ಸಮಗ್ರ ಸುದ್ದಿ

ಬೆಂಗಳೂರಿನಾದ್ಯಂತ ಜಲಮಂಡಳಿ ಬ್ಲೂ ಫೋರ್ಸ್ ಕಾರ್ಯಾಚರಣೆ: 54,625 ಕಟ್ಟಡಗಳ ತಪಾಸಣೆ, 11,217 ಅಕ್ರಮ ಸಂಪರ್ಕ ಕಡಿತ; ಬೊಕ್ಕಸಕ್ಕೆ 55 ಕೋಟಿ ರೂ. ಆದಾಯ!

Share

ಬೆಂಗಳೂರು:ನೀರಿನ ದುರ್ಬಳಕೆ, ಅಕ್ರಮ ಸಂಪರ್ಕ ಹಾಗೂ ಬಿಲ್ ಬಾಕಿ ಉಳಿಸಿಕೊಂಡಿರುವವರ ವಿರುದ್ಧ ಸಮರ ಸಾರಿರುವ ಬೆಂಗಳೂರು ಜಲಮಂಡಳಿ, ತನ್ನ ವಿಶೇಷ ಕಾರ್ಯಾಚರಣೆ ಪಡೆಯಾದ ‘ಬ್ಲೂ ಫೋರ್ಸ್’ ಮೂಲಕ ನಗರದಾದ್ಯಂತ ಬಿರುಸಿನ ತಪಾಸಣೆ ಮುಂದುವರಿಸಿದೆ. ಕಳೆದ ಐದು ತಿಂಗಳಲ್ಲಿ ಬರೋಬ್ಬರಿ 54,625 ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, ನಿಯಮ ಉಲ್ಲಂಘಿಸಿದ 11,217 ಅಕ್ರಮ ಸಂಪರ್ಕಗಳನ್ನು ನಿರ್ದಾಕ್ಷಿಣ್ಯವಾಗಿ ಕಡಿತಗೊಳಿಸಲಾಗಿದೆ. ಈ ಮಹತ್ವದ ಕಾರ್ಯಾಚರಣೆಯಿಂದ 1,000 ಮಿಲಿಯನ್‌ ಲೀಟರ್‌ ಕುಡಿಯುವ ನೀರು ಉಳಿತಾಯವಾಗಿದ್ದು, ಪ್ರೋರಾಟಾ ಹಾಗೂ ನೀರಿನ ಮೌಲ್ಯ ಸೇರಿ ಒಟ್ಟಾರೆ 55 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಮಂಡಳಿಗೆ ಹರಿದುಬಂದಿದೆ.

ಕಾರ್ಯಾಚರಣೆಯ ಪ್ರಮುಖ ಅಂಕಿ-ಅಂಶಗಳು:

  • ಬೃಹತ್ ಮಟ್ಟದ ತಪಾಸಣೆ*: ನಗರದ ನಾಲ್ಕೂ ವಲಯಗಳಲ್ಲಿ (ಉತ್ತರ, ಪೂರ್ವ, ಪಶ್ಚಿಮ, ದಕ್ಷಿಣ) ಒಟ್ಟು 54,625 ಕಟ್ಟಡಗಳ ಭೌತಿಕ ತಪಾಸಣೆ ನಡೆಸಲಾಗಿದೆ.
  • ಸಂಪರ್ಕ ಕಡಿತ: ಒಟ್ಟು 11,217 ಸಂಪರ್ಕಗಳ ಕಡಿತ ಮಾಡಲಾಗಿದೆ. ಇದರಲ್ಲಿ 9,751 ಕುಡಿಯುವ ನೀರಿನ ಸಂಪರ್ಕಗಳು ಹಾಗೂ 1,466 ಒಳಚರಂಡಿ ಸಂಪರ್ಕಗಳು ಸೇರಿವೆ.

ಪೂರ್ವ ವಲಯದಲ್ಲಿ ಅತಿ ಹೆಚ್ಚು ಕಡಿತ: ಅಕ್ರಮ ಸಂಪರ್ಕ ಹಾಗೂ ಬಿಲ್ ಬಾಕಿ ಉಳಿಸಿಕೊಂಡಿರುವ ಪ್ರಕರಣಗಳಲ್ಲಿ ಪೂರ್ವ ವಲಯ ಮುಂಚೂಣಿಯಲ್ಲಿದ್ದು, ಇಲ್ಲಿ ಗರಿಷ್ಠ 3,151 ಸಂಪರ್ಕಗಳನ್ನು ಕಡಿತಗೊಳಿಸಲಾಗಿದೆ.

ದಕ್ಷಿಣ ವಲಯದಲ್ಲಿ ಅತಿ ಹೆಚ್ಚು ತಪಾಸಣೆ: ದಕ್ಷಿಣ ವಲಯದಲ್ಲಿ ಅತಿ ಹೆಚ್ಚು, ಅಂದರೆ 13,908 ಕಟ್ಟಡಗಳನ್ನು ಜಲಮಂಡಳಿ ಅಧಿಕಾರಿಗಳು ಖುದ್ದು ಭೇಟಿ ಮಾಡಿ ಪರಿಶೀಲಿಸಿದ್ದಾರೆ.

ಪ್ರೋರಾಟಾ ಶುಲ್ಕದ ಮೂಲಕ ಜಲಮಂಡಳಿಯ ಬೊಕ್ಕಸಕ್ಕೆ 50 ಕೋಟಿ ರೂ. ಆದಾಯ:

ಬೆಂಗಳೂರು ಜಲಮಂಡಳಿಯ ಈ ನಿರಂತರ ಹಾಗೂ ಕಟ್ಟುನಿಟ್ಟಿನ ಕಾರ್ಯಾಚರಣೆಯಿಂದಾಗಿ ಬೃಹತ್ ಪ್ರಮಾಣದ ಆದಾಯ ಸೋರಿಕೆಗೆ ಯಶಸ್ವಿಯಾಗಿ ಬ್ರೇಕ್ ಬಿದ್ದಿದೆ. ಅಕ್ರಮ ಸಂಪರ್ಕ ಹೊಂದಿದ್ದ ಕಟ್ಟಡಗಳ ವಿರುದ್ಧ ಕೈಗೊಂಡ ನಿರ್ದಾಕ್ಷಿಣ್ಯ ಕ್ರಮಗಳಿಂದಾಗಿ, ಆ ಸಂಪರ್ಕಗಳನ್ನು ಕಡಿತಗೊಳಿಸುವ ಹಾಗೂ ನಂತರ ಅವುಗಳನ್ನು ಅಧಿಕೃತವಾಗಿ ಸಕ್ರಮಗೊಳಿಸುವ ಪ್ರಕ್ರಿಯೆ ಚುರುಕುಗೊಂಡಿದೆ. ಇದರ ನೇರ ಪರಿಣಾಮವಾಗಿ, ಜಲಮಂಡಳಿಯ ಬೊಕ್ಕಸಕ್ಕೆ ಪ್ರೋರಾಟಾ ಶುಲ್ಕದ ರೂಪದಲ್ಲಿ ಬರೋಬ್ಬರಿ 50 ಕೋಟಿ ರೂ. ಗಳ ಬೃಹತ್ ಆದಾಯ ಸಂಗ್ರಹವಾಗಿದೆ.

1,000 ಮಿಲಿಯನ್ ಲೀಟರ್ ನೀರು ಜಲಮಂಡಳಿಯ ಬಿಲ್ಲಿಂಗ್‌ ವ್ಯಾಪ್ತಿಗೆ:

ಅಕ್ರಮ ನೀರಿನ ಸಂಪರ್ಕಗಳ ತೆರವು ಹಾಗೂ ನೀರಿನ ದುರ್ಬಳಕೆಯ ವಿರುದ್ಧ ಜಲಮಂಡಳಿಯ ಬ್ಲೂ ಫೋರ್ಸ್ ತಂಡ ಕೈಗೊಂಡ ಕಠಿಣ ಕ್ರಮದಿಂದಾಗಿ, ನಗರದಲ್ಲಿ ಆಗುತ್ತಿದ್ದ ಬೃಹತ್ ಪ್ರಮಾಣದ ನೀರಿನ ಸೋರಿಕೆ ಯಶಸ್ವಿಯಾಗಿ ತಪ್ಪಿದೆ. ಈ ಕಾರ್ಯಾಚರಣೆಯ ಪರಿಣಾಮವಾಗಿ ಪ್ರತಿ ತಿಂಗಳು ಬರೋಬ್ಬರಿ 210 ಮಿಲಿಯನ್ ಲೀಟರ್ ಶುದ್ಧ ಕುಡಿಯುವ ನೀರು ಉಳಿತಾಯವಾಗುತ್ತಿದೆ. ಒಟ್ಟಾರೆಯಾಗಿ, ಈವರೆಗೆ ಅಕ್ರಮವಾಗಿ ಉಪಯೋಗಿಸಲಾಗುತ್ತಿದ್ದ 1,000 ಮಿಲಿಯನ್‌ ಲೀಟರ್‌ ಪ್ರಮಾಣದ ನೀರನ್ನು ಇದೀಗ ಜಲಮಂಡಳಿಯ ಅಧಿಕೃತ ಬಿಲ್ಲಿಂಗ್‌ ವ್ಯಾಪ್ತಿಗೆ ಸೇರ್ಪಡಿಸಲಾಗಿದ್ದು, ಇದರಿಂದ ಪ್ರತಿ ತಿಂಗಳು ಸುಮಾರು 5 ಕೋಟಿ ರೂ.ಗಳ ಹೆಚ್ಚುವರಿ ಆದಾಯ ಸಂಗ್ರಹವಾಗುತ್ತಿದೆ.

ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್‌ ಅವರ ಮಾರ್ಗದರ್ಶನದಲ್ಲಿ, ನಗರದ ಪ್ರತಿಯೊಬ್ಬರಿಗೂ ಸಮರ್ಪಕವಾಗಿ ನೀರು ಹಾಗೂ ಅತ್ಯುತ್ತಮ ಒಳಚರಂಡಿ ವ್ಯವಸ್ಥೆಯನ್ನು ಒದಗಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಆದರೆ ನೀರಿನ ದುರ್ಬಳಕೆ ಹಾಗೂ ಒಳಚರಂಡಿ ಅಕ್ರಮ ಸಂಪರ್ಕ ಪಡೆಯುವುದರಿಂದ ಜಲಮಂಡಳಿಯ ಮೂಲಸೌಕರ್ಯದ ಮೇಲೆ ತೀವ್ರ ಒತ್ತಡ ಹೆಚ್ಚಾಗುತ್ತದೆ. ಇದು ನಗರವನ್ನು ಸ್ವಚ್ಛವಾಗಿಡುವುದು ಹಾಗೂ ನಾಗರಿಕರಿಗೆ ಗುಣಮಟ್ಟದ ಸೇವೆ ಒದಗಿಸುವ ನಮ್ಮ ಬದ್ಧತೆಯ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.

ಈ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಹಾಗೂ ಒಳಚರಂಡಿ ಅಕ್ರಮ ಸಂಪರ್ಕ ಪಡೆದಿರುವವರ ವಿರುದ್ಧ ಬ್ಲೂ ಫೋರ್ಸ್ ಯಾವುದೇ ಮುಲಾಜಿಲ್ಲದೆ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಈ ಕಾರ್ಯಾಚರಣೆಯಿಂದ 50 ಕೋಟಿ ರೂ. ಶುಲ್ಕ ಸಂಗ್ರಹವಾಗಿದ್ದು, 1,000 ಮಿಲಿಯನ್ ಲೀಟರ್ ನೀರು ಉಳಿತಾಯವಾಗಿದೆ. ಇದರಿಂದ ಹೆಚ್ಚುವರಿಯಾಗಿ 5 ಕೋಟಿ ರೂ. ಮೊತ್ತದ ನೀರು ಜಲಮಂಡಳಿಯ ಬಿಲ್ಲಿಂಗ್‌ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ಸಾರ್ವಜನಿಕರು ಅಧಿಕೃತವಾಗಿ ಕಾವೇರಿ ನೀರಿನ ಸಂಪರ್ಕ ಹಾಗೂ ಒಳಚರಂಡಿ ಸಂಪರ್ಕ ಪಡೆಯುವುದು ಕಡ್ಡಾಯ. ಇದರಿಂದ ಜಲಮಂಡಳಿಯ ಕಾರ್ಯಕ್ಷಮತೆ ಹೆಚ್ಚುವುದಲ್ಲದೆ, ಬ್ರ್ಯಾಂಡ್ ಬೆಂಗಳೂರು ಆಶಯದಂತೆ ಉತ್ತಮ ಸೇವೆ ಒದಗಿಸಲು ಅನುವು ಮಾಡಿಕೊಡುತ್ತದೆ ಎಂದು ಬೆಂಗಳೂರು ಜಲಮಂಡಳಿಯ ಅಧ್ಯಕ್ಷರಾದ ಡಾ. ರಾಮ್‌ ಪ್ರಸಾತ್‌ ಮನೋಹರ್‌ ತಿಳಿಸಿದ್ದಾರೆ.

ಬ್ಲೂ ಫೋರ್ಸ್ ಬಗ್ಗೆ ಮಾಹಿತಿ

ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು ನವೆಂಬರ್ 2025 ರ ಕೊನೆಯ ವಾರದಲ್ಲಿ ಈ ‘ಬ್ಲೂ ಫೋರ್ಸ್’ ಪಡೆಯನ್ನು ಉದ್ಘಾಟಿಸಿದ್ದರು. ಪ್ರಸ್ತುತ ನಗರದಾದ್ಯಂತ ಕಟ್ಟುನಿಟ್ಟಿನ ಕಾರ್ಯಾಚರಣೆ ನಡೆಸಲು ಒಟ್ಟು 18 ಪ್ರತ್ಯೇಕ ಬ್ಲೂ ಫೋರ್ಸ್ ತಂಡಗಳನ್ನು ನಿಯೋಜಿಸಲಾಗಿದೆ. ಸುಗಮ ಹಾಗೂ ಶಿಸ್ತಿನ ಕಾರ್ಯಾಚರಣೆಗಾಗಿ ಪ್ರತಿಯೊಂದು ತಂಡದಲ್ಲೂ ತಲಾ 4 ಜನ ಸದಸ್ಯರನ್ನು ನೇಮಿಸಲಾಗಿದೆ. ಪ್ರತಿ ತಂಡದಲ್ಲಿ ಓರ್ವ ಮಾಜಿ ಸೈನಿಕ, ಒಬ್ಬ ಮೇಲ್ವಿಚಾರಕ (ಸೂಪರ್ ವೈಸರ್) ಹಾಗೂ ಇಬ್ಬರು ಸಂಪರ್ಕ ಕಡಿತಗೊಳಿಸುವ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ.


Share

You cannot copy content of this page