ದಾವಣಗೆರೆ: ರಾಜ್ಯ ಸರ್ಕಾರಗಳು ತಮ್ಮ ಪಾಲಿನ 40ರಷ್ಟು ಹಣ ಬಿಡುಗಡೆ ಮಾಡಿದರೆ ಮಾತ್ರ ತನ್ನ ಶೇ.60ರಷ್ಟು ಪಾಲು ಬಿಡುಗಡೆ ಮಾಡುವುದಾಗಿ ಕೇಂದ್ರ ಸರ್ಕಾರ ಷರತ್ತು ಹಾಕಿರುವುದು ಸರಿಯಲ್ಲ. ಆದಾಗ್ಯೂ, ರಾಜ್ಯ ಸರ್ಕಾರ ಗ್ರಾಮೀಣ ಬಡವರು, ಹಿಂದುಳಿದವರು, ಅಲ್ಪ ಸಂಖ್ಯಾತರು, ದಲಿತರಿಗೆ ಉದ್ಯೋಗದ ಖಾತ್ರಿ ಒದಗಿಸಲು ಮನ್ರೇಗಾದ ಹೊಸರೂಪ ವಿಬಿಜಿ ರಾಮ್ ಜಿ ಜಾರಿ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ದಾವಣಗೆರೆ ಜಿಲ್ಲಾ ಪಂಚಾಯ್ತಿಯ ಸಭಾಂಗಣದಲ್ಲಿಂದು ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ಮನ್ರೇಗಾದ ಲೆಕ್ಕಾಚಾರದಂತೆ ರಾಜ್ಯ ಸರ್ಕಾರ 500 ಕೋಟಿ ತೆಗೆದಿಟ್ಟಿತ್ತು. ಈಗ ಹೆಚ್ಚಿನ ಹಣ ಬಿಡುಗಡೆ ಮಾಡಬೇಕಿದೆ. ಹೀಗಾಗಿ ನಾಳೆ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚಿಸಿ ಅನುಮತಿ ಕೋರಲಾಗುವುದು ಎಂದರು.
ಈ ಹಿಂದೆ ಯುಪಿಎ ಜಾರಿಗೆ ತಂದಿದ್ದ ಮನ್ರೇಗಾ ಅಡಿಯಲ್ಲಿ ಕೂಲಿಯ ಪೂರ್ಣ ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಸಾಮಗ್ರಿಯ ವೆಚ್ಚದ ಶೇ.75ರಷ್ಟನ್ನು ಕೇಂದ್ರ ಸರ್ಕಾರ ಮತ್ತು ಶೇ.25ರಷ್ಟು ಹಣವನ್ನು ರಾಜ್ಯ ಸರ್ಕಾರ ಭರಿಸುತ್ತಿತ್ತು ಇದು 90:10 ಅನುಪಾತವಾಗಿತ್ತು ಎಂದರು.
ಕಳೆದ 20 ವರ್ಷಗಳಲ್ಲಿ ರಾಜ್ಯ ಸರ್ಕಾರ ಮನ್ರೇಗಾ ಅಡಿ 187 ಕೋಟಿ ಮಾನವ ದಿನ ಸೃಜನೆ ಮಾಡಿದೆ. ಇದಕ್ಕಾಗಿ ವೆಚ್ವವಾಗಿರುವ ಒಟ್ಟು 61 ಸಾವಿರ ಕೋಟಿ ರೂ.ಗಳ ಪೈಕಿ ಕೇಂದ್ರ ಸರ್ಕಾರ 56 ಸಾವಿರ ಕೋಟಿಗೂ ಅಧಿಕ ಹಣ ಭರಿಸಿತ್ತು. ರಾಜ್ಯ ಸರ್ಕಾರ 4800 ಕೋಟಿ ರೂ. ಮಾತ್ರ ವೆಚ್ಚ ಮಾಡಿತ್ತು. ಆದರೆ ಕೇಂದ್ರ ಸರ್ಕಾರ ಈ ವರ್ಷ ರಾಜ್ಯಕ್ಕೆ ವಿಬಿಜಿ ರಾಮ್ ಜಿ ಅಡಿ 5709 ಕೋಟಿ ರೂ. ಹಂಚಿಕೆ ಮಾಡಿದೆ.ರಾಜ್ಯ ಸರ್ಕಾರ ಒಂದೇ ವರ್ಷದಲ್ಲಿ 3806 ಕೋಟಿ ವೆಚ್ಚ ಮಾಡಬೇಕಾಗಿ ಬಂದಿದೆ ಇದು ದೊಡ್ಡ ಹೊರೆಯಾಗಿದೆ. ಹೀಗಾಗಿ 90: 10 ಅನುಪಾತವನ್ನೇಮುಂದುವರಿಸಲು ಕೇಂದ್ರಕ್ಕೆ ಒತ್ತಾಯಿಸಲಾಗಿದೆ ಎಂದು ತಿಳಿಸಿದರು.
60 ದಿನ ಬಿಡುವು ಅವೈಜ್ಞಾನಿಕ:
ಮಿಗಿಲಾಗಿ ಇದು ಯಾಂತ್ರಿಕ ಯುಗವಾಗಿದ್ದು, ಕೃಷಿಗೂ ಅತ್ಯಾಧುನಿಕ ಯಂತ್ರೋಪಕರಣಗಳು ಬಂದಿವೆ. ಹೀಗಾಗಿ ಸುಗ್ಗಿಯ ಕಾಲದಲ್ಲಿ 60 ದಿನ ಉದ್ಯೋಗ ನೀಡುವುದಿಲ್ಲ ಎನ್ನುವುದು ಸರಿಯಲ್ಲ. ಇದರ ಜೊತೆಗೆ ಕಾಮಗಾರಿ ಆಯ್ಕೆ ಮಾಡಿಕೊಳ್ಳುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇರಬೇಕು. ಇದಕ್ಕೆ ವಿಬಿಜಿ ರಾಮ್ ಜಿ ಅಡಿ ನಿರ್ಬಂಧ ಹಾಕಿರುವುದಕ್ಕೂ ನಮ್ಮ ಆಕ್ಷೇಪಣೆ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ನೀರಿನ ಘಟಕ ಉಪ ಗುತ್ತಿಗೆ ನೀಡಲು ಅವಕಾಶವಿಲ್ಲ:
ನಂತರ ಜಿಲ್ಲೆಯ ವಿವಿಧ ಪಂಚಾಯ್ತಿಗಳಲ್ಲಿ ಕೈಗೊಂಡಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಉಪ ಗುತ್ತಿಗೆ ನೀಡಲು ಅವಕಾಶವಿಲ್ಲ,.ಯಾರೇ ಸಬ್ ಲೀಸ್ ಕೊಟ್ಟಿದ್ದರೆ ಅಂತಹ ಗ್ರಾಮ ಪಂಚಾಯ್ತಿ ಅಭಿವೃದ್ಧಿ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಿ, ಜೊತೆಗೆ ಈ ಘಟಕಗಳ ನಿರ್ವಹಣೆ ಮತ್ತು ಕಾರ್ಯಾಚರಣೆಗೆ ಮಾತ್ರ ಟೆಂಡರು ಕರೆಯಿರಿ ಎಂದು ಸೂಚಿಸಿದರು.
ಕೆಲವು ತಾಲೂಕುಗಳಲ್ಲಿ ಶುದ್ಧ ಕುಡಿವ ನೀರಿನ ಘಟಕಗಳ ಮೆಂಬ್ರೇನ್ ಲಭಿಸುವುದಿಲ್ಲ. ಹೀಗಾಗಿ ಕೆಟ್ಟು ನಿಲ್ಲುತ್ತವೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಮತ್ತು ನಿರ್ವಹಣೆಯ ಟೆಂಡರ್ ಕರೆದು ನಿಗಾ ಇಡಿ, ದುರಸ್ತಿ ಅಸಾಧ್ಯ ಎನಿಸುವ ಘಟಕ ಮುಚ್ಚಿ ಎಂದು ಸೂಚಿಸಿದರು.
ಆ ವರ್ಷ ಡಿಸೆಂಬರ್ ಒಳಗಾಗಿ ಜೆಜೆಎಂನಡಿ ಎಲ್ಲ ಏಕ ಗ್ರಾಮ ಮತ್ತು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳು ಅನುಷ್ಠಾನ ಆಗಲೇ ಬೇಕು. ಯಾವುದೇ ಅಧಿಕಾರಿ ವರ್ಷಾಂತ್ಯದೊಳಗೆ ಮಾಡಲು ಸಾಧ್ಯವಿಲ್ಲ ಎನ್ನುವುದಾದರೆ, ಅವರನ್ನು ಬದಲಾಯಿಸಿ, ಇಲ್ಲ ನೀವೆ ರಾಜೀನಾಮೆ ಕೊಟ್ಟು ಹೋಗಿ ಎಂದು ಈಶ್ವರ ಖಂಡ್ರೆ ಖಾರವಾಗಿ ಎಚ್ಚರಿಸಿದರು.
ಮನೆ ಮನೆಗೆ ಗಂಗೆ, ಇ.ಓಗಳು ಖುದ್ದು ಪರಿಶೀಲಿಸಬೇಕು:
ಮನೆ ಮನೆ ಗಂಗೆ ಜಿಲ್ಲೆಯ ಎಷ್ಟು ಗ್ರಾಮದಲ್ಲಿ ಘೋಷಣೆ ಆಗಿದೆ ಎಂದು ಪ್ರಶ್ನಿಸಿದ ಸಚಿವರು, ಉತ್ತರ ನೀಡದ ಜಗಳೂರು ತಾಲೂಕು ಕಾರ್ಯನಿರ್ವಹಣಾ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು. ಮನೆ ಮನೆಗೂ ಗಂಗೆ ಯೋಜನೆಯಡಿ ನಲ್ಲಿ ಅಳವಡಿಸಲಾಗಿದೆಯೇ, ನೀರು ಬರುತ್ತಿದೆಯೇ ಎಂಬುದನ್ನು ಖುದ್ದು ಭೇಟಿ ನೀಡಿ ತಾಲೂಕು ಇ.ಓ.ಗಳು ಖಾತ್ರಿಪಡಿಸಿಕೊಳ್ಳಬೇಕು ಎಂದರು.
ಯಾರೇ ಕೊಳವೆಗೆ ಖನ್ನ ಹಾಕಿ ಅಥವಾ ಮೋಟರ್ ಬಳಸಿ ಹೆಚ್ಚು ನೀರು ಬಳಕೆ ಮಾಡುತ್ತಿದ್ದು, ಕೊನೆಯ ಅಂಚಿನ ಮನೆಗಳಿಗೆ ನೀರು ಪೂರೈಕೆ ಆಗದಿದ್ದರೆ, ಅಂತಹ ಪ್ರಕರಣ ಪತ್ತೆ ಹಚ್ಚಿ ಕ್ರಮ ಜರುಗಿಸಬೇಕು ಎಂದರು.
24×7 ನೀರು ಪೂರೈಕೆಗೆ 65 ಗ್ರಾಮ ಘೋಷಣೆ:
ಜಿಲ್ಲೆಯಲ್ಲಿ 74 ಗ್ರಾಮಗಳಲ್ಲಿ 24 x7 ನೀರು ಪೂರೈಕೆ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಪ್ರಸ್ತುತ 65 ಗ್ರಾಮಗಳಲ್ಲಿ ಯಶಸ್ವಿಯಾಗಿ ವಾರದ ಏಳೂ ದಿನ, ದಿನದ 24 ಗಂಟೆ ನೀರು ಕೊಡಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು.
ಈ ಬಗ್ಗೆ ಪ್ರಶ್ನಿಸಿದ ಸಚಿವರು, ನೀರು ಶೇಖರಣೆ ಮಾಡಿಕೊಳ್ಳುವ ಪ್ರವೃತ್ತಿ ನಿಂತಾಗ ನೀರಿನ ಬಳಕೆ ಸಹಜವಾಗೇ ತಗ್ಗುತ್ತದೆ. 24 x7 ಜಾರಿಯಾದ ಬಳಿಕ ಗ್ರಾಮಗಳಲ್ಲಿ ನೀರಿನ ಬಳಕೆ ಪ್ರಮಾಣ ಹೆಚ್ಚಳವಾಗಿದೆಯೇ ಅಥವಾ ಕಡಿಮೆ ಆಗಿದೆಯೇ ಎಂಬ ಬಗ್ಗೆ ಅಧ್ಯಯನ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.
**ಬಿ ಖರಾಬ್ ಸರ್ಕಾರದ ಆಸ್ತಿ- ಈಶ್ವರ ಖಂಡ್ರೆ: **
ಸರ್ವೆ ನಂಬರ್ ಗಳಲ್ಲಿ ಎ ಖರಾಬು ಮತ್ತು ಬಿ ಖರಾಬು ಜಮೀನು ಎಷ್ಟಿದೆ ಎಂಬ ವಿವರ ಇರುತ್ತದೆ. ಹೀಗಾಗಿ ಬಿ ಖರಾಬು ಸರ್ಕಾರದ ಆಸ್ತಿಯಾಗಿದ್ದು, ಇದನ್ನೂ ಬಳಸಿಕೊಂಡು ಯಾರೇ ಬಡಾವಣೆ ನಿರ್ಮಿಸಿದ್ದರೆ, ಮನೆ ಕಟ್ಟಿದ್ದರೆ ಅದಕ್ಕೆ ಇ-ಸ್ವತ್ತು ನೀಡಬೇಡಿ. ಆದರೆ, ಗ್ರಾಮೀಣ ಪ್ರದೇಶದಲ್ಲಿ ತಲೆಮಾರುಗಳಿಂದ ವಾಸಿಸುತ್ತಿರುವ ಮತ್ತು ತಮ್ಮ ಬಳಿ ದಾಖಲೆ ಇಲ್ಲದ ಹಲವು ಕುಟುಂಬಗಳಿವೆ. ಇವರಿಗೆ ಸ್ವಾಧೀನಾನುಭವ ಆಧಾರದಲ್ಲಿ ಪರಿಶೀಲಿಸಿ ಖಾಸಗಿ ಆಸ್ತಿಯಾಗಿದ್ದಲ್ಲಿ ಇ-ಸ್ವತ್ತು ನೀಡಲು ಕ್ರಮ ವಹಿಸಬಹುದು. ಇದಕ್ಕೆ ಸ್ಪಷ್ಟ ನಿರ್ದೇಶನಗಳನ್ನು ಕಳುಹಿಸಲಾಗುವುದು ಎಂದರು.
ಸಭೆಯಲ್ಲಿ ಶಾಸಕರುಗಳಾದ ಡಿ.ಜಿ. ಶಾಂತನಗೌಡ, ಶಿವಗಂಗಾ ಬಸವರಾಜ್, ಸಮರ್ಥ್ ಶಾಮನೂರ್, ಕೆ.ಎಸ್. ಬಸವಂತಪ್ಪ, ಜಿಲ್ಲಾಧಿಕಾರಿ ಜಿ.ಎಸ್. ಗಂಗಾಧರಸ್ವಾಮಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗಿತ್ತೆ ಮಾಧವ ವಿಠ್ಠಲರಾವ್ ಮತ್ತಿತರರು ಪಾಲ್ಗೊಂಡಿದ್ದರು.
