ಬೆಂಗಳೂರು:ಕರ್ನಾಟಕ ವಿಧಾನಸಭೆಯ ಸದಸ್ಯರಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗಿರುವ ಏಳು ಮಂದಿ ಸದಸ್ಯರು ಮುಂಬರುವ 2026 ನೇ ಜೂನ್ 30 ರಂದು ನಿವೃತ್ತರಾಗಲಿರುವ ಹಿನ್ನೆಲೆಯಲ್ಲಿ, ತೆರವಾಗಲಿರುವ ಏಳು ಸ್ಥಾನಗಳನ್ನು ತುಂಬಲು ಭಾರತದ ಚುನಾವಣಾ ಆಯೋಗವು ದ್ವೈವಾರ್ಷಿಕ ಚುನಾವಣೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.
ಕರ್ನಾಟಕ ವಿಧಾನಸಭೆ ಸಚಿವಾಲಯ ಹೊರಡಿಸಿರುವ ಪ್ರಕಟಣೆಯ ಪ್ರಕಾರ ಚುನಾವಣಾ ವೇಳಾಪಟ್ಟಿ ಹೊರಡಿಸಿದ್ದು, ಅಧಿಸೂಚನೆ ಹೊರಡಿಸುವ 2026ರ ಜೂನ್ 01 (ಸೋಮವಾರ) ನಾಮಪತ್ರ ಸಲ್ಲಿಸಲು ಕೊನೆಯ ಜೂನ್ 08 (ಸೋಮವಾರ) ಕೊನೆಯ ದಿನಾಂಕವಾಗಿದೆ. ಜೂನ್ 09 ರಂದು (ಮಂಗಳವಾರ) ನಾಮಪತ್ರಗಳ ಪರಿಶೀಲನೆ, ಜೂನ್ 11 ರಂದು (ಗುರುವಾರ) ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ, ಜೂನ್ 18 (ಗುರುವಾರ) ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 4.00 ಗಂಟೆಯವರೆಗೆ ಮತದಾನ ನಡೆಯಲಿದೆ. ಜೂನ್ 18 (ಗುರುವಾರ) ರಂದು ಸಂಜೆ 5.00 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ. ಜೂನ್ 20 (ಶನಿವಾರ) ಚುನಾವಣೆ ಮುಕ್ತಾಯವಾಗಲಿದೆ.
ಈ ದ್ವೈವಾರ್ಷಿಕ ಚುನಾವಣೆಗೆ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿಯಾದ ಎಂ.ಕೆ. ವಿಶಾಲಾಕ್ಷಿ ಅವರನ್ನು ಚುನಾವಣಾಧಿಕಾರಿಯಾಗಿ ಹಾಗೂ ಕರ್ನಾಟಕ ವಿಧಾನಸಭೆಯ ನಿರ್ದೇಶಕರಾದ ಬಿ.ಎಸ್. ಮಹಾಲಿಂಗೇಶ್ ಅವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕ ಮಾಡಲಾಗಿದೆ.
ಚುನಾವಣೆಗೆ ಸ್ಪರ್ಧಿಸಲಿಚ್ಛಿಸುವ ಅಭ್ಯರ್ಥಿಗಳು ಜೂನ್ 1 ರಿಂದ ಜೂನ್ 8ರ ವರೆಗೆ (ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ) ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯವರಿಗೆ ನಾಮಪತ್ರ ಸಲ್ಲಿಸಬಹುದಾಗಿದೆ. ಜೂನ್ 7ರ ಭಾನುವಾರ ಸಾರ್ವತ್ರಿಕ ರಜಾ ದಿನವಾಗಿರುವುದರಿಂದ ಅಂದು ನಾಮಪತ್ರಗಳನ್ನು ಸ್ವೀಕರಿಸಲಾಗುವುದಿಲ್ಲ.
ಅಭ್ಯರ್ಥಿಗಳು ನಿಗದಿತ ನಮೂನೆ 2ಡಿ ಯಲ್ಲಿ ನಾಮಪತ್ರ ಸಲ್ಲಿಸಬೇಕು ಮತ್ತು ಅವರ ಉಮೇದುವಾರಿಕೆಗೆ ಕನಿಷ್ಠ ಹತ್ತು ಜನ ಹಾಲಿ ವಿಧಾನಸಭಾ ಸದಸ್ಯರು ಸೂಚಕರಾಗಿ ಸಹಿ ಮಾಡಿರಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5,000 ರೂ. ಹಾಗೂ ಇತರೆ ಅಭ್ಯರ್ಥಿಗಳಿಗೆ 10,000 ರೂ. ಗಳ ಠೇವಣಿ ಮೊತ್ತವನ್ನು ನಿಗದಿಪಡಿಸಲಾಗಿದೆ.
ಹೆಚ್ಚಿನ ವಿವರಗಳಿಗೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ 2026 ರ ಚುನಾವಣಾಧಿಕಾರಿ ಹಾಗೂ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
