ಸಮಗ್ರ ಸುದ್ದಿ

ನಾಗಮಲೆ ಚಿರತೆ ದಾಳಿ: ಈಶ್ವರ ಖಂಡ್ರೆ ನೇತೃತ್ವದಲ್ಲಿ ಉನ್ನತಮಟ್ಟದ ಸಭೆ | ಯುಗಾದಿ, ಶಿವರಾತ್ರಿ ಜಾತ್ರೆ ವೇಳೆ ಮಾತ್ರ ಕಾಲ್ನಡಿಗೆ ಅವಕಾಶ: ಈಶ್ವರ ಖಂಡ್ರೆ

Share

ಬೆಂಗಳೂರು: ನಾಗಮಲೆಯಲ್ಲಿ ಚಿರತೆ ದಾಳಿಯಿಂದ ಬಾಲಕ ಮೃತಪಟ್ಟ ಹಿನ್ನೆಲೆಯಲ್ಲಿ ಮಹದೇಶ್ವರ ಬೆಟ್ಟಕ್ಕೆ ಶಿವರಾತ್ರಿ, ಯುಗಾದಿ ಜಾತ್ರೆ ವೇಳೆ ಮಾತ್ರವೇ ಕಾಲ್ನಡಿಗೆಯಲ್ಲಿ ಸಾಗಲು ಅವಕಾಶ ನೀಡವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ನಿರ್ದೇಶನ ನೀಡಿದ್ದಾರೆ.

ವಿಕಾಸಸೌಧದಲ್ಲಿ ನಿನ್ನೆ ಹಿರಿಯ ಅಧಿಕಾರಿಗಳು ಹಾಗೂ ಚಾಮರಾಜನಗರ ಅರಣ್ಯಾಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿದ ಅವರು, ನಾಗಮಲೆಗೆ 14 ಕಿ.ಮೀ. ನಡೆದು ಹೋಗಲು ಅವಕಾಶ ನೀಡದೆ, ಕೇವಲ 3 ಕಿ.ಮೀ. ಮಾತ್ರ ಅವಕಾಶ ನೀಡಿ, ವಾಕಿಟಾಕಿ ಮತ್ತು ಅಗತ್ಯ ಸುರಕ್ಷತಾ ಸಲಕರಣೆಯೊಂದಿಗೆ ಮಾರ್ಗದರ್ಶಕರ (ಗೈಡ್) ಸೇವೆ ಒದಗಿಸುವಂತೆ ತಿಳಿಸಿದರು.

ಟಿಕೆಟ್ ಕೌಂಟರ್ ಬಳಿಯಿಂದ ನಾಗಮಲೆಯ ಭಕ್ತರು ಜೀಪ್ ನಲ್ಲಿ ಹೋಗುವುದನ್ನು ಕಡ್ಡಾಯ ಮಾಡಬೇಕು. ಉಳಿದ 3 ಕಿ.ಮೀ. ದುರ್ಗಮ ಅರಣ್ಯದ ಸಂಚಾರ ಪಥದ ಎರಡೂ ಬದಿಯಲ್ಲಿ ವನ್ಯಮೃಗಗಳು ಕಾಣುವಂತೆ ಗೋಚರರೇಖೆ (ವ್ಯೂ ಲೈನ್) ಅಂದರೆ ಕಳೆ ತೆಗೆಯುವಂತೆ ಸೂಚಿಸಿದರು.

ಅದೇ ರೀತಿ ಮಾದಪ್ಪನ ದರ್ಶನಕ್ಕೆ 7 ಕಿಮೀ ಬೆಟ್ಟ ಹತ್ತಿ ಹೋಗಲು ವರ್ಷವಿಡೀ ಅವಕಾಶ ನೀಡದೆ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಕೇವಲ ಶಿವರಾತ್ರಿ ಮತ್ತು ಯುಗಾದಿ ಸಂದರ್ಭದಲ್ಲಿ ಮಾತ್ರವೇ ಅವಕಾಶ ನೀಡಿ, ಆ ಸಂದರ್ಭದಲ್ಲಿ ಹೆಚ್ಚಿನ ಅರಣ್ಯ ಸಿಬ್ಬಂದಿಯನ್ನು ಭಕ್ತರ ಸುರಕ್ಷತೆಗಾಗಿ ನಿಯೋಜಿಸುವಂತೆ ಅವರು ಸೂಚಿಸಿದರು.

ಮಲೆ ಮಹದೇಶ್ವರ ಬೆಟ್ಟದ ಮೆಟ್ಟಿಲುಗಳ ಬಳಿ ಮತ್ತು ಟಿಕೆಟ್ ಕೌಂಟರ್ ಬಳಿ ಫಲಕಗಳನ್ನು ಹಾಕಿ, ಆನೆ, ಚಿರತೆ, ಹುಲಿ ಸೇರಿದಂತೆ ವನ್ಯಮೃಗಗಳಿವೆ. ಬಸ್ ಸೌಲಭ್ಯ ಬಳಸಿಕೊಂಡು ಹೋಗುವುದು ಉತ್ತಮ ಎಂಬ ಜಾಗೃತಿ ಮೂಡಿಸಲೂ ಸಲಹೆ ನೀಡಿದರು.

ಸಭೆಯಲ್ಲಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಮಾಧಿಕಾರಿ ಮತ್ತು ಮುಖ್ಯ ವನ್ಯಜೀವಿ ಪರಿಪಾಲಕರಾದ ಕುಮಾರ್ ಪುಷ್ಕರ್, ಇಲಾಖೆಯ ಪ್ರಧಾನ ಕಾರ್ಯದರ್ಶಿ ಮನೋಜ್ ಕುಮಾರ್, ಎಪಿಸಿಸಿಎಫ್ (ವನ್ಯಜೀವಿ) ಬಿಸ್ವಜಿತ್ ಮಿಶ್ರಾ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯಾ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page