ಮತ್ತು ಸಮಗ್ರ ವಿಧಾನವನ್ನು ನೀಡುವ ವೈದ್ಯಕೀಯ ವ್ಯವಸ್ಥೆಯನ್ನು ಪ್ರತಿಬಿಂಬಿಸುವ ದಿನವಾಗಿದೆ. ವಿಶ್ವ ಹೋಮಿಯೋಪತಿ ದಿನವನ್ನು ಮಹಾನ್ ವೈದ್ಯ ಡಾ. ಸ್ಯಾಮ್ಯುಯೆಲ್ ಹ್ಯಾನೆಮನ್ ಅವರ ಜನ್ಮ ವಾರ್ಷಿಕೋತ್ಸವವನ್ನು ಗುರುತಿಸಲು ಆಚರಿಸಲಾಗುತ್ತದೆ. ಅವರು ರೋಗಗಳ ಚಿಕಿತ್ಸೆಗೆ ಸೀಮಿತವಾಗಿರದೆ, ರೋಗಿಯ ದೇಹ, ಮನಸ್ಸು ಮತ್ತು ಆತ್ಮದ ಸಮತೋಲನಕ್ಕೆ ಪ್ರಾಮುಖ್ಯತೆಯನ್ನು ನೀಡುವ ವೈದ್ಯಕೀಯ ವ್ಯವಸ್ಥೆಯನ್ನು ನೀಡಿದರು. ಹೋಮಿಯೋಪತಿಯ ಮೂಲಭೂತ ತತ್ವವೆಂದರೆ ಚಿಕಿತ್ಸೆಯ ಹಾಗೆ ರೋಗಗಳಿಗೂ ಪರಿಹಾರಗಳು ಪ್ರಕೃತಿಯಲ್ಲೇ ಇವೆ ಎಂಬುದನ್ನು ಕಲಿಸುತ್ತದೆ ಎಂದು ಹೇಳಿದರು.

ಸಣ್ಣ ಪ್ರಮಾಣದಲ್ಲಿ ನೀಡಲಾಗುವ ಔಷಧಿಗಳು ದೇಹದ ನೈಸರ್ಗಿಕ ರೋಗನಿರೋಧಕ ಶಕ್ತಿಯನ್ನು ಜಾಗೃತಗೊಳಿಸುತ್ತವೆ ಮತ್ತು ಅದು ತನ್ನನ್ನು ತಾನೇ ಗುಣಪಡಿಸಿಕೊಳ್ಳಲು ಉತ್ತೇಜಿಸುತ್ತವೆ. ಇಂದಿಗೂ, ವೈದ್ಯಕೀಯ ವಿಜ್ಞಾನವು ಬಹಳ ಮುಂದುವರಿದಿದ್ದರೂ, ಜೀವನಶೈಲಿ ಕಾಯಿಲೆಗಳು, ಮಾನಸಿಕ ಒತ್ತಡ ಮತ್ತು ದೀರ್ಘಕಾಲದ ಕಾಯಿಲೆಗಳು ಹೆಚ್ಚುತ್ತಿವೆ. ಅಂತಹ ಸಮಯದಲ್ಲಿ, ಹೋಮಿಯೋಪತಿಯ ಸಮಗ್ರ ವಿಧಾನವು ಸಮತೋಲಿತ ಮತ್ತು ಶಾಶ್ವತ ಆರೋಗ್ಯದ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ ಎಂದು ತಿಳಿಸಿದರು.

 “ಸುಸ್ಥಿರ ಆರೋಗ್ಯಕ್ಕಾಗಿ ಹೋಮಿಯೋಪತಿ” ಈ ವರ್ಷದ ಧ್ಯೇಯ ವಾಕ್ಯವು ಅತ್ಯಂತ ಅರ್ಥಪೂರ್ಣ ಮತ್ತು ಸಮಯೋಚಿತವಾಗಿದೆ. “ಸುಸ್ಥಿರ ಆರೋಗ್ಯ” ಎಂದರೆ ಕೇವಲ ರೋಗದಿಂದ ಮುಕ್ತಿ ಎಂದಲ್ಲ, ಬದಲಾಗಿ ದೀರ್ಘಕಾಲೀನ, ಪರಿಸರ ಸ್ನೇಹಿ ಮತ್ತು ಎಲ್ಲರಿಗೂ ಪ್ರವೇಶಿಸಬಹುದಾದ ಆರೋಗ್ಯ. ಈ ವಿಷಯದಲ್ಲಿ ಹೋಮಿಯೋಪತಿ ಒಂದು ಆದರ್ಶ ವ್ಯವಸ್ಥೆಯಾಗಿದೆ. ಏಕೆಂದರೆ ಅದು ಕೈಗೆಟಕಲಿದೆ. ವ್ಯಕ್ತಿ ಕೇಂದ್ರಿತ ಚಿಕಿತ್ಸೆಯನ್ನು ಒದಗಿಸುತ್ತದೆ. ಇದು ನೈಸರ್ಗಿಕ ಸಂಪನ್ಮೂಲಗಳ ಸಮತೋಲಿತ ಬಳಕೆಯನ್ನು ಉತ್ತೇಜಿಸುತ್ತದೆ. ಯಾವುದೇ ವೈದ್ಯಕೀಯ ವ್ಯವಸ್ಥೆಯ ಪ್ರಸ್ತುತತೆ ನಿರಂತರ ಸಂಶೋಧನೆ ಮತ್ತು ನಾವೀನ್ಯತೆಯನ್ನು ಅವಲಂಬಿಸಿರುತ್ತದೆ.

ಇಂದು, ಹೋಮಿಯೋಪತಿಯಲ್ಲಿ ವೈದ್ಯಕೀಯ ಸಂಶೋಧನೆಯನ್ನು ಉತ್ತೇಜಿಸುವ, ಆಧುನಿಕ ತಂತ್ರಜ್ಞಾನಗಳನ್ನು – ಡಿಜಿಟಲ್ ಆರೋಗ್ಯ ಮತ್ತು ಕೃತಕ ಬುದ್ಧಿಮತ್ತೆ – ಬಳಸಿಕೊಳ್ಳುವ ಮತ್ತು ಅದರ ಫಲಿತಾಂಶಗಳನ್ನು ಜಾಗತಿಕ ವೇದಿಕೆಯಲ್ಲಿ ಪ್ರಸ್ತುತಪಡಿಸುವ ಅವಶ್ಯಕತೆಯಿದೆ. ಇದು ಅದರ ವಿಶ್ವಾಸಾರ್ಹತೆಯನ್ನು ಹೆಚ್ಚಿಸುತ್ತದೆ ಮತ್ತು ಜಾಗತಿಕ ಆರೋಗ್ಯ ವ್ಯವಸ್ಥೆಯಲ್ಲಿ ಹೆಚ್ಚು ಬಲವಾದ ಸ್ಥಾನವನ್ನು ಪಡೆಯಲು ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು.

ಹೊಮಿಯೋಪತಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳೇ ಈ ಕ್ಷೇತ್ರದ ಭವಿಷ್ಯ. ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವಿಜ್ಞಾನದೊಂದಿಗೆ ಸಂಯೋಜಿಸಲು, ಸಂಶೋಧನೆಯಲ್ಲಿ ಹೊಸ ನೆಲೆಯನ್ನು ಕಂಡುಕೊಳ್ಳಲು ಮತ್ತು ಹೋಮಿಯೋಪತಿಯನ್ನು ಜಾಗತಿಕ ಮನ್ನಣೆಗೆ ತರಲು ನಿಮಗೆ ಅವಕಾಶವಿದೆ. ನಿಮ್ಮ ಶಕ್ತಿ, ನಿಮ್ಮ ಕುತೂಹಲ ಮತ್ತು ನಿಮ್ಮ ಬದ್ಧತೆಯು ಈ ಅಭ್ಯಾಸವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತದೆ. ಇಂದು “ಸಮಗ್ರ ಆರೋಗ್ಯ ರಕ್ಷಣೆ”ಯ ಯುಗ, ಅಲ್ಲಿ ವಿವಿಧ ವೈದ್ಯಕೀಯ ವ್ಯವಸ್ಥೆಗಳು ಮಾನವೀಯತೆಗೆ ಸೇವೆ ಸಲ್ಲಿಸಲು ಒಗ್ಗೂಡುತ್ತವೆ.

ಹೋಮಿಯೋಪತಿಯು ಈ ಸಮಗ್ರ ವಿಧಾನದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಏಕೆಂದರೆ ಇದು ರೋಗದ ಮೂಲ ಕಾರಣವನ್ನು ಪರಿಹರಿಸುತ್ತದೆ. ವ್ಯಕ್ತಿಯ ಒಟ್ಟಾರೆ ಜೀವನಶೈಲಿಯನ್ನು ಪರಿಗಣಿಸುತ್ತದೆ ಮತ್ತು ದೀರ್ಘಕಾಲೀನ ಆರೋಗ್ಯವನ್ನು ಖಚಿತಪಡಿಸುತ್ತದೆ. ಆರೋಗ್ಯವು ಕೇವಲ ವೈಯಕ್ತಿಕ ವಿಷಯವಲ್ಲ; ಅದು ಸಾಮಾಜಿಕ ಜವಾಬ್ದಾರಿಯೂ ಆಗಿದೆ. ನಾವು ಒಟ್ಟಾಗಿ, ಗ್ರಾಮೀಣ ಮತ್ತು ದೂರದ ಪ್ರದೇಶಗಳಲ್ಲಿ ಹೋಮಿಯೋಪತಿಯ ವ್ಯಾಪ್ತಿಯನ್ನು ವಿಸ್ತರಿಸಬೇಕು. ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಬೇಕು ಮತ್ತು ಸಮಾಜದ ಪ್ರತಿಯೊಂದು ವರ್ಗಕ್ಕೂ ಕೈಗೆಟುಕುವ ಮತ್ತು ಪರಿಣಾಮಕಾರಿ ಚಿಕಿತ್ಸೆಯನ್ನು ಲಭ್ಯವಾಗುವಂತೆ ಮಾಡಬೇಕು ಎಂದು ಕರೆ ನೀಡಿದರು.

ಬೆಂಗಳೂರಿನ ಹೋಮಿಯೋಪತಿ ಫೌಂಡೇಶನ್ ಮತ್ತು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯವು ಶಿಕ್ಷಣ, ಸಂಶೋಧನೆ ಮತ್ತು ಸಾರ್ವಜನಿಕ ಜಾಗೃತಿ ಕ್ಷೇತ್ರದಲ್ಲಿ ಮಹತ್ವದ ಕೆಲಸ ಮಾಡುತ್ತಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ ಅವರು, ವೈದ್ಯಕೀಯ ಪದ್ಧತಿಯ ಜೊತೆಗೆ, ಹೋಮಿಯೋಪತಿಯು ಜೀವನದ ತತ್ವಶಾಸ್ತ್ರವೂ ಆಗಿದೆ, ಇದು ಪ್ರಕೃತಿಯೊಂದಿಗೆ ಸಮತೋಲನವನ್ನು ಕಾಪಾಡಿಕೊಳ್ಳುವ ಮೂಲಕ ನಮ್ಮನ್ನು ಆರೋಗ್ಯವಾಗಿರಲು ಪ್ರೇರೇಪಿಸುತ್ತದೆ ಎಂದು ಹೇಳಿದರು.

ಸಮಾರಂಭದಲ್ಲಿ ಸಿ.ಕೆ. ರಾಮಮೂರ್ತಿ, ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮೊಹಮ್ಮದ್ ಮೊಹ್ಸಿನ್, ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ ಕುಲಪತಿ ಡಾ. ಬಿ.ಸಿ. ಭಗವಾನ್, ಕರ್ನಾಟಕ ಹೋಮಿಯೋಪತಿ ಮಂಡಳಿ ಅಧ್ಯಕ್ಷರಾದ ನಾಡೋಜ ಡಾ. ಬಿ.ಟಿ. ರುದ್ರೇಶ್, ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಅರ್ಜುನ್ ಒಡೈರ್ ಸೇರಿದಂತೆ ಮುಂತಾದ ಗಣ್ಯರು ಉಪಸ್ಥಿತರಿದ್ದರು.


Share

You cannot copy content of this page