ಸಮಗ್ರ ಸುದ್ದಿ

ಕಲಬುರಗಿಯಲ್ಲಿ ಜವಳಿ ಪಾರ್ಕ್ ಯೋಜನೆ: 1,700 ಕೋಟಿ ರೂ. ಹೂಡಿಕೆಗೆ ಹೂಡಿಕೆದಾರರಿಂದ ಪ್ರಸ್ತಾಪ -ಸಚಿವ ಪ್ರಿಯಾಂಕ್ ಖರ್ಗೆ

Share

ಬೆಂಗಳೂರು: ಕಲಬುರಗಿ ಜಿಲ್ಲೆಯಲ್ಲಿ ಉದ್ದೇಶಿತ ಮೆಗಾ ಜವಳಿ ಪಾರ್ಕ್ (Textile Park) ಯೋಜನೆಯು ಅತ್ಯಂತ ವೇಗವಾಗಿ ಪ್ರಗತಿ ಕಾಣುತ್ತಿದ್ದು, ಈಗಾಗಲೇ ಪ್ರಮುಖ ಹಂತದ ಪ್ರಕ್ರಿಯೆಗಳು ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಜಿಲ್ಲೆಯ ನಡಿಸಿನ್ನೂರು ಮತ್ತು ಕಿರಂಗಿ ಗ್ರಾಮಗಳ ವ್ಯಾಪ್ತಿಯಲ್ಲಿ ಒಟ್ಟು 1,000 ಎಕರೆ ಜಮೀನನ್ನು ಈ ಮಹತ್ವಾಕಾಂಕ್ಷಿ ಯೋಜನೆಗಾಗಿ ಗುರುತಿಸಲಾಗಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವರೂ ಆದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.

ಪಾರ್ಕ್‌ನ ಉದ್ಘಾಟನೆಗೂ ಮುನ್ನವೇ ಹೂಡಿಕೆದಾರರಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗಿದ್ದು, 8 ಪ್ರಮುಖ ಹೂಡಿಕೆದಾರರಿಂದ ಸುಮಾರು 1,700 ಕೋಟಿ ರೂಪಾಯಿಗಳ ಹೂಡಿಕೆಯ ಪ್ರಸ್ತಾಪಗಳು ಹರಿದು ಬಂದಿವೆ ಎಂದು ಸಚಿವರು ಹೇಳಿದ್ದಾರೆ.

ಜವಳಿ ಪಾರ್ಕಿನಲ್ಲಿ ಆರಂಭಗೊಳ್ಳಲಿರುವ ಘಟಕಗಗಳಿಗೆ ಅನುಕೂಲವಾಗುವಂತೆ 25 ಎಕರೆಯಲ್ಲಿ ಸೌರವಿದ್ಯುತ್ ಘಟಕವನ್ನು ಆರಂಭಿಸಲಾಗುತ್ತಿದ್ದು, ಮಾಲಿನ್ಯರಹಿತ ಹಸಿರುಶಕ್ತಿಯನ್ನು ಬಳಸಿದಂತಾಗುವುದಲ್ಲದೆ ಜಗತ್ತಿನ ತಾಪಮಾನ ಏರಿಕೆ ಹಾಗೂ ಹವಾಮಾನ ವೈಪರೀತ್ಯ ತಡೆಯಲು ಕೊಡುಗೆ ನೀಡಿದಂತಾಗುವುದು ಎಂದು ಸಚಿವರು ತಿಳಿಸಿದರು.

ಬೆಂಗಳೂರಿನಲ್ಲಿ ಇಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಜವಳಿ ಇಲಾಖೆ ಹಾಗೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಅಧಿಕಾರಿಗಳು, ಹೂಡಿಕೆದಾರರು ಮತ್ತು ವಿಡಿಯೊ ಸಂವಾದದ ಮೂಲಕ ಕಲಬುರಗಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿ ಜವಳಿ ಪಾರ್ಕ್ ಪ್ರಗತಿ ಪರಿಶೀಲಿಸಿದರು.

ಜವಳಿ ಪಾರ್ಕ್‌ಗೆ ಗುರುತಿಸಲಾಗಿರುವ ಭೂಮಿಯನ್ನು ಈಗಾಗಲೇ ಕೈಗಾರಿಕಾ ಬಳಕೆಗೆ ಪರಿವರ್ತಿಸಲಾಗಿದ್ದು, ಅರಣ್ಯ ಇಲಾಖೆಯಿಂದಲೂ ಅಗತ್ಯ ಅನುಮತಿಗಳನ್ನು ಪಡೆಯಲಾಗಿದೆ. ಇದಲ್ಲದೆ, ಬಹುಮುಖ್ಯವಾಗಿದ್ದ ಪರಿಸರ ಅನುಮತಿಯು (Environmental Clearance) 27 ಅಕ್ಟೋಬರ್ 2025 ರಂದು ಲಭ್ಯವಾಗಿದೆ ಎಂಬ ಮಾಹಿತಿಯನ್ನೂ ಸಚಿವರು ನೀಡಿದ್ದಾರೆ.

ಪಾರ್ಕ್‌ನ ಸಮಗ್ರ ಮಾಸ್ಟರ್ ಪ್ಲಾನ್, ಆರ್ಥಿಕ ಯೋಜನೆ ಹಾಗೂ ವಿವರವಾದ ಯೋಜನಾ ವರದಿ (DPR) ಸಿದ್ಧಪಡಿಸುವ ಕಾರ್ಯ ಪೂರ್ಣಗೊಂಡಿದೆ. ಯೋಜನೆಯ ಸುಗಮ ನಿರ್ವಹಣೆಗಾಗಿ ಈಗಾಗಲೇ ಮೂರು ಪ್ರಮುಖ ಮಂಡಳಿ ಸಭೆಗಳನ್ನು (14 ಜೂನ್ 2024, 12 ನವೆಂಬರ್ 2024 ಮತ್ತು 4 ನವೆಂಬರ್ 2025) ನಡೆಸಲಾಗಿದೆ ಎಂದು ತಿಳಿಸಿದರು.

ಈ ಜವಳಿ ಪಾರ್ಕ್ ಸ್ಥಾಪನೆಯಿಂದಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸಾವಿರಾರು ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಪ್ರಾದೇಶಿಕ ಆರ್ಥಿಕ ಅಭಿವೃದ್ಧಿಗೆ ಹೊಸ ದಿಕ್ಸೂಚಿ ಸಿಗಲಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಸಭೆಯಲ್ಲಿ ಜವಳಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಗೋವಿಂದರೆಡ್ಡಿ, ಕಲಬುರಗಿ ಜಿಲ್ಲಾಧಿಕಾರಿ ಮೊಹಮ್ಮದ್ ಇಕ್ರಮುಲ್ಲಾ ಷರೀಷ್ ಇನ್ನಿತರ ಅಧಿಕಾರಿಗಳು ಪಾಲ್ಗೊಂಡಿದ್ದರು.


Share

You cannot copy content of this page