ಸಮಗ್ರ ಸುದ್ದಿ

ನಗರ ಮಟ್ಟದಲ್ಲಿ ಮುಂಗಾರು ತುರ್ತು ಸಿದ್ಧತೆಗೆ “ಪ್ರಹರಿ” ವಾಹನಗಳ ಪರೇಡ್: ಮಹೇಶ್ವರ್ ರಾವ್

Share

ಬೆಂಗಳೂರು: ಜಿಬಿಎ ವ್ಯಾಪ್ತಿಯಲ್ಲಿ ಮುಂಗಾರು ಸನ್ನದ್ಧತೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶದಿಂದ ಮುಖ್ಯ ಆಯುಕ್ತರಾದ ಶ್ರೀ ಮಹೇಶ್ವರ್ ರಾವ್ ಅವರು ಎಲ್ಲಾ ನಗರ ಪಾಲಿಕೆಗಳ ಆಯುಕ್ತರಿಗೆ ತಮ್ಮ ವ್ಯಾಪ್ತಿಯಲ್ಲಿ ತಕ್ಷಣ “ಪ್ರಹರಿ” ವಾಹನಗಳ ಪರೇಡ್ ಆಯೋಜಿಸಲು ಸೂಚಿಸಿದರು.

ಇಂದು ಜಿಬಿಎ ಮುಖ್ಯ ಕಚೇರಿ ಸಭಾಂಗಣದಲ್ಲಿ ನಡೆದ ಸಮನ್ವಯ ಸಭೆಯಲ್ಲಿ ಮಾತನಾಡಿದ ಅವರು, ಪ್ರಹರಿ ವಾಹನಗಳಲ್ಲಿರುವ ಎಲ್ಲಾ ಅಗತ್ಯ ಉಪಕರಣಗಳನ್ನು ಸಮಗ್ರವಾಗಿ ಪರಿಶೀಲಿಸಿ, ಮಳೆ ಸಂಬಂಧಿತ ತುರ್ತು ಪರಿಸ್ಥಿತಿಗಳಿಗೆ ಸಂಪೂರ್ಣ ಕಾರ್ಯಸನ್ನದ್ಧತೆ ಖಚಿತಪಡಿಸಿಕೊಳ್ಳಬೇಕು ಎಂದು ನಿರ್ದೇಶಿಸಿದರು.

ಜೊತೆಗೆ, ಎಲ್ಲಾ ಮರ ಕಟಾವು ಯಂತ್ರೋಪಕರಣಗಳು, ವಾಹನಗಳು, ಹಾಗೂ ಸಂಬಂಧಿತ ತುರ್ತು ಸೇವಾ ಸಾಧನಗಳನ್ನು ಕೂಡ ವಿವರವಾಗಿ ಪರಿಶೀಲಿಸಿ, ಒಂದು ವಾರದೊಳಗಾಗಿ ಸಮಗ್ರ ಸಿದ್ಧತಾ ವರದಿಯನ್ನು ಸಲ್ಲಿಸುವಂತೆ ಸೂಚಿಸಿದರು.

ರೈಲ್ವೆ ತಗ್ಗು ಪ್ರದೇಶಗಳ ಜಂಟಿ ಪರಿಶೀಲನೆ :

ಪ್ರವಾಹ ಮತ್ತು ನೀರು ನಿಲ್ಲುವ ಸಮಸ್ಯೆಗಳನ್ನು ಎದುರಿಸುತ್ತಿರುವ ರೈಲ್ವೆ ತಗ್ಗು ಪ್ರದೇಶಗಳಿಗೆ ವಿಶೇಷ ಆದ್ಯತೆ ನೀಡಲಾಗಿದ್ದು, ಸಂಬಂಧಿತ ನಗರ ಪಾಲಿಕೆ ಅಧಿಕಾರಿಗಳು ಹಾಗೂ ರೈಲ್ವೆ ಅಧಿಕಾರಿಗಳು ಪ್ರತಿ ಪ್ರದೇಶವನ್ನು ಜಂಟಿಯಾಗಿ ಪರಿಶೀಲಿಸಿ, ಸಮಸ್ಯೆಗಳನ್ನು ಸಮನ್ವಯದಿಂದ ಪರಿಹರಿಸಿ, ಬಾಕಿ ಉಳಿದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸುವಂತೆ ಸೂಚಿಸಿದರು.

ನಿಯಂತ್ರಣ ಕೊಠಡಿಗಳು ಮತ್ತು ತುರ್ತು ಪ್ರತಿಕ್ರಿಯಾ ವ್ಯವಸ್ಥೆಗಳ ಪರಿಶೀಲನೆ:

ಸಂಬಂಧಿತ ಅಧಿಕಾರಿಗಳು ನಿಯಂತ್ರಣ ಕೊಠಡಿಗಳನ್ನು ಪರಿಶೀಲಿಸಿ, ಭಾರಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿಗಳಿಗೆ ಪರಿಣಾಮಕಾರಿಯಾಗಿ ಸ್ಪಂದಿಸಲು ಅಗತ್ಯ ಸೌಲಭ್ಯಗಳು, ತುರ್ತು ವ್ಯವಸ್ಥೆಗಳು ಹಾಗೂ ಸಿಬ್ಬಂದಿ ಸಿದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದರು.

ನಗರ ಸ್ವಚ್ಛತೆಗೆ ಲಿಟ್ಟರ್ ಪಿಕ್ಕರ್ ಖರೀದಿ:

ನಗರದ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಯನ್ನು ಮತ್ತಷ್ಟು ಬಲಪಡಿಸಲು ಅಗತ್ಯ ಸಂಖ್ಯೆಯಲ್ಲಿ ಲಿಟ್ಟರ್ ಪಿಕ್ಕರ್ ಗಳನ್ನು ಖರೀದಿಸುವ ಸಾಧ್ಯತೆಗಳ ಕುರಿತು ಪರಿಶೀಲನೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಿದರು.

ರಸ್ತೆ ಮೀಡಿಯನ್ ಗಳ ಸ್ವಚ್ಛತೆ:

ನಗರದ ರಸ್ತೆ ಮೀಡಿಯನ್ ಗಳ ಸ್ವಚ್ಛತೆ, ಸಮರ್ಪಕ ನಿರ್ವಹಣೆ ಹಾಗೂ ಅಗತ್ಯವಿದ್ದಲ್ಲಿ ಹೂಳೆತ್ತುವಿಕೆ ಕಾರ್ಯಗಳನ್ನು ತಕ್ಷಣ ಕೈಗೊಳ್ಳುವಂತೆ ಸೂಚಿಸಿದರು.

ಶಿಥಿಲಾವಸ್ಥೆಯ ಕಟ್ಟಡಗಳು ಮತ್ತು ಅಪಾಯಕಾರಿ ಗೋಡೆಗಳ ತೆರವು:

ಸಾರ್ವಜನಿಕ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ನಗರದಲ್ಲಿನ ಶಿಥಿಲಾವಸ್ಥೆಯ ಕಟ್ಟಡಗಳು ಹಾಗೂ ಅಪಾಯಕಾರಿ ಕಾಂಪೌಂಡ್ ಗಳನ್ನು ಆದ್ಯತೆಯ ಮೇರೆಗೆ ತೆರವುಗೊಳಿಸಲು ನಿರ್ದೇಶಿಸಿದರು.

ಅನಧಿಕೃತ ರಸ್ತೆ ಕತ್ತರಿಸುವಿಕೆಗೆ ಕಠಿಣ ಕ್ರಮ:

ರಸ್ತೆಗಳ ಗುಣಮಟ್ಟ ಕಾಪಾಡಲು ಹಾಗೂ ಸಮನ್ವಯಿತ ಕಾಮಗಾರಿಗಳನ್ನು ಖಚಿತಪಡಿಸಲು ಪೂರ್ವಾನುಮತಿ ಇಲ್ಲದೆ ರಸ್ತೆ ಕತ್ತರಿಸುವವರ ವಿರುದ್ಧ ಕಾನೂನು ಕ್ರಮ ಕೈಗೊಂಡು, ಕೇಸ್ ದಾಖಲಿಸುವುದಾಗಿ ಎಚ್ಚರಿಕೆ ನೀಡಿದರು.

ಪ್ರವಾಹ ಪೀಡಿತ ಪ್ರದೇಶಗಳ ನಿಯಮಿತ ಮೇಲ್ವಿಚಾರಣೆ:
ನಗರದ ಎಲ್ಲಾ ಪ್ರವಾಹ ಪೀಡಿತ ಪ್ರದೇಶಗಳನ್ನು ನಿಯಮಿತವಾಗಿ ಮೇಲ್ವಿಚಾರಣೆ ಮಾಡಿ, ಭಾರಿ ಮಳೆ ಹಾಗೂ ಪ್ರವಾಹ ನಿಯಂತ್ರಣಕ್ಕಾಗಿ ಅಗತ್ಯ ಮುನ್ನೆಚ್ಚರಿಕೆ ಮತ್ತು ತುರ್ತು ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.

ಈ ವೇಳೆ ವಿಶೇಷ ಆಯುಕ್ತರಾದ ಸುಷಮಾ ಗೋಡಬೋಲೆ, ಘನತ್ಯಾಜ್ಯ ನಿರ್ವಹಣಾ ನಿಯಮಿತದ ಸಿಇಓ ಕರೀಗೌಡ, ನಗರ ಪಾಲಿಕೆಗಳ ಆಯುಕ್ತರುಗಳು, ಮುಖ್ಯ ಅಭಿಯಂತರರು, ರೈಲ್ವೇ, ಜಲಮಂಡಳಿ, ಬಿಡಿಎ ಅಧಿಕಾರಿಗಳು ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.


Share

You cannot copy content of this page