ಬೆಂಗಳೂರು: ಕೆರೆಗಳು ಗ್ರಾಮೀಣ ಪ್ರದೇಶದ ಜನರ ಜೀವನಾಡಿಯಾಗಿದ್ದು, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿರುವ ಕೆರೆಗಳ ಒತ್ತುವರಿ ತೆರವಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಮುಂದಾಗಿದ್ದಾರೆ.
ಈ ಸಂಬಂಧ ಇಲಾಖೆಯ ಕಾರ್ಯದರ್ಶಿಯವರಿಗೆ ಲಿಖಿತ ಸೂಚನೆ ನೀಡಿರುವ ಅವರು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವ್ಯಾಪ್ತಿಯಲ್ಲಿರುವ ಮತ್ತು ಇಲಾಖೆಯ ನಿರ್ವಹಣೆಯಲ್ಲಿರುವ ಕೆರೆಗಳ ಸಂಖ್ಯೆ ಮತ್ತು ಯಾವ ಯಾವ ಕೆರೆಗಳ ಎಷ್ಟು ಪ್ರದೇಶ ಒತ್ತುವರಿಯಾಗಿದೆ, ಈ ಒತ್ತುವರಿ ತೆರವಿಗೆ ಕೈಗೊಂಡಿರುವ ಕ್ರಮಗಳೇನು ಎಂಬ ಸಂಪೂರ್ಣ ಮಾಹಿತಿಯನ್ನು 10 ದಿನಗಳ ಒಳಗಾಗಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ಮುಂದಿನ 30 ವರ್ಷಗಳಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹೆಚ್ಚಳವಾಗುವ ಜನಸಂಖ್ಯೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಮೇಲ್ಮೈ ನೀರಿನಿಂದ ಶುದ್ಧ ಕುಡಿಯುವ ನೀರು ಪೂರೈಕೆಗೆ ಸರ್ಕಾರ ಯೋಜನೆ ರೂಪಿಸಿದ್ದು, ಈ ನಿಟ್ಟಿನಲ್ಲಿ ಪ್ರಮುಖ ಸಿಹಿ ನೀರಿನ ಮೂಲಗಳಾದ ಕೆರೆ, ಸರೋವರಗಳ ಸಂರಕ್ಷಣೆ ಅತ್ಯಗತ್ಯ ಮತ್ತು ಅನಿವಾರ್ಯವಾಗಿದೆ ಎಂದು ಪತ್ರದಲ್ಲಿ ಈಶ್ವರ ಖಂಡ್ರೆ ತಿಳಿಸಿದ್ದಾರೆ.
ನಾಗರಿಕತೆಯ ವಿಕಾಸದಲ್ಲಿ ಕೆರೆಗಳು ಮಹತ್ವದ ಪಾತ್ರ ವಹಿಸುತ್ತಿದ್ದು, ಭೂಮಿಯ ಮೇಲಿರುವ ಸಿಹಿ ನೀರಿನ ಮೂಲವಾದ ಕೆರೆ ಮತ್ತು ಸರೋವರಗಳ ರಕ್ಷಣೆ, ಸುಸ್ಥಿರ ನಿರ್ವಹಣೆ ಹಾಗೂ ಪರಿಸರ ವ್ಯವಸ್ಥೆಯಲ್ಲಿ ಅವುಗಳ ಪಾತ್ರದ ಕುರಿತು ಜಾಗತಿಕವಾಗಿ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿ ವರ್ಷ ಆಗಸ್ಟ್ 27 ರಂದು ಆಚರಿಸಲಾಗುವ ವಿಶ್ವ ಕೆರೆ ದಿನದಂದು ಸಚಿವರು ಈ ಸೂಚನೆ ನೀಡಿದ್ದಾರೆ.
