ಸಮಗ್ರ ಸುದ್ದಿ

ರೈಲ್ವೆ ಇಲಾಖಾ ಪರೀಕ್ಷೆಗಳಲ್ಲಿ ಕನ್ನಡಕ್ಕೂ ಅವಕಾಶ ಕಲ್ಪಿಸಲು ನಿಖಿಲ್ ಕುಮಾರಸ್ವಾಮಿ ಮನವಿ

Share

ಬೆಂಗಳೂರು : ನೈರುತ್ಯ ರೈಲ್ವೆ (SWR) ಇಲಾಖಾ ಬಡ್ತಿ ಪರೀಕ್ಷೆಗಳನ್ನು ಕನ್ನಡ ಭಾಷೆಯಲ್ಲೂ ನಡೆಸುವಂತೆ ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.

ಪ್ರಸ್ತುತ ನೈರುತ್ಯ ರೈಲ್ವೆ ಇಲಾಖಾ ಬಡ್ತಿ ಪರೀಕ್ಷೆಗಳನ್ನು ಹಿಂದಿ ಮತ್ತು ಇಂಗ್ಲಿಷ್ ಭಾಷೆಯಲ್ಲಿ ಮಾತ್ರ ನಡೆಸಲಾಗುತ್ತಿದೆ. ನೈರುತ್ಯ ರೈಲ್ವೆ ವ್ಯಾಪ್ತಿಯಲ್ಲಿ ಕರ್ನಾಟಕದ ಬಹುಭಾಗ ಬರುವುದರಿಂದ, ಇಲ್ಲಿನ ಕನ್ನಡಿಗ ಉದ್ಯೋಗಿಗಳಿಗೆ ಮಾತೃಭಾಷೆ ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದರೆ ಹೆಚ್ಚು ಅನುಕೂಲವಾಗಲಿದೆ ಎಂದು ನಿಖಿಲ್ ಕುಮಾರಸ್ವಾಮಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ.

ರೈಲ್ವೆ ಮಂಡಳಿಯ ಆದೇಶ:

ಆಗಸ್ಟ್ 2024ರಲ್ಲಿ ರೈಲ್ವೆ ಮಂಡಳಿ ಹೊರಡಿಸಿರುವ ಆದೇಶದ ಪ್ರಕಾರ, ಎಲ್ಲಾ ವಲಯ ರೈಲ್ವೆಗಳಲ್ಲಿ ಇಲಾಖಾ ಪರೀಕ್ಷೆಗಳನ್ನು ಹಿಂದಿ, ಇಂಗ್ಲಿಷ್ ಜೊತೆಗೆ ಪ್ರಾದೇಶಿಕ ಭಾಷೆಗಳಲ್ಲೂ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಈ ಆದೇಶದ ಅನುಸಾರ ನೈರುತ್ಯ ರೈಲ್ವೆಯಲ್ಲೂ ಕನ್ನಡದಲ್ಲಿ ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ಕೋರಿದ್ದಾರೆ.

“ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಆದ್ಯತೆ ಸಿಗುವುದು ಸಹಜ. ರೈಲ್ವೆ ಇಲಾಖೆಯ ಮುಂದಿನ ಎಲ್ಲಾ ಇಲಾಖಾ ಪರೀಕ್ಷೆಗಳಲ್ಲೂ ಕನ್ನಡಕ್ಕೆ ಅವಕಾಶ ಕಲ್ಪಿಸುವುದರಿಂದ ನಮ್ಮ ರಾಜ್ಯದ ಉದ್ಯೋಗಿಗಳಿಗೆ ಬಡ್ತಿ ಅವಕಾಶಗಳು ಹೆಚ್ಚಲಿವೆ. ಈ ನಿಟ್ಟಿನಲ್ಲಿ ರಾಜ್ಯದ ಉದ್ಯೋಗಿಗಳ ಹಿತರಕ್ಷಣೆಗಾಗಿ ನಾನು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ” ಎಂದು ನಿಖಿಲ್ ಕುಮಾರಸ್ವಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕೇಂದ್ರ ಸಚಿವರು ಈ ವಿಷಯವನ್ನು ಪರಿಶೀಲಿಸಿ, ನೈರುತ್ಯ ರೈಲ್ವೆಗೆ ಕನ್ನಡದಲ್ಲೂ ಪರೀಕ್ಷೆ ನಡೆಸಲು ಸೂಕ್ತ ನಿರ್ದೇಶನ ನೀಡಬೇಕು ಎಂದು ನಿಖಿಲ್ ಕುಮಾರಸ್ವಾಮಿ ಅವರು ಮನವಿ ಮಾಡಿದ್ದಾರೆ.


Share

You cannot copy content of this page