ಸಮಗ್ರ ಸುದ್ದಿ

ಕಾಂಗ್ರೆಸ್ ಸಣ್ಣತನ ಬಿಟ್ಟು ಹೃದಯ ವೈಶಾಲ್ಯತೆ ಮೆರೆಯಬೇಕು : ಸಚಿವ ಹೆಚ್‍.ಡಿ. ಕುಮಾರಸ್ವಾಮಿ

Share

ಬೆಂಗಳೂರು:ಮಿತವ್ಯಯದ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಕಳಕಳಿಯನ್ನು ಇಡೀ ದೇಶವೇ ಅರ್ಥ ಮಾಡಿಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಅರ್ಥವಾಗದಿರುವುದು ದುರದೃಷ್ಟಕರ ಎಂದು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಕಟುವಾಗಿ ಟೀಕಿಸಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು; ನರೇಂದ್ರ ಮೋದಿ ಅವರ ಕಾಳಜಿ, ಕಳಕಳಿಯನ್ನು ಅರ್ಥೈಸಿಕೊಂಡು ಜವಾಬ್ದಾರಿಯುತವಾಗಿ ವರ್ತಿಸಿ ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸಬೇಕಿದ್ದ ಪ್ರತಿಪಕ್ಷವು ಸಣ್ಣತನದಿಂದ ಅಪಪ್ರಚಾರದಲ್ಲಿ ನಿರತವಾಗಿದೆ ಎಂದರು.

ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಬಿಕ್ಕಟ್ಟಿನಿಂದ ಜಗತ್ತಿನ ಎಲ್ಲಾ ದೇಶಗಳ ಮೇಲೆಯೂ ಪ್ರತಿಕೂಲಕರ ಪರಿಣಾಮ ಆಗಿದೆ. ತೈಲ ಉತ್ಪಾದಿಸದೇ ಕೇವಲ ಆಮದು ಮೇಲೆಯೇ ಅವಲಂಬಿತವಾಗಿರುವ ಭಾರತದ ಮೇಲೆ ಹೆಚ್ಚು ಹೊರೆ ಬೀಳುತ್ತದೆ. ಪ್ರಬಲ ರಾಷ್ಟ್ರವಾಗಿರುವ ಭಾರತ ಇಂತಹ ಅನೇಕ ಸವಾಲುಗಳನ್ನು ತಡೆದು ನಿಂತಿದೆ. ಹೀಗಿದ್ದರೂ ಮುನ್ನೆಚ್ಚರಿಕೆಯ ದೃಷ್ಟಿಯಿಂದ ಪ್ರಧಾನಿಗಳು ಒಂದು ವರ್ಷ ಕಾಲ ಚಿನ್ನ ಖರೀದಿಸದೆ ಆದಷ್ಟು ಮಿತವ್ಯಯ ಪಾಲಿಸಿ ಎಂದು ಹೇಳಿರುವುದು ರಾಷ್ಟ್ರದ ಹಿತದೃಷ್ಟಿಯಿಂದ ಸರಿ ಇದೆ ಎಂದರು.

ಭವಿಷ್ಯದಲ್ಲಿ ರಾಷ್ಟ್ರವು ಆರ್ಥಿಕ ಸಂಕಷ್ಟಕ್ಕೆ ಸಿಲುಕಬಾರದು ಎನ್ನುವ ಏಕೈಕ ಉದ್ದೇಶದಿಂದ ಪ್ರಧಾನಿಗಳು ಪ್ರಜೆಗಳಲ್ಲಿ ಮನವಿ ಮಾಡಿದ್ದಾರೆ. ಕಾಂಗ್ರೆಸ್ ಪಕ್ಷವು ಇದರಲ್ಲಿ ಹುಳುಕು ಹುಡುಕುವುದು ಸರಿಯಲ್ಲ ಎಂದು ಕುಮಾರಸ್ವಾಮಿ ಕಟುವಾಗಿ ಟೀಕಿಸಿದರು.

ಪ್ರಧಾನಿಗಳ ಹಿತವಚನವನ್ನು ಪ್ರಜೆಗಳೆಲ್ಲರೂ ಒಪ್ಪಿದ್ದಾರೆ. ಆದರೆ ವಿಪಕ್ಷಗಳು ಮಾತ್ರ ವಿರೋಧಿಸುತ್ತಿವೆ. ನಿಜಕ್ಕೂ ಇದು ವಿಪರ್ಯಾಸ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷವೇ ಅಧಿಕಾರದಲ್ಲಿದ್ದಿದ್ದರೆ ಏನು ಮಾಡುತ್ತಿತ್ತು? ಸುಖಾ ಸುಮ್ಮನೆ ರಾಜಕೀಯ ಉದ್ದೇಶದಿಂದ ಟೀಕೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ನಾಯಕರು ಸಣ್ಣ ಬುದ್ಧಿಯನ್ನು ಬಿಡಬೇಕು ಎಂದು ಸಚಿವ ಕುಮಾರಸ್ವಾಮಿ ಅವರು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಆತ್ಮಾವಲೋಕನ ಮಾಡಿಕೊಳ್ಳಲಿ:

ಸರ್ಕಾರವನ್ನು ಟೀಕೆ ಮಾಡುವ ಮುನ್ನ ಕಾಂಗ್ರೆಸ್ ಒಮ್ಮೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ರಾಜಕೀಯ ಲಾಭ ಮಾಡಿಕೊಳ್ಳಲು ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳಿಗೆ ಸುರಿಯುತ್ತಿರುವ ಹಣ ಹೊಂದಿಸಲು ಅದೇ ಜನರ ಮೇಲೆ ಯಾವ ಯಾವ ಸಮಯದಲ್ಲಿ ಎಷ್ಟೆಷ್ಟು ವಸ್ತುಗಳ ಮೇಲೆ ತೆರಿಗೆ ವಿಧಿಸಿದ್ದಾರೆ ಮತ್ತು ಬೆಲೆ ಏರಿಕೆ ಮಾಡಿದ್ದಾರೆ ಎಂಬುದನ್ನು ಅವರು ಹೇಳಬೇಕು.

ಬೆಲೆ ಏರಿಕೆ ಬರೆಯಿಂದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಕಾಂಗ್ರೆಸ್ ಪ್ರಧಾನಿಗಳ ಕಾಳಜಿಯನ್ನು ಪ್ರಶ್ನಿಸುವುದು ಸಣ್ಣಬುದ್ಧಿ ಎನ್ನುವುದು ನನ್ನ ಅಭಿಪ್ರಾಯ. ಇಂತಹ ವರ್ತನೆಯನ್ನು ಬಿಟ್ಟು ಪ್ರತಿಪಕ್ಷವು ಹೃದಯ ವೈಶಾಲ್ಯತೆಯನ್ನು ಮೆರೆಯಬೇಕು. ಜವಾಬ್ದಾರಿಯುತ ಪ್ರತಿಪಕ್ಷವಾಗಿ ಎಲ್ಲರ ಜೊತೆಗೂಡಿ ಕೆಲಸ ಮಾಡಬೇಕು ಎಂದು ಕೇಂದ್ರ ಸಚಿವರು ಕಾಂಗ್ರೆಸ್ ಪಕ್ಷಕ್ಕೆ ಕಿವಿಮಾತು ಹೇಳಿದರು.

ತುಮಕೂರಿನಲ್ಲಿ ಕಾಂಗ್ರೆಸ್ ಸಾಧನಾ ಸಮಾವೇಶ ಮಾಡುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂಬುದು ಅರ್ಥವಾಗುತ್ತಿಲ್ಲ. ಮೂರು ವರ್ಷ ಸತತವಾಗಿ ಕುರ್ಚಿ ಕಾಳಗ ನಡೆಸಿದ್ದಕ್ಕೆ ಸಮಾವೇಶ ಮಾಡುತ್ತಿದ್ದಾರೆಯೇ ಎಂಬುದರ ಬಗ್ಗೆ ಅವರೇ ಹೇಳಬೇಕು. ಕಳೆದ ಎರಡು ವರ್ಷಗಳಲ್ಲಿ 713 ಪೊಲೀಸ್ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಿದ್ದಾರೆ. ಯಾವ ಕಾರಣಕ್ಕಾಗಿ ಇಷ್ಟು ಪೊಲೀಸರನ್ನು ಅಮಾನತು ಮಾಡಿದರು? ಸರ್ಕಾರ ಹೇಳಬೇಕಲ್ಲವೇ? ಯಾವ ಸಾಧನೆ ಮಾಡಿದ್ದೇವೆ ಎಂದು ಇವರು ಸಮಾವೇಶ ಮಾಡುತ್ತಿದ್ದಾರೆ? ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಈ ಸಮಾವೇಶವನ್ನು ಮಾಡುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ಟೀಕಿಸಿದರು.

ದೇವೇಗೌಡರಿಗೆ ಶುಭಕೋರಿದ ಹೆಚ್.ಡಿ. ಕುಮಾರಸ್ವಾಮಿ:

94ನೇ ವರ್ಷಕ್ಕೆ ಪದಾರ್ಪಣೆ ಮಾಡಿದ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರನ್ನು ಭೇಟಿಯಾದ ಸಚಿವ ಕುಮಾರಸ್ವಾಮಿ ಅವರು, ತಮ್ಮ ತಂದೆಯವರಿಗೆ ಜನ್ಮದಿನದ ಶುಭ ಕೋರಿ ಆಶೀರ್ವಾದ ಪಡೆದುಕೊಂಡರು.

ಮಾಜಿ ಪ್ರಧಾನಿಗಳ ಜನ್ಮದಿನದ ಬಗ್ಗೆ ಸುದ್ದಿಗಾರರ ಜೊತೆ ಮಾತನಾಡಿದ ಕೇಂದ್ರ ಸಚಿವರು; ಇವತ್ತು ನಮ್ಮ ಕುಟುಂಬಕ್ಕೆ ಅತ್ಯಂತ ವಿಶೇಷ ದಿನ. ನಮಗೆ ಜನ್ಮ ಕೊಟ್ಟ ತಂದೆಯವರ ಜನ್ಮದಿನ. ಅಭಿಮಾನಿಗಳು ಮತ್ತು ಪಕ್ಷದ ಕಾರ್ಯಕರ್ತರು, ಮುಖಂಡರು ದೊಡ್ಡ ಮಟ್ಟದಲ್ಲಿ ಸಂಭ್ರಮದಿಂದ ಅವರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ. ರಾಜಕೀಯದಲ್ಲಿ ಅನೇಕ ಏರುಪೇರುಗಳನ್ನು ಕಂಡು ಪಕ್ಷವನ್ನು ಉಳಿಸಲು ಅನೇಕ ತ್ಯಾಗಗಳನ್ನು ಮಾಡಿದ್ದಾರೆ. ರಾಷ್ಟ್ರದ ಪ್ರಧಾನಿಗಳು ಕೂಡ ದೇವೇಗೌಡರನ್ನು ಅತ್ಯಂತ ಗೌರವಯುತವಾಗಿ ನಡೆಸಿಕೊಡುತ್ತಾರೆ. ಇಂತಹ ದೇವೇಗೌಡರು ಶತಾಯುಷಿ ಆಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ದೇವೇಗೌಡರು ರಾಜ್ಯಸಭೆ ಸದಸ್ಯರಾಗಿ ಮುಂದುವರಿಯುವ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ಚರ್ಚೆ ಆಗುತ್ತಿರುವುದನ್ನು ಗಮನಿಸಿದ್ದೇನೆ. ಅವರಿಗೆ ಈಗ 93 ವರ್ಷ ವಯಸ್ಸು. ಅವರು ರಾಜ್ಯಸಭೆ ಸದಸ್ಯರಾಗಿ ಮುಂದುವರಿಯುತ್ತಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಈ ವಯಸ್ಸಿನಲ್ಲಿ ಅವರು ಸದನದ ಒಳಗೆ ಮತ್ತು ಹೊರಗೆ ಜನರ ಹಿತಕ್ಕಾಗಿ ಸದಾ ಹೋರಾಟ ಮಾಡುತ್ತಲೇ ಇದ್ದಾರೆ. ರಾಜ್ಯದ ಹಿತಕ್ಕಾಗಿ ಸಂಸತ್ತಿನಲ್ಲಿ ಮುಂಚೂಣಿಯಲ್ಲಿ ನಿಂತು ದನಿ ಎತ್ತುತ್ತಿದ್ದಾರೆ ಎಂದು ಸಚಿವ ಕುಮಾರಸ್ವಾಮಿ ಅವರು ತಿಳಿಸಿದರು.


Share

You cannot copy content of this page