ಸಮಗ್ರ ಸುದ್ದಿ

2015ರ ನಂತರದ ಅರಣ್ಯ ಭೂಮಿ ಒತ್ತುವರಿ ತೆರವಿಗೆ ಈಶ್ವರ ಖಂಡ್ರೆ ಸೂಚನೆ

Share

ಉಡುಪಿ: ರಾಜ್ಯ ಸರ್ಕಾರ ಅರಣ್ಯ ಭೂಮಿ ಒತ್ತುವರಿಯ ವಿಚಾರದಲ್ಲಿ ಶೂನ್ಯ ಸಹಿಷ್ಣತೆ ತಳೆದಿದ್ದು, ಹೊಸ ಒತ್ತುವರಿಗೆ ಅವಕಾಶ ನೀಡಬಾರದು. 2015ರ ನಂತರದ ಎಲ್ಲ ಒತ್ತುವರಿ ತೆರವು ಮಾಡಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.

ಉಡುಪಿಯಲ್ಲಿಂದು ಅರಣ್ಯ ಮತ್ತು ಪರಿಸರ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸೂಚನೆ ನೀಡಿದ ಸಚಿವರು, 2015ಕ್ಕೆ ಮೊದಲು ರಾಜ್ಯದಲ್ಲಿ ಒಟ್ಟು 2 ಲಕ್ಷ ಎಕರೆ ಅರಣ್ಯ ಭೂಮಿ ಒತ್ತುವರಿ ಆಗಿರುವುದಾಗಿ ಪ್ರಮಾಣ ಪತ್ರ ಸಲ್ಲಿಸಲಾಗಿದೆ. ಇದರಲ್ಲಿ ಜೀವನೋಪಾಯಕ್ಕಾಗಿ ಒತ್ತುವರಿ ಮಾಡಿರುವ ಅಂದರೆ ಪಟ್ಟಾ ಭೂಮಿ ಸೇರಿ 3 ಎಕರೆಗಿಂತ ಕಡಿಮೆ ಒತ್ತುವರಿ ಮಾಡಿರುವ ಕುಟುಂಬಗಳಿಗೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡುವ ತನಕ ತೆರವು ಮಾಡದಂತೆ ನಿರ್ಣಯಿಸಿದೆ. 3 ಎಕರೆಗಿಂತ ಹೆಚ್ಚಿನ ಒತ್ತುವರಿಯನ್ನು ತೆರವು ಮಾಡಲು ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಸೆಕ್ಷನ್ 4 ಸಮಸ್ಯೆ ಪರಿಹರಿಸಲು ವ್ಯವಸ್ಥಾಪನಾಧಿಕಾರಿ ನೇಮಕ:

ಸೆಕ್ಷನ್ 4 ಪ್ರಕ್ರಿಯೆ ನಡೆದು, ಸೆಕ್ಷನ್ 17 ಮಾಡಿರುವ ಸುಮಾರು 2000 ಎಕರೆ ಪ್ರದೇಶವನ್ನು ಕೂಡಲೇ ಅಧಿಸೂಚಿತ ಅರಣ್ಯ ಎಂದು ದಾಖಲಿಸಲು ಕ್ರಮ ವಹಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಸೂಚಿಸಿದ್ದಾರೆ.

ಉಡುಪಿಯಲ್ಲಿಂದು ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಅರಣ್ಯ ಹಾಗೂ ಪರಿಸರ ಇಲಾಖೆ ಅಧಿಕಾರಿಗಳು ಮತ್ತು ಉಡುಪಿ ಜಿಲ್ಲಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಮಂಗಳೂರು ವೃತ್ತದಲ್ಲಿ 6144.99 ಹೆಕ್ಟೆರ್ ಪ್ರದೇಶಕ್ಕೆ ಸಂಬಂಧಿಸಿದ 55 ಪ್ರಕರಣಗಳು ಸೆಕ್ಷನ್ 17 ಅಂದರೆ ಅಧಿಸೂಚಿತ ಅರಣ್ಯ ಎಂದು ಘೋಷಿಸಲು ಬಾಕಿ ಇದ್ದು, ಈ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ವ್ಯವಸ್ಥಾಪನಾಧಿಕಾರಿ ನೇಮಕಕ್ಕೆ ಕ್ರಮ ವಹಿಸಲಾಗುವುದು ಎಂದರು.

ಉಡುಪಿ ಜಿಲ್ಲೆಯಲ್ಲಿ 1224 ಸರ್ವೆ ನಂಬರ್ ಗಳಲ್ಲಿ ಪರಿಭಾವಿತ (ಡೀಮ್ಡ್) ಅರಣ್ಯವಿದ್ದು, ಇದರಲ್ಲಿ ಸಂಪೂರ್ಣ ಡೀಮ್ಡ್ ಇರುವ 400 ಸರ್ವೆ ನಂಬರ್ ಗಳಿವೆ. ಉಳಿದ 800 ಸರ್ವೆ ನಂಬರ್ ಗಳ ಪೈಕಿ 94 ಸರ್ವೆ ನಂಬರ್ ಗಳ ಜಂಟಿ ಸರ್ವೆ ಮಾಡಲಾಗಿದೆ ಎಂದು ಸಭೆಗೆ ಜಿಲ್ಲಾಧಿಕಾರಿಗಳು ತಿಳಿಸಿದರು.

ಕೂಡಲೇ ಹೆಚ್ಚುವರಿ ಮೋಜಿಣಿದಾರರನ್ನು ಅರಣ್ಯ ಮತ್ತು ಕಂದಾಯ ಇಲಾಖೆಯಿಂದ ನಿಯೋಜಿಸಿ ಉಳಿದ ಸರ್ವೆ ನಂಬರ್ ಗಳ ಸರ್ವೆ ಕಾರ್ಯವನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಿ, ಕೆ.ಎಂ.ಎಲ್.ನಲ್ಲಿ ಅಳವಡಿಸುವಂತೆ ಅರಣ್ಯ ಸಚಿವರು ಸೂಚಿಸಿದರು.

ವನ್ಯಜೀವಿ – ಮಾನವ ಸಂಘರ್ಷ ತಡೆಗೆ ಸೂಚನೆ:
ಪುತ್ತೂರು, ಹೆಬ್ರಿ, ಸುಳ್ಯ, ಉಪ್ಪಿನಂಗಡಿ, ಬೆಳ್ತಂಗಡಿ, ವೇಣೂರು, ಕಾರ್ಕಳ ಮೊದಲಾದ ಕಡೆಗಳಲ್ಲಿ ಮಾನವ-ವನ್ಯಜೀವಿ ಸಂಘರ್ಷದ ಪ್ರಕರಣಗಳು ನಡೆಯುತ್ತಿದ್ದು, ಇದನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಇದೇ ವೇಳೆ ಶಂಕರನಾರಾಯಣ ವಲಯ ಹೆನ್ನಬಯಲು ಸೆಕ್ಷನ್ ನಲ್ಲಿ ಚಿರತೆಯೊಂದನ್ನು ಕೊಂದು ಅದರ ಕಾಲುಗಳನ್ನು ಕತ್ತರಿಸಿಕೊಂಡು ಹೋಗಿದ್ದ ದುಷ್ಕರ್ಮಿಗಳನ್ನು ಹುಡುಕಿ ಬಂಧಿಸಿ, ನ್ಯಾಯಾಲಯದ ಮುಂದೆ ಹಾಜರು ಪಡಿಸಿದ ಅಧಿಕಾರಿ ಸಿಬ್ಬಂದಿಯ ಸೇವೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಫಿಷ್ ಮಿಲ್ ಗಳ ವಿರುದ್ಧ ಕ್ರಮಕ್ಕೆ ಸೂಚನೆ:

ಮಾಲಿನ್ಯಕಾರಕವಾದ ಫಿಷ್ ಮಿಲ್ ಗಳ ವಿರುದ್ಧ ಕ್ರಮ ವಹಿಸಲು ಸೂಚಿಸಿದ ಅರಣ್ಯ ಸಚಿವರು, ನದಿಗಳ ನೀರಿನ ಗುಣಮಟ್ಟವನ್ನು ನಿಯಮಿತವಾಗಿ ಪರಿಶೀಲಿಸಿ, ಶುದ್ಧೀಕರಣ ಘಟಕಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿವೆಯೇ ಎಂಬ ಬಗ್ಗೆ ನಿಗಾ ಇಡುವಂತೆ ಸೂಚಿಸಿದರು.

ಜಿಲ್ಲಾಧಿಕಾರಿ ಸ್ವರೂಪ್ ಕೆ.ಟಿ, ಹೆಚ್ಚುವರಿ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮನೋಜ್ ತ್ರಿಪಾಠಿ, ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಳನ್ ಮತ್ತು ಕಮಲಾ ಕರಿಕಳನ್ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page