ಬೆಂಗಳೂರು:ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆಗಳ ಲಾಭ ಪಡೆಯುತ್ತಿರುವ ಒಬ್ಬೇ ಒಬ್ಬ ಅರ್ಹ ಫಲಾನುಭವಿಗೂ ತೊಂದರೆಯಾಗಬಾರದು. ಆದರೆ, ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿರುವ ಅನರ್ಹರಿಗೆ ಮಾತ್ರ ತಕ್ಷಣವೇ ಬ್ರೇಕ್ ಹಾಕಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಇಂದು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಸಭೆಯಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಕಂಡುಬರುತ್ತಿರುವ ಲೋಪದೋಷಗಳು ಹಾಗೂ ಅಕೌಂಟೆಂಟ್ ಜನರಲ್ ವರದಿಯಲ್ಲಿನ ಆತಂಕಕಾರಿ ಅಂಶಗಳ ಕುರಿತು ಕೂಲಂಕುಷವಾಗಿ ಚರ್ಚಿಸಿದರು.
ಬ್ಯಾಂಕ್ ಖಾತೆ ಬದಲಾವಣೆ: ಅರ್ಹರಿಗೆ ತೊಂದರೆ ಬೇಡ:
ಗೃಹಲಕ್ಷ್ಮಿ ಯೋಜನೆಯ ಹಣ ಜಮೆಯಾಗುವ ಕುರಿತು ಮಾತನಾಡಿದ ಮುಖ್ಯಮಂತ್ರಿ ಅವರು, ಹಲವು ಫಲಾನುಭವಿಗಳು ಬ್ಯಾಂಕ್‍ಗಳಲ್ಲಿ ಸಾಲ ಪಡೆದಿರುತ್ತಾರೆ. ಸಾಲದ ಖಾತೆಗೆ ಗೃಹಲಕ್ಷ್ಮಿ ಹಣ ಹೋದ ತಕ್ಷಣ ಬ್ಯಾಂಕಿನವರು ಆ ಮೊತ್ತವನ್ನು ಸಾಲಕ್ಕೆ ಜಮೆ ಮಾಡಿಕೊಳ್ಳುತ್ತಿದ್ದಾರೆ. ಈ ಕಾರಣದಿಂದಾಗಿ ಹಲವು ಮಹಿಳೆಯರು ತಮ್ಮ ಬ್ಯಾಂಕ್ ಖಾತೆಗಳನ್ನು ಬದಲಾಯಿಸಿದ್ದಾರೆ. ಇಂತಹ ಅರ್ಹ ಫಲಾನುಭವಿಗಳಿಗೆ ಯಾವುದೇ ತಾಂತ್ರಿಕ ಕಾರಣ ನೀಡಿ ತೊಂದರೆ ನೀಡಬಾರದು ಎಂದರು. ಅಲ್ಲದೆ, ಗೃಹಲಕ್ಷ್ಮಿ ಹಣ ಖಾತೆಗೆ ಜಮೆಯಾದ ತಕ್ಷಣ ಫಲಾನುಭವಿಗಳ ಮೊಬೈಲ್‍ಗೆ ವಾಯ್ಸ್ ಮೆಸ್ಸೇಜ್ (ಧ್ವನಿ ಸಂದೇಶ) ಮೂಲಕ ಖಚಿತಪಡಿಸುವ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸೂಚಿಸಿದರು.
ಅಕೌಂಟೆಂಟ್ ಜನರಲ್ ವರದಿಯಲ್ಲಿ ಬಯಲಾದ ಶಾಕಿಂಗ್ ಸಂಗತಿಗಳು!
ಗೃಹಲಕ್ಷ್ಮಿ ಯೋಜನೆಗೆ ಸಂಬಂಧಿಸಿದಂತೆ ಎಜಿ ವರದಿಯಲ್ಲಿ ಉಲ್ಲೇಖವಾಗಿರುವ ಗಂಭೀರ ತಾಂತ್ರಿಕ ಲೋಪಗಳ ಬಗ್ಗೆ ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಿದ ಅವರು, ಒಂದೇ ಬ್ಯಾಂಕ್ ಖಾತೆಗೆ ಹಲವು ಫಲಾನುಭವಿಗಳ ಗೃಹಲಕ್ಷ್ಮಿ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದೆ. ಈ ರೀತಿ ಸುಮಾರು 3 ಲಕ್ಷ ಕಂತುಗಳಲ್ಲಿ ಒಟ್ಟು 60 ಕೋಟಿ ರೂಪಾಯಿ ಹಣ ವರ್ಗಾವಣೆಯಾಗಿರುವ ಬಗ್ಗೆ ಎಜಿ ವರದಿ ನೀಡಿದೆ.
ಒಬ್ಬನೇ ವ್ಯಕ್ತಿ ಹಲವು ಖಾತೆಗಳನ್ನು ನೋಂದಾಯಿಸಿಕೊಂಡಿರುವುದು ಪತ್ತೆಯಾಗಿದೆ.
ಹಿಂದೆ ಸ್ವೀಕರಿಸಲಾದ ಅರ್ಜಿಗಳಲ್ಲಿನ ಮಾಹಿತಿಯ ನೈಜತೆಯನ್ನು ಸರಿಯಾಗಿ ಪರಿಶೀಲಿಸದೆ ಇರುವುದೇ ಇದಕ್ಕೆ ಮುಖ್ಯ ಕಾರಣ ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಮೃತಪಟ್ಟವರಿಗೂ ಹೋಗುತ್ತಿದೆ ಹಣ: ಎಚ್ಚರಿಕೆಗೆ ಕರೆ:
ಗೃಹಜ್ಯೋತಿ ಯೋಜನೆ ಜಾರಿಯಾಗುವಾಗ ಹೆಚ್ಚಿನ ದುರುಪಯೋಗವಾಗದಂತೆ ಎಚ್ಚರಿಕೆ ವಹಿಸಲಾಗಿತ್ತು. ಇದೇ ಎಚ್ಚರಿಕೆಯನ್ನು ಇತರೆ ಯೋಜನೆಗಳಲ್ಲೂ ಅನುಸರಿಸಿದ್ದರೆ ದುರುಪಯೋಗ ತಡೆಯಬಹುದಿತ್ತು, ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು. ಸದ್ಯ ಮರಣ ಹೊಂದಿದ ಫಲಾನುಭವಿಗಳ ವಿವರಗಳು ಸಕಾಲದಲ್ಲಿ ಸಿಗದಿರುವುದರಿಂದ, ಮೃತರ ಖಾತೆಗಳಿಗೂ ಗೃಹಲಕ್ಷ್ಮಿ ಹಣ ಹೋಗುತ್ತಿರುವುದು ಪತ್ತೆಯಾಗಿದ್ದು, ಇ-ಕೆವೈಸಿ ಹಾಗೂ ಎನ್.ಪಿ.ಸಿ.ಐ ನಿಷ್ಕ್ರಿಯವಾಗಿರುವ ಖಾತೆಗಳ ಪರಿಶೀಲನೆ ನಡೆಸಲು ತೀರ್ಮಾನಿಸಲಾಯಿತು.
ಹೊರರಾಜ್ಯದ ಖಾತೆಗಳಿಗೆ ಬ್ರೇಕ್; ಏರ್ ಟೆಲ್ ಬ್ಯಾಂಕ್ ದುರುಪಯೋಗ:
ಏರ್‍ಟೆಲ್ ಬ್ಯಾಂಕ್‍ನಲ್ಲಿ ಯುಪಿಐ ಖಾತೆಗಳನ್ನು ತೆರೆದು ಯೋಜನೆ ದುರುಪಯೋಗಪಡಿಸಿಕೊಳ್ಳುತ್ತಿರುವ ಪ್ರಕರಣಗಳನ್ನು ಅಧಿಕಾರಿಗಳು ಮುಖ್ಯಮಂತ್ರಿಗಳ ಗಮನಕ್ಕೆ ತಂದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು, ನಮ್ಮ ರಾಜ್ಯದ ಯೋಜನೆಗಳು ನಮ್ಮ ರಾಜ್ಯದ ಜನರಿಗೆ ಮಾತ್ರ ಸಿಗಬೇಕು. ಹೊರರಾಜ್ಯಗಳಲ್ಲಿರುವ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆಯಾಗುತ್ತಿರುವುದಕ್ಕೆ ತಕ್ಷಣ ತಡೆ ಹಾಕಬೇಕು. ಬೇರೆ ರಾಜ್ಯದ ಮತದಾರರು ಇದರ ಲಾಭ ಪಡೆಯುವುದನ್ನು ತಡೆಯಬೇಕು ಎಂದು ಸ್ಪಷ್ಟಪಡಿಸಿದರು.
ಸ್ವಯಂಪ್ರೇರಿತವಾಗಿ ಬಿಟ್ಟುಕೊಡುವವರಿಗೆ ಪ್ರೋತ್ಸಾಹ:
ಆರ್ಥಿಕವಾಗಿ ಸದೃಢರಾಗಿರುವ ಸಾರ್ವಜನಿಕರು ಯಾರಾದರೂ ಸ್ವಯಂಪ್ರೇರಿತವಾಗಿ ಗ್ಯಾರಂಟಿ ಯೋಜನೆಗಳನ್ನು ಬಿಟ್ಟುಕೊಟ್ಟು, ಇತರೆ ಬಡ ಅರ್ಹ ಫಲಾನುಭವಿಗಳಿಗೆ ನೆರವಾಗಲು ಮುಂದೆ ಬಂದರೆ ಅಂಥವರನ್ನು ಸರ್ಕಾರ ಪ್ರೋತ್ಸಾಹಿಸಲಿದೆ ಎಂದು ಸಭೆಯಲ್ಲಿ ತಿಳಿಸಿದರು. ಇದೇ ವೇಳೆ ಕೇಂದ್ರ ಸರ್ಕಾರದ ನೀತಿಗಳಿಂದಾಗಿ ಬಡ ಹಾಗೂ ಮಧ್ಯಮ ವರ್ಗದವರ ಮೇಲಾಗುತ್ತಿರುವ ಆರ್ಥಿಕ ಹೊರೆ ಮತ್ತು ಬೆಲೆ ಏರಿಕೆಯ ಕುರಿತೂ ಸಭೆಯಲ್ಲಿ ಕಳವಳ ವ್ಯಕ್ತವಾಯಿತು.
ಶಕ್ತಿ ಯೋಜನೆಯು ಮೇ ಅಂತ್ಯದವರೆಗೆ ಮಹಿಳೆಯರು 763 ಕೋಟಿ ಟ್ರಿಪ್ ಮಾಡಿದ್ದು, ಈ ಯೋಜನೆಯಡಿ ಅವರಿಗೆ ವಿನಿಯೋಗಿಸಲಾದ ಟಿಕೆಟ್ ಮೌಲ್ಯ 20047.69 ಕೋಟಿ ರೂಪಾಯಿಗಳು.
2026-27ನೇ ಸಾಲಿಗೆ ಸಾಮಾನ್ಯ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಎಲ್ಲರನ್ನೂ ಸೇರಿಸಿ 10ಲಕ್ಷ ಉಚಿತ ಬಸ್ ಪಾಸ್ಗಳನ್ನು. ವಿದ್ಯಾರ್ಥಿಗಳಿಗೆ ವಿತರಿಸಲು ಅಂದಾಜಿಸಲಾಗಿದೆ.
ಗೃಹ ಜ್ಯೋತಿ ಯೋಜನೆಯಡಿ ಮೇ ಅಂತ್ಯದವರೆಗೆ 1.65 ಕೋಟಿ ಫಲಾನುಭವಿಗಳು ಯೋಜನೆಯ ಲಾಭ ಪಡೆದಿರುತ್ತಾರೆ.
ಹೊರ ರಾಜ್ಯದಿಂದ ಇಲ್ಲಿಗೆ ಬಂದು ನೆಲೆಸಿ ಗೃಹ ಜ್ಯೋತಿ ಲಾಭ ಪಡೆಯುತ್ತಿರುವವರ ಮಾಹಿತಿ ಸಂಗ್ರಹಿಸಲು ಸೂಚನೆ.
ಮತಪಟ್ಟಿಯಲ್ಲಿ ಹೆಸರಿರುವ ಮತದಾರರು ಮಾತ್ರ ಸರ್ಕಾರದ ಯೋಜನೆಗಳ ಫಲಾನುಭವಿಗಳಾಗಿರುತ್ತಾರೆ.
ಆದ್ದರಿಂದ ವಿಶೇಷ ಸಮಗ್ರ ಪರಿಷ್ಕರಣೆ ಸಂದರ್ಭದಲ್ಲಿ ಫಲಾನುವಿಗಳು ತಮ್ಮ ಹೆಸರು ಬಿಟ್ಟು ಹೋಗದಂತೆ ನೋಡಿಕೊಳ್ಳಬೇಕು.
ಅನ್ನಭಾಗ್ಯ ಯೋಜನೆಯಡಿ 11561 ಕೋಟಿ ರೂ.ಗಳನ್ನು ಡಿಬಿಟಿ ಮೂಲಕ ಫಲಾನುಭವಿಗಳ ಖಾತೆಗೆ ವರ್ಗಾಯಿಸಲಾಗಿದೆ .
ಜುಲೈ-2023 ಯಿಂದ ಡಿಸೆಂಬರ್-2024ರ ವರೆಗೆ ಒಟ್ಟು 72,02,33,970 ಫಲಾನುಭವಿಗಳಿಗೆ ಒಟ್ಟು ರೂ. 11561.05 ಕೋಟಿಗಳನ್ನು ಡಿಬಿಟಿ ಮೂಲಕ ವರ್ಗಾಯಿಸಲಾಗಿರುತ್ತದೆ.
ತದನಂತರ 2025ನೇ ಫೆಬ್ರವರಿ ತಿಂಗಳಿನಿಂದ ಇಲ್ಲಿಯವರೆಗೆ ಪ್ರಸ್ತುತರಾಜ್ಯದಲ್ಲಿರುವ ಒಟ್ಟು 4,44,67,942 ಫಲಾನುಭವಿಗಳಿಗೆ ಪ್ರತಿ ತಿಂಗಳು ಅನ್ನಭಾಗ್ಯ ಯೋಜನೆಯಡಿ ಹೆಚ್ಚುವರಿಯಾಗಿ 5 ಕೆ.ಜಿ. ಅಕ್ಕಿಯನ್ನು ವಿತರಿಸಲಾಗುತ್ತಿದೆ.
ಕಾಳಸಂತೆಯಲ್ಲಿ ಅನ್ನಭಾಗ್ಯ ಅಕ್ಕಿ ಅಕ್ರಮ ಮಾರಾಟವಾಗುತ್ತಿರುವುದನ್ನು ನಿಗ್ರಹಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಅವರು ಸೂಚಿಸಿದರು.
ಸಭೆಯಲ್ಲಿ ಸಚಿವರಾದ ಕೆ.ಎಚ್. ಮುನಿಯಪ್ಪ, ಕೆ.ಜೆ. ಜಾರ್ಜ್, ಪ್ರಿಯಾಂಕ್ ಖರ್ಗೆ, ಮುಖ್ಯಮಂತ್ರಿಗಳ ಮುಖ್ಯ ಸಲಹೆಗಾರ ಸುನಿಲ್ ಕನಗೋಳು, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಅಪರ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ, ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷರಾದ ದಿನೇಶ್ ಗೂಳಿಗೌಡ, ಎಸ್.ಆರ್. ಪಾಟೀಲ್, ಪುಷ್ಪಾ ಅಮರನಾಥ್, ಮೆಹರುಸ್ ಖಾನ್ ಹಾಗೂ ಬೆಂಗಳೂರು ಜಿಲ್ಲಾ ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
