ಸಮಗ್ರ ಸುದ್ದಿ

ಸರಳ, ಸಜ್ಜನ, ಸಂಭಾವಿತ ರಾಜಕಾರಣಿಗೆ ಡಾ.ಶರಣಪ್ರಕಾಶ ಆರ್‌. ಪಾಟೀಲ್‌ ಗೆ ಈಗ ಮತ್ತೆ ಸಚಿವ ಪಟ್ಟ| ಸಚಿವರಾಗಿ ಪ್ರಮಾಣ ವಚನ ಸ್ವೀಕಾರ

Share

ಬೆಂಗಳೂರು: ಸರಳ, ಸಜ್ಜನ, ಸಂಭಾವಿತ ರಾಜಕಾರಣಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಸಂಪುಟದಲ್ಲಿ ಮತ್ತೆ ಸಚಿವರಾಗಿ ಲೋಕಭವನದಲ್ಲಿಂದು ಪ್ರಮಾಣವಚನ ಸ್ವೀಕರಿಸಿದರು.

ರಾಜಕೀಯದಲ್ಲಿ ಕೆಲವೊಮ್ಮೆ ಅಬ್ಬರ ಹೆಚ್ಚಾಗಿರಬೇಕು ಎಂದು ಹೇಳುವುದಿದೆ. ಆದರೆ ಸರಳ, ಜನಪರ ಕಾಳಜಿ, ಸಂಭಾವಿತರಾಗಿಯೂ ಅಪಾರ ಸಾಧನೆ ಮಾಡಬಹುದು. ಎಂಬುದಕ್ಕೆ ಡಾ.ಶರಣಪ್ರಕಾಶ ಆರ್‌. ಪಾಟೀಲ್‌ ಹೆಸರುವಾಸಿಯಾಗಿದ್ದಾರೆ.

ಏಪ್ರಿಲ್ 20, 1967ರಲ್ಲಿ ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ಉಡಗಿಯಲ್ಲಿ ಜನಿಸಿದ ಡಾ. ಶರಣ್ ಪ್ರಕಾಶ್ ಪಾಟೀಲ್ ಅನುಭವಿ ರಾಜಕಾರಣಿ. ನಾಲ್ಕು ಬಾರಿ ಶಾಸಕರಾಗಿದ್ದಾರೆ. ಕಲ್ಯಾಣ-ಕರ್ನಾಟಕ ಪ್ರದೇಶದ ಭಾಗವಾಗಿರುವ ಕಲಬುರಗಿ ಜಿಲ್ಲೆಯ ಸೇಡಂ ಕ್ಷೇತ್ರವನ್ನು ಪ್ರತಿನಿಧಿಸುತ್ತಿದಾರೆ. ವೈದ್ಯಕೀಯ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಜೀವನೋಪಾಯ ಮತ್ತು ಉದ್ಯಮಶೀಲತೆಯಂತಹ ಖಾತೆಯನ್ನು ನಿಭಾಯಿಸಿರುವ ಶರಣಪ್ರಕಾಶ್‌ ಪಾಟೀಲ್‌ ಅತ್ಯಂತ ಸಜ್ಜನ ರಾಜಕಾರಣಿ ಎಂದೇ ಜನಜನಿತರಾಗಿದ್ದಾರೆ.

ಡರ್ಮಾಟಾಲಜಿಯಲ್ಲಿ ವೈದ್ಯಕೀಯ ಪದವಿ ಪಡೆದಿರುವ ಡಾ. ಪಾಟೀಲ್ ಅಪಾರ ಶೈಕ್ಷಣಿಕ ಅನುಭವ ಹೊಂದಿದ್ದಾರೆ. ಇದೇ ಕಾರಣಕ್ಕೆ ಅವರಿಗೆ 2013ರಲ್ಲೂ ಮತ್ತು ಹಿಂದಿನ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ.

ವಿದ್ಯಾರ್ಥಿ ದಿನಗಳಲ್ಲಿ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ (ಎನ್‌ಎಸ್‌ಯುಐ) ಮೂಲಕ ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಸೇವಾ ಮನೋಭಾವ ಮೈಗೂಡಿಸಿಕೊಂಡರು. ಬಡವರ ಪರವಾದ ಅವರ ಆಶಯಗಳು ಅವರನ್ನು ರಾಜಕೀಯ ಪಥಕ್ಕೆ “ಕೈ” ಹಿಡಿಯಿತು.

ವೈದ್ಯಕೀಯ ಶಿಕ್ಷಣ ಹಿನ್ನೆಲೆ ಹೊಂದಿದ್ದ ಪಾಟೀಲರಿಗೆ ಶಾಸಕರಾಗಿ ಆಯ್ಕೆಯಾದ ಮೇಲೆ ವೈದ್ಯಕೀಯ ಶಿಕ್ಷಣ ಸಚಿವ ಖಾತೆಯನ್ನೇ ನೀಡಲಾಗಿದೆ.

ವೈದ್ಯಕೀಯ ಶಿಕ್ಷಣ ಸಚಿವರಾಗಿ (2013–2018) ಡಾ. ಪಾಟೀಲ್ ಕರ್ನಾಟಕದಾದ್ಯಂತ ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಮೂಲಸೌಕರ್ಯವನ್ನು ಹೆಚ್ಚಿಸಲು ಆದ್ಯತೆ ನೀಡಿದರು.

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (AIIMS) ಸಮಾನವಾಗಿ ರಾಜ್ಯಾದ್ಯಂತ ಸೂಪರ್-ಸ್ಪೆಷಾಲಿಟಿ ಆಸ್ಪತ್ರೆಗಳನ್ನು ಸ್ಥಾಪಿಸುವ ಅವರ ದೃಷ್ಟಿಕೋನವು ಅವರ ಪ್ರಮುಖ ಆದ್ಯತೆಗಳಲ್ಲಿ ಒಂದಾಗಿದೆ. ಹಿಂದುಳಿದ ಜಿಲ್ಲೆಯಾದ ರಾಯಚೂರಿಗೆ AIIMS ತರುವ ಡಾ. ಪಾಟೀಲ್ ಅವರ ಪ್ರಯತ್ನಗಳು ನಿರಂತರವಾಗಿದೆ.

ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ಆದ್ಯತೆ ಎಂದರೆ ಆರೋಗ್ಯ ರಕ್ಷಣೆ. ಅತ್ಯುತ್ತಮ ದರ್ಜೆಯ, ವಿಶ್ವ ಮಟ್ಟದ, ಅತ್ಯಾಧುನಿಕ ಸೌಲಭ್ಯದ ಆಸ್ಪತ್ರೆ ಕಟ್ಟಡಗಳ ನಿರ್ಮಾಣಕ್ಕೆ ಒತ್ತು ನೀಡಿದ್ದಾರೆ. ಎಲ್ಲರಿಗೂ ಗುಣಮಟ್ಟದ ಆರೋಗ್ಯ ಸೇವೆಯನ್ನು ನೀಡಲು ಪಾಟೀಲರು ಸದಾ ತುಡಿತ ಹೊಂದಿದ್ದಾರೆ. ಅದೇ ಅವರ ಮುಖ್ಯ ಧ್ಯೇಯವೂ ಆಗಿದೆ.

ರಾಜಕೀಯದಲ್ಲಿ ಮುಳುಗಿದ್ದೂ ಡಾ. ಶರಣ್‌ ಪ್ರಕಾಶ್‌ ಪಾಟೀಲ್‌ ಇತರೆ ಹವ್ಯಾಸಿಗಳನ್ನು ಮೈಗೂಡಿಸಿಕೊಂಡಿದ್ದಾರೆ. ಡಾ. ಪಾಟೀಲರು ಓದುವ ಹವ್ಯಾಸ ಮತ್ತು ಫಿಟ್ನೆಸ್ ಕಾಪಾಡಿಕೊಳ್ಳುವುದಕ್ಕೆ ಅತ್ಯಂತ ಹೆಚ್ಚು ಸಮಯ ವಿನಿಯೋಗಿಸುತ್ತಾರೆ.

ಡಾ. ಶರಣ್ ಪ್ರಕಾಶ್ ಪಾಟೀಲ್ ಅವರು ಆರೋಗ್ಯ ಸೇವೆಯನ್ನು ಸುಧಾರಿಸುವುದು, ಉದ್ಯಮಶೀಲತೆಯನ್ನು ಬೆಳೆಸುವುದು ಮತ್ತು ಕರ್ನಾಟಕದಾದ್ಯಂತ ಸಕಾರಾತ್ಮಕ ಬದಲಾವಣೆಯನ್ನು ತರುವತ್ತ ಗಮನಹರಿಸುವ ಕ್ರಿಯಾತ್ಮಕ ಮತ್ತು ದೂರದೃಷ್ಟಿಯ ನಾಯಕರಾಗಿ ಹೊರಹೊಮ್ಮಿದ್ದಾರೆ.

ಕಲ್ಯಾಣ ಕರ್ನಾಟಕ ಭಾಗದಲ್ಲಿ ಮಾತ್ರವಲ್ಲ, ಇಡೀ ಕರ್ನಾಟಕದಲ್ಲಿ ರಾಜಕೀಯ ಕ್ಷೇತ್ರದಲ್ಲಿ “ಪ್ರಕಾಶ”ಮಾನವಾಗಿರುವ “ಪಾಟೀಲ”ರು ಈಗ ಮತ್ತೆ ಸಚಿವರಾಗಿದ್ದಾರೆ. ಮತ್ತೊಮ್ಮೆ ಖಾತೆಯನ್ನು ಯಶಸ್ವಿಯಾಗಿ ನಿಭಾಯಿಸುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ಆಗ ಮತ್ತೊಮ್ಮೆ ಎಲ್ಲರೂ “ಶರಣು” ಎನ್ನಲು ಸಜ್ಜಾಗಿದ್ದಾರೆ.

ಡಾ. ಶರಣಪ್ರಕಾಶ ಆರ್‌. ಪಾಟೀಲ್‌ ಅವರ ವೈಯಕ್ತಿಕ ವಿವರ ಮತ್ತು ಸಾಧನೆಗಳು

ಪೂರ್ಣ ಹೆಸರು: ಡಾ. ಶರಣಪ್ರಕಾಶ ರುದ್ರಪ್ಪ ಪಾಟೀಲ
ಜನನ: 20-04-1967
ಸ್ಥಳ: ಸೇಡಂ/ಬೆಂಗಳೂರು
ತಂದೆ: ರುದ್ರಪ್ಪ ಪಾಟೀಲ
ತಾಯಿ: ಮಾಲಕಮ್ಮ ಪಾಟೀಲ್‌
ಪತ್ನಿ:ಡಾ. ಭಾಗ್ಯಶ್ರೀ ಪಾಟೀಲ್‌
ಪುತ್ರರು: ಸಿದ್ಧಾಂತ್‌ ಪಾಟೀಲ್‌, ಶಿವಾಂಶ್‌ ಪಾಟೀಲ್‌
ವಿದ್ಯಾಭ್ಯಾಸ: ಎಂಬಿಬಿಎಸ್‌, ಎಂಡಿ (ಡರ್ಮಾಟಾಲಜಿ)
ರಾಜಕೀಯ ಜೀವನ
2004: ಸೇಡಂನಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆ
2008: ಮತ್ತೆ ಶಾಸಕರಾಗಿ ಆಯ್ಕೆ
2013: ಮೂರನೇ ಬಾರಿ ಆಯ್ಕೆ
2023: ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆ
2013: ವೈದ್ಯಕೀಯ ಶಿಕ್ಷಣ ಸಚಿವರಾಗಿ ಕಾರ್ಯನಿರ್ವಹಣೆ
2023: ವೈದ್ಯಕೀಯ ಶಿಕ್ಷಣ, ಕೌಶಾಲ್ಯಭಿವೃದ್ಧಿ, ಜೀವನೋಪಾಯ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.


Share

You cannot copy content of this page