ಬೆಂಗಳೂರು: 80 ನೇ ಸ್ವಾತಂತ್ರ್ಯೋತ್ಸವದ ಶುಭ ಸಂದರ್ಭದ ಅಂಗವಾಗಿ ಸಾರ್ವಜನಿಕರಿಗೆ ಸುಂದರವಾಗಿ ದೀಪಾಲಂಕಾರಗೊಂಡಿರುವ ಲೋಕಭವನವನ್ನು (ರಾಜಭವನ) ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ.
2026ನೇ ಆಗಸ್ಟ್ 16 ರಿಂದ 18ರ ವರೆಗೆ ಸಂಜೆ 5.30 ಗಂಟೆಯಿಂದ ರಾತ್ರಿ 7.30 ಗಂಟೆಯವರೆಗೆ ಸಾರ್ವಜನಿಕರು ಲೋಕಭವನಕ್ಕೆ ಭೇಟಿ ನೀಡಬಹುದಾಗಿದೆ. ಈ ಭೇಟಿಯನ್ನು ಸುರಕ್ಷಿತ ಹಾಗೂ ಸುಗಮವಾಗಿ ನಡೆಸುವ ಸಲುವಾಗಿ ಆಗಮಿಸುವ ಸಾರ್ವಜನಿಕರು ಲೋಕಭವನದ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು.
ಸಂದರ್ಶಕರಿಗೆ ಕಡ್ಡಾಯ ಸೂಚನೆಗಳು:
ಗುರುತಿನ ಚೀಟಿ: ಪ್ರವೇಶಿಸುವ ಪ್ರತಿಯೊಬ್ಬ ಸಂದರ್ಶಕರು ಪ್ರವೇಶ ದ್ವಾರದಲ್ಲಿ ಆಧಾರ್ ಕಾರ್ಡ್ ಅಥವಾ ಸರ್ಕಾರದಿಂದ ನೀಡಲಾದ ಯಾವುದೇ ಅಧಿಕೃತ ಗುರುತಿನ ಚೀಟಿಯನ್ನು ಭದ್ರತಾ ಸಿಬ್ಬಂದಿಗೆ ಪರಿಶೀಲನೆಗಾಗಿ ಪ್ರದರ್ಶಿಸಬೇಕು.
ಭದ್ರತಾ ತಪಾಸಣೆ:* ಎಲ್ಲಾ ಸಂದರ್ಶಕರು ಕಡ್ಡಾಯವಾಗಿ ಭದ್ರತಾ ತಪಾಸಣೆಗೆ ಒಳಪಡಬೇಕು ಹಾಗೂ ಭದ್ರತಾ ಸಿಬ್ಬಂದಿ ನೀಡುವ ಸೂಚನೆಗಳನ್ನು ಪಾಲಿಸಬೇಕು.
ಸಂಚಾರ ನಿಯಮ: ಸಂದರ್ಶಕರಿಗೆ ನಿಗದಿಪಡಿಸಿರುವ ಮಾರ್ಗ ಹಾಗೂ ಸ್ಥಳಗಳಲ್ಲಿ ಮಾತ್ರ ಸಂಚರಿಸಲು ಅನುಮತಿ ಇರುತ್ತದೆ.
ಶಿಸ್ತು ಮತ್ತು ಸಭ್ಯತೆ: ಲೋಕಭವನದ ಆವರಣದಲ್ಲಿ ಶಾಂತಿ, ಶಿಸ್ತು ಹಾಗೂ ಸಭ್ಯತೆಯನ್ನು ಕಾಪಾಡಿಕೊಳ್ಳಬೇಕು.
ವಾಹನ ಸೌಲಭ್ಯ: ಖಾಸಗಿ ಹಾಗೂ ಟ್ಯಾಕ್ಸಿ ವಾಹನಗಳಿಗೆ ಲೋಕಭವನದ ಆವರಣದೊಳಗೆ ಪ್ರವೇಶವಿರುವುದಿಲ್ಲ.
ನಿಷೇಧಿತ ವಸ್ತುಗಳು:
ಬ್ಯಾಗ್‌ಗಳು, ಬ್ಯಾಕ್ ಪ್ಯಾಕ್‌ಗಳು , ಆಹಾರ ಪದಾರ್ಥಗಳು, ಪಾನ್, ಗುಟ್ಕಾ, ತಂಬಾಕು ಉತ್ಪನ್ನಗಳು, ಸಿಗರೇಟ್ ಹಾಗೂ ಮದ್ಯ, ವೃತ್ತಿಪರ ಕ್ಯಾಮರಾಗಳು, ವೀಡಿಯೊ ಕ್ಯಾಮರಾಗಳು, ಲ್ಯಾಪ್‌ಟಾಪ್‌ಗಳು ಹಾಗೂ ಇತರೆ ವಿದ್ಯುನ್ಮಾನ/ವಿದ್ಯುತ್ ಉಪಕರಣಗಳು, ಚೂಪಾದ/ಲೋಹದ ವಸ್ತುಗಳು, ಶಸ್ತ್ರಾಸ್ತ್ರಗಳು ಹಾಗೂ ಮದ್ದುಗುಂಡುಗಳು, ಬೆಂಕಿಪೊಟ್ಟಣ, ಲೈಟರ್‌ಗಳು ಹಾಗೂ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳು
ಲೋಕಭವನದೊಳಗೆ ತರುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಎಂದು ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಆರ್. ಪ್ರಭುಶಂಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
