ಸಮಗ್ರ ಸುದ್ದಿ

ರಾಷ್ಟ್ರೀಯ ಲೋಕ್ ಅದಾಲತ್ ನಲ್ಲಿ44,28,455 ಪ್ರಕರಣಗಳ ಇತ್ಯರ್ಥ- ನ್ಯಾಯಮೂರ್ತಿ ಅನು ಸಿವರಾಮನ್

Share

ಬೆಂಗಳೂರು:ಸೆಪ್ಟೆಂಬರ್ 19 ರಂದು ನಡೆದ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ಮತ್ತು ಜಿಲ್ಲಾ ಹಾಗೂ ತಾಲ್ಲೂಕು ನ್ಯಾಯಾಲಯಗಳಲ್ಲಿ ಒಟ್ಟು 44,28,455 ಪ್ರಕರಣಗಳನ್ನು ಇತ್ಯರ್ಥಪಡಿಸುವ ಮೂಲಕ ಒಟ್ಟು ಪರಿಹಾರದ ಮೊತ್ತ: ರೂ. 2,384 ಕೋಟಿಗಳಾಗಿವೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಅನು ಸಿವರಾಮನ್ ತಿಳಿಸಿದರು.

ಈ ಕುರಿತಂತೆ ಇಂದು ಉಚ್ಛ ನ್ಯಾಯಾಲಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನ್ಯಾಯಾಲಯದಲ್ಲಿನ ಬಾಕಿ ಇರುವ ಒಟ್ಟು ಪ್ರಕರಣಗಳ ಸಂಖ್ಯೆ 1,84,831 ಆಗಿದ್ದು ಇತ್ಯರ್ಥ ಪಡಿಸಲಾದ 42,43,624 ವ್ಯಾಜ್ಯಪೂರ್ವ ಪ್ರಕರಣಗಳು ಸೇರಿ ಒಟ್ಟು ಪ್ರಕರಣಗಳು 44,28,455 ಇತ್ಯರ್ಥ ಆಗಿವೆ ಎಂದು ಹೇಳಿದರು.

ಸರ್ವರಿಗೂ ನ್ಯಾಯ ಕಾನೂನು ಸೇವೆಗಳ ಪ್ರಾಧಿಕಾರಗಳ ಧ್ಯೇಯೋದ್ದೇಶವಾಗಿದ್ದು, ಜನತಾ ನ್ಯಾಯಾಲಯ/ಲೋಕ್ ಅದಾಲತ್‍ಗಳ ಮೂಲಕ ಜನರಿಗೆ ತ್ವರಿತ ಮತ್ತು ಸಕ್ಷಮ ನ್ಯಾಯ ಒದಗಿಸುವಲ್ಲಿ ಕಾನೂನು ಸೇವೆಗಳ ಪ್ರಾಧಿಕಾರಗಳು ಬಹುಮುಖ್ಯ ಪಾತ್ರವಹಿಸುತ್ತವೆ ಎಂದರು.

ಸೆಪ್ಟೆಂಬರ್ 19 ರಂದು ನಡೆದ ಮೂರನೇ ರಾಷ್ಟ್ರೀಯ ಲೋಕ್ ಅದಾಲತ್ ಅಂಗವಾಗಿ ಕರ್ನಾಟಕ ಉಚ್ಛ ನ್ಯಾಯಾಲಯದ ಬೆಂಗಳೂರು ಪೀಠ- 07, ಧಾರವಾಡ ಪೀಠ – 02, ಕಲಬುರಗಿ ಪೀಠ – 02, ಹಾಗೂ ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ 920 ಪೀಠಗಳು ಸೇರಿ ಒಟ್ಟು 931ಪೀಠಗಳನ್ನು ಸ್ಥಾಪಿಸಲಾಗಿತ್ತು.

ಸದರಿ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಕರ್ನಾಟಕ ಉಚ್ಛ ನ್ಯಾಯಾಲಯ ಬೆಂಗಳೂರು ಪೀಠ- 630, ಧಾರವಾಡ ಪೀಠ- 201, ಕಲಬುರಗಿ ಪೀಠ- 171, ಇತ್ಯರ್ಥಗೊಂಡ ಒಟ್ಟು 1010 ಪ್ರಕರಣಗಳು ಇತ್ಯರ್ಥಗೊಂಡಿವೆ.

ಜಿಲ್ಲಾ ಮತ್ತು ತಾಲ್ಲೂಕು ನ್ಯಾಯಾಲಯಗಳಲ್ಲಿ ಇತ್ಯರ್ಥ ಪಡಿಸಲಾದ ನ್ಯಾಯಾಲಯದಲ್ಲಿನ ಬಾಕಿ ಇರುವ ಪ್ರಕರಣಗಳ ಸಂಖ್ಯೆ 1,83,821 ಹಾಗೂ ಇತ್ಯರ್ಥ ಪಡಿಸಲಾದ ಒಟ್ಟು ವ್ಯಾಜ್ಯಪೂರ್ವ ಪ್ರಕರಣಗಳು 42,43,624 ಸೇರಿದಂತೆ ಒಟ್ಟು 44,27,445 ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ. ಸೆಪ್ಟೆಂಬರ್ 19 ರ ಲೋಕ್ ಅದಾಲತ್‍ನಲ್ಲಿ ಒಟ್ಟು 44,28,455 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ.

ಅದರಲ್ಲಿ ವೈವಾಹಿಕ ಪ್ರಕರಣಗಳು (ಕಲಂ 125CRPC / BNSS ಮತ್ತು ಕೌಟುಂಬಿಕ ಹಿಂಸಾಚಾರ ಸೇರಿದಂತೆ) 1,230 ಪ್ರಕರಣಗಳ ಇತ್ಯರ್ಥವಾಗಿದ್ದು, ಇದರ ಮೊತ್ತ ರೂ. 4,04,67,336. ವಿಭಾಗದಾವೆ 2,828 ಪ್ರಕರಣಗಳ ಇತ್ಯರ್ಥವಾಗಿದ್ದು ಇದರ ಮೊತ್ತ ರೂ. 70,93,40,798.

ಮೋಟಾರು ವಾಹನ ಅಪರಾಧ ಪರಿಹಾರ ಪ್ರಕರಣಗಳು – 4160 ಪ್ರಕರಣಗಳ ಇತ್ಯರ್ಥ. ಇದರ ಮೊತ್ತ ರೂ. 267,15,78,127. ಚೆಕ್ ಬೌನ್ಸ್ 10,093 ಪ್ರಕರಣಗಳು ಇತ್ಯರ್ಥ. ಇದರ ಮೊತ್ತ ರೂ. 300,27,76,313.

ಎಲ್.ಎ.ಸಿ. ಅಮಲ್ಜಾರಿ ಪ್ರಕರಣಗಳು 571 ಪ್ರಕರಣಗಳ ಮೊತ್ತ ರೂ. 82,10,29,374. ಎಂ.ವಿ.ಸಿ. ಅಮಲ್ಜಾರಿ ಪ್ರಕರಣಗಳು 584 ಪ್ರಕರಣಗಳ ಮೊತ್ತ ರೂ. 71,73,88,563. ಇತರೆ ಅಮಲ್ಜಾರಿ ಪ್ರಕರಣಗಳು  2,930 ಪ್ರಕರಣಗಳ ಮೊತ್ತ ರೂ. 227,15,92,753, ರೇರಾ ಪ್ರಕರಣಗಳು  9 ಪ್ರಕರಣಗಳ ಮೊತ್ತ ರೂ. 82,03,722 ಹಾಗೂ ಗ್ರಾಹಕರ ವ್ಯಾಜ್ಯಗಳ ಪ್ರಕರಣಗಳು 130 ಪ್ರಕರಣಗಳು ಇತ್ಯರ್ಥ. ಇದರ ಮೊತ್ತ   ರೂ. 3,52,86,923 ಗಳಾಗಿದೆ.

ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್‍ನ ವಿಶೇಷ ಪ್ರಕರಣಗಳ ವಿಲೇವಾರಿ:

ಈ ಬಾರಿಯ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ 5 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 1,227 ಪ್ರಕರಣಗಳು, 10 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 140 ಪ್ರಕರಣಗಳು ಹಾಗೂ 15 ವರ್ಷ ಮತ್ತು ಅದಕ್ಕೂ ಹಳೆಯ ವರ್ಷಗಳ 23 ಪ್ರಕರಣಗಳು ಒಟ್ಟು 1,390 ಹಳೆಯ ಪ್ರಕರಣಗಳನ್ನು ಇತ್ಯರ್ಥ ಪಡಿಸಲಾಗಿರುತ್ತದೆ.

ಈ ರಾಷ್ಟ್ರೀಯ ಲೋಕ್ ಅದಾಲತ್‍ನ ಇನ್ನೊಂದು ವಿಶೇಷವೆಂದರೆ 1,562 ಪ್ರಕರಣಗಳಲ್ಲಿ ಹಿರಿಯ ನಾಗರಿಕರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಲೋಕ್ ಅದಾಲತ್‍ನ ಪ್ರಯೋಜನ ಪಡೆದಿರುತ್ತಾರೆ.

ಧಾರವಾಡ ಜಿಲ್ಲೆಯಲ್ಲಿ ಕಳೆದ 27 ವರ್ಷಗಳಿಂದ ಬಾಕಿ ಇದ್ದ ಆಸ್ತಿ ವಿವಾದವು ಕಲಘಟಗಿಯ ಸಿವಿಲ್ ನ್ಯಾಯಾಲಯದಲ್ಲಿರುವ O.S ಸಂಖ್ಯೆ. 3/1999 ಪ್ರಕರಣದಲ್ಲಿ ಸೌಹಾರ್ದಯುತವಾಗಿ ಇತ್ಯರ್ಥ ಪಡಿಸಲಾಯಿತು.

ಶಿವಮೊಗ್ಗ ಜಿಲ್ಲೆಯ ಪ್ರಧಾನ ಹಿರಿಯ ಸಿವಿಲ್ ನ್ಯಾಯಾಲಯದಲ್ಲಿರುವ ಎಲ್.ಎ.ಸಿ ಅಮಲ್ಜಾರಿ ಪ್ರಕರಣ LAC Execution Case No. 81/2017ರೂ. 4,21,47,681 (4 ಕೋಟಿ 21 ಲಕ್ಷ) ಮೊತ್ತಕ್ಕೆ ಪೂರ್ಣ ಮತು ಅಂತಿಮ ಇತ್ಯರ್ಥವಾಗಿ ಸೌಹಾರ್ದಯುತವಾಗಿ ಬಗೆಹರಿಸಲಾಯಿತು.

ಸುಮಾರು 287 ದಂಪತಿಗಳು ರಾಜಿ ಸಂದಾನದ ಮೂಲಕ ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಂಡು ಒಂದಾಗಿ ಬಾಳ್ವೆ ನಡೆಸಲು ತೀರ್ಮಾನಿಸಿರುತ್ತಾರೆ ಎಂದು ಹೇಳಿದರು.

ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಮೂರ್ತಿಗಳು ಹಾಗೂ ಉಚ್ಛ ನ್ಯಾಯಾಲಯ ಕಾನೂನು ಸೇವೆಗಳ ಸಮಿತಿಯ ಅಧ್ಯಕ್ಷರಾದ ಗೌರವಾನ್ವಿತ ನ್ಯಾಯಮೂರ್ತಿ ಆರ್. ದೇವದಾಸ್ ಅವರು ಮಾತನಾಡಿ ಕರ್ನಾಟಕ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಪ್ರಧಾನ ಪೋಷಕರಾದ ಗೌರವಾನ್ವಿತ ನ್ಯಾಯಮೂರ್ತಿ ವಿಭು ಬಕ್ರು ರವರು, ಕರ್ನಾಟಕ ಉಚ್ಛ ನ್ಯಾಯಾಲಯ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಪ್ರಾಧಿಕಾರದ ಕಾರ್ಯನಿರ್ವಾಹಕ ಅಧ್ಯಕ್ಷರಾದ ಗೌರವಾನ್ವಿತ ಶ್ರೀಮತಿ ನ್ಯಾಯಮೂರ್ತಿ ಅನು ಸಿವರಾಮನ್‍ರವರು ಹಾಗೂ ಈ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಹೆಚ್ಚಿನ ಪ್ರಕರಣಗಳನ್ನು ಇತ್ಯರ್ಥಪಡಿಸಿರುವ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಈ ಸಂಬಂಧ ರಾಷ್ಟ್ರೀಯ ಲೋಕ್ ಅದಾಲತ್‍ನಲ್ಲಿ ಪ್ರಕರಣಗಳನ್ನು ಇತ್ಯರ್ಥಪಡಿಸಲು ಸಂಪೂರ್ಣ ಸಹಕಾರ ನೀಡಿರುವ ನ್ಯಾಯಾಂಗ ಅಧಿಕಾರಿಗಳು, ಸಾಲ ವಸೂಲಾತಿ ನ್ಯಾಯಾಧೀಕರಣದ ಅಧಿಕಾರಿಗಳು, ವಕೀಲರು, ಕಕ್ಷಿದಾರರು, ವಿಮಾ ಕಂಪನಿಯ ಅಧಿಕಾರಿಗಳು, ಬ್ಯಾಂಕ್ ಅಧಿಕಾರಿಗಳು, ಸಾರಿಗೆ ಇಲಾಖೆಯ ಅಧಿಕಾರಿಗಳು ಮತ್ತು ಸರ್ಕಾರದ ವಿವಿಧ ಇಲಾಖೆಯ ಮುಖ್ಯಸ್ಥರು, ಅಧಿಕಾರಿಗಳಿಗೆ, ಕಕ್ಷಿದಾರರಿಗೆ ಹಾಗೂ ಮಾಧ್ಯಮ ಮಿತ್ರರಿಗೆ ಧನ್ಯವಾದಗಳನ್ನು ಸಲ್ಲಿಸಿದರು.

ಮಧ್ಯಸ್ಥಿಕೆ ಮತ್ತು ಸಮನ್ವಯ ಯೋಜನೆ ಸಮಿತಿ ಹಾಗೂ ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಕರ್ನಾಟಕ ರಾಜ್ಯಾದ್ಯಂತ ವಿಶೇಷ ಮಧ್ಯಸ್ಥಿಕೆ ಅಭಿಯಾನ 3.0 ಅನ್ನು ದಿನಾಂಕ: 01-08-2026 ರಿಂದ 30-12-2026 ರವರೆಗೆ ಆಯೋಜಿಸಲಾಗಿದೆ. ಈ ವಿಶೇಷ ಮಧ್ಯಸ್ಥಿಕೆ ಅಭಿಯಾನದಲ್ಲಿ ಪಕ್ಷಗಾರರು ತಮ್ಮ ಪ್ರಕರಣಗಳನ್ನು ರಾಜೀ ಮುಖಾಂತರ ಇತ್ಯರ್ಥಪಡಿಸಿಕೊಳ್ಳಬಹುದಾಗಿದೆ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ವರ್ಷದ ಕೊನೆಯ ರಾಷ್ಟ್ರೀಯ ಲೋಕ ಅದಾಲತ್ 12-12-2026:

ಈ ವರ್ಷದ ಕೊನೆಯ ರಾಷ್ಟ್ರೀಯ ಲೋಕ ಅದಾಲತ್‍ನ್ನು ದಿನಾಂಕ: 12-12-2026 ರಂದು ಏರ್ಪಡಿಸಲಾಗಿದ್ದು, ಸದರಿ ಲೋಕ ಅದಾಲತ್‍ನಲ್ಲಿ ಜನರು ತಮ್ಮ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳುವಂತೆ ಪ್ರೋತ್ಸಾಹಿಸಲು ವಿನಂತಿಸಲಾಗಿದೆ. ಇದರಿಂದ ಪಕ್ಷಗಾರರು ಯಾವುದೇ ವೆಚ್ಚವಿಲ್ಲದೆ ಶೀಘ್ರ ನ್ಯಾಯವನ್ನು ಪಡೆಯಲು ಸಾಧ್ಯವಾಗುತ್ತದೆ ಎಂದು ಹೇಳಿದರು.


Share

You cannot copy content of this page