ಸಮಗ್ರ ಸುದ್ದಿ

ಐಟಿ/ಬಿಟಿ ಸಚಿವರಾಗಿ ಪ್ರಿಯಾಂಕ್‌ ಖರ್ಗೆ ಅವರ ಪ್ರಮುಖ ಸಾಧನೆಗಳು| ನವೋದ್ಯಮಗಳಿಗೆ ಉತ್ತೇಜನ, ಎಲಿವೇಟ್ ಉಪಕ್ರಮ ಜಾರಿ

Share

ಬೆಂಗಳೂರು: ಪ್ರಿಯಾಂಕ್‌ ಖರ್ಗೆ ಅವರು ರಾಜ್ಯದ ಐಟಿ/ಬಿಟಿ ಸಚಿವರಾಗಿ, ನವೋದ್ಯಮಗಳಿಗೆ ಉತ್ತೇಜನ ನೀಡುವ ಎಲೆವೇಟ್‌ ಉಪಕ್ರಮ ಜಾರಿ, ಬೆಂಗಳೂರಿನ ಆಚೆಗೆ ಐಟಿ ವಲಯದ ಗಮನಾರ್ಹ ವಿಸ್ತರಣೆಗೆ ಆದ್ಯತೆ, ಬಹುರಾಷ್ಟ್ರೀಯ ಕಂಪನಿಗಳು ತಮ್ಮ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಸ್ಥಾಪನೆಗೆ ರಾಜ್ಯವನ್ನು ಆದ್ಯತೆಯ ತಾಣವನ್ನಾಗಿ ಪರಿಗಣಿಸುವಂತೆ ಪ್ರೇರಣೆ ನೀಡುವುದೂ ಸೇರಿದಂತೆ ಹಲವಾರು ಗಮನಾರ್ಹ ಕೊಡುಗೆಗಳನ್ನು ನೀಡಿದ್ದಾರೆ.

ನವೋದ್ಯಮಗಳಿಗೆ ರಾಜ್ಯ ಸರ್ಕಾರ ನೆರವಿನ ಎಲೆವೇಟ್‌ ಉಪಕ್ರಮವನ್ನು (2016) ದೇಶದಲ್ಲಿಯೇ ಮೊದಲ ಬಾರಿಗೆ ಜಾರಿಗೆ ತಂದ ಹೆಗ್ಗಳಿಕೆ ಇವರದ್ದಾಗಿದೆ. ಸ್ಟಾರ್ಟ್‌ಅಪ್‌ಗಳಿಗೆ ಆರಂಭಿಕ ಹಂತದಲ್ಲಿ ಹಣಕಾಸು ನೆರವು ಒದಗಿಸುವ ಈ ಕಾರ್ಯಕ್ರಮವು ಅವುಗಳ ಬೆಳವಣಿಗೆಗೆ ಭದ್ರ ಬುನಾದಿ ಹಾಕುತ್ತಿದೆ.

ಕರ್ನಾಟಕದ ಸ್ಟಾರ್ಟ್‌ಅಪ್ ನೀತಿ ಚೌಕಟ್ಟನ್ನು ಸತತ ಅವಧಿಗೆ ( 2015–2030 ) ರೂಪಿಸಿ ಮುನ್ನಡೆಸಿದ್ದಾರೆ. ಉದ್ಯಮಶೀಲತೆಗೆ ಸರ್ಕಾರಿ ಬೆಂಬಲದ ಸಾಂಸ್ಥಿಕ ಸ್ವರೂಪ ನೀಡಿದ್ದಾರೆ. ಬೆಂಗಳೂರು ಆಚೆಗಿನ ಪ್ರದೇಶಗಳಿಗೆ ಗಮನ ಕೇಂದ್ರೀಕರಿಸಿದ ಸ್ಟಾರ್ಟ್‌ಅಪ್ ಬೆಳವಣಿಗೆಗೆ ಮಹತ್ವಾಕಾಂಕ್ಷೆಯ ಗುರಿಗಳನ್ನು ನಿಗದಿಪಡಿಸಿದ್ದಾರೆ.

ದೇಶದ ಪ್ರಮುಖ ತಂತ್ರಜ್ಞಾನ ಕೇಂದ್ರವಾಗಿ ಬೆಂಗಳೂರಿನ ಸ್ಥಾನವನ್ನು ಬಲಪಡಿಸಿದ್ದಾರೆ. ಇವರ ಅಧಿಕಾರಾವಧಿಯಲ್ಲಿ ಐಟಿ ರಫ್ತು ಪ್ರಮಾಣವು ಸುಸ್ಥಿರ ರೀತಿಯಲ್ಲಿ ಹೆಚ್ಚಳಗೊಂಡಿದ್ದು, ಎರಡೂ ಅವಧಿಯಗಳಲ್ಲಿ ಜಾಗತಿಕ ಹೂಡಿಕೆ ಹರಿವು ಹೆಚ್ಚಿದೆ.

ಶೈಕ್ಷಣಿಕ, ಉದ್ಯಮ ಮತ್ತು ಸರ್ಕಾರಿ ಮಟ್ಟದಲ್ಲಿ ನವೋದ್ಯಮಗಳ ಪೋಷಣಾ ಕೇಂದ್ರಗಳು, ವೇಗವರ್ಧಕಗಳು ಮತ್ತು ಸರ್ಕಾರಿ -ಖಾಸಗಿ ಪಾಲುದಾರಿಕೆಗಳಿಗೆ ಬೆಂಬಲ ನೀಡಿದ್ದಾರೆ.

ಬೆಂಗಳೂರು ಟೆಕ್ ಶೃಂಗಸಭೆ (ಬಿಟಿಎಸ್) ಅನ್ನು ಜಾಗತಿಕವಾಗಿ ಗುರುತಿಸಲ್ಪಟ್ಟ ವೇದಿಕೆಯಾಗಿ ಗಮನ ಸೆಳೆಯುವಂತೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಭಾಗವಹಿಸುವಿಕೆ, ತಂತ್ರಜ್ಞಾನ ಪಾಲುದಾರಿಕೆಗಳು ಮತ್ತು ಹೂಡಿಕೆ ಒಳಹರಿವುಗಳನ್ನು ಹೆಚ್ಚಿಸಲು ಶ್ರಮಿಸಿದ್ದಾರೆ.

ಅಭಿವೃದ್ಧಿಯನ್ನು ʼಬೆಂಗಳೂರು ಆಚೆಗೆʼ ಕೊಂಡೊಯ್ಯುವ ದೂರದೃಷ್ಟಿಯ ಪ್ರವರ್ತಕರಾಗಿರುವುದರ ಜೊತೆಗೆ ಅದನ್ನು ಗಮನಾರ್ಹವಾಗಿ ವಿಸ್ತರಿಸಿದ್ದಾರೆ. ಐಟಿ, ನವೋದ್ಯಮಗಳು ಮತ್ತು ನಾವೀನ್ಯತೆ ವ್ಯವಸ್ಥೆಗಳನ್ನು ಮೈಸೂರು, ಮಂಗಳೂರು, ಹುಬ್ಬಳ್ಳಿ-ಧಾರವಾಡ ಮತ್ತು ಬೆಳಗಾವಿಯಂತಹ ಎರಡನೇ ಹಂತದ ನಗರಗಳಿಗೆ ವಿಸ್ತರಿಸಲು ಚಾಲನೆ ನೀಡಿದ್ದಾರೆ.

ʼಬೆಂಗಳೂರು ಆಚೆಗಿನʼ ಅಭಿವೃದ್ಧಿಗೆ ಒತ್ತು ನೀಡಲು ನಾವೀನ್ಯತೆ, ಉದ್ಯಮಶೀಲತೆ ಮತ್ತು ಉದ್ಯೋಗ ಸೃಷ್ಟಿ ಉತ್ತೇಜಿಸಲು ₹ 1,000 ಕೋಟಿ ಮೊತ್ತದ ಸ್ಥಳೀಯ ಆರ್ಥಿಕ ವೇಗವರ್ಧಕ ಕಾರ್ಯಕ್ರಮ (ಲೀಪ್‌) ಆರಂಭಿಸಿದ್ದಾರೆ.

ಎಲೆವೇಟ್ ಕಾರ್ಯಕ್ರಮವನ್ನು ರಾಜ್ಯದಲ್ಲಿನ ನವೋದ್ಯಮಗಳಿಗೆ ಹಣಕಾಸು ನೆರವಿನ ಪ್ರಮುಖ ಎಂಜಿನ್ ಆಗಿ ವಿಸ್ತರಿಸಿದ್ದಾರೆ. 1,200 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್‌ಗಳಿಗೆ ಅನುದಾನ ನೀಡಿ ತಳಮಟ್ಟದ ನಾವೀನ್ಯತೆ ಬಲಪಡಿಸಿದ್ದಾರೆ.

₹ 1 ಕೋಟಿವರೆಗಿನ ನಿಧಿಯ ನೆರವಿನಿಂದ ಡೀಪ್-ಟೆಕ್ ನವೋದ್ಯಮಗಳನ್ನು ಬೆಂಬಲಿಸಲು ₹ 150 ಕೋಟಿ ಮೊತ್ತದ ಎಲೆವೇಟ್ ನೆಕ್ಸ್ಟ್‌ ಪರಿಚಯಿಸಿದ್ದಾರೆ.

ಕೃತಕ ಬುದ್ಧಿಮತ್ತೆ, ಕ್ಲೌಡ್ ಕಂಪ್ಯೂಟಿಂಗ್, ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ನಾವೀನ್ಯತೆಯಲ್ಲಿನ ಭವಿಷ್ಯದ ಬೆಳವಣಿಗೆಗೆ ಉತ್ತೇಜನ ನೀಡಲು ₹ 967 ಕೋಟಿ ವೆಚ್ಚದ ಮಾಹಿತಿ ತಂತ್ರಜ್ಞಾನ ನೀತಿ 2025–2030- ಆರಂಭಿಸಿದ್ದಾರೆ.

₹ 600 ಕೋಟಿ ಮೊತ್ತದ ಡೀಪ್‌ಟೆಕ್ ದಶಕದ ಉಪಕ್ರಮವನ್ನು ಘೋಷಿಸಿದ್ದಾರೆ. ಕರ್ನಾಟಕವನ್ನು ಕೃತಕ ಬುದ್ಧಿಮತ್ತೆ (ಎಐ), ಕ್ವಾಂಟಮ್ ಕಂಪ್ಯೂಟಿಂಗ್, ರೋಬೊಟಿಕ್ಸ್, ಬಾಹ್ಯಾಕಾಶ ತಂತ್ರಜ್ಞಾನ ಮತ್ತು ಶುದ್ಧ ಇಂಧನ ಕ್ಷೇತ್ರಗಳಲ್ಲಿ ದೇಶದ ಡೀಪ್-ಟೆಕ್ ರಾಜಧಾನಿಯಾಗಿ ಬೆಂಗಳೂರನ್ನು ಅಭಿವೃದ್ಧಿಪಡಿಸಲು ಶ್ರಮಿಸಿದ್ದಾರೆ.

ಧಾರವಾಡದ ಐಐಐಟಿ-ಯಲ್ಲಿ ₹48 ಕೋಟಿ ವೆಚ್ಚದಲ್ಲಿ ಕ್ವಾಂಟಮ್ ಸಂಶೋಧನಾ ಪಾರ್ಕ್ (ಹಂತ II) ಹಾಗೂ ಕ್ವಾಂಟಮ್ ಎಐ ಮತ್ತು ಕಂಪ್ಯೂಟಿಂಗ್ ಶ್ರೇಷ್ಠತಾ ಕೇಂದ್ರ ಸೇರಿದಂತೆ ಕ್ವಾಂಟಮ್ ತಂತ್ರಜ್ಞಾನಗಳಲ್ಲಿ ಕರ್ನಾಟಕವನ್ನು ಮುಂಚೂಣಿ ಸ್ಥಾನಕ್ಕೆ ಕೊಂಡೊಯ್ಯಲು ಕ್ರಮ ಕೈಗೊಂಡಿದ್ದಾರೆ.

ಕೃತಕ ಬುದ್ಧಿಮತ್ತೆ ನಾವೀನ್ಯತೆ, ನವೋದ್ಯಮ ಬೆಳವಣಿಗೆ ಮತ್ತು ಭವಿಷ್ಯಕ್ಕೆ ಸನ್ನದ್ಧವಾಗಿರುವ ಕಾರ್ಯಪಡೆ ಸಿದ್ಧಪಡಿಸುವುದಕ್ಕೆ ವೇಗ ನೀಡಲು ಕೃತಕ ಬುದ್ಧಿಮತ್ತೆಯ ಶ್ರೇಷ್ಠತಾ ಕೇಂದ್ರವನ್ನು ₹27.5 ಕೋಟಿ ವೆಚ್ಚದಲ್ಲಿ ಸ್ಥಾಪಿಸಿದ್ದಾರೆ.

ಜಾಗತಿಕ ಉದ್ಯಮಗಳು ಮತ್ತು ಹೆಚ್ಚಿನ ಮೌಲ್ಯದ ಉದ್ಯೋಗಗಳನ್ನು ಆಕರ್ಷಿಸಲು ಪ್ರತ್ಯೇಕ ಜಾಗತಿಕ ಸಾಮರ್ಥ್ಯ ಕೇಂದ್ರ (ಜಿಸಿಸಿ) ನೀತಿ-2025 ನೆರವಿನಿಂದ ಜಾಗತಿಕ ಸಾಮರ್ಥ್ಯ ಕೇಂದ್ರಗಳಿಗೆ ಭಾರತದ ಪ್ರಮುಖ ತಾಣವಾಗಿ ಕರ್ನಾಟಕದ ಸ್ಥಾನವನ್ನು ಬಲಪಡಿಸಿದ್ದಾರೆ.

₹ 325 ಕೋಟಿ ವೆಚ್ಚದ ಕರ್ನಾಟಕ ಬಾಹ್ಯಾಕಾಶ ನೀತಿ 2025–30 ಮತ್ತು ದೇಶದಲ್ಲಿಯೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ನೇತೃತ್ವದಲ್ಲಿನ ಬಾಹ್ಯಾಕಾಶ ತಂತ್ರಜ್ಞಾನ ಶ್ರೇಷ್ಠತಾ ಕೇಂದ್ರ ಆರಂಭಿಸುವ ಮೂಲಕ ಬಾಹ್ಯಾಕಾಶ ತಂತ್ರಜ್ಞಾನ ಮತ್ತು ವೈಮಾಂತರಿಕ್ಷ ಕ್ಷೇತ್ರದ ಬೆಳವಣಿಗೆಗೆ ಉತ್ತೇಜನ ನೀಡಿದ್ದಾರೆ.

ಪ್ರವರ್ಧಮಾನಕ್ಕೆ ಬರುವ ತಂತ್ರಜ್ಞಾನಗಳಲ್ಲಿ ಕೌಶಲ ಮತ್ತು ಉದ್ಯೋಗಾವಕಾಶ ಹೆಚ್ಚಿಸುವುದರ ಮೇಲೆ ಗಮನ ಕೇಂದ್ರೀಕರಿಸಿ, ಮಾಹಿತಿ – ಜೈವಿಕ ತಂತ್ರಜ್ಞಾನ ಮತ್ತು ಡೀಪ್-ಟೆಕ್ ವಲಯಗಳಲ್ಲಿನ ಉದ್ಯಮದ ಅಗತ್ಯಗಳನ್ನು ಈಡೇರಿಸಲು ಕುಶಲ ಮಾನವ ಸಂಪನ್ಮೂಲ ಪೋಷಣೆಗೆ ಕ್ರಮ ಕೈಗೊಂಡಿದ್ದಾರೆ.

ನವೀಕರಿಸಬಹುದಾದ ಇಂಧನ ಮತ್ತು ದಕ್ಷ ಇಂಧನ ತಂತ್ರಜ್ಞಾನ ಆಧರಿಸಿದ ಪರಿಸರ ಸ್ನೇಹಿ ಡೇಟಾ ಕೇಂದ್ರಗಳ ಬೆಳವಣಿಗೆ ಕಾರ್ಯಗತಗೊಳಿಸುವ ಮೂಲಕ ಕರ್ನಾಟಕವನ್ನು ಸುಸ್ಥಿರ ಡಿಜಿಟಲ್ ಮೂಲಸೌಕರ್ಯದ ಕೇಂದ್ರವಾಗಿ ಅಭಿವೃದ್ಧಿಪಡಿಸಲು ಶ್ರಮಿಸಿದ್ದಾರೆ.


Share

You cannot copy content of this page