ಸಮಗ್ರ ಸುದ್ದಿ

ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ : ರಾಜೇಂದ್ರ ಚೋಳನ್

Share

ಬೆಂಗಳೂರು:ಡೆಂಗ್ಯೂ ನಿಯಂತ್ರಣಕ್ಕೆ ಸಾರ್ವಜನಿಕರ ಸಹಭಾಗಿತ್ವ ಅತ್ಯಗತ್ಯ ಎಂದು ಕೇಂದ್ರ ನಗರ ಪಾಲಿಕೆ ಆಯುಕ್ತರಾದ ರಾಜೇಂದ್ರ ಚೋಳನ್ ರವರು ತಿಳಿಸಿದರು.

ರಾಷ್ಟೀಯ ಡೆಂಗ್ಯೂ ದಿನಾಚರಣೆ ಕುರಿತಾಗಿ ಮಾತನಾಡಿದ ಅವರು, ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ವಚ್ಛತೆ ಕಾಪಾಡುವುದು, ನೀರು ನಿಲ್ಲದಂತೆ ನೋಡಿಕೊಳ್ಳುವುದು ಮತ್ತು ಸೊಳ್ಳೆಗಳ ಸಂತಾನೋತ್ಪತ್ತಿ ತಡೆಗಟ್ಟುವುದು ಪ್ರತಿಯೊಬ್ಬರ ಜವಾಬ್ದಾರಿ ಎಂದು ತಿಳಿಸಿದರು.

ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ದಿನಾಂಕ: 16-05-2026 ರಂದು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಉಪ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ವೈದ್ಯಾಧಿಕಾರಿಗಳ ನೇತೃತ್ವದಲ್ಲಿ ಎಲ್ಲಾ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ನಮ್ಮ ಕ್ಲಿನಿಕ್ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಸಿಬ್ಬಂದಿಗಳ ಸಹಯೋಗದೊಂದಿಗೆ ಡೆಂಗ್ಯೂ, ಚಿಕನ್ ಗುನ್ಯಾ, ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಯಿತು.

ಈ ವರ್ಷದ ಘೋಷವಾಕ್ಯವಾದ “ಡೆಂಗ್ಯೂ ನಿಯಂತ್ರಣಕ್ಕೆ ಸಮುದಾಯದ ಸಹಭಾಗಿತ್ವ: ಪರಿಶೀಲಿಸಿ, ಸ್ವಚ್ಛಗೊಳಿಸಿ ಹಾಗೂ ಮುಚ್ಚಿಡಿ” (Community Participation for Dengue Control: Check, Clean and Cover) ಎಂಬ ಸಂದೇಶದಡಿ ಸ್ಥಳೀಯ ಸಂಘ ಸಂಸ್ಥೆಗಳು, ಶಾಲಾ ಮಕ್ಕಳು, ಅಂಗನವಾಡಿ ಕಾರ್ಯಕರ್ತರು ಹಾಗೂ ಸಾರ್ವಜನಿಕರ ಸಹಯೋಗದೊಂದಿಗೆ ಎಲ್ಲಾ ವಾರ್ಡಗಳಲ್ಲಿ ಜಾಗೃತಿ ಜಾಥಾ, ರ್ಯಾಲಿ ಮತ್ತು ಅರಿವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ.

ಪ್ರಸ್ತುತ ಬೆಂಗಳೂರು ಕೇಂದ್ರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸೊಳ್ಳೆಗಳಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಮಳೆಗಾಲದ ಆರಂಭದ ಹಿನ್ನೆಲೆ ಸಾರ್ವಜನಿಕರು ವಿಶೇಷ ಎಚ್ಚರಿಕೆ ವಹಿಸುವುದು ಅತ್ಯಗತ್ಯವಾಗಿದೆ ಎಂದು ಅವರು ತಿಳಿಸಿದರು.

ಡೆಂಗ್ಯೂ ನಿಯಂತ್ರಣ ಕ್ರಮಗಳು:

ಸೊಳ್ಳೆ ಸಂತಾನೋತ್ಪತ್ತಿ ಜಾಗಗಳ ನಿವಾರಣೆ-ನೀರು ತುಂಬಿಕೊಂಡಿರುವ ಪಾತ್ರೆಗಳನ್ನು ತೆಗೆದುಬಿಡಿ ಅಥವಾ ಸೂಕ್ತವಾಗಿ ನಿರ್ವಹಣೆ ಮಾಡಿ.

ಪರಿಸರವನ್ನು ಸ್ವಚ್ಛವಾಗಿಡಿ-ಸೊಳ್ಳೆಗಳ ಉತ್ಪತ್ತಿ ತಾಣಗಳನ್ನು ಸ್ವಚ್ಛಗೊಳಿಸಿ ಮತ್ತು ನೀರು ನಿಂತಿರುವ ಜಾಗಗಳನ್ನು ನೀರು ನಿಲ್ಲದಂತೆ ಮಾಡಿ ಪರಿಸರವನ್ನು ಸ್ವಚ್ಛವಾಗಿಡಿ

ವೈಯಕ್ತಿಕ ಸುರಕ್ಷತೆ-ಸೊಳ್ಳೆ ನಿವಾರಕಗಳು, ಮೈಮುಚ್ಚಿಕೊಳ್ಳುವ ದಿರಿಸುಗಳು ಮತ್ತು ಸೊಳ್ಳೆ ಪರದೆಗಳನ್ನು ಬಳಸಿ.

ಸಮುದಾಯ ಜಾಗೃತಿ-ಸೊಳ್ಳೆ ಸಂತಾನೋತ್ಪತ್ತಿ ತಡೆಗಟ್ಟುವ ಕುರಿತು ಜಾಗೃತಿ ಮೂಡಿಸಿ ಮತ್ತು ಸುರಕ್ಷಿತ ಕ್ರಮಗಳನ್ನು ಕೈಗೊಳ್ಳಲು ಪ್ರೋತ್ಸಾಹಿಸಿ.

ಇಂಟಿಗ್ರೇಟೆಡ್ ವೆಕ್ಟರ್ ಮ್ಯಾನೇಜ್ ಮೆಂಟ್–ಇದು ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ಸೊಳ್ಳೆ ನಿವಾರಣೆ ಮಾಡುವ ಕ್ರಮ.

“ಸೊಳ್ಳೆಜನ್ಯ ರೋಗಗಳ ತಡೆಗೆ ಸಾರ್ವಜನಿಕರ ಸಹಭಾಗಿತ್ವವೇ ಅತ್ಯಂತ ಪರಿಣಾಮಕಾರಿ ಅಸ್ತ್ರ. ಪ್ರತಿಯೊಬ್ಬ ನಾಗರಿಕರೂ ತಮ್ಮ ಪರಿಸರವನ್ನು ಸ್ವಚ್ಛವಾಗಿಟ್ಟುಕೊಂಡು ಆರೋಗ್ಯಕರ ಬೆಂಗಳೂರು ನಿರ್ಮಾಣಕ್ಕೆ ಕೈಜೋಡಿಸಬೇಕು ಹಾಗೂ ಹಲವು ಕ್ರಮಗಳನ್ನು ಪಾಲಿಸಲು ಆಯುಕ್ತರಾದ ರಾಜೇಂದ್ರ ಚೋಳನ್ ಕರೆ ನೀಡಿದ್ದಾರೆ.


Share

You cannot copy content of this page