ಬೆಂಗಳೂರು: ʼಮಾಜಿ ಮುಖ್ಯಮಂತ್ರಿ ದಿ.ರಾಮಕೃಷ್ಣ ಹೆಗಡೆ ಅವರು ಪ್ರಮುಖ ಆರೋಪಗಳು ಕೇಳಿಬಂದಾಗ ಸ್ವತಃ ತನಿಖೆಗೆ ಆದೇಶಿಸಿ ರಾಜೀನಾಮೆ ನೀಡಿದಂತಹ ಮೌಲ್ಯಾಧಾರಿತ ರಾಜಕಾರಣಿ. ʼಅಧಿಕಾರಕ್ಕಿಂತ ನೈತಿಕತೆಯೇ ಮುಖ್ಯʼ ಎಂಬುದಕ್ಕೆ ನಿದರ್ಶನವಾಗಿದ ಮುತ್ಸದ್ದಿ ರಾಜಕಾರಣಿ ಇಂದಿನ ತಲೆಮಾರಿನವರಿಗೆ ದಾರಿದೀಪವಾಗಿದ್ದಾರೆʼ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಪ್ರತಿಪಾದಿಸಿದರು.
ಬೆಂಗಳೂರಿನ ವಿಧಾನಸೌಧ ಬ್ಯಾಂಕ್ವೆಟ್ ಹಾಲ್‌ನಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ಮಾತನಾಡಿ, ʼರಾಜಕಾರಣ ಎಂದರೆ ಕೇವಲ ಅಧಿಕಾರವಲ್ಲ, ಅದೊಂದು ನಿಷ್ಠೆಯ ಪಯಣʼ ಎಂಬ ನೈತಿಕ ಪಾಠ ಹೇಳಿದಂತಹ ರಾಜಕೀಯ ಗುರುವೂ ಆಗಿದ್ದಾರೆ ಎಂದು ಬಣ್ಣಿಸಿದರು.
ಬರೀ ರಾಜಕೀಯ ಮಾತ್ರವಲ್ಲ, ಸಾಹಿತ್ಯ, ಕಲೆ, ರಂಗಭೂಮಿಯಲ್ಲೂ ಆಸಕ್ತಿ ತೋರಿದ್ದಂತಹ ರಾಮಕೃಷ್ಣ ಅವರು ಸಾಮಾಜಿಕ ಕಳಕಳಿ, ಬಡವರ ಏಳಿಗೆಗೆ ಪರಿಶ್ರಮ, ಯುವ ನಾಯಕತ್ವಕ್ಕೆ ಬೆಳೆಸಿದಂತಹ ಅಪರೂಪದ ರಾಜಕಾರಣಿಗಳಲ್ಲಿ ಒಬ್ಬರು. ಅಸ್ಪೃಶ್ಯತೆ ನಿರ್ಮೂಲನೆಗೆ ಕಟಿಬದ್ಧತೆ ತೋರಿದಂತಹ ಧೀಮಂತ ರಾಜಕಾರಣಿ ಆಗಿದ್ದರೆಂದು ಜೋಶಿ ಸ್ಮರಿಸಿದರು.
ರಾಮಕೃಷ್ಣ ಹೆಗಡೆ ಅವರನ್ನು ಆಡಳಿತ-ಅಧಿಕಾರಾವಧಿಯಲ್ಲಿ ಎಂದಿಗೂ ಪ್ರಾಮಾಣಿಕತೆಯ ದಾರಿಯಲ್ಲಿ ನಡೆದಂತಹ ಒಬ್ಬ ಮುತ್ಸದ್ದಿ ರಾಜಕಾರಣಿ ಎಂದೇ ಹೇಳಬಹುದು. ತತ್ವ, ಸಿದ್ಧಾಂತ ಮತ್ತು ಮೌಲ್ಯಾಧಾರಿತ ರಾಜಕಾರಣಕ್ಕೆ ಎಂದಿಗೂ ಧಕ್ಕೆ ತರದ ಅವರ ನಾಯಕತ್ವ, ಆದರ್ಶಗಳು ನಮಗೆಲ್ಲರಿಗೂ ಸದಾ ಮಾರ್ಗದರ್ಶಿ ಎಂದು ಅಭಿಪ್ರಾಯಿಸಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ, ಜಗನ್ನಾಥರಾವ್ ಜೋಶಿ ಹಾಗೂ ರಾಮಕೃಷ್ಣ ಹೆಗಡೆ ಅವರಂತಹ ಮೇರು ವ್ಯಕ್ತಿತ್ವದ ನಾಯಕರ ಭಾಷಣಗಳನ್ನು ವಿದ್ಯಾರ್ಥಿ ದಿಸೆಯಿಂದಲೇ ಕೇಳಿ ಪ್ರೇರಿತನಾಗಿದ್ದೆ ಎಂದ ಸಚಿವರು, ಇವರೆಲ್ಲರೂ ರಾಜಕೀಯ ಸಿದ್ಧಾಂತಗಳು ಭಿನ್ನ ವಿಭಿನ್ನವಾಗಿದ್ದರೂ ಮಾತುಗಾರಿಕೆ ಮತ್ತು ವ್ಯಕ್ತಿತ್ವ ಸರ್ವರಿಗೂ ಮಾದರಿಯಾಗಿದೆ ಎಂದು ಪ್ರತಿಪಾದಿಸಿದರು.
ಕರ್ನಾಟಕ ಕಂಡ ಅತ್ಯಂತ ಧೀಮಂತ, ಮೌಲ್ಯಾಧಾರಿತ ಹಾಗೂ ಜನಪ್ರಿಯ ರಾಜಕಾರಣಿ ರಾಮಕೃಷ್ಣ ಹೆಗಡೆ ಅವರು ರಾಜ್ಯಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ. ರಾಜಕೀಯ ಕ್ಷೇತ್ರದಲ್ಲಿ ಹೊಸ ಆಡಳಿತಾತ್ಮಕ ಮೌಲ್ಯಗಳು ಹಾಗೂ ಪಂಚಾಯತ್ ರಾಜ್ ವ್ಯವಸ್ಥೆಗೆ ಬಲ ತುಂಬುವ ಮೂಲಕ ಅವರು ನಾಡಿನ ವಿಕಾಸಕ್ಕೆ ಶ್ರಮಿಸಿದ ರೀತಿ ಇಂದಿನ ಯುವ ನಾಯಕರಿಗೆ ಸ್ಫೂರ್ತಿದಾಯಕವಾಗಿದೆ ಎಂದರು.
ರಾಮಕೃಷ್ಣ ಹೆಗಡೆ ಅವರ ಜನ್ಮ ಶತಮಾನೋತ್ಸವ ಸಮಾರಂಭವನ್ನು ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಉದ್ಘಾಟಿಸಿದರು. ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಉಪರಾಷ್ಟ್ರಪತಿ ವೆಂಕಯ್ಯನಾಯ್ಡು, ಮಾಜಿ ಸಿಎಂ ಸಿದ್ದರಾಮಯ್ಯ, ಸಚಿವರಾದ ಬಸವರಾಜ ರಾಯರೆಡ್ಡಿ, ರಾಮಕೃಷ್ಣ ಹೆಗಡೆ ಜನ್ಮ ಶತಮಾನೋತ್ಸವ ಸಮಿತಿ ಅಧ್ಯಕ್ಷ ಆರ್.ವಿ.ದೇಶಪಾಂಡೆ, ಬಿ.ಎಲ್.ಶಂಕರ್ ಸೇರಿದಂತೆ ಹಲವು ಸಚಿವರು, ಶಾಸಕರು ಹಾಗೂ ಗಣ್ಯರು ಉಪಸ್ಥಿತರಿದ್ದರು.
