ಸಮಗ್ರ ಸುದ್ದಿ

ಕರ್ನಾಟಕ ವಿಧಾನ ಪರಿಷತ್ ಚುನಾವಣೆ 2026: ಜೂನ್ 18 ರಂದು ಮತದಾನ; ಚುನಾವಣಾ ಆಯೋಗದಿಂದ ವೇಳಾಪಟ್ಟಿ ಪ್ರಕಟ

Share

ಬೆಂಗಳೂರು: ಕರ್ನಾಟಕ ಮತ್ತು ಬಿಹಾರ ರಾಜ್ಯಗಳ ವಿಧಾನ ಸಭೆ ಸದಸ್ಯರಿಂದ ವಿಧಾನ ಪರಿಷತ್‍ಗೆ ಖಾಲಿ ಇರುವ ಸ್ಥಾನಗಳನ್ನು ಭರ್ತಿ ಮಾಡಲು ಭಾರತ ಚುನಾವಣಾ ಆಯೋಗವು ದ್ವೈವಾರ್ಷಿಕ ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿದೆ.
 
ಕರ್ನಾಟಕ ವಿಧಾನ ಪರಿಷತ್ತಿನ 7 ಸದಸ್ಯರ ಅಧಿಕಾರ ಅವಧಿಯು 2026ರ ಜೂನ್ 30 ರಂದು ಮುಕ್ತಾಯಗೊಳ್ಳಲಿದ್ದು, ಈ ಹಿನ್ನೆಲೆಯಲ್ಲಿ ಚುನಾವಣೆ ನಿಗದಿಪಡಿಸಿದೆ. ನಿವೃತ್ತಿ ಹೊಂದಲಿರುವ ಕರ್ನಾಟಕದ ಪ್ರಮುಖ ಸದಸ್ಯರಲ್ಲಿ ಗೋವಿಂದ ರಾಜು, ನಸೀರ್ ಅಹಮದ್, ಎನ್. ನಾಗರಾಜು (ಎಂಟಿಬಿ), ಪ್ರತಾಪ್ ಸಿಂಹ ನಾಯಕ್ ಕೆ., ತಿಪ್ಪಣ್ಣಪ್ಪ, ಸುನಿಲ್ ವಲ್ಯಾಪುರ ಮತ್ತು ಬಿ.ಕೆ. ಹರಿಪ್ರಸಾದ್ ಸೇರಿದ್ದಾರೆ.

ಇದೇ ವೇಳೆ ಬಿಹಾರದ 9 ವಿಧಾನ ಪರಿಷತ್ ಸದಸ್ಯರ ಅವಧಿಯು ಜೂನ್ 28 ಕ್ಕೆ ಮುಕ್ತಾಯಗೊಳ್ಳುತ್ತಿರುವುದರಿಂದ ಅಲ್ಲಿಯೂ ಚುನಾವಣೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿಯಂತೆ ಅಧಿಸೂಚನೆ ಹೊರಡಿಸುವ ದಿನಾಂಕ: ಜೂನ್ 1, 2026 (ಸೋಮವಾರ) ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಜೂನ್ 8 (ಸೋಮವಾರ), ನಾಮಪತ್ರಗಳ ಪರಿಶೀಲನೆ ಜೂನ್ 9 (ಮಂಗಳವಾರ) ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಜೂನ್ 11 (ಗುರುವಾರ), ಮತದಾನ ನಡೆಯುವ ದಿನಾಂಕ ಜೂನ್ 18, (ಗುರುವಾರ – ಬೆಳಗ್ಗೆ 9:00 ರಿಂದ ಸಂಜೆ 4:00 ರವರೆಗೆ), ಮತ ಎಣಿಕೆ ಕಾರ್ಯ ಜೂನ್ 18 (ಗುರುವಾರ ಸಂಜೆ 5:00 ಗಂಟೆಗೆ) ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವ ದಿನಾಂಕ ಜೂನ್ 20 (ಶನಿವಾರ), ವಿಧಾನಸಭಾ ಸದಸ್ಯರ ಮತಗಳ ಆಧಾರದ ಮೇಲೆ ಈ ಚುನಾವಣೆ ನಡೆಯಲಿದ್ದು, ಜೂನ್ 18 ರಂದೇ ಮತದಾನ ಹಾಗೂ ಮತ ಎಣಿಕೆ ಪ್ರಕ್ರಿಯೆಗಳು ಮುಕ್ತಾಯಗೊಳ್ಳಲಿವೆ ಎಂದು ಚುನಾವಣಾ ಆಯೋಗದ ಅಧೀನ ಕಾರ್ಯದರ್ಶಿ ರಾಜೇಶ್ ಕುಮಾರ್ ಸಿಂಗ್ ಹಾಗೂ ರಾಜ್ಯದ ಸಹಾಯಕ ಮುಖ್ಯ ಚುನಾವಣಾಧಿಕಾರಿ ರಾಘವನ್ ಆರ್.ವಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page