ಬೆಂಗಳೂರು: ಮಹಿಳೆಯರನ್ನು ಆರ್ಥಿಕ ಸ್ವಾವಲಂಬಿಗಳನ್ನಾಗಿ ಮಾಡುವ ದಿಸೆಯಲ್ಲಿ ಮತ್ತೊಂದು ಹೆಜ್ಜೆ ಇಟ್ಟಿರುವ ರಾಜ್ಯ ಸರ್ಕಾರ ಮಹಿಳಾ ವಾಹನ ಚಾಲನಾ ತರಬೇತಿ ಸಂಸ್ಥೆಯನ್ನು ಆರಂಭಿಸಲಿದೆ.
ಬೆಂಗಳೂರಿನಲ್ಲಿ ಬುಧವಾರ ಸಾರಿಗೆ ಇಲಾಖೆ ಹಿರಿಯ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮಾತನಾಡಿದ ಸಾರಿಗೆ ಸಚಿವರಾದ ಬೈರತಿ ಸುರೇಶ್ ಈ ವಿಷಯ ತಿಳಿಸಿದ್ದಾರೆ.
ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಮಹಿಳೆಯರಿಗೆಂದೇ ಪ್ರತ್ಯೇಕವಾದ ವಾಹನ ಚಾಲನಾ ತರಬೇತಿ ಸಂಸ್ಥೆ, ಚಾಲನಾ ಟ್ರ್ಯಾಕ್ ಸೇರಿದಂತೆ ದ್ವಿಚಕ್ರ, ತ್ರಿಚಕ್ರ, ಭಾರೀ ವಾಹನಗಳ ಚಾಲನೆ ತರಬೇತಿ ಇನ್ನಿತರೆ ಮೂಲಸೌಕರ್ಯಗಳನ್ನು ಬಿಎಂಟಿಸಿ ನಿರ್ಮಾಣ ಮಾಡಲಿದೆ ಎಂದರು.
ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಸಹಭಾಗಿತ್ವದಲ್ಲಿ ಈ ವಾಹನ ಚಾಲನಾ ತರಬೇತಿ ಸಂಸ್ಥೆಯನ್ನು ಆರಂಭಿಸಲಾಗುತ್ತದೆ. ಮಹಿಳಾ ಸ್ವಯಂ ಸೇವಾ ಸಂಸ್ಥೆಯಾಗಿರುವ ಅವೇಕ್ (AWAKE – Association of Women Entrepreneurs of Karnataka) ಮಹಿಳೆಯರಿಗೆ ವಾಹನ ಚಾಲನೆ ಸೇರಿದಂತೆ ಕೌಶಲ್ಯಾಧಾರಿತ ತರಬೇತಿಗಳನ್ನು ನೀಡಲಿದೆ ಎಂದು ಹೇಳಿದರು.
ಸಾರಿಗೆ ಭವನ ನಿರ್ಮಾಣ
ಪ್ರಸ್ತುತ ಸಾರಿಗೆ ಆಯುಕ್ತಾಲಯ ಬೆಂಗಳೂರಿನ ಶಾಂತಿನಗರದಲ್ಲಿರುವ ಬಿಎಂಟಿಸಿ ಕಟ್ಟಡದಲ್ಲಿ ಬಾಡಿಗೆ ಆಧಾರದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ಸಾರಿಗೆ ಇಲಾಖೆಗೆ ಒಂದು ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುವ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಲಾಯಿತು.
ಶಾಂತಿನಗರದಲ್ಲಿ ಕೆಎಸ್ಸಾರ್ಟಿಸಿಗೆ ಸೇರಿರುವ ಸುಮಾರು ಒಂದು ಎಕರೆ ಪ್ರದೇಶದಲ್ಲಿ ಸಾರಿಗೆ ಭವನವನ್ನು ನಿರ್ಮಾಣ ಮಾಡುವ ಬಗ್ಗೆ ಸಾಧಕ ಬಾಧಕಗಳನ್ನು ಅವಲೋಕಿಸಬೇಕು. ಸರ್ಕಾರಕ್ಕೆ ಯಾವುದೇ ಹೊರೆಯಾಗದ ರೀತಿಯಲ್ಲಿ ಇಲಾಖೆಯ ಸಂಪನ್ಮೂಲದಲ್ಲೇ ಕಟ್ಟಡ ನಿರ್ಮಾಣ ಮಾಡುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಕಟ್ಟಡ ನಿರ್ಮಾಣದಿಂದ ಸಾರಿಗೆ ಇಲಾಖೆ ಆಯುಕ್ತಾಲಯದ ಕಚೇರಿಗಳೆಲ್ಲವೂ ಇಲ್ಲಿಂದಲೇ ಕಾರ್ಯನಿರ್ವಹಣೆ ಮಾಡಲಿವೆ.
ಖಾಲಿ ಹುದ್ದೆ ನೇಮಕಕ್ಕೆ ಸೂಚನೆ
ಪ್ರಾದೇಶಿಕ ಸಾರಿಗೆ ಇಲಾಖೆಯಲ್ಲಿ ಖಾಲಿ ಇರುವ 150 ಕ್ಕೂ ಹೆಚ್ಚು ಸಾರಿಗೆ ಇನ್ ಸ್ಪೆಕ್ಟರ್ ಗಳನ್ನು ಮತ್ತು ಇತರೆ ಹುದ್ದೆಗಳನ್ನು ಕೂಡಲೇ ನೇಮಕ ಮಾಡಿಕೊಳ್ಳುವ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಭೆಯಲ್ಲಿ ಸಾರಿಗೆ ಇಲಾಖೆ ಕಾರ್ಯದರ್ಶಿ ದೀಪಾ ಚೋಳನ್, ಆಯುಕ್ತ ಸೆಲ್ವಮಣಿ ಸೇರಿದಂತೆ ಹಿರಿಯ ಅಧಿಕಾರಿಗಳು ಇದ್ದರು.
