ಸಮಗ್ರ ಸುದ್ದಿ

ಒಂದು ದೇಶ – ಒಂದು ಚುನಾವಣೆ: ವಿವಿಧ ವರ್ಗಗಳ ಅಭಿಪ್ರಾಯ ಆಲಿಸಿದ ಜಂಟಿ ಸದನ ಸಮಿತಿ

Share

ಬೆಂಗಳೂರು: ಸಂವಿಧಾನ (129ನೇ ತಿದ್ದುಪಡಿ) ಮಸೂದೆ, 2024 ಮತ್ತು ಕೇಂದ್ರಾಡಳಿತ ಪ್ರದೇಶಗಳ ಕಾನೂನು (ತಿದ್ದುಪಡಿ) ಮಸೂದೆ, 2024 ಕುರಿತ ಜಂಟಿ ಸಂಸದೀಯ ಅಧ್ಯಯನ ಸಮಿತಿಯು ಸೋಮವಾರ ಬೆಂಗಳೂರಿನ ಖಾಸಗಿ ಹೋಟಲ್ ನಲ್ಲಿ ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ಸಂವಾದ ಏರ್ಪಡಿಸಿತ್ತು.

ಸಮಿತಿ ಅಧ್ಯಕ್ಷರಾದ ಪಿ. ಪಿ ಚೌಧರಿ ಪದ್ಮ ಪ್ರಶಸ್ತಿ ಪುರಸ್ಕೃತರು ಹಾಗೂ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಂವಾದ ನಡೆಸಿ, ‘ಒಂದು ರಾಷ್ಟ್ರ ಒಂದು ಚುನಾವಣೆ’ ಕುರಿತು ಅಭಿಪ್ರಾಯ ಸಂಗ್ರಹಿಸಿದರು.

ಸಂವಾದದಲ್ಲಿ ಮಾತನಾಡಿದ ಸಮಿತಿ ಅಧ್ಯಕ್ಷರಾದ ಪಿ.ಪಿ. ಚೌಧರಿ ಅವರು, ದೇಶದಲ್ಲಿ ಒಂದು ರಾಷ್ಟ್ರಕ್ಕೆ 5-6 ವಿಧಾನಸಭೆ ಚುನಾವಣೆಗಳು ನಡೆಯುತ್ತವೆ. ಇದರಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ವಿವಿಧ ವಲಯಗಳ ಜನರ ಮೇಲೆ ಪರಿಣಾಮ ಬೀರುತ್ತಿದೆ. ಒಂದು ರಾಜ್ಯದಲ್ಲಿ ಚುನಾವಣೆ ನಡೆದಾಗ, ಇತರ ರಾಜ್ಯಗಳ ಮೇಲೂ ಅದರ ಪರಿಣಾಮ ಉಂಟಾಗುತ್ತದೆ. ಈ ಹಿನ್ನೆಲೆಯಲ್ಲಿ ಒಂದು ರಾಷ್ಟ್ರ ಒಂದು ಚುನಾವಣೆ ಜಾರಿಯಾದಾಗ, ಶಿಕ್ಷಕರು, ಆರಕ್ಷಕರು, ಇತರ ಚುನಾವಣಾ ಸಿಬ್ಬಂದಿಯ ಹೊರೆ ಕಡಿಮೆಯಾಗುತ್ತದೆ. ಕಾರ್ಮಿಕರು, ವಲಸಿಗರು ಸೇರಿದಂತೆ ದೇಶಾದ್ಯಂತ ಎಲ್ಲರಿಗೂ ಮತದಾನದ ಅವಕಾಶ ದೊರೆಯಬೇಕು ಎನ್ನುವುದು ಈ ಸಮಿತಿಯ ಉದ್ದೇಶ. ಹಾಗಾಗಿ ಚುನಾವಣೆಯನ್ನು ಒಮ್ಮೆ, ಹಲವು ಹಂತಗಳಲ್ಲಿ ನಡೆಸಿದಾಗ ಎಲ್ಲರಿಗೂ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಲಿದೆ ಎಂದು ಹೇಳಿದರು.

ಚುನಾವಣೆ ಸುರಕ್ಷಿತವಾಗಿ ನಡೆಯುವುದಕ್ಕೆ ಚುನಾವಣಾ ಆಯೋಗ, ಗೃಹ ಸಚಿವಾಲಯ, ಇವಿಎಂ ಯಂತ್ರಗಳ ಸಿದ್ಧತೆ, ಅಂಚೆ ಮತಗಳು ಹೀಗೆ ವಿವಿಧ ರೀತಿಯ ಸಹಯೋಗ ಅವಶ್ಯಕ. ಸಮಿತಿಯ ಪ್ರಸ್ತಾವನೆಗಳು ಎಲ್ಲರಿಗೂ ತೃಪ್ತಿಕರವಾದಾಗ ಒಂದು ರಾಷ್ಟ್ರ ಒಂದು ಚುನಾವಣೆ ಅನುಷ್ಠಾನವೂ ಸುಲಭವಾಗುತ್ತದೆ. ಇದರಿಂದ ಚುನಾವಣೆಯ ವೆಚ್ಚವನ್ನೂ ಸಹ ದೊಡ್ಡ ಪ್ರಮಾಣದಲ್ಲಿ ತಗ್ಗಿಸಬಹುದು ಎಂದರು.

ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿರುವಂತೆ ರಾಜಕೀಯ ಚಿತ್ರಣವೂ ಸಹ ಹಲವು ವೈವಿಧ್ಯತೆಗಳನ್ನು ಹೊಂದಿದೆ. ವಿವಿಧ ಪ್ರದೇಶಗಳಿಂದ ಪ್ರತಿನಿಧಿಸುವ ಜನಪ್ರತಿನಿಧಿಗಳು ತಮ್ಮ ಸಂಸ್ಕೃತಿ, ಪರಂಪರೆಯನ್ನು ಎತ್ತಿ ಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.

ಇದೇ ವೇಳೆ ಪದ್ಮ ಪ್ರಶಸ್ತಿ ಪುರಸ್ಕೃತರು, ಮಾಧ್ಯಮ ಪ್ರತಿನಿಧಿಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು.

ಇದಕ್ಕೂ ಮುನ್ನಾ ದಿನ ಜಂಟಿ ಸದನ ಸಮಿತಿಯು ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿಗಳು ಹಾಗೂ ಪೊಲೀಸ್ ಇಲಾಖೆ ಮುಖ್ಯಸ್ಥರು, ಹಣಕಾಸು ಇಲಾಖೆ, ಗೃಹ, ಶಿಕ್ಷಣ, ಪ್ರವಾಸೋದ್ಯಮ, ಕೃಷಿ ಇಲಾಖೆ, ಕೈಗಾರಿಕೆ, ಆರೋಗ್ಯ, ಕಾರ್ಮಿಕ ಇಲಾಖೆ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ ಅಭಿಪ್ರಾಯಗಳನ್ನು ಸಂಗ್ರಹಿಸಿತು.

ಎಚ್ಎಎಲ್, ಬಿಇಎಲ್, ಬಿಇಎಂಎಲ್, ಬಿಎಚ್ಇಎಲ್, ಕೆಐಒಸಿಎಲ್, ಕೆಎಪಿಎಲ್, ಐಟಿಐ ಲಿಮಿಟೆಡ್, ಐಐಎಂ, ನ್ಯಾಷನಲ್ ಸ್ಕೂಲ್ ಪ್ರತಿನಿಧಿಗಳಿಂದಲೂ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಒಂದೇ ಬಾರಿಗೆ ದೇಶದಲ್ಲಿ ಏಕಕಾಲದಲ್ಲಿ ಚುನಾವಣೆ ನಡೆಸುವುದರಿಂದ ಆಗುವ ಸಾಧಕ-ಬಾಧಕಗಳನ್ನು ಸಮಿತಿ ಸಂಗ್ರಹಿಸಿತು.

ನಂತರ ಸಮಿತಿ ಸದಸ್ಯರು ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸಭೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಸ್ ಸೇರಿದಂತೆ ವಿವಿಧ ಪಕ್ಷಗಳ ಪ್ರತಿನಿಧಿಗಳ ಅಭಿಪ್ರಾಯಗಳನ್ನು ಸಂಗ್ರಹಿಸಿತು. ಸಮಿತಿಯ ಉದ್ದೇಶಗಳನ್ನು ಇದೇ ಸಂದರ್ಭದಲ್ಲಿ ಪ್ರಸ್ತುತಪಡಿಸಿತು.


Share

You cannot copy content of this page