ಸಮಗ್ರ ಸುದ್ದಿ

ಲಂಚವಿಲ್ಲದೇ ‘ಬಿ’ ಯಿಂದ ‘ಎ’ ಖಾತಾ ಪರಿವರ್ತನೆ, ಮನೆ ಬಾಗಿಲಿಗೆ ಇ-ಖಾತೆ: ಡಿಸಿಎಂ ಡಿ.ಕೆ. ಶಿವಕುಮಾರ್ |ಪ್ರತಿ ಶನಿವಾರ ‘ನನ್ನ ಇ- ಖಾತೆ’ ಅಭಿಯಾನ

Share

ಬೆಂಗಳೂರು: “ನನ್ನ ಇ-ಖಾತಾ, ನನ್ನ ಹಕ್ಕು” ಅಭಿಯಾನದಿಂದ ಬೆಂಗಳೂರಿನ ಸಾರ್ವಜನಿಕರು ಒಂದೇ ಒಂದು ರೂಪಾಯಿ ಲಂಚ ನೀಡದೆ ತಮ್ಮ ಆಸ್ತಿಗಳನ್ನು ‘ಬಿ’ ಖಾತೆಯಿಂದ ‘ಎ’ ಖಾತೆಗೆ ಪರಿವರ್ತನೆ ಹಾಗೂ ಮನೆ ಬಾಗಿಲಲ್ಲೇ ಇ-ಖಾತೆ ಪಡೆಯಬಹುದು. ಏಳು ಲಕ್ಷ ಜನರಿಗೆ ಇದರಿಂದ ಉಪಯೋಗವಾಗಲಿದೆ. ಬೆಂಗಳೂರು ನಿವಾಸಿಗಳು, ಅರ್ಜಿದಾರರು ಈ ಅಭಿಯಾನದಿಂದ ಖುಷಿಯಾಗಿದ್ದಾರೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೇಳಿದರು.

ಬೆಂಗಳೂರು ಪೂರ್ವ ನಗರ ಪಾಲಿಕೆ ವ್ಯಾಪ್ತಿಯ ಹೊರಮಾವಿನ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಶನಿವಾರ ಆರಂಭವಾದ “ನನ್ನ ಇ-ಖಾತಾ, ನನ್ನ ಹಕ್ಕು” ಅಭಿಯಾನ ಕೇಂದ್ರಕ್ಕೆ ಬೆಂಗಳೂರು ನಗರಾಭಿವೃದ್ಧಿ ಸಚಿವರೂ ಆದ ಶಿವಕುಮಾರ್ ರವರು ಭೇಟಿ ನೀಡಿ, ಪ್ರಕ್ರಿಯೆಯನ್ನು ಪರಿಶೀಲಿಸಿದರು. ನಂತರ ನಾಗರಿಕರ ಅಹವಾಲು ಆಲಿಸಿ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದರು. ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.

“ಖಾತೆ ದಾಖಲೆಯಲ್ಲಿ ಫೋಟೋ ಸಹ ಇರಲಿದೆ. ಯಾರಾದರೂ ನಕಲಿ ದಾಖಲೆಗಳನ್ನು ನೀಡಿ ಖಾತೆ ಮಾಡಿಸಿಕೊಂಡರೆ ಅದನ್ನು ರದ್ದು ಮಾಡುವ ವ್ಯವಸ್ಥೆಯೂ ಇದೆ. ನಿಗದಿತ ನಂಬರ್ ನೀಡಿದ ತಕ್ಷಣ 2004 ರ ನಂತರದ ಎಲ್ಲಾ ದಾಖಲೆಗಳು ದೊರೆಯುತ್ತವೆ. ಸಬ್ ರಿಜಿಸ್ಟ್ರಾರ್ ಕಚೇರಿಗೆ ಲಿಂಕ್ ಮಾಡಲಾಗಿದೆ. ಅರ್ಹ ಮಾಲೀಕರಿಗೆ ಖಾತೆ ಮಾಡಿಕೊಡಲಾಗುವುದು” ಎಂದರು.

ಪ್ರತಿ ಶನಿವಾರ ನನ್ನ ಇ- ಖಾತೆ ಅಭಿಯಾನ

“ನಿಮ್ಮ ಆಸ್ತಿ ಮೌಲ್ಯಗಳನ್ನು ಹೆಚ್ಚಳ ಮಾಡಲು ಬಿ ಖಾತೆಯಿಂದ ಎ ಖಾತೆಗೆ ಪರಿವರ್ತನೆ ಮಾಡಿಕೊಡಲಾಗುತ್ತಿದೆ. ಇದು ಐತಿಹಾಸಿಕ ತೀರ್ಮಾನ. ಇದರಿಂದ ನೀವು ಬ್ಯಾಂಕ್ ನಲ್ಲಿ ಸಾಲ ಪಡೆಯಬಹುದು ಹಾಗೂ ಇತರೇ ಸೌಲಭ್ಯಗಳನ್ನು ನಿಮ್ಮದಾಗಿಸಿಕೊಳ್ಳಬಹುದು. ಬೆಂಗಳೂರಿನಲ್ಲಿರುವ 23 ಲಕ್ಷ ಆಸ್ತಿಗಳಲ್ಲಿ 16 ಲಕ್ಷ ಎ ಖಾತೆಗಳಿದ್ದರೆ 7 ಲಕ್ಷ ‘ಬಿ’ ಖಾತೆಗಳಿವೆ. ಕೆಳ ಮಟ್ಟದ ಅಧಿಕಾರಿಗಳು ಖಾತೆ ವಿಚಾರವಾಗಿ ಲಂಚ ಪಡೆದು ಕಿರುಕುಳ ನೀಡುತ್ತಿದ್ದರು ಎನ್ನುವುದು ನನ್ನ ಗಮನಕ್ಕೆ ಬಂದಿತ್ತು. ಅದಕ್ಕಾಗಿ ಪ್ರತಿ ಶನಿವಾರ ಅಭಿಯಾನ ನಡೆಯಲಿದೆ” ಎಂದು ತಿಳಿಸಿದರು.

“ನಿಮ್ಮ ಆಸ್ತಿ ದಾಖಲೆಗಳಲ್ಲಿ ತೊಂದರೆಯಿದ್ದರೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಲಿದ್ದಾರೆ. ನಿಮ್ಮ ಆಸ್ತಿಗಳಿಗೆ ಗುರುತಿನ ಸಂಖ್ಯೆ ನೀಡಲಾಗಿರುತ್ತದೆ. ಇದನ್ನು ಬಳಸಿಕೊಂಡು ತಪ್ಪಿರುವ ದಾಖಲೆಗಳನ್ನು ಸರಿ ಮಾಡಲಾಗುವುದು. ನಿಮ್ಮ ಆಸ್ತಿ ಮೌಲ್ಯದ ಶೇ. 5 ರಷ್ಟು ಮೊತ್ತವನ್ನು ಕಟ್ಟಬೇಕಿತ್ತು. ಆದರೆ 100 ದಿನಗಳ ಕಾಲ ರಿಯಾಯಿತಿ ನೀಡಿದ್ದು ಶೇ. 2 ರಷ್ಟು ಶುಲ್ಕ ಪಾವತಿ ಮಾಡುವ ಅವಕಾಶ ಕಲ್ಪಿಸಲಾಗಿದೆ.

ಇದು ಸಾರ್ವಜನಿಕರಿಗೆ ಸುವರ್ಣಾವಕಾಶ. ನಿಮ್ಮ ಖಾತೆಯನ್ನು ನಾವೇ ಫೈಲ್ ರೂಪದಲ್ಲಿಯೇ ನೀಡುತ್ತೇವೆ. ಅದರಲ್ಲಿ ನಿಮ್ಮ ಹಾಗೂ ಮನೆಯ ಫೋಟೋ ಇರುತ್ತದೆ. ಆನ್ ಲೈನ್ ಮೂಲಕವೂ ಡೌನ್‌ಲೋಡ್ ಮಾಡಿಕೊಳ್ಳಬಹುದು. ಯಾರೂ ಸಹ ಇದನ್ನು ನಕಲು ಮಾಡಲು ಸಾಧ್ಯವಿಲ್ಲ” ಎಂದರು.

“ಸಾರ್ವಜನಿಕರು ಯಾರಿಗೂ ಸಹ ಒಂದೇ ಒಂದು ರೂಪಾಯಿ ಲಂಚ ನೀಡಬಾರದು. ಅಧಿಕಾರಿಗಳಿಗೆ ಸೇರಿದಂತೆ ಯಾವ ಪಕ್ಷದವರಿಗೂ ಲಂಚ ಕೊಡಬಾರದು. ಸರ್ಕಾರಿ ಭೂಮಿಗಳನ್ನು ಮಂಜೂರು ಮಾಡಲು ಸಾಧ್ಯವಿಲ್ಲ. ನಾವು ಇಡೀ ದೇಶದಲ್ಲಿಯೇ ಮಾದರಿಯಾಗಿದ್ದೇವೆ. ಕೇಂದ್ರ ಸರ್ಕಾರವು ನಮಗೆ ಒಳ್ಳೆ ಕೆಲಸ ಮಾಡುತ್ತಿದ್ದೀರಿ ಎಂದು ಶ್ಲಾಘಿಸಿದ್ದಾರೆ. ಆರನೇ ಗ್ಯಾರಂಟಿಯಾಗಿ ಭೂಮಿ ಗ್ಯಾರಂಟಿ ನೀಡುತ್ತಿದ್ದೇವೆ. ನೀವು ತೆಗೆದುಕೊಂಡ ನಿವೇಶನ ಅಂದು ಕಡಿಮೆ ಬೆಲೆಯದ್ದಾಗಿದ್ದರೆ ಖಾತೆ ಬದಲಾವಣೆಯಿಂದ ಆಸ್ತಿ ಬೆಲೆ ಹೆಚ್ಚಳವಾಗಲಿದೆ” ಎಂದರು.

“ದಲ್ಲಾಳಿಗಳನ್ನು ದೂರ ಇಡಬೇಕು. ಯಾವ ಅಧಿಕಾರಿಗಳು ಲಂಚ ಕೇಳಿದರೆ ದೂರು ನೀಡುವ ವ್ಯವಸ್ಥೆ ಮಾಡಬೇಕು. ಇದಕ್ಕಾಗಿ ನಿರ್ದಿಷ್ಟ ದೂರವಾಣಿ ಸಂಖ್ಯೆ ನೀಡಲಾಗುವುದು. ಲಂಚ ಕೇಳಿದ್ದರ ದೂರು ನೀಡಬಹುದು. ಅಂತಹವರ ವಿರುದ್ದ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದರು.


Share

You cannot copy content of this page