ಸಮಗ್ರ ಸುದ್ದಿ

ಜಾಮರ್ ನಿಂದ ಆಗುತ್ತಿರುವ ನೆಟ್ ವರ್ಕ್ ಸಮಸ್ಯೆಗೆ ಶೀಘ್ರವೇ ಪರಿಹಾರ – ಗೃಹ ಸಚಿವ ಜಿ. ಪರಮೇಶ್ವರ್

Share

ಬೆಳಗಾವಿ, ಸುವರ್ಣ ವಿಧಾನಸೌಧ : ಬೆಂಗಳೂರಿನಲ್ಲಿರುವ ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿನ ಖೈದಿಗಳು ಮೊಬೈಲ್ ಪೋನ್ ಗಳನ್ನು ಬಳಸುವುದನ್ನು ತಪ್ಪಿಸಲು ಜಾಮರ್ ಗಳನ್ನು ಅಳವಡಿಸಿರುವುದರಿಂದ ಸುತ್ತಮುತ್ತಲಿನ ಪ್ರದೇಶಗಳ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆಯನ್ನು ಆದಷ್ಟು ಬೇಗ ಪರಿಹಾರ ನೀಡಲು ಕ್ರಮ ವಹಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್ ಅವರು ತಿಳಿಸಿದರು.

ವಿಧಾನಸಭೆಯಲ್ಲಿಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕರಾದ ಎಂ. ಕೃಷ್ಣಪ್ಪ ಅವರ ಸರ್ಕಾರದ ಗಮನ ಸೆಳಯುವ ಸೂಚನೆಗೆ ಉತ್ತರಿಸಿದ ಗೃಹ ಸಚಿವರು ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿನ ಖೈದಿಗಳು ಮೊಬೈಲ್ ಪೋನ್ ಗಳನ್ನು ಬಳಸುವುದನ್ನು ತಪ್ಪಿಸಲು ಕಾರಾಗೃಹದಲ್ಲಿ 19 ಜಾಮರ್ ಗಳನ್ನು ಅಳವಡಿಸಲಾಗಿದೆ. ಇದರಿಂದ ಸುತ್ತ ಮುತ್ತಲಿನ ಪ್ರದೇಶಗಳ ಸಾರ್ವಜನಿಕರಿಗೆ ತೊಂದರೆಯಾಗಿದ್ದು, ಪೋನ್ ಗಳಿಗೆ ನೆಟ್ ವರ್ಕ್ ಸಿಗುತ್ತಿಲ್ಲ ಎಂದು ಹೇಳಿದರು.

ಇದೇ ರೀತಿ ಮಂಗಳೂರಿನ ಕಾರಾಗೃಹದ ಸುತ್ತಮುತ್ತಲಿನ ಪ್ರದೇಶಗಳ ಜನರಿಗೆ ತೊಂದರೆಯಾಗುತ್ತಿರುವುದು ಸಹ ಗಮನಕ್ಕೆ ಬಂದಿದೆ. ಎಲ್ಲರಿಗೂ ಮೊಬೈಲ್ ಅನಿವಾರ್ಯವಾಗಿರುವುದರಿಂದ, ಜಾಮರ್ ಗಳಿಂದ ಸುತ್ತಮುತ್ತಲಿನ ಪ್ರದೇಶದ ಜನರಿಗೆ ತೊಂದರೆಯಾಗದಂತೆ ಯಾವ ರೀತಿಯ ಕ್ರಮ ವಹಿಸಬೇಕು ಎಂಬ ಬಗ್ಗೆ ವಿವಿಧ ಟೆಲಿಕಾಂ ಕಂಪೆನಿಗಳ ಸರ್ವಿಸ್ ಟೆಲಿಕಾಂ ಟೀಮ್ ಜೊತೆ ಸಭೆ ನಡೆಸಲಾಗಿದೆ.

ಪರಪ್ಪನ ಅಗ್ರಹಾರದಲ್ಲಿ ಅಳವಡಿಸಿರುವ ಜಾಮರ್ ಗಳನ್ನು ತೆಗೆಯದೇ ಸುತ್ತಮುತ್ತಲಿನ ಸಾರ್ವಜನಿಕರಿಗೆ ತೊಂದರೆಯಾಗದ ರೀತಿ ತಾಂತ್ರಿಕವಾಗಿ ಯಾವ ಕ್ರಮಗಳನ್ನು ಕೈಗೊಳ್ಳಬೇಕು ಎಂಬುದರ ಬಗ್ಗೆ ಡಿಸೆಂಬರ್ 22 ರಂದು ಮತ್ತೊಮ್ಮೆ ಟೆಲಿಕಾಂ ಕಂಪೆನಿಗಳೊಂದಿಗೆ ಸಭೆ ನಡೆಸಿ, ಟೆಕ್ನಿಕಲ್ ಟೀಮ್ ನಿಂದ ಈ ಕುರಿತು ವರದಿ ಪಡೆದು ನಿರ್ಣಯ ಕೈಗೊಳ್ಳಲಾಗವುದು ಎಂದು ತಿಳಿಸಿದರು.


Share

You cannot copy content of this page