ಸಮಗ್ರ ಸುದ್ದಿ

ಮೈಸೂರಿನಲ್ಲಿ ಹೊಸ ಬಡಾವಣೆ ನಿರ್ಮಾಣ| 300 ಎಕರೆ ಭೂಮಿ ಮೀಸಲು – ಸಚಿವ ಬೈರತಿ ಸುರೇಶ್

Share

ಬೆಳಗಾವಿ, ಸುವರ್ಣವಿಧಾನಸೌಧ: ಅರಮನೆ ನಗರಿ ಮೈಸೂರಿನಲ್ಲಿ 300 ಎಕರೆ ಪ್ರದೇಶದಲ್ಲಿ ನೂತನ ಬಡಾವಣೆ ನಿರ್ಮಾಣ ಮಾಡಲಾಗುತ್ತದೆ ಎಂದು ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬೈರತಿ ಸುರೇಶ್ ತಿಳಿಸಿದ್ದಾರೆ.

ವಿಧಾನಪರಿಷತ್ತಿನಲ್ಲಿಂದು ಸದಸ್ಯ ಕೆ.ಶಿವಕುಮಾರ್ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಸಮಗ್ರ ಮೈಸೂರು ಅಭಿವೃದ್ಧಿಗೆ ನೀಲನಕ್ಷೆಯನ್ನು ಸಿದ್ಧಪಡಿಸಲಾಗುತ್ತಿದ್ದು, ಸುಸಜ್ಜಿತವಾಗಿ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ನಗರಾಭಿವೃದ್ಧಿ ಪ್ರಾಧಿಕಾರಗಳಿಂದ ಬಳ್ಳಾರಿಯ 100 ಎಕರೆ, ಬೀದರ್ ನಲ್ಲಿ 132 ಎಕರೆ, ಬೆಳಗಾವಿಯಲ್ಲಿ 130 ಎಕರೆ, ಚಾಮರಾಜನಗರದಲ್ಲಿ 14 ಎಕರೆ, ಚಿಕ್ಕಮಗಳೂರಿನಲ್ಲಿ 208 ಎಕರೆ, ಗದಗ-ಬೆಟಗೇರಿಯಲ್ಲಿ 18 ಎಕರೆ ಹಾಗೂ ಹಾಸನದಲ್ಲಿ 1142 ಎಕರೆ ಪ್ರದೇಶಗಳಲ್ಲಿ ಸುಸಜ್ಜಿತವಾದ ನೂತನ ಬಡಾವಣೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದು ಅವರು ಸದನಕ್ಕೆ ಮಾಹಿತಿ ನೀಡಿದರು.

ಪಾರದರ್ಶಕವಾಗಿ ನಿವೇಶನ ಹಂಚಿಕೆ
ವಿವಿಧ ನಗರಗಳಲ್ಲಿ ನಾಗರಿಕರಿಗೆ ನಿವೇಶನ ಹಂಚಿಕೆಯಲ್ಲಿ ನಿಗದಿತ ಮೀಸಲಾತಿಯನ್ನು ಪಾಲಿಸಲಾಗುತ್ತಿದ್ದು, ಸಂಪೂರ್ಣವಾಗಿ ಪಾರದರ್ಶಕತೆಯನ್ನು ಕಾಪಾಡಲಾಗುತ್ತಿದೆ ಎಂದು ಸಚಿವರು ತಿಳಿಸಿದರು.

ಮೈಸೂರಿನ ರಾಯನಕೆರೆ, ವರುಣಕೆರೆ ಸೇರಿದಂತೆ ಮತ್ತಿತರ ಕೆರೆಗಳ ಅಭಿವೃದ್ಧಿಯನ್ನು ಮಾಡಲಾಗುತ್ತಿದೆ. ಸ್ವಚ್ಛ ಭಾರತ್ ಅಭಿಯಾನದಡಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದೂ ಅವರು ಹೇಳಿದರು.

ನದಿ ಮೂಲ ರಕ್ಷಿಸಿ ಬಡಾವಣೆಗಳ ಅಭಿವೃದ್ಧಿ
ರಾಜ್ಯದ ಎಲ್ಲಾ ನಗರಗಳಲ್ಲಿ ನದಿ ಮೂಲಗಳು ಕಲುಷಿತಗೊಳ್ಳದಂತೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ನಿಗದಿಪಡಿಸಿರುವ ಅಗತ್ಯ ಬಫರ್ ಅನ್ನು ಕಾಯ್ದಿರಿಸಿ ಬಡಾವಣೆಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ತಿಳಿಸಿದರು.

10 ಎಕರೆಗೂ ಮೇಲ್ಪಟ್ಟ ಬಡಾವಣೆಗಳನ್ನು ಅಭಿವೃದ್ಧಿಪಡಿಸುವಾಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಎಸ್.ಟಿ.ಪಿ ಯನ್ನು ಕಡ್ಡಾಯವಾಗಿ ಅಳವಡಿಸುವ ನಿಬಂಧನೆಯಿದ್ದು, ಅದರಂತೆ 10 ಎಕರೆಗಿಂತ ಮೇಲ್ಪಟ್ಟ ಎಲ್ಲಾ ಬಡಾವಣೆಗಳಲ್ಲಿ ಎಸ್.ಟಿ.ಪಿ ಸ್ಥಳಗಳನ್ನು ಗುರುತಿಸಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮಾರ್ಗಸೂಚಿಗಳಿಗೆ ಅನುಗುಣವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.


Share

You cannot copy content of this page