ಬೆಂಗಳೂರು:ವೈಟ್ ಟಾಪಿಂಗ್ ಕಾಮಗಾರಿಗಳ ಗುಣಮಟ್ಟದಲ್ಲಿ ಯಾವುದೇ ರಾಜಿಯಿಲ್ಲದೆ, ನಿಗದಿತ ಅವಧಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸುವಂತೆ ಮುಖ್ಯ ಆಯುಕ್ತರಾದ ಮಹೇಶ್ವರ್ ರಾವ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಅಮೃತಹಳ್ಳಿ ಮುಖ್ಯ ರಸ್ತೆ, ರೈಲ್ವೇ ಮೇಲ್ಸೇತುವೆ ಜಕ್ಕೂರು ರಸ್ತೆ(ರೈತರ ಸಂತೆ ರಸ್ತೆ), ಅಲ್ಲಾಳಸಂದ್ರ ರಸ್ತೆ, ಎಲ್ & ಟಿ ರಸ್ತೆ, ರಾಜೀವ್ ಗಾಂಧಿ ನಗರ ರೈಲ್ವೆ ಸಮಾನಾಂತರ ರಸ್ತೆ ಹಾಗೂ ಸಹಕಾರನಗರ 20ನೇ ಅಡ್ಡರಸ್ತೆ ಕಾಮಗಾರಿ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಕಾಮಗಾರಿಗಳ ಪ್ರಗತಿ, ಗುಣಮಟ್ಟ ಹಾಗೂ ಸಮನ್ವಯದ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.
ಅಮೃತಹಳ್ಳಿ ಮುಖ್ಯ ರಸ್ತೆ:
ಅಮೃತಹಳ್ಳಿ ಮುಖ್ಯ ರಸ್ತೆಯಲ್ಲಿ 800 ಮೀಟರ್ ಉದ್ದದ ವೈಟ್ ಟಾಪಿಂಗ್ ಕಾಮಗಾರಿಯು ಪ್ರಗತಿಯಲ್ಲಿದ್ದು, ಈಗಾಗಲೇ 400 ಮೀಟರ್ ಉದ್ದಕ್ಕೆ ವೈಟ್ ಟಾಪಿಂಗ್ ಅಳವಡಿಸಲಾಗಿರುತ್ತದೆ. ಸದರಿ ಭಾಗದಲ್ಲಿ ಪಾದಚಾರಿ ಮಾರ್ಗದ ಕಾಮಗಾರಿಗಳನ್ನು ಕೂಡಲೇ ಪ್ರಾರಂಭಿಸಿ ಸಮಾನಾಂತರವಾಗಿ ಎಲ್ಲಾ ಚಟುವಟಿಕೆಗಳನ್ನು ಕೈಗೊಳ್ಳಲು ಸೂಚಿಸಿದರು. ವೈಟ್ ಟಾಪಿಂಗ್ ಕ್ಯೂರಿಂಗ್ ಕಾರ್ಯಕ್ಕೆ ಗುನ್ನಿ ಚೀಲಗಳ ಬದಲಾಗಿ ಜಿಯೋಟೆಕ್ಸ್ಟೈಲ್ ಶೀಟ್ ಗಳು ಅಥವಾ ಕ್ಯೂರಿಂಗ್ ಬ್ಲಾಂಕೆಟ್ ಗಳನ್ನು 100 ಮೀಟರ್ ಉದ್ದ ಅಳವಡಿಸಿ ಅವುಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸುವಂತೆ ತಿಳಿಸಿದರು.
ಆರ್.ಎಫ್.ಪಿ ಷರತ್ತುಗಳಂತೆ ಅನುಭವಿ ಪಿಎಂಸಿ ಪ್ರಮುಖ ಸಿಬ್ಬಂದಿ ಕಾಮಗಾರಿ ನಡೆಯುವ ಅವಧಿಯಲ್ಲಿ ಸ್ಥಳದಲ್ಲಿಯೇ ಹಾಜರಿರುವುದನ್ನು ಖಚಿತಪಡಿಸಬೇಕು. ಅಲ್ಲದೆ, ರಸ್ತೆ ಜಂಕ್ಷನ್ ಗಳು ಹಾಗೂ ತಿರುವುಗಳಲ್ಲಿ ವಾಹನಗಳ ಸುಗಮ ಸಂಚಾರಕ್ಕೆ ಅಗತ್ಯವಾದ ಟರ್ನಿಂಗ್ ರೇಡಿಯಸ್ ಒದಗಿಸುವಂತೆ ಸೂಚನೆ ನೀಡಿದರು.
ಕಾಮಗಾರಿಗಳ ಮೇಲ್ವಿಚಾರಣೆಗಾಗಿ ಎಲ್ಲಾ ರಸ್ತೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಹಾಗೂ ಅರ್ಕಾವತಿ ರಸ್ತೆಯ ಡಾಂಬರೀಕರಣಕ್ಕೆ ಸಂಬಂಧಿಸಿದಂತೆ ಬಿಡಿಎಗೆ ಅಧಿಕೃತ ಪತ್ರ ಕಳುಹಿಸಲು ಸೂಚಿಸಿದರು.
ರಸ್ತೆ ಬದಿಯ ಪಾದಚಾರಿ ಮಾರ್ಗವನ್ನು ಒತ್ತುವರಿ ಮಾಡಿಕೊಂಡು ಕಟ್ಟಡ ನಿರ್ಮಾಣ ಮಾಡುತ್ತಿರುವುದನ್ನು ಗಮನಿಸಿ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ, ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಿ ಒತ್ತುವರಿ ಭಾಗವನ್ನು ಕೂಡಲೇ ತೆರವುಗೊಳಿಸಲು ಸೂಚಿಸಿದರು.
ಜಕ್ಕೂರು (ರೈತರ ಸಂತೆ) ರಸ್ತೆ:
ಜಕ್ಕೂರು(ರೈತರ ಸಂತೆ) ರಸ್ತೆಯಲ್ಲಿ ಬಹುತೇಕ ಎಲ್ಲಾ ಕಾಮಗಾರಿಗಳು ಮುಗಿದಿದ್ದು ಲೈನ್ ಮಾರ್ಕಿಂಗ್ ಕೈಗೊಳ್ಳುವಂತೆ ಸೂಚಿಸಿದರು. ಈಗಾಗಲೇ ಸದರಿ ರಸ್ತೆಯಲ್ಲಿ ಒಎಫ್ ಸಿ ಕೇಬಲ್ ಗಳಿಗಾಗಿ ಡಕ್ಟ್ ಗಳನ್ನು ಅಳವಡಿಸುವುದರಿಂದ ಏರಿಯಲ್ ಕೇಬಲ್ ಗಳನ್ನು ತೆರವುಗೊಳಿಸುವಂತೆ ಸೂಚಿಸಲಾಯಿತು. ಆ ಬಳಿಕ ಉಪಯುಕ್ತತಾ ಕೇಬಲ್ಗಳನ್ನು 15 ದಿನಗಳೊಳಗೆ ಯುಟಿಲಿಟಿ ಡಕ್ಟ್ಗಳಲ್ಲಿ ಅಳವಡಿಸುವಂತೆ ಹಾಗೂ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದ ಟಿಡಿಆರ್ ವಿಷಯದಲ್ಲಿ ಜಂಟಿ ಆಯುಕ್ತರೊಂದಿಗೆ ಸಮನ್ವಯ ಸಾಧಿಸುವಂತೆ ಸೂಚಿಸಿದರು.
ಅಲ್ಲಾಳಸಂದ್ರ ರಸ್ತೆ:
ಅಲ್ಲಾಳಸಂದ್ರದ ವೈಟ್ ಟಾಪಿಂಗ್ ಕಾಮಗಾರಿಯು ಪ್ರಗತಿಯಲ್ಲಿದ್ದು, ಎಕ್ಸ್ಕವೇಶನ್ ಕಾಮಗಾರಿಯ ವೇಳೆ ಕೇಬಲ್ ಗಳಿಗೆ ಹಾನಿಯಾಗುತ್ತಿದ್ದು ಉಪಯುಕ್ತತೆಗಳು ಹಾದು ಹೋಗುವಂತಹ ಕಡೆ ಯಂತ್ರಗಳ ಬದಲು ಮಾನವ ಸಂಪನ್ಮೂಲವನ್ನು ಬಳಸಿಕೊಂಡು ಮಣ್ಣು ಅಗೆಯುವಂತೆ ಸೂಚಿಸಿದರು ಹಾಗೂ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಎಲ್ & ಟಿ ರಸ್ತೆ:
ಎಲ್ & ಟಿ ರಸ್ತೆಯಲ್ಲಿ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಪಿಎಂಸಿ ಅಧಿಕಾರಿಗಳು ಜಂಟಿಯಾಗಿ ರಸ್ತೆ ಪರಿಶೀಲಿಸಲಾಗಿ ಹಳೆಯ ಕಾಂಕ್ರೀಟ್ ಇದ್ದ ಕಡೆ ಹೊಸದಾಗಿ ಕಾಂಕ್ರೀಟ್ ಅಳವಡಿಸಿರುವ ಭಾಗದಲ್ಲಿ ಜಾಯಿಂಟ್ ಹತ್ತಿರ ಫಿನೀಶಿಂಗ್ ಸರಿ ಇಲ್ಲದ ಕಾರಣ Epoxy Joint ಅನ್ನು ಬಳಸಿ ಸರಿಪಡಿಸುವಂತೆ ಸೂಚಿಸಿದರು.
ರಾಜೀವ್ ಗಾಂಧಿ ನಗರ ರೈಲ್ವೆ ಸಮಾನಾಂತರ ರಸ್ತೆ:
ರಾಜೀವ್ ಗಾಂಧಿ ನಗರ ರೈಲ್ವೆ ಸಮಾನಾಂತರ ರಸ್ತೆಯಲ್ಲಿ ಲಭ್ಯವಿರುವ ಖಾಲಿ ಸ್ಥಳಗಳಲ್ಲಿ ಡೆಬ್ರೀಸ್ ಸುರಿದಿದ್ದು, ಆಗಸ್ಟ್ 1ರಂದು ಹಮ್ಮಿಕೊಳ್ಳುತ್ತಿರುವ ತ್ಯಾಜ್ಯದಿಂದ ಸ್ವಾತಂತ್ರ್ಯ ಅಭಿಯಾನದಲ್ಲಿ ಸದರಿ ಸ್ಥಳಗಳನ್ನು ಸ್ವಚ್ಛಗೊಳಿಸುವಂತೆ ಸೂಚಿಸಿದರು.
ಖಾಲಿ ಸ್ಥಳಗಳಲ್ಲಿ “ನಮ್ಮ ಬೆಂಗಳೂರು” ಹಾಗೂ “I Love Bengaluru” ನಾಮ ಫಲಕಗಳನ್ನು ಅಳವಡಿಸುವಂತೆ ಸೂಚಿಸಿದರು. ಇದೇ ವೇಳೆ ಸಹಕಾರನಗರ 20ನೇ ಅಡ್ಡರಸ್ತೆಯಲ್ಲಿ ಪಾದಚಾರಿ ಮಾರ್ಗದಲ್ಲಿರುವ ಕುಸಿದ ಪೇವರ್ ಬ್ಲಾಕ್ಗಳನ್ನು ಮರು ಅಳವಡಿಸಿ ಸಾರ್ವಜನಿಕರಿಗೆ ಸುರಕ್ಷಿತ ಸಂಚಾರಕ್ಕೆ ಅನುಕೂಲ ಕಲ್ಪಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಕ್ಕೂರು ರೈಲ್ವೆ ಮೇಲ್ಸೇತುವೆ(ROB):
ಜಕ್ಕೂರು ರೈಲ್ವೆ ಮೇಲ್ಸೇತುವೆ ಕಾಮಗಾರಿ ಪರಿಶೀಲನೆ ವೇಳೆ, ಸೇತುವೆಯ ಹಾಗೂ ಇತರೆ ರಚನಾತ್ಮಕ ಭಾಗಗಳ ಮೇಲೆ ಅಗತ್ಯ ನಾನ್-ಡೆಸ್ಟ್ರಕ್ಟಿವ್ ಟೆಸ್ಟಿಂಗ್(NDT) ನಡೆಸುವಂತೆ ಸೂಚಿಸಿದರು. ಅಲ್ಲದೆ, ನಿರ್ಮಿಸಲಾಗಿರುವ ಕ್ರ್ಯಾಶ್ ಬ್ಯಾರಿಯರ್ ಕಾಮಗಾರಿಯು ಭಾರತೀಯ ರಸ್ತೆ ಕಾಂಗ್ರೆಸ್(IRC) ಮಾರ್ಗಸೂಚಿಗಳಿಗೆ ಅನುಗುಣವಾಗಿದೆಯೇ ಎಂಬುದನ್ನು ಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು ಹಾಗೂ ಯೋಜನಾ ಸಮಾಲೋಚಕರಿಂದ ವರದಿಯನ್ನು ಪಡೆಯುವಂತೆ ಸೂಚಿಸಿದರು.
ಮೇಲ್ಸೇತುವೆಯ Ramp ಗಳಲ್ಲಿ ಕೈಗೊಂಡಿರುವ ಡಾಂಬರೀಕರಣ ಕಾಮಗಾರಿಯ ಗುಣಮಟ್ಟವನ್ನು ಖಚಿತಪಡಿಸಿಕೊಳ್ಳಲು ಅಗತ್ಯ ಗುಣಮಟ್ಟ ಹಾಗೂ ಕಾಂಪ್ಯಾಕ್ಷನ್(Compaction) ಪರೀಕ್ಷೆಗಳನ್ನು ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವೇಳೆ ವೇಳೆ ವಿಶೇಷ ಆಯುಕ್ತರಾದ ನಿತೀಶ್, ಮುಖ್ಯ ಅಭಿಯಂತರರಾದ ಮಾದೇಶ್, ಕಾರ್ಯಪಾಲಕ ಅಭಿಯಂತರರು ಸೇರಿದಂತೆ ಪಿಎಂಸಿ ಪ್ರತಿನಿಧಿಗಳು ಹಾಗೂ ಗುತ್ತಿಗೆದಾರರು ಉಪಸ್ಥಿತರಿದ್ದರು.
