ಸಮಗ್ರ ಸುದ್ದಿ

ರಾಜ್ಯದ ಆರು ಗ್ರಾಮ ಪಂಚಾಯತಿಗಳಿಗೆ ಕೇಂದ್ರದ ನಗದು ಪುರಸ್ಕಾರ| ಸಚಿವ ಪ್ರಿಯಾಂಕ್ ಖರ್ಗೆ ಗ್ರಾಮ ಪಂಚಾಯಿತಿಗಳಿಗೆ ಅಭಿನಂದನೆ

Share

ಬೆಂಗಳೂರು: 2025ರ ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿಗಳು ಪ್ರಕಟಗೊಂಡಿದ್ದು ನಗದು ಪುರಸ್ಕಾರ ಪಡೆದುಕೊಂಡಿರುವ ಕರ್ನಾಟಕದ ಆರು ಗ್ರಾಮ ಪಂಚಾಯತಿಗಳನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದಿಸಿದ್ದಾರೆ.

ರಾಷ್ಟ್ರದ 42 ಗ್ರಾಮ ಪಂಚಾಯತಿಗಳು ಪ್ರಶಸ್ತಿಗೆ ಭಾಜನವಾಗಿದ್ದು, ಅವುಗಳಲ್ಲಿ ಕರ್ನಾಟಕದ 6 ಪಂಚಾಯತಿಗಳು ಪ್ರಶಸ್ತಿ ಪಡೆದುಕೊಳ್ಳುವ ಮೂಲಕ ಅತಿ ಹೆಚ್ಚು ಪ್ರಶಸ್ತಿಗಳನ್ನು ಪಡೆದ ಹೆಗ್ಗಳಿಕೆಗೆ ಪಾತ್ರವಾಗಿವೆ ಎಂದು ಸಚಿವರು ಸಂತಸ ಹಂಚಿಕೊಂಡಿದ್ದಾರೆ.

ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ ವಿಭಾಗದ ಪ್ರಥಮ ಪ್ರಶಸ್ತಿಯು ಹೆಬ್ರಿಯ ಮುದ್ರಾಡಿ ಗ್ರಾಮ ಪಂಚಾಯಿತಿಗೆ ಸಂದಿದ್ದು ಒಂದು ಕೋಟಿ ರೂಪಾಯಿ ನಗದು ಬಹುಮಾನ ಪಡೆದುಕೊಂಡಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ವಂಡ್ಸೆ ಗ್ರಾಮ ಪಂಚಾಯತಿ ಆರೋಗ್ಯಕರ ಪಂಚಾಯತ್ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿಗೆ ಪಾತ್ರವಾಗಿದ್ದು 75 ಲಕ್ಷ ರೂ ನಗದು ಬಹುಮಾನಕ್ಕೆ ಪಾತ್ರವಾಗಿದೆ.

ಬೆಂಗಳೂರು ನಗರ ಜಿಲ್ಲೆಯ ಹಾಲನಾಯಕನಹಳ್ಳಿ ಗ್ರಾಮ ಪಂಚಾಯಿತಿಗೆ ಮಕ್ಕಳ ಸ್ನೇಹಿ ಪಂಚಾಯತ್ ವಿಭಾಗದಲ್ಲಿ ದ್ವಿತೀಯ ಪ್ರಶಸ್ತಿ ದೊರಕಿದ್ದು 75 ಲಕ್ಷ ರೂಪಾಯಿ ಬಹುಮಾನವನ್ನು ಪಡೆದುಕೊಂಡಿದೆ

ಉಡುಪಿ ಜಿಲ್ಲೆಯ ಹೆಬ್ರಿಯ ವಿಭಾಗದಲ್ಲಿ ಮಡಮಕ್ಕಿ ಗ್ರಾಮ ಪಂಚಾಯಿತಿಗೆ ನೀರು ಸಮೃದ್ಧ ಪಂಚಾಯತ್ ವಿಭಾಗದಲ್ಲಿ ಎರಡನೇ ಪ್ರಶಸ್ತಿ ದೊರೆತಿದ್ದು 75 ಲಕ್ಷ ರೂಪಾಯಿಗಳ ಪುರಸ್ಕಾರಕ್ಕೆ ಪಾತ್ರವಾಗಿದೆ.

ಉಡುಪಿ ಜಿಲ್ಲೆಯ ಕಾರ್ಕಳದ ಸಾನೂರು ಗ್ರಾಮ ಪಂಚಾಯತಿಗೆ ಮೂಲ ಸೌಕರ್ಯದಲ್ಲಿ ಸ್ವಾವಲಂಬಿ ಪಂಚಾಯತ್ ವಿಭಾಗದಲ್ಲಿ ತೃತೀಯ ಪ್ರಶಸ್ತಿ ಲಭಿಸಿದ್ದು 25 ಲಕ್ಷ ರೂ ನಗದು ಬಹುಮಾನವನ್ನು ಪಡೆದುಕೊಂಡಿದೆ.

ಉಡುಪಿ ಜಿಲ್ಲೆಯ ಕುಂದಾಪುರದ ಹಕ್ಲಾಡಿ ಗ್ರಾಮ ಪಂಚಾಯತಿಗೆ ಸಾಮಾಜಿಕವಾಗಿ ನ್ಯಾಯಯುತ ಮತ್ತು ಸುರಕ್ಷಿತ ವಿಭಾಗದಲ್ಲಿ ತೃತೀಯ ಪ್ರಶಸ್ತಿ ಲಭಿಸಿದ್ದು 25 ಲಕ್ಷ ರೂ ನಗದು ಬಹುಮಾನವನ್ನು ಪಡೆದಿದೆ.

ಆರು ಪ್ರಶಸ್ತಿಗಳಲ್ಲಿ ಉಡುಪಿ ಜಿಲ್ಲೆ 5 ಪ್ರಶಸ್ತಿಗಳನ್ನು ಪಡೆದಿದೆ, ಈ ಗೌರವಕ್ಕೆಕಾರಣರಾದ ಆರೂ ಪಂಚಾಯತಿಗಳ ಜನ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ನೌಕರ ವರ್ಗವನ್ನು ಸಚಿವ ಪ್ರಿಯಾಂಕ್ ಖರ್ಗೆ ಅಭಿನಂದಿಸಿದ್ದಾರೆ.


Share

You cannot copy content of this page