ಸಮಗ್ರ ಸುದ್ದಿ

ರಜಾದಿನವೂ ಬೆಸ್ಕಾಂನಿಂದ ಮುಂದುವರಿದ ಸ್ವಚ್ಛತಾ ಆಂದೋಲನ| ಶೇ. 80ರಷ್ಟು ತೆರವು, ಸ್ವಚ್ಛತಾ ಕಾರ್ಯ ಪೂರ್ಣ: ಬೆಸ್ಕಾಂ ಎಂಡಿ ಡಾ.ಎನ್.ಶಿವಶಂಕರ

Share

ಬೆಂಗಳೂರು: ಜನರಿಗೆ ಸುರಕ್ಷಿತ ನಡಿಗೆಯ ಗ್ಯಾರಂಟಿಯೊಂದಿಗೆ ಕ್ಲೀನ್ ಅಪ್ ಬೆಂಗಳೂರು ಅಭಿಯಾನಕ್ಕೆ ಕೈಜೋಡಿಸಿರುವ ಬೆಸ್ಕಾಂ, ಭಾನುವಾರ ಇಡೀ ದಿನ ನಗರದ ವಿವಿಧೆಡೆ ಪಾದಚಾರಿ ಮಾರ್ಗಗಳಲ್ಲಿ ಸ್ಥಗಿತಗೊಂಡ ಅಥವಾ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು ಸೇರಿದಂತೆ ಇತರೆ ಅನುಪಯುಕ್ತ ಪರಿಕರಗಳನ್ನು ತೆರವುಗೊಳಿಸುವುದರ ಜತೆಗೆ ಸ್ವಚ್ಛತೆಯ ಕಾರ್ಯವನ್ನೂ ನಡೆಸಿದೆ.

ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ. ಎನ್‌. ಶಿವಶಂಕರ ಅವರ ಮುಂದಾಳತ್ವದಲ್ಲಿ ನಗರದ ಪ್ರಮುಖ ರಸ್ತೆಗಳಲ್ಲಿ ಶನಿವಾರ ತಡರಾತ್ರಿಯೇ ಬೆಸ್ಕಾಂ ಸಿಬ್ಬಂದಿ ತೆರವು ಕಾರ್ಯಾಚರಣೆ ನಡೆಸಿದರು. ಭಾನುವಾರ ಬೆಳಗ್ಗೆ 6 ಗಂಟೆಯಿಂದ ಮತ್ತೆ ಮಲ್ಲೇಶ್ವರ, ರಾಜಾಜಿನಗರ, ಹೆಬ್ಬಾಳ,ರಾಜರಾಜೇಶ್ವರಿ ನಗರ, ಕೆಎಚ್ ಬಿ ಕಾಲೋನಿ ಮುಖ್ಯ ರಸ್ತೆ, ಕೋರಮಂಗಲ, ನಾಗವಾರ, ಬಂಗಾರಪ್ಪನಗರ ಮುಖ್ಯ ರಸ್ತೆ, ಥಣಿಸಂದ್ರ, ಕೊತ್ತನೂರು, ಸುಂಕದಕಟ್ಟೆ, ನಗರಬಾವಿ, ಕೊಮ್ಮಘಟ್ಟ ಮುಖ್ಯರಸ್ತೆ, ಉತ್ತರಹಳ್ಳಿ ಮುಖ್ಯರಸ್ತೆ, ಕತ್ರಿಗುಪ್ಪೆ, ವೈಟ್ ಫೀಲ್ಡ್, ಮಹದೇವಪುರ ಸೇರಿದಂತೆ ವಿವಿಧೆಡೆ ತೆರವು ಮತ್ತು ಸ್ವಚ್ಛತಾ ಆಂದೋಲನ ನಡೆಸಲಾಯಿತು.

ಜಿಒಎಸ್‌ ಜಿಒಎಸ್ ರಾಡ್ ಗಳನ್ನು ನೆಲಮಟ್ಟದಿಂದ ಏಳು ಅಡಿ ಎತ್ತರಿಸುವ ಕಾರ್ಯವನ್ನು ನಡೆಸಲಾಯಿತು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಘೋಷಿಸಿದ್ದ ಕ್ಲೀನ್ ಅಪ್ ಬೆಂಗಳೂರು ತಿಂಗಳ ಅಭಿಯಾನದ ಭಾಗವಾಗಿ ಇಂಧನ ಹಾಗೂ ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್ ಅವರು ಆಗಸ್ಟ್‌ 1ರಂದು ಅಭಿಯಾನಕ್ಕೆ ಚಾಲನೆ ನೀಡಿ, ಈ ಕಾರ್ಯವನ್ನು ಮುಂದುವರಿಸುವಂತೆ ಸೂಚಿಸಿದ್ದರು. ಅಂದರಂತೆ ಬೆಸ್ಕಾಂ ಅಧಿಕಾರಿಗಳು ಮತ್ತು ಸಿಬ್ಬಂದಿ ಆಂದೋಲನ ಮಾದರಿಯಲ್ಲಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ.

ತೆರವು ಮತ್ತು ಸ್ವಚ್ಛತಾ ಕಾರ್ಯ ಶೇ. 80ರಷ್ಟು ಪೂರ್ಣ:

ಭಾನುವಾರ ವಿವಿಧೆಡೆ ತೆರಳಿ ತೆರವು ಕಾರ್ಯ ವೀಕ್ಷಿಸಿದ ಬೆಸ್ಕಾಂ ವ್ವಸ್ಥಾಪಕ ನಿರ್ದೇಶಕರಾದ ಡಾ.ಎನ್.ಶಿವಶಂಕರ್ ಮಾತನಾಡಿ, “ಪಾದಚಾರಿ ಮಾರ್ಗಗಳಲ್ಲಿ ಸ್ಥಗಿತಗೊಂಡ ಅಥವಾ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು ಸೇರಿದಂತೆ ಇತರ ಪರಿಕರಗಳನ್ನು ತೆರವುಗೊಳಿಸುವ ಕಾರ್ಯವನ್ನು ಬೆಸ್ಕಾಂ ಮೂರು ತಿಂಗಳ ಹಿಂದೆಯೇ ಆರಂಭಿಸಿತ್ತು.

ಆಗಸ್ಟ್ ಒಂದರಿಂದ ಮುಖ್ಯಮಂತ್ರಿಗಳ ನೇತೃತ್ವ ಹಾಗೂ ಇಂಧನ ಸಚಿವರು ಮತ್ತು ಬೆಂಗಳೂರು ನಗರಾಭಿವೃದ್ಧಿ ಸಚಿವರ ಮಾರ್ಗದರ್ಶನದಲ್ಲಿ ಆಂದೋಲನ ರೂಪದಲ್ಲಿ ಈ ಕೆಲಸ ಮಾಡಲಾಗುತ್ತಿದೆ. ಪ್ರಸ್ತುತ ಸ್ಥಗಿತಗೊಂಡ ಅಥವಾ ಬಳಕೆಯಲ್ಲಿಲ್ಲದ ವಿದ್ಯುತ್ ಪರಿವರ್ತಕ ಕೇಂದ್ರಗಳು ಸೇರಿದಂತೆ ಇತರೆ ಅನುಪಯುಕ್ತ ಪರಿಕರಗಳನ್ನು ತೆರವುಗೊಳಿಸುವ ಕಾರ್ಯ ಶೇ. 80ರಷ್ಟು ಪೂರ್ಣಗೊಂಡಿದೆ. ಮುಂದಿನ ದಿನಗಳಲ್ಲಿ ನಮ್ಮ ಲೈನ್ ಮೆನ್ ಗಳು ಪ್ರತಿ ವಾರ ಅಥವಾ 15 ದಿನಕ್ಕೊಮ್ಮೆ ಪರಿವರ್ತಕದ ಸುತ್ತ ಸ್ವಚ್ಛಗೊಳಿಸುವ ಕಾರ್ಯ ನೆರವೇರಿಸಲಿದ್ದಾರೆ,” ಎಂದರು.

“ಆಗಸ್ಟ್ 1ರಿಂದ ಭಾನುವಾರದವರೆಗೆ (ಆ. 23ರವರೆಗೆ) ಬೆಸ್ಕಾಂ ಕೈಗೊಂಡ ಕ್ಲೀನ್-ಅಪ್ ಬೆಂಗಳೂರು ಅಭಿಯಾನದಲ್ಲಿ 1535 ವಿದ್ಯುತ್ ಕಂಬಗಳು, 6 ಟ್ರಾನ್ಸ್‌ಫಾರ್ಮರ್ ಕೇಂದ್ರಗಳು, 9 ಇತರೆ ಅನುಪಯುಕ್ತ ಮೂಲಸೌಕರ್ಯ ತೆರವುಗೊಳಿಸಲಾಗಿದ್ದು, 1758 ಜಿಎಸ್ ಆಪರೇಟಿಂಗ್ ರಾಡ್‌ಗಳ ಮಾರ್ಪಾಡು ಮಾಡಲಾಗಿದೆ. ಜತೆಗೆ 4836 ಡಿಟಿಸಿ ಯಾರ್ಡ್‌ಗಳು, 1368 ಆರ್‌ಎಂಯು ಯಾರ್ಡ್‌ಗಳು ಹಾಗೂ 1207 ಸ್ಪನ್ ಪೋಲ್/ಡಿಪಿ ಯಾರ್ಡ್‌ಗಳ ಸ್ವಚ್ಛತಾ ಕಾರ್ಯ ಕೈಗೊಳ್ಳಲಾಗಿದ್ದು, 151 ಫೀಡರ್ ಪಿಲ್ಲರ್ ಬಾಕ್ಸ್ ರಿವೈರಿಂಗ್ ಮತ್ತು ಯಾರ್ಡ್ ಸ್ವಚ್ಛತಾ ಕಾಮಗಾರಿಗಳು ಹಾಗೂ 401 ಕಂಬಗಳ ರಿವೈರಿಂಗ್ ಮತ್ತು ಯಾರ್ಡ್ ಸ್ವಚ್ಛತಾ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ,” ಎಂದು ಮಾಹಿತಿ ನೀಡಿದರು.

ಇಂಧನ ಮತ್ತು ಪ್ರವಾಸೋದ್ಯಮ ಸಚಿವ ಕೆ.ಜೆ.ಜಾರ್ಜ್, “ಸ್ವಚ್ಛ ಮತ್ತು ಸುರಕ್ಷಿತ ಬೆಂಗಳೂರಿನ ಪರಿಕಲ್ಪನೆಯನ್ನು ಸಾಕಾರಗೊಳಿಸುವಲ್ಲಿ ಜಿಬಿಎಗೆ ಬೆಸ್ಕಾಂ ಎಲ್ಲಾ ರೀತಿಯಲ್ಲಿ ಸಹಕಾರ ನೀಡುತ್ತಿದೆ. ಲೈನ್ ಮೆನ್ ಗಳು, ಅಧಿಕಾರಿಗಳು ಮತ್ತು ಸಿಬ್ಬಂದಿ ರಜಾ ದಿನವಾದರೂ ಅನುಪಯುಕ್ತ ಸಲಕಲರಣೆಗಳ ತೆರವು ಕಾರ್ಯ ಮತ್ತು ಸ್ವಚ್ಛತೆಯಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೀಯ,” ಎಂದು ಹೇಳಿದ್ದಾರೆ.


Share

You cannot copy content of this page