ಸಮಗ್ರ ಸುದ್ದಿ

ಮಾಧ್ಯಮದವರ ಸಮಸ್ಯೆಗಳಿಗೆ ಕಾನೂನು ಚೌಕಟ್ಟಿನಲ್ಲಿ ನೆರವು: ಸಿಎಂ ಡಿ.ಕೆ.ಶಿವಕುಮಾರ್| ಕ್ಯಾಮೆರಾ ಕಣ್ಣಲ್ಲಿ ದಾಖಲಾಗುವ ಚಿತ್ರ ಇತಿಹಾಸದ ಸಾಕ್ಷಿ

Share

ಬೆಂಗಳೂರು: ಒಂದು ಛಾಯಾಚಿತ್ರ ಕೇವಲ ಚಿತ್ರವಲ್ಲ; ಅದು ವ್ಯಕ್ತಿಯ ಬದುಕು, ಸಮಾಜದ ಬೆಳವಣಿಗೆ ಹಾಗೂ ಕಾಲಘಟ್ಟದ ಇತಿಹಾಸವನ್ನು ದಾಖಲಿಸುವ ಮಹತ್ವದ ಸಾಕ್ಷಿ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಬೆಂಗಳೂರಿನ ಚಿತ್ರಕಲಾ ಪರಿಷತ್ ನಲ್ಲಿ ಛಾಯಾಗ್ರಾಹಕರ ಸಂಘ ಬೆಂಗಳೂರು (ರಿ.) ವತಿಯಿಂದ ಆಯೋಜಿಸಿದ್ದ “ವಿಶ್ವ ಛಾಯಾಗ್ರಹಣ ದಿನ”ದ ಅಂಗವಾಗಿ ‘ಫ್ರೋಜನ್ ಮೆಮೊರೀಸ್’ – ಛಾಯಾಚಿತ್ರ ಪ್ರದರ್ಶನ ಕಾರ್ಯಕ್ರಮ ಕ್ಕೆ ಭೇಟಿ ನೀಡಿ ಮಾತನಾಡಿದ ಅವರು ,ಒಬ್ಬ ವ್ಯಕ್ತಿಯ ಇತಿಹಾಸವನ್ನು ದಾಖಲಿಸುವಲ್ಲಿ ಛಾಯಾಚಿತ್ರದ ಪಾತ್ರ ಅತ್ಯಂತ ಮಹತ್ವದ್ದು ಎಂದು ಹೇಳಿದರು.

“ನಿಮ್ಮದೊಂದು ಚಿತ್ರ ಒಂದು ವರ್ಷದ್ದಾಗಿರಬಹುದು, 50, 100 ವರ್ಷದ್ದಾಗಿರಬಹುದು ಅಥವಾ ಅದಕ್ಕಿಂತಲೂ ಹಳೆಯದಾಗಿರಬಹುದು. ಆದರೆ ಅದು ಒಬ್ಬ ವ್ಯಕ್ತಿಯ ಇತಿಹಾಸವನ್ನು ಬರೆಯುವಂತ ಸಾಕ್ಷಿಯಾಗುತ್ತದೆ. ಒಂದು ಚಿತ್ರ ಸಣ್ಣದು ಎಂದು ಭಾವಿಸಬಾರದು. ನಮ್ಮ ಬದುಕಿನಲ್ಲಿ ನಡೆದ ಘಟನೆಗಳಿಗೆ ಸಾಕ್ಷಿ ಏನು ಎಂಬುದನ್ನು ತೋರಿಸುವಲ್ಲಿ ಛಾಯಾಚಿತ್ರದ ಪಾತ್ರ ಬಹಳ ದೊಡ್ಡದು,” ಎಂದು ಅಭಿಪ್ರಾಯಪಟ್ಟರು

ಒಂದು ಚಿತ್ರ ನೂರಾರು ಅರ್ಥಗಳನ್ನು ನೀಡಬಲ್ಲದು. ಕಾಲ ಕಳೆದಂತೆ ಅದರ ಮೌಲ್ಯ ಮತ್ತಷ್ಟು ಹೆಚ್ಚಾಗುತ್ತದೆ. ಹೀಗಾಗಿ ಛಾಯಾಗ್ರಾಹಕರು ಸೆರೆಹಿಡಿಯುವ ಪ್ರತಿಯೊಂದು ದೃಶ್ಯವೂ ಭವಿಷ್ಯದ ಪೀಳಿಗೆಗೆ ದಾಖಲೆಯಾಗಬಹುದು ಎಂದು ಹೇಳಿದರು.

ಕಣ್ಣಾರೆ ಕಂಡದ್ದಕ್ಕೆ ಹೆಚ್ಚಿನ ನಂಬಿಕೆ

ಅಕ್ಬರ್– ಬೀರಬಲ್ ಕಥೆಯನ್ನು ಉದಾಹರಣೆಯಾಗಿ ನೀಡಿದ ಅವರು, ಅಕ್ಬರ್ ಅವರು “ಕಿವಿಗೂ ಕಣ್ಣಿಗೂ ಎಷ್ಟು ದೂರ?” ಎಂದು ಪ್ರಶ್ನಿಸಿದಾಗ ಬೀರಬಲ್ ಅವರು ನಾಲ್ಕು ಬೆರಳು ಎಂದು ಉತ್ತರಿಸುತ್ತಾನೆ. ಆದರೆ ಈ ನಾಲ್ಕು ಬೆರಳಿನ ಅಂತರ ಕೇವಲ ದೈಹಿಕ ಅಂತರವಲ್ಲ; ಕಿವಿಯಿಂದ ಕೇಳುವ ಸುದ್ದಿ ಮತ್ತು ಕಣ್ಣಿನಿಂದ ಕಾಣುವ ಸತ್ಯದ ನಡುವಿನ ವ್ಯತ್ಯಾಸದ ಸಂಕೇತವಾಗಿದೆ. ಮತ್ತು ಜನರು ಕಣ್ಣಾರೆ ಕಂಡ ದೃಶ್ಯಕ್ಕೆ ಹೆಚ್ಚಿನ ನಂಬಿಕೆ ನೀಡುತ್ತಾರೆ ಎಂದರು.

“ಕಿವಿಯಿಂದ ಕೇಳುವುದಕ್ಕಿಂತ ಕಣ್ಣಿನಿಂದ ನೋಡುವುದಕ್ಕೆ ಜನರು ಹೆಚ್ಚಿನ ನಂಬಿಕೆ ಇಡುತ್ತಾರೆ. ಮಾಧ್ಯಮದಲ್ಲೂ ಇದೇ ಕಾರಣಕ್ಕೆ ಚಿತ್ರಕ್ಕೆ ಬಹಳ ಮಹತ್ವವಿದೆ,” ಎಂದು ಹೇಳಿದರು.

ಪತ್ರಿಕೆಯಲ್ಲಿ ಎಷ್ಟೇ ಆಳವಾದ ವಾಸ್ತವಾಂಶಗಳನ್ನು ಪ್ರಕಟಿಸಿದರೂ, ಅದರೊಂದಿಗೆ ಸೂಕ್ತ ಚಿತ್ರವಿಲ್ಲದಿದ್ದರೆ ಓದುಗರ ಮೇಲೆ ಸುದ್ದಿಯ ಪರಿಣಾಮ ಕಡಿಮೆಯಾಗುತ್ತದೆ. ಇದೇ ಕಾರಣಕ್ಕೆ ದೃಶ್ಯ ಮಾಧ್ಯಮಗಳು ವೇಗವಾಗಿ ಬೆಳೆದಿವೆ ಎಂದರು.

ಟಿವಿ, ಸಾಮಾಜಿಕ ಮಾಧ್ಯಮದ ಬೆಳವಣಿಗೆಗೆ ಚಿತ್ರವೇ ಕಾರಣ

“ಯಾವುದೇ ಪತ್ರಿಕೆಯಾಗಿರಲಿ, ಎಷ್ಟೇ ಆಳವಾಗಿ ವಾಸ್ತವಾಂಶ ಬರೆದಿದ್ದರೂ ಅದರೊಂದಿಗೆ ಒಂದು ಚಿತ್ರ ಇಲ್ಲದಿದ್ದರೆ ಆ ಸುದ್ದಿಯ ಬೆಲೆ ಕಡಿಮೆಯಾಗುತ್ತದೆ. ಅದಕ್ಕಾಗಿಯೇ ಟಿವಿ ಮಾಧ್ಯಮ ಇಷ್ಟು ದೊಡ್ಡ ಮಟ್ಟದಲ್ಲಿ ಸ್ಪರ್ಧಾತ್ಮಕವಾಗಿ ಬೆಳೆದಿದೆ. ನಂತರ ಸಾಮಾಜಿಕ ಮಾಧ್ಯಮವೂ ವೇಗವಾಗಿ ಬೆಳೆಯಿತು. ಟಿವಿಯಲ್ಲಿ ಜನರು ಕಣ್ಣಾರೆ ನೋಡುವ ಚಿತ್ರಗಳನ್ನು ಹೆಚ್ಚು ನಂಬುತ್ತಾರೆ,” ಎಂದು ಹೇಳಿದರು.

ಮಾಧ್ಯಮ ಪ್ರತಿನಿಧಿಗಳ ಸಂಖ್ಯೆ ಕಡಿಮೆಯಿದ್ದರೂ ಅವರ ವ್ಯಾಪ್ತಿ ಅಪಾರವಾಗಿದೆ. ಸ್ಥಳೀಯವಾಗಿ ತೆಗೆದ ಒಂದು ಚಿತ್ರ ಕೆಲವೇ ಕ್ಷಣಗಳಲ್ಲಿ ರಾಜ್ಯದಾದ್ಯಂತ, ದೇಶದಾದ್ಯಂತ ಹಾಗೂ ಜಗತ್ತಿನಾದ್ಯಂತ ತಲುಪುವ ಸಾಮರ್ಥ್ಯ ಹೊಂದಿದೆ ಎಂದರು.

‘ನಿಮ್ಮ ಕ್ಯಾಮೆರಾದ ಮೇಲೆ ನಮಗೆ ನಂಬಿಕೆ ಇದೆ’

“ನೀವು ಇಲ್ಲಿ 40 ಜನ ಇರಬಹುದು, 100 ಜನ ಇರಬಹುದು ಅಥವಾ 4,000 ಜನ ಇರಬಹುದು. ಆದರೆ ನಿಮ್ಮ ಕ್ಯಾಮೆರಾದ ಮೂಲಕ ಹೊರಬರುವ ಚಿತ್ರಗಳನ್ನು ರಾಜ್ಯದ ಏಳು ಕೋಟಿ ಜನರು ನೋಡುತ್ತಾರೆ.

ನಿಮ್ಮ ಸಂದೇಶ ಮತ್ತು ಚಿತ್ರಗಳು ಇಡೀ ವಿಶ್ವವನ್ನೇ ತಲುಪುತ್ತವೆ. ಹೀಗಾಗಿ ನಿಮ್ಮ ಕ್ಯಾಮೆರಾದ ಮೇಲೆ ನಮಗೆ ನಂಬಿಕೆ ಇದೆ,” ಎಂದು ಹೇಳಿದರು.

ಅಪರೂಪದ ಚಿತ್ರಗಳಿಗೆ ಮೆಚ್ಚುಗೆ

ಮಾಧ್ಯಮ ಕ್ಷೇತ್ರದಲ್ಲಿ ಛಾಯಾಗ್ರಾಹಕರು ತೋರಿಸುವ ಸೃಜನಶೀಲತೆಯನ್ನು ಪ್ರಶಂಸಿಸಿದ ಅವರು, ಮಾಧ್ಯಮ ಲೋಕದಲ್ಲಿ ನೀವು ಶ್ರಮಪಟ್ಟು ತೆಗೆದಿರುವ ಹಲವು ವಿಭಿನ್ನ ಚಿತ್ರಗಳನ್ನು ನಾನು ನೋಡಿದ್ದೇನೆ. ಜೆಸಿಬಿ ಪಕ್ಕದಲ್ಲಿ ಚಿರತೆ ಕಾಣಿಸಿಕೊಂಡಿದ್ದ ಅಪರೂಪದ ಚಿತ್ರವೊಂದನ್ನು ನೋಡಿದ್ದೇನೆ. ಅಂತಹ ಚಿತ್ರವನ್ನು ಸಾಮಾನ್ಯವಾಗಿ ಯಾರೂ ಊಹಿಸಲೂ ಸಾಧ್ಯವಿಲ್ಲ. ಯಾವುದು ಮುಖ್ಯ, ಯಾವ ಕ್ಷಣವನ್ನು ಸೆರೆಹಿಡಿಯಬೇಕು ಎಂಬುದನ್ನು ಕ್ಷಣಾರ್ಧದಲ್ಲಿ ನಿರ್ಧರಿಸುವ ನಿಮ್ಮ ಸಾಮರ್ಥ್ಯ ಬಹಳ ಮುಖ್ಯ,” ಎಂದು ಹೇಳಿದರು.

ಒಂದು ಘಟನೆಯ ಸಾವಿರಾರು ದೃಶ್ಯಗಳ ನಡುವೆ ಸುದ್ದಿಗೆ ಅರ್ಥ ನೀಡುವ ಒಂದೇ ಒಂದು ಚಿತ್ರವನ್ನು ಆಯ್ಕೆ ಮಾಡುವುದು ಛಾಯಾಗ್ರಾಹಕರ ಸೃಜನಶೀಲತೆ ಹಾಗೂ ಅನುಭವದ ಪ್ರತೀಕ ಎಂದು ಹೇಳಿದರು.

ಮಾಧ್ಯಮದ ಬೇಡಿಕೆಗಳಿಗೆ ಸ್ಪಂದಿಸುವ ಭರವಸೆ

ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳು ಮುಂದಿಟ್ಟಿರುವ ಬೇಡಿಕೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ ಎಂದು ಮುಖ್ಯಮಂತ್ರಿ ಹೇಳಿದರು.

“ನಿಮ್ಮ ಬೇಡಿಕೆಗಳನ್ನು ಈಗಾಗಲೇ ವಿಧಾನ ಪರಿಷತ್ ಸದಸ್ಯ ದಿನೇಶ್ ಗೂಳಿಗೌಡ ತಿಳಿಸಿದ್ದಾರೆ. ನೀವು ಕೂಡ ನನ್ನನ್ನು ಭೇಟಿ ಮಾಡಿ ನಿಮ್ಮ ಸಮಸ್ಯೆಗಳನ್ನು ಹೇಳಿದ್ದೀರಿ.

ಪತ್ರಿಕೋದ್ಯಮ ಕ್ಷೇತ್ರದಲ್ಲಿರುವ ಎಲ್ಲರಿಗೂ ಒಂದೇ ರೀತಿಯಲ್ಲಿ ಯಾವ ರೀತಿಯಲ್ಲಿ ಸಹಾಯ ಮಾಡಬಹುದು ಎಂಬುದನ್ನು ನಾನು ಖಂಡಿತವಾಗಿ ಆಲೋಚಿಸುತ್ತೇನೆ,” ಎಂದರು.

“ನಿಮ್ಮ ಸಮಸ್ಯೆಗಳು ಏನು ಎಂಬುದು ನನಗೆ ಅರಿವಿದೆ. ಸಂಬಂಧಪಟ್ಟವರೊಂದಿಗೆ ಚರ್ಚಿಸಿ, ಕಾನೂನು ಚೌಕಟ್ಟಿನೊಳಗೆ ನಿಮಗೆ ಯಾವ ರೀತಿಯಲ್ಲಿ ನೆರವು ನೀಡಲು ಸಾಧ್ಯವೋ ಅದನ್ನು ಖಂಡಿತವಾಗಿ ಮಾಡುವ ಬಗ್ಗೆ ಪರಿಶೀಲಿಸುತ್ತೇನೆ,” ಎಂದು ಭರವಸೆ ನೀಡಿದರು.

ಪೊಲೀಸ್–ಮಾಧ್ಯಮ ಸಮನ್ವಯ ಅಗತ್ಯ

ಪ್ರತಿಭಟನೆಗಳು, ಸಾರ್ವಜನಿಕ ಕಾರ್ಯಕ್ರಮಗಳು ಹಾಗೂ ಸೂಕ್ಷ್ಮ ಸಂದರ್ಭಗಳಲ್ಲಿ ಛಾಯಾಗ್ರಾಹಕರು ಎದುರಿಸುವ ಸಮಸ್ಯೆಗಳ ಬಗ್ಗೆಯೂ ಮುಖ್ಯಮಂತ್ರಿ ಪ್ರಸ್ತಾಪಿಸಿದರು.

“ನಮ್ಮ ಪೊಲೀಸರು ಅವರ ಕರ್ತವ್ಯ ಮಾಡಬೇಕಾಗುತ್ತದೆ. ಅದನ್ನು ತಪ್ಪು ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮಾಧ್ಯಮದವರು ಕೂಡ ತಮ್ಮ ಕರ್ತವ್ಯ ನಿರ್ವಹಿಸುತ್ತಿರುತ್ತಾರೆ. ಕೆಲವೊಮ್ಮೆ ಪೊಲೀಸರು ಹಿಂದೆ ಸರಿಯುವಂತೆ ಮಾಡಿದಾಗ ಛಾಯಾಗ್ರಾಹಕರು ಬಿದ್ದು ಗಾಯಗೊಳ್ಳುವ, ಕೈ–ಕಾಲಿಗೆ ತೊಂದರೆಯಾಗುವ ಹಾಗೂ ಕ್ಯಾಮೆರಾಗಳು ಹಾನಿಗೊಳಗಾಗುವ ಸಂದರ್ಭಗಳಿವೆ,” ಎಂದು ಹೇಳಿದರು.

ಪೊಲೀಸರ ಕರ್ತವ್ಯ ಮತ್ತು ಮಾಧ್ಯಮದ ಕರ್ತವ್ಯ ಎರಡನ್ನೂ ಗೌರವಿಸುವ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಶಿಸ್ತಿನ ಹಾಗೂ ಸಮನ್ವಯದ ವ್ಯವಸ್ಥೆ ರೂಪಿಸಬೇಕಾಗಿದೆ ಎಂದು ಮುಖ್ಯಮಂತ್ರಿ ಅಭಿಪ್ರಾಯಪಟ್ಟರು.

ಪ್ರತಿಭಟನೆ ಸಂದರ್ಭದಲ್ಲಿ ಬ್ಯಾರಿಕೇಡ್‌ಗಳ ಬಳಿ ಅಥವಾ ಅಪಾಯಕಾರಿ ಸ್ಥಳಗಳಲ್ಲಿ ನಿಂತು ಚಿತ್ರ ತೆಗೆಯುವಾಗ ಛಾಯಾಗ್ರಾಹಕರು ಸುರಕ್ಷತೆಯ ಬಗ್ಗೆ ಎಚ್ಚರಿಕೆ ವಹಿಸಬೇಕು. ಅದೇ ವೇಳೆ ಅವರ ಕರ್ತವ್ಯ ನಿರ್ವಹಣೆಗೆ ಅಗತ್ಯ ಅವಕಾಶ ಕಲ್ಪಿಸುವ ಜವಾಬ್ದಾರಿಯೂ ಸಂಬಂಧಪಟ್ಟವರ ಮೇಲಿದೆ ಎಂದರು.

ನಾಲ್ಕು ದಶಕಗಳ ಹಿಂದಿನ ಚಿತ್ರಕ್ಕೂ ಬೆಲೆ

ತಮ್ಮ ಕಾಲೇಜು ದಿನಗಳ ಸುಮಾರು 40–45 ವರ್ಷಗಳ ಹಿಂದಿನ ಚಿತ್ರವೊಂದನ್ನು ಹುಡುಕುತ್ತಿರುವುದಾಗಿ ಮುಖ್ಯಮಂತ್ರಿ ಹೇಳಿದರು.

“1981ರ ಸಮಯದಲ್ಲಿ ನಾನು ಕಾಲೇಜಿನಲ್ಲಿ ಇದ್ದಾಗ ನಡೆದ ಯಾವುದೋ ಒಂದು ಸಂದರ್ಭದ ಚಿತ್ರವನ್ನು ಈಗ ಹುಡುಕುತ್ತಿದ್ದೇನೆ. ನಾಲ್ಕು ದಶಕಗಳ ಹಿಂದಿನ ಒಂದು ಚಿತ್ರ ಇಂದು ಸಿಕ್ಕರೂ ಅದು ನನಗೆ ಬಹಳ ಅಮೂಲ್ಯ. ಏಕೆಂದರೆ ಒಂದೊಂದು ಚಿತ್ರಕ್ಕೂ ಬಹಳ ಅರ್ಥಗರ್ಭಿತವಾದ ಬೆಲೆ ಇರುತ್ತದೆ,” ಎಂದರು.

ಮೊಬೈಲ್‌ ತಂತ್ರಜ್ಞಾನದಿಂದ ವೃತ್ತಿಪರ ಛಾಯಾಗ್ರಹಣಕ್ಕೆ ಸವಾಲು

ಮೊಬೈಲ್‌ ಫೋನ್‌ಗಳಲ್ಲೇ ಅತ್ಯಾಧುನಿಕ ಕ್ಯಾಮೆರಾಗಳು ಲಭ್ಯವಾಗುತ್ತಿರುವುದರಿಂದ ವೃತ್ತಿಪರ ಛಾಯಾಗ್ರಾಹಕರಿಗೆ ಸ್ಪರ್ಧೆ ಹೆಚ್ಚಾಗಿದೆ ಎಂದು ಹೇಳಿದರು.

“ಮೊಬೈಲ್‌ ಫೋನ್‌ಗಳು ಬಂದ ನಂತರ ಮಾರುಕಟ್ಟೆಯಲ್ಲಿ ಬಹಳ ಬದಲಾವಣೆಯಾಗಿದೆ. ₹10 ಸಾವಿರದಿಂದ ₹1 ಲಕ್ಷದವರೆಗಿನ ಫೋನ್‌ಗಳಲ್ಲೇ ಉತ್ತಮ ಗುಣಮಟ್ಟದ ಕ್ಯಾಮೆರಾಗಳಿವೆ. ಫೋಟೊ ತೆಗೆದು, ಅಲ್ಲಿಯೇ ಟೈಪ್ ಮಾಡಿ, ಸಂದೇಶ ಕಳುಹಿಸಿ, ಚಿತ್ರವನ್ನೂ ತಕ್ಷಣ ಕಳುಹಿಸಬಹುದು. ತಂತ್ರಜ್ಞಾನ ಬಹಳ ವೇಗವಾಗಿ ಬೆಳೆಯುತ್ತಿದೆ,” ಎಂದರು.

ಆದರೆ ತಂತ್ರಜ್ಞಾನ ಎಷ್ಟೇ ಮುಂದುವರಿದರೂ ವೃತ್ತಿಪರ ಛಾಯಾಗ್ರಾಹಕರ ಅನುಭವ, ಸೃಜನಶೀಲತೆ ಮತ್ತು ಸುದ್ದಿಯ ಮಹತ್ವವನ್ನು ಗುರುತಿಸುವ ಸಾಮರ್ಥ್ಯಕ್ಕೆ ಪರ್ಯಾಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

ಎಐ ಬಂದ ಬಳಿಕ ನಿಜ–ನಕಲಿ ಚಿತ್ರ ಪತ್ತೆ ಸವಾಲು

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನೈಜ ಹಾಗೂ ಕೃತಕವಾಗಿ ಸೃಷ್ಟಿಸಲಾದ ಚಿತ್ರಗಳ ನಡುವಿನ ವ್ಯತ್ಯಾಸ ಗುರುತಿಸುವುದು ದೊಡ್ಡ ಸವಾಲಾಗಲಿದೆ ಎಂದು ಹೇಳಿದರು.

“ಒಂದು ಚಿತ್ರವನ್ನು ಬದಲಿಸಿ ಮತ್ತೊಂದು ರೀತಿಯಲ್ಲಿ ಸೃಷ್ಟಿಸುವುದು ಈಗ ಸಾಧ್ಯವಾಗಿದೆ. ನಿಜವಾದ ಚಿತ್ರ ಯಾವುದು, ಕೃತಕವಾಗಿ ಸೃಷ್ಟಿಸಿದ ಚಿತ್ರ ಯಾವುದು ಎಂಬುದನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಮುಂದಿನ ದಿನಗಳಲ್ಲಿ ಪ್ರಕರಣಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಗಳಿಗೆ ಕಳುಹಿಸಿ ನಿಜ ಯಾವುದು, ಸುಳ್ಳು ಯಾವುದು ಎಂಬುದನ್ನು ಪತ್ತೆಹಚ್ಚಬೇಕಾದ ಪರಿಸ್ಥಿತಿ ಬರಬಹುದು,” ಎಂದರು.

ತಂತ್ರಜ್ಞಾನದಿಂದ ಸವಾಲುಗಳು ಹೆಚ್ಚಾದರೂ ನಂಬಿಕೆಗೆ ಅರ್ಹವಾದ ಪತ್ರಿಕೋದ್ಯಮ ಮತ್ತು ವೃತ್ತಿಪರ ಛಾಯಾಗ್ರಹಣದ ಮಹತ್ವ ಎಂದಿಗೂ ಕಡಿಮೆಯಾಗುವುದಿಲ್ಲ ಎಂದು ಹೇಳಿದರು.

‘ಮಾಧ್ಯಮ ರಾಜಕೀಯದ ಸಮಾನಾಂತರ ಶಕ್ತಿ’

ಮಾಧ್ಯಮವು ರಾಜಕೀಯ ವ್ಯವಸ್ಥೆಯ ಸಮಾನಾಂತರ ಶಕ್ತಿಯಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು.

“ನಾನು ಮುಖ್ಯಮಂತ್ರಿ ಆಗಿರುವುದು ಮುಖ್ಯವಲ್ಲ. ರಾಜಕೀಯದಲ್ಲಿ ಪ್ರತಿಯೊಬ್ಬರ ಬದುಕಿನಲ್ಲೂ ನೀವು ಸಮಾನಾಂತರವಾಗಿ ಬೆಂಬಲವಾಗಿ ನಿಂತಿದ್ದೀರಿ. ಜನರನ್ನು ಬೆಳೆಸಿದ್ದೀರಿ, ನಾಯಕರನ್ನು ಬೆಳೆಸಿದ್ದೀರಿ. ಸಮಾಜದಲ್ಲಿ ನಡೆಯುವ ಘಟನೆಗಳನ್ನು ದಾಖಲಿಸುವ ಮೂಲಕ ಇತಿಹಾಸವನ್ನು ಕಟ್ಟಿಕೊಟ್ಟಿದ್ದೀರಿ,” ಎಂದರು..

ಮಾಧ್ಯಮ ಕ್ಷೇತ್ರದ ಪ್ರತಿನಿಧಿಗಳ ಶ್ರಮ, ಸೇವೆ ಮತ್ತು ಸೃಜನಶೀಲತೆಯನ್ನು ಅಭಿನಂದಿಸಿದ ಮುಖ್ಯಮಂತ್ರಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದರು.

“ನೀವು ಉತ್ತಮ ಕೆಲಸ ಮಾಡುತ್ತಿದ್ದೀರಿ. ನಿಮಗೆ ಒಳ್ಳೆಯದಾಗಬೇಕು, ನಿಮ್ಮ ಕಾರ್ಯಕ್ಕೆ ಪ್ರೋತ್ಸಾಹ ನೀಡಲಾಗುತ್ತದೆ ಎಂದರು.


Share

You cannot copy content of this page