ಬೆಳಗಾವಿ : ಕಾಗಿನೆಲೆ ಪ್ರಾಧಿಕಾರದ ವ್ಯಾಪ್ತಿಗೆ ಕನಕದಾಸರ ಹುಟ್ಟೂರು ಬಾಡ ಹಾಗೂ ಗುಡ್ಡದ ಚನ್ನಾಪುರ ಗ್ರಾಮಗಳನ್ನು ಸೇರಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ನಿರ್ದೇಶನ ನೀಡಿದ್ದಾರೆ. ಈಗಾಗಲೇ ಕಾಗಿನೆಲೆ ಪ್ರಾಧಿಕಾರದ ಅಭಿವೃದ್ಧಿಗೆ ರೂ.34 ಕೋಟಿ ಬಿಡುಗಡೆ ಮಾಡಿದ್ದು, ಈ ಅನುದಾನವನ್ನು ಬಳಿಸಿ ಬಾಡ ಹಾಗೂ ಗುಡ್ಡದ ಚನ್ನಾಪುರ ಗ್ರಾಮಗಳಲ್ಲಿ ಅಭಿವೃದ್ಧಿ ಕಾರ್ಯಕೈಗೊಳ್ಳುವುದಾಗಿ ಕಂದಾಯ ಸಚಿವ ಕೃಷ್ಣಭೈರೇಗೌಡ ಹೇಳಿದರು.
ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನದಲ್ಲಿಂದು ವಿಧಾನಸಭೆಯಲ್ಲಿ ಶಾಸಕ ಫಠಾಣ್ ಯಾಸೀರ್ ಅಹ್ಮದ್ ಖಾನ್ ಅವರ ಗಮನ ಸೆಳಯುವ ಸೂಚನೆಗೆ ಉತ್ತರಿಸಿ ಅವರು ಮಾತನಾಡಿದರು.
2016ರಲ್ಲಿ ಕಾಗಿನೆಲೆ ಪ್ರಾಧಿಕಾರ ಸ್ಥಾಪನೆ ಮಾಡಲಾಗಿತ್ತು. ಅಂದೇ ಬಾಡ ಹಾಗೂ ಗುಡ್ಡದ ಚನ್ನಾಪುರ ಗ್ರಾಮಗಳು ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದವು. ಸರ್ಕಾರ ಕಾಗಿನೆಲೆ ಅಭಿವೃದ್ಧಿಗೆ ಬದ್ಧವಿದೆ ಎಂದು ತಿಳಿಸಿದರು.
ಗ್ರಾಮಗಳ ಸೇರ್ಪಡೆ ಬಗ್ಗೆ ಸರ್ಕಾರದಿಂದ ಗೆಜೆಟ್ ಹೊರಡಿಸಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಸರ್ಕಾರ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಕಾಗಿನೆಲೆ ಅಭಿವೃದ್ಧಿಗೆ ರೂ.34 ಕೋಟಿ ಬಿಡುಗಡೆ ಮಾಡಿದ್ದು ಸರ್ಕಾರಕ್ಕೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ, ಜಾನಪದ ವಿಶ್ವವಿದ್ಯಾನಿಲಯಕ್ಕೆ ಕನಕದಾಸರ ಹೆಸರು ಇಡುವಂತೆ ಇದೇ ಸಂದರ್ಭದಲ್ಲಿ ಶಾಸಕ ಫಠಾಣ್ ಯಾಸೀರ್ ಅಹ್ಮದ್ ಖಾನ್ ಮನವಿ ಮಾಡಿದರು.
ಮಂಡ್ಯ ಶಾಸಕ ರವಿಕುಮಾರ್ ಗೌಡ (ಗಣಿಗ) ಅವರ ಗಮನ ಸೆಳೆಯುವ ಸೂಚನೆಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಮಾತನಾಡಿ, ಮಂಡ್ಯ ತಾಲ್ಲೂಕು ಪಂಚಾಯಿತಿ ಕಟ್ಟಡಕ್ಕೆ ರೂ.3 ಕೋಟಿ ಅನುದಾನವನ್ನು ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ರೂ.75 ಲಕ್ಷ ಸಂದಾಯವಾಗಿದ್ದು, ಬಾಕಿ ಹಣವನ್ನು ಕೂಡಲೇ ಬಿಡುಗಡೆ ಮಾಡುವುದಾಗಿ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವರ ಪರವಾಗಿ ಉತ್ತರಿಸಿದರು.
