ಸಮಗ್ರ ಸುದ್ದಿ

ವಚನಗಳು ಅರಿವಿನ ದೀವಿಗೆ: ತಮಿಳಿಗೆ ವಚನ ಭಾಷಾಂತರಿಸಿ ಮಕ್ಕಳಿಗೆ ಕಲಿಸಿ: ಈಶ್ವರ ಖಂಡ್ರೆ

Share

ಸೇಲಂ: ಬಸವಾದಿ ಶರಣರ ವಚನಗಳು ಅರಿವಿನ ದೀವಿಗೆಯಾಗಿದ್ದು, ಇವುಗಳನ್ನು ತಮಿಳಿಗೆ ಭಾಷಾಂತರಿಸಿ ಮಕ್ಕಳಿಗೆ ಕಳಿಸಿ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಕರೆ ನೀಡಿದ್ದಾರೆ.

ತಮಿಳುನಾಡಿನ ಸೇಲಂನಲ್ಲಿ ತಮಿಳುನಾಡು ವೀರಶೈವ ಕೌನ್ಸಿಲ್ ಮತ್ತು ಚೀಫ್ ಜನ್ ಗಮ್ ಸೋಸಿಯಲ್ ವೆಲ್ಫೇರ್ ಅಸೋಸಿಯೇಷನ್ ಸೇಲಂನಲ್ಲಿಂದು ಆಯೋಜಿಸಿದ್ದ ಬಸವ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವಚನಗಳು ಸಂಸ್ಕಾರ ನೀಡುತ್ತವೆ. ಜೀವನಧರ್ಮ ಸಾರುತ್ತವೆ ಎಂದು ಹೇಳಿದರು.

ವೀರಶೈವ ಮಠ ಮಾನ್ಯಗಳು ದೇಶದ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅಪಾರವಾದ್ದು, ಕರ್ನಾಟಕದ ವೀರಶೈವ ಲಿಂಗಾಯತ ಮಠಗಳು ಆಶ್ರಯ, ಅನ್ನ ಮತ್ತು ಅರಿವು (ಶಿಕ್ಷಣ) ಎಂಬ ತ್ರಿವಿಧ ದಾಸೋಹದ ಮೂಲಕ ಎಲ್ಲ, ಜಾತಿ, ಜನಾಂಗ, ಮತ, ಧರ್ಮದವರಿಗೂ ಗುಣಮಟ್ಟದ ಶಿಕ್ಷಣ ನೀಡಿವೆ ಎಂದರು.

ಇಂದು ತಮಿಳುನಾಡಿನಲ್ಲಿ ಬಸವ ಜಯಂತಿ ಆಚರಿಸಲಾಗುತ್ತಿದೆ. ಮಹಾಪುರುಷರ ಜಯಂತಿ ಆಚರಣೆ ಮಾಡುವುದರ ಹಿಂದಿನ ಉದ್ದೇಶ ಅವರ ಆದರ್ಶಗಳನ್ನು ಪಾಲಿಸಲು ಸಂಕಲ್ಪ ಮಾಡುವುದಾಗಿದೆ. ಬಸವಾದಿ ಶರಣರು 12ನೇ ಶತಮಾನದಲ್ಲೇ ಸಮ ಸಮಾಜದ ಕನಸು ಕಂಡಿದ್ದರು. ಕರ್ನಾಟಕ ಸರ್ಕಾರ ಬಸವಣ್ಣನವರನ್ನು ರಾಜ್ಯದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದೆ ಎಂದು ಹೇಳಿದರು.

ಕರ್ನಾಟಕ, ಮಹಾರಾಷ್ಟ್ರದಲ್ಲಿ ವೀರಶೈವ ಲಿಂಗಾಯತರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಕೇರಳ, ತಮಿಳುನಾಡು, ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲೂ ಸಾಕಷ್ಟು ಸಂಖ್ಯೆಯಲ್ಲಿ ಲಿಂಗಾಯತ, ವೀರಶೈವರಿದ್ದಾರೆ. ನಾವೆಲ್ಲರೂ ಸಂಘಟನೆಯಲ್ಲಿ ಬಲವಿದೆ, ವಿಘಟನೆಯಲ್ಲಿ ದೌರ್ಬಲ್ಯವಿದೆ ಎಂಬುದನ್ನು ಅರಿಯಬೇಕು ಎಂದರು.

1904ರಲ್ಲಿ ಪರಮಪೂಜ್ಯ ಹಾನಗಲ್ಲ ಕುಮಾರ ಸ್ವಾಮೀಜಿ ಅವರು ಸ್ಥಾಪಿಸಿದ ವೀರಶೈವ ಲಿಂಗಾಯತ ಮಹಾಸಭಾ ನಮ್ಮ ಸಮುದಾಯದ ಎಲ್ಲ ಒಳಪಂಗಡಗಳನ್ನೂ ಒಗ್ಗೂಡಿಸುವ ಕಾರ್ಯ ಮಾಡಿದೆ. ಎಲ್ಲ ಜಾತಿ ಜನಾಂಗದಲ್ಲಿರುವಂತೆ ವೀರಶೈವ ಲಿಂಗಾಯತ ಸಮುದಾಯದಲ್ಲೂ ಬಡವರಿದ್ದು, ಅವರ ಅಭಿವೃದ್ಧಿಗಾಗಿ ಸಭಾ ಶ್ರಮಿಸುತ್ತಿದೆ ಎಂದರು.

ಮಹಾಸಭಾದ ಅಧ್ಯಕ್ಷರಾಗಿ ಸಿದ್ದಗಂಗಾಮಠದ ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿ, ತಮ್ಮ ತಂದೆ ಲಿಂಗೈಕ್ಯ ಡಾ. ಭೀಮಣ್ಣ ಖಂಡ್ರೆ, ನಿಕಟಪೂರ್ವ ಅಧ್ಯಕ್ಷರಾಗಿದ್ದ ಲಿಂಗೈಕ್ಯ ಶಾಮನೂರು ಶಿವಶಂಕರಪ್ಪ ಮೊದಲಾದವರು ಸಮಾಜವನ್ನು ಒಗ್ಗೂಡಿಸಲು ಶ್ರಮಿಸಿದ್ದಾರೆ. ಇಂದು ತಮ್ಮನ್ನು ಸಭಾದ ರಾಷ್ಟ್ರೀಯ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿದ್ದು, ಎಲ್ಲರ ನಿರೀಕ್ಷೆಯಂತೆ ಸಮುದಾಯವನ್ನು ಒಗ್ಗೂಡಿಸಲು, ಸಮಾಜದ ಎಲ್ಲರ ಹಿತಕಾಯಲು ತಾವು ಶ್ರಮಿಸುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ವೀರಶೈವ ಲಿಂಗಾಯತ ಮಹಾಸಭಾದ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸನ್ನ, ಶ್ರೀಮದ್ ಶಿವಗಾನಪ್ರಿಯ ಸ್ವಾಮೀಜಿ ಮತ್ತಿತರರು ಪಾಲ್ಗೊಂಡಿದ್ದರು.


Share

You cannot copy content of this page