ಸಮಗ್ರ ಸುದ್ದಿ

ರಾಜ್ಯಸಭೆಯ 4 ಸ್ಥಾನಗಳಿಗೆ ದ್ವೈವಾರ್ಷಿಕ ಚುನಾವಣೆ ಪ್ರಕಟ: ಜೂನ್ 18ರಂದು ಮತದಾನ

Share

ಬೆಂಗಳೂರು:ಕರ್ನಾಟಕ ವಿಧಾನಸಭೆಯ ಚುನಾಯಿತ ಸದಸ್ಯರಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದ ನಾಲ್ಕು ಜನ ಸದಸ್ಯರ ನಿವೃತ್ತಿಯಿಂದ ತೆರವಾಗಲಿರುವ ಸ್ಥಾನಗಳಿಗೆ ಜೂನ್ 18ರಂದು ದೈವಾರ್ಷಿಕ ಚುನಾವಣೆ ನಡೆಯಲಿದೆ ಎಂದು ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ಹಾಗೂ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರು ಅಧಿಕೃತ ಪ್ರಕಟಣೆ ಹೊರಡಿಸಿದ್ದಾರೆ.

ರಾಜ್ಯಸಭಾ ಸದಸ್ಯರುಗಳಾದ ನಾರಾಯಣ ಕೊರಗಪ್ಪ, ಈರಣ್ಣ ಕಡಾಡಿ, ಎಚ್.ಡಿ. ದೇವೇಗೌಡ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರು 2026 ನೇ ಜೂನ್ 25 ರಂದು ನಿವೃತ್ತರಾಗುತ್ತಿರುವುದರಿಂದ ಭಾರತದ ಚುನಾವಣಾ ಆಯೋಗದ ವೇಳಾಪಟ್ಟಿಯಂತೆ ಚುನಾವಣೆ ನಡೆಯಲಿದೆ.

ಚುನಾವಣಾ ವೇಳಾಪಟ್ಟಿಯಂತೆ ಅಧಿಸೂಚನೆ ಹೊರಡಿಸುವ ದಿನಾಂಕ 2026 ನೇ ಜೂನ್ 01,  (ಸೋಮವಾರ), ನಾಮಪತ್ರ ಸಲ್ಲಿಸಲು ಜೂನ್ 08 ಕೊನೆಯ ದಿನಾಂಕ (ಸೋಮವಾರ)., ನಾಮಪತ್ರಗಳ ಪರಿಶೀಲನೆ ಜೂನ್ 09 (ಮಂಗಳವಾರ) ನಡೆಯಲಿದೆ. ಜೂನ್ 11 (ಗುರುವಾರ) ರಂದು ಉಮೇದುವಾರಿಕೆಯನ್ನು ಹಿಂತೆಗೆದುಕೊಳ್ಳಲು ಕೊನೆಯ ದಿನ. ಜೂನ್ 18 ರಂದು ಬೆಳಿಗ್ಗೆ 9.00 ರಿಂದ ಸಂಜೆ 4.00 ಗಂಟೆಯವರೆಗೆ ಕೊಠಡಿ ಸಂಖ್ಯೆ 106, ಮೊದಲನೇ ಮಹಡಿ, ವಿಧಾನಸೌಧ, ಬೆಂಗಳೂರು ಇಲ್ಲಿ  ಮತದಾನ ನಡೆಯಲಿದೆ. ಜೂನ್ 18 ರಂದು (ಗುರುವಾರ)  ಸಂಜೆ 5.00 ಗಂಟೆಯಿಂದ ಮತಗಳ ಎಣಿಕೆ ಕಾರ್ಯ ನಡೆಯಲಿದೆ.

ಚುನಾವಣೆಗೆ ಸ್ಪರ್ಧಿಸಲಿಚ್ಛಿಸುವ ಅಭ್ಯರ್ಥಿಗಳು ಜೂನ್ 01 ರಿಂದ 08 ರವರೆಗೆ (ಜೂನ್ 07 ಭಾನುವಾರ ಸಾರ್ವತ್ರಿಕ ರಜಾದಿನವನ್ನು ಹೊರತುಪಡಿಸಿ) ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 3.00 ಗಂಟೆಯವರೆಗೆ ನಾಮಪತ್ರಗಳನ್ನು ಸಲ್ಲಿಸಬಹುದಾಗಿದೆ.
 
ನಾಮಪತ್ರವನ್ನು ವಿಧಾನಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 121ರಲ್ಲಿ ಚುನಾವಣಾಧಿಕಾರಿ ಎಂ.ಕೆ. ವಿಶಾಲಾಕ್ಷಿ ಅವರಿಗೆ ಅಥವಾ ಕೊಠಡಿ ಸಂಖ್ಯೆ 127 ಬಿ ಯಲ್ಲಿ ಸಹಾಯಕ ಚುನಾವಣಾಧಿಕಾರಿ ಬಿ.ಎಸ್. ಮಹಾಲಿಂಗೇಶ್ (ನಿರ್ದೇಶಕರು, ಕರ್ನಾಟಕ ವಿಧಾನಸಭೆ) ಅವರಿಗೆ ಸಲ್ಲಿಸಬೇಕು.

ಪ್ರತಿಯೊಬ್ಬ ಅಭ್ಯರ್ಥಿಯ ಉಮೇದುವಾರಿಕೆಗೆ ಕನಿಷ್ಠ ಹತ್ತು ಜನ ಹಾಲಿ ಚುನಾಯಿತ ವಿಧಾನಸಭಾ ಸದಸ್ಯರು ಸೂಚಕರಾಗಿ ಸಹಿ ಮಾಡಿರಬೇಕು. ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ರೂ. 5,000/- ಹಾಗೂ ಇತರ ಸಾಮಾನ್ಯ ಅಭ್ಯರ್ಥಿಗಳಿಗೆ ರೂ. 10,000/- ಠೇವಣಿ ನಿಗದಿಪಡಿಸಲಾಗಿದೆ.

ಹೆಚ್ಚಿನ ವಿವರಗಳಿಗೆ ಚುನಾವಣಾಧಿಕಾರಿ ಅಥವಾ ಸಹಾಯಕ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ ಎಂದು ಕರ್ನಾಟಕ ವಿಧಾನ ಪರಿಷತ್ತಿನ ದ್ವೈವಾರ್ಷಿಕ ಚುನಾವಣೆ 2026 ರ  ಚುನಾವಣಾಧಿಕಾರಿ ಹಾಗೂ ಕರ್ನಾಟಕ ವಿಧಾನಸಭೆಯ ಕಾರ್ಯದರ್ಶಿ ಎಂ.ಕೆ. ವಿಶಾಲಾಕ್ಷಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share

You cannot copy content of this page