ಸಮಗ್ರ ಸುದ್ದಿ

ಯಾವ ಕ್ಷೇತ್ರವೂ ಸಹಕಾರ ಕ್ಷೇತ್ರದಿಂದ ಹೊರತಾಗಿರಲು ಸಾಧ್ಯವಿಲ್ಲ:ಮುಖ್ಯಮಂತ್ರಿ ಸಿದ್ದರಾಮಯ್ಯ

Share

ಬೆಂಗಳೂರು : ಯಾವ ಕ್ಷೇತ್ರವೂ ಸಹಕಾರ ಕ್ಷೇತ್ರದಿಂದ ಹೊರತಾಗಿರಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಕರ್ನಾಟಕ ರಾಜ್ಯ ಸಹಕಾರ ಸಂಘಗಳ ನಿಬಂಧಕರ ನೂತನ ಆಡಳಿತ ಕಚೇರಿ ‘ಸಹಕಾರ ಸಮೃದ್ಧಿ ಸೌಧ’ವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.

2023 ರಲ್ಲಿ ಕಟ್ಟಡಕ್ಕೆ ಭೂಮಿ ಪೂಜೆಯನ್ನು ತಾವೇ ನೆರವೇರಿಸಿದ್ದು, ಮೂರು ವರ್ಷಗಳಲ್ಲಿ 19.43 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ ಎನ್ನುವುದು ಸಂತಸದ ವಿಚಾರ ಎಂದರು.

ನೆಹರೂ ಅವರು ಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಒಂದು ಊರಿನಲ್ಲಿ ಒಂದು ಶಾಲೆ, ಪಂಚಾಯತಿ ಮತ್ತು ಸಹಕಾರ ಸಂಘ ಇರಲೇಬೇಕು. ಆಗ ಮಾತ್ರ ಆ ಊರಿನ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಎಂದಿದ್ದರು. ಪ್ರಸ್ತುತ ಹಾಲಿನ ಸೊಸೈಟಿಗಳಾದ ನಂತರ ಪ್ರತಿ ಊರಿನಲ್ಲಿ ಇದು ಸಾಧ್ಯವಾಗಿದೆ ಎಂದರು.

ರೈತರ ಬೆಳವಣಿಗೆಗೆ ಸಹಕಾರ ಇಲಾಖೆ ಕಾರ್ಯ ನಿರ್ವಹಿಸಬೇಕು

ಎಲ್ಲರಿಗಾಗಿ ನಾನು, ನನಗಾಗಿ ಎಲ್ಲರೂ ಎಂಬ ಸಹಕಾರಿ ತತ್ವದಡಿ ರಾಜ್ಯ ಅಭಿವೃದ್ಧಿಯಾಗುತ್ತಿದೆ ಎಂದ ಮುಖ್ಯಮಂತ್ರಿಗಳು. ರೈತರ ಬೆಳವಣಿಗೆಗೆ ಸಹಕಾರ ಇಲಾಖೆ ಕಾರ್ಯ ನಿರ್ವಹಿಸಬೇಕು. ಶೇ. 60% ಜನ ಗ್ರಾಮೀಣ ಭಾಗದಲ್ಲಿ ವಾಸಿಸುತ್ತಿದ್ದು, ಗ್ರಾಮದ ಜನರಿಗೆ ಅಗತ್ಯ ಸೌಲಭ್ಯಗಳನ್ನು ಸಹಕಾರಿ ಸಂಘಗಳ ಮೂಲಕ ನೀಡಲಾಗುತ್ತಿದೆ.

ಉತ್ತರ ಕರ್ನಾಟಕದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಬೇಕು

ಹಾಲಿನ ಸೊಸೈಟಿಗಳು ಬಂದ ನಂತರ ರೈತರ ಪರಿಸ್ಥಿತಿ ಉತ್ತಮವಾಗಿದ್ದು ಒಂದು ಕೋಟಿ ಲೀಟರ್ ಹಾಲು ದಿನವೊಂದಕ್ಕೆ ಉತ್ಪಾದನೆಯಾಗುತ್ತಿದೆ. ಉತ್ತರ ಕರ್ನಾಟಕದಲ್ಲಿ ಹಾಲು ಉತ್ಪಾದನೆ ಹೆಚ್ಚಾಗಬೇಕು. ಅತ್ಯಂತ ಲಾಭದಾಯಕವಾದ ಉಪಕಸುಬಾಗಿ ಸಹಕಾರ ಕ್ಷೇತ್ರದಿಂದ ಸಾಧ್ಯವಾಗಿದೆ ಎಂದರು.

ಹಿಂದೆ ತಾವು ಸಹಕಾರ ಸಚಿವರಾಗಿದ್ದ ಸಂದರ್ಭದಲ್ಲಿ ಹಾಲು ಒಕ್ಕೂಟಗಳನ್ನು ಹಾಲು ಡೈರಿಯೊಂದಿಗೆ ಸೇರ್ಪಡೆ ಮಾಡಲಾಯಿತು. ಇದರಿಂದ ಹಾಲು ಉತ್ಪಾದನೆ ಹೆಚ್ಚಾಗಲು ಸಾಧ್ಯವಾಯಿತು. ಸಹಕಾರ ಸೌಧದಲ್ಲಿ ಸೇವೆ ಉತ್ತಮವಾಗಿರಲಿ ಎಂದು ಮುಖ್ಯಮಂತ್ರಿ ಅವರು ಸೂಚಿಸಿದರು.

ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಸಚಿವರಾದ ಹೆಚ್. ಕೆ. ಪಾಟೀಲ್, ಶಾಸಕ ರಿಜ್ವಾನ್ ಅರ್ಷದ್, ಮೇಲ್ಮನೆ ಸದಸ್ಯೆ ಶ್ರೀಮತಿ ಬಲ್ಕಿಸ್ ಬಾನು, ಸಹಕಾರ ಇಲಾಖೆ ಕಾರ್ಯದರ್ಶಿಗಳು, ಇಲಾಖೆಯ ನಿಬಂಧಕರಾದ ಕಾಂತರಾಜು, ಮೊದಲಾದವರು ಉಪಸ್ಥಿತರಿದ್ದರು.


Share

You cannot copy content of this page