ಸಮಗ್ರ ಸುದ್ದಿ

ಬೆಂಗಳೂರು ಮತ್ತು ಮುಂಬೈ ನಡುವಿನ ಹೊಸ ರೈಲಿಗೆ ಚಾಲನೆ| ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಂಪರ್ಕಕ್ಕೆ ಮತ್ತಷ್ಟು ಬಲ – ಸಚಿವ ಅಶ್ವಿನಿ ವೈಷ್ಣವ್

Share

ಬೆಂಗಳೂರು: ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರು ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬೆಂಗಳೂರು–ಮುಂಬೈ ರೈಲಿಗೆ ಚಾಲನೆ ನೀಡಿ, ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆಗೆ ಚಾಲನೆ ನೀಡಿದರು.

ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಬಹುಕಾಲದ ಬೇಡಿಕೆಗಳು ಇದೀಗ ಈಡೇರುತ್ತಿವೆ. ಬೆಂಗಳೂರು ಮತ್ತು ಮುಂಬೈ ನಡುವೆ ವಂದೇ ಭಾರತ್ ಸ್ಲೀಪರ್ ಸೇವೆಯನ್ನು ಶೀಘ್ರದಲ್ಲೇ ಆರಂಭಿಸುವ ನಿರೀಕ್ಷೆಯಿದೆ ಎಂದು ಅವರು ಘೋಷಿಸಿದರು.

ಮೂಲಸೌಕರ್ಯ ಅಭಿವೃದ್ಧಿಯನ್ನು ಉಲ್ಲೇಖಿಸಿದ ಅವರು, ಕಳೆದ ಕೆಲವು ವರ್ಷಗಳಲ್ಲಿ ರೈಲ್ವೆ ಅನುದಾನದಲ್ಲಿ ಮಹತ್ತರ ಏರಿಕೆ ಕಂಡುಬಂದಿದ್ದು, ಕರ್ನಾಟಕದಾದ್ಯಂತ ವಿವಿಧ ಯೋಜನೆಗಳ ಅನುಷ್ಠಾನ ವೇಗವಾಗಿ ನಡೆಯುತ್ತಿದೆ ಎಂದು ಹೇಳಿದರು.

ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ಕರ್ನಾಟಕದ 61 ರೈಲು ನಿಲ್ದಾಣಗಳನ್ನು ₹2,160 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಇದರಲ್ಲಿ 9 ನಿಲ್ದಾಣಗಳ ಕಾಮಗಾರಿ ಪೂರ್ಣಗೊಂಡಿದೆ. ಬೆಂಗಳೂರು ಕ್ಯಾಂಟೋನ್ಮೆಂಟ್ ನಿಲ್ದಾಣವನ್ನು ₹485 ಕೋಟಿ ವೆಚ್ಚದಲ್ಲಿ ಹಾಗೂ ಯಶವಂತಪುರ ನಿಲ್ದಾಣವನ್ನು ₹367 ಕೋಟಿ ವೆಚ್ಚದಲ್ಲಿ ಪುನರ್ ಅಭಿವೃದ್ಧಿಪಡಿಸಲಾಗುತ್ತಿದೆ.

2014ರಿಂದ ಕರ್ನಾಟಕದಲ್ಲಿ ಸುಮಾರು 1,750 ಕಿಮೀ ಹೊಸ ರೈಲು ಮಾರ್ಗಗಳನ್ನು ನಿರ್ಮಿಸಲಾಗಿದೆ. ಹಾಸನ–ಮಂಗಳೂರು ವಿಭಾಗದಂತಹ ಸವಾಲಿನ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿದ್ದು, ಪ್ರಸ್ತುತ ಪರೀಕ್ಷಾ ಕಾರ್ಯಗಳು ನಡೆಯುತ್ತಿವೆ ಎಂದು ಅವರು ಹೇಳಿದರು.

ಬೆಂಗಳೂರು ಉಪನಗರ ರೈಲು ಯೋಜನೆಯ ಕುರಿತು ಮಾತನಾಡಿದ ಅವರು, ನಾಲ್ಕೂ ಕಾರಿಡಾರ್‌ಗಳಲ್ಲಿ ಕಾಮಗಾರಿ ಪ್ರಗತಿಯಲ್ಲಿದೆ. ಬೈಯಪ್ಪನಹಳ್ಳಿ–ಚಿಕ್ಕಬಾಣಾವರ ಮತ್ತು ಹೀಲಲಿಗೆ–ರಾಜನುಕುಂಟೆ ಕಾರಿಡಾರ್‌ಗಳಿಗೆ ಭೂಸ್ವಾಧೀನ ಪೂರ್ಣಗೊಂಡಿದ್ದು, ನಿಲ್ದಾಣ ಕಾಮಗಾರಿಗಳು ನಡೆಯುತ್ತಿವೆ. ಕೆಎಸ್ಆರ್ ಬೆಂಗಳೂರು–ದೇವನಹಳ್ಳಿ ಮಾರ್ಗಸೂಚಿಗೆ ರಾಜ್ಯ ಸರ್ಕಾರ ಮತ್ತು ರೈಲ್ವೆಯ ಜಂಟಿ ಅನುಮೋದನೆ ದೊರೆತಿದ್ದು, ಜಿಯೋಟೆಕ್ನಿಕಲ್ ಸಮೀಕ್ಷೆ ಪೂರ್ಣಗೊಂಡಿದೆ. ಕೆಂಗೇರಿ–ವೈಟ್‌ಫೀಲ್ಡ್ ಮಾರ್ಗಕ್ಕೂ ಇತ್ತೀಚೆಗೆ ಅನುಮೋದನೆ ದೊರೆತಿದ್ದು, ಸಮೀಕ್ಷಾ ಕಾರ್ಯ ಶೀಘ್ರದಲ್ಲೇ ಆರಂಭವಾಗಲಿದೆ. ದೇವನಹಳ್ಳಿ ವಿಮಾನ ನಿಲ್ದಾಣ, ಎಲೆಕ್ಟ್ರಾನಿಕ್ ಸಿಟಿ, ಮಾರತಹಳ್ಳಿ ಹಾಗೂ ಹೆಬ್ಬಾಳ ಸೇರಿದಂತೆ ಪ್ರಮುಖ ಪ್ರದೇಶಗಳನ್ನು ಈ ಉಪನಗರ ರೈಲು ಜಾಲ ಸಂಪರ್ಕಿಸಲಿದೆ ಎಂದು ಅವರು ಹೇಳಿದರು.

ಪ್ರಸ್ತುತ ಕರ್ನಾಟಕದಲ್ಲಿ 12 ಜೋಡಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ ಎಂದು ತಿಳಿಸಿದ ಅವರು, ಬೆಂಗಳೂರು–ಮಂಗಳೂರು ಮಾರ್ಗದ ಪರೀಕ್ಷೆ ನಡೆಯುತ್ತಿದ್ದು, ಶೀಘ್ರದಲ್ಲೇ ಕರಾವಳಿ ಭಾಗದ ಸಂಪರ್ಕ ಮಡಗಾಂವ್‌ವರೆಗೆ ಸುಧಾರಿಸಲಿದೆ ಎಂದರು.

ಬೆಂಗಳೂರು–ಹೈದರಾಬಾದ್ ಹಾಗೂ ಬೆಂಗಳೂರು–ಚೆನ್ನೈ ನಡುವೆ ಬುಲೆಟ್ ಟ್ರೈನ್ ಕಾರಿಡಾರ್‌ಗಳಿಗೆ ಅನುಮೋದನೆ ನೀಡಲಾಗಿದೆ ಎಂದು ಅವರು ತಿಳಿಸಿದರು.

ಮುಂದಿನ ದೀರ್ಘಕಾಲೀನ ಯೋಜನೆಯ ಭಾಗವಾಗಿ ಮುಂಬೈ, ಬೆಂಗಳೂರು ಹಾಗೂ ಇತರ ಪ್ರಮುಖ ನಗರಗಳನ್ನು ಸಂಪರ್ಕಿಸುವ ಸುಮಾರು 7,000 ಕಿಮೀ ಉದ್ದದ ಬುಲೆಟ್ ರೈಲಿನ ಜಾಲವನ್ನು ನಿರ್ಮಿಸುವ ಉದ್ದೇಶವಿದೆ ಎಂದು ಅವರು ಹೇಳಿದರು.

ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾದ ವಿ. ಸೋಮಣ್ಣ ಅವರು ಮಾತನಾಡಿ, ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ಬೆಂಗಳೂರು – ಲೋಕಮಾನ್ಯ ತಿಲಕ್ ಟರ್ಮಿನಸ್ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 16553/54) ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿ, ಹೊಸ ಬೆಂಗಳೂರು–ಮುಂಬೈ ರೈಲಿಗೆ ಅನುಮೋದನೆ ನೀಡಿದಕ್ಕಾಗಿ ಅಶ್ವಿನಿ ವೈಷ್ಣವ್ ಅವರಿಗೆ ಕೃತಜ್ಞತೆ ಸಲ್ಲಿಸಿದರು. ದೇಶದ ಅತ್ಯಂತ ಬ್ಯುಸಿ ಮಾರ್ಗಗಳಲ್ಲಿ ಒಂದಾದ ಈ ಮಾರ್ಗದಲ್ಲಿ ಹೊಸ ರೈಲು ಪ್ರಯಾಣಿಕರಿಗೆ ಹೆಚ್ಚಿನ ಅನುಕೂಲವಾಗುವುದಲ್ಲದೆ ಕರ್ನಾಟಕದ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಹೇಳಿದರು.

ಕರ್ನಾಟಕದಲ್ಲಿ ಪ್ರಸ್ತುತ 14 ಜಿಲ್ಲೆಗಳನ್ನು ಸಂಪರ್ಕಿಸುವ 12 ಜೋಡಿ ವಂದೇ ಭಾರತ್ ರೈಲುಗಳು ಸಂಚರಿಸುತ್ತಿವೆ ಎಂದು ಅವರು ತಿಳಿಸಿದರು. ತನಿಸಂದ್ರದಲ್ಲಿ ₹270 ಕೋಟಿ ವೆಚ್ಚದಲ್ಲಿ ವಂದೇ ಭಾರತ್ ಸ್ಲೀಪರ್ ನಿರ್ವಹಣಾ ಡೆಪೋ ಮತ್ತು ಎಸ್‌ಎಂವಿಟಿ ಬೆಂಗಳೂರಿನಲ್ಲಿ ₹52.73 ಕೋಟಿ ವೆಚ್ಚದಲ್ಲಿ ಚೇರ್ ಕಾರ್ ನಿರ್ವಹಣಾ ಸೌಲಭ್ಯ ನಿರ್ಮಿಸಲಾಗುತ್ತಿದೆ ಎಂದರು.

ಬೈಯಪ್ಪನಹಳ್ಳಿ–ಹೊಸೂರು ಡಬ್ಲಿಂಗ್ (₹1,116 ಕೋಟಿ), ಬೆಟ್ಟಹಲಸೂರು–ರಾಜಾನುಕುಂಟೆ ಡಬ್ಲಿಂಗ್ (₹248 ಕೋಟಿ) ಹಾಗೂ ಬೆಂಗಳೂರಿನ ಸುತ್ತಮುತ್ತಲಿನ ಕ್ವಾಡ್ರಪ್ಲಿಂಗ್ ಕಾಮಗಾರಿಗಳು (₹1,347 ಕೋಟಿ) ಸಾಮರ್ಥ್ಯ ವೃದ್ಧಿಗಾಗಿ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.

ಯಶವಂತಪುರ, ಕೆಎಸ್ಆರ್ ಬೆಂಗಳೂರು, ಲೊಟ್ಟೆಗೊಲ್ಲಹಳ್ಳಿ, ಬೈಯಪ್ಪನಹಳ್ಳಿ, ಪೆನುಕೊಂಡ, ಮೈಸೂರು ಹಾಗೂ ಜೋಲಾರಪೀಟೆ ಪ್ರಮುಖ ವಿಭಾಗಗಳಲ್ಲಿ ಒಟ್ಟು ₹6,396 ಕೋಟಿ ವೆಚ್ಚದಲ್ಲಿ ಆಟೋಮ್ಯಾಟಿಕ್ ಸಿಗ್ನಲಿಂಗ್ ಕಾಮಗಾರಿಗಳನ್ನು ಜಾರಿಗೊಳಿಸಲಾಗುತ್ತಿದೆ ಎಂದು ವಿ.ಸೋಮಣ್ಣ ಹೇಳಿದರು.

ಒಟ್ಟಾರೆ ಅಭಿವೃದ್ಧಿಯನ್ನು ಉಲ್ಲೇಖಿಸಿದ ಅವರು, ಕರ್ನಾಟಕಕ್ಕೆ ₹7,748 ಕೋಟಿ ಮೊತ್ತದ ದಾಖಲೆಯ ರೈಲ್ವೆ ಬಜೆಟ್ ಅನುದಾನ ಲಭಿಸಿದೆ ಎಂದರು. 2014ರಿಂದ ಸುಮಾರು 3,840 ಕಿಮೀ ರೈಲು ಮಾರ್ಗ ಅಭಿವೃದ್ಧಿಪಡಿಸಲಾಗಿದ್ದು, 3,742 ಕಿಮೀ ವಿದ್ಯುದೀಕರಣ ಪೂರ್ಣಗೊಂಡಿದೆ. ಇದರಿಂದ ರಾಜ್ಯವು ಶೇ.100ರಷ್ಟು ವಿದ್ಯುದೀಕರಣದತ್ತ ಸಾಗುತ್ತಿದೆ ಎಂದು ಹೇಳಿದರು.

2014ರ ಮೊದಲು ಸುಮಾರು 150 ಇದ್ದ ROB/RUBಗಳ ಸಂಖ್ಯೆ ಈಗ 707ಕ್ಕೆ ಏರಿಕೆಯಾಗಿದೆ. ಮುಂದಿನ ಒಂದು ವರ್ಷದೊಳಗೆ ಇನ್ನೂ 146 ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಮುಂದಿನ ಮೂರು ವರ್ಷಗಳಲ್ಲಿ ಎಲ್ಲಾ ಲೆವೆಲ್ ಕ್ರಾಸಿಂಗ್‌ಗಳನ್ನು ತೆರವುಗೊಳಿಸುವ ಗುರಿ ಹೊಂದಲಾಗಿದೆ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಸಂಸದ ಪಿ. ಸಿ. ಮೋಹನ್, ರಾಜ್ಯಸಭಾ ಸದಸ್ಯ ಲೆಹರ್ ಸಿಂಗ್ ಸಿರೋಯಾ ಹಾಗೂ ಬೆಂಗಳೂರು ದಕ್ಷಿಣ ಲೋಕಸಭಾ ಸದಸ್ಯ ತೇಜಸ್ವಿ ಸೂರ್ಯ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದರು. ಬೆಂಗಳೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಆಶುತೋಷ್ ಕುಮಾರ್ ಸಿಂಗ್ ಹಾಗೂ ದಕ್ಷಿಣ ಪಶ್ಚಿಮ ರೈಲ್ವೆಯ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


Share

You cannot copy content of this page