ಸಮಗ್ರ ಸುದ್ದಿ

ಕೇಂದ್ರ ಹಾಗೂ ರಾಜ್ಯಗಳು ಶಕ್ತಿಶಾಲಿಯಾಗಿದ್ದಾಗ ಮಾತ್ರ ಭಾರತ ಶಕ್ತಿಶಾಲಿಯಾಗಿರಲು ಸಾಧ್ಯ: ಬಸವರಾಜ ಬೊಮ್ಮಾಯಿ

Share

ಚಿತ್ರದುರ್ಗ: ಕೇಂದ್ರ ಹಾಗೂ ರಾಜ್ಯಗಳು ಶಕ್ತಿಶಾಲಿಯಾಗಿದ್ದಾಗ ಮಾತ್ರ ಭಾರತ ಶಕ್ತಿಶಾಲಿಯಾಗಿರಲು ಸಾಧ್ಯ. ಆಡಳಿತ ಮಾಡುವವರ ಕ್ಷಮತೆಯ ಮೇಲೆ ಇರುತ್ತದೆ. ಸಂಘರ್ಷದ ಬದಲು ಸಹಕಾರದಿಂದ ಏನು ಬೇಕಾದರೂ ಮಾಡಬಹುದು. ಭದ್ರಾ ಮೇಲ್ದಂಡೆ ಯೋಜನೆಗೆ ಕೆಂದ್ರದ ಸಹಕಾರ ಸಿಗುವ ಭರವಸೆ ಇದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಇಂದು ಚಿತ್ರದುರ್ಗದ ಸಿರಿಗೆರೆಯ ಬೃಹನ್ಮಠದಲ್ಲಿ ನಡೆದ ತರಳಬಾಳು ಜಗದ್ಗುರು ಶ್ರೀ 1108 ಲಿಂಗೈಕ್ಯ ಶ್ರೀ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೆಯ ಶ್ರದ್ದಾಂಜಲಿ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಅಪ್ಪರ್ ಭದ್ರಾ ಯೋಜನೆಯು ಯಾರೂ ನಿರೀಕ್ಷಿಸದ ಸ್ಪೂರ್ತಿಯಿಂದ ಕೂಡಿದೆ. 2008ರಲ್ಲಿ ಈ ಯೋಜನೆಯನ್ನು ಆರಂಭಿಸಲಾಯಿತು. ಆರಂಭದಲ್ಲಿ ಬಹಳಷ್ಟು ವಿರೋಧಗಳಿದ್ದರೂ, ನಾಯಕರಾದ ಯಡಿಯೂರಪ್ಪ ಅವರ ದಿಟ್ಟ ನಿರ್ಧಾರದಿಂದ ಈ ಯೋಜನೆ ಆರಂಭವಾಯಿತು.
​ಅಪ್ಪರ್ ಭದ್ರಾ ಯೋಜನೆಯು ಅಜ್ಜಂಪುರ ಟನೆಲ್ ಮೂಲಕ ಪ್ರಾರಂಭವಾಗಿ, ಇವತ್ತು ಅಜ್ಜಂಪುರ ದಾಟಿ ಚಿತ್ರದುರ್ಗ ಟನೆಲ್‌ನಿಂದ ನೀರು ಹರಿಯುತ್ತಿದ್ದು, ಕೆರೆಗಳನ್ನು ತುಂಬಿಸುವ ಸನ್ನಿವೇಶ ನಿರ್ಮಾಣವಾಗಿದೆ. ಈ ಯೋಜನೆಯಲ್ಲಿ ವಿವಿಧ ಸರ್ಕಾರಗಳು ಒಟ್ಟು 16 ಸಾವಿರ ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದ್ದು, ಇದರಲ್ಲಿ ಸುಮಾರು 11 ಸಾವಿರ ಕೋಟಿ ರೂಪಾಯಿಗಳನ್ನು ನಾವು ಖರ್ಚು ಮಾಡಿದ್ದೇವೆ. ಕೇಂದ್ರ ಸರ್ಕಾರದಿಂದಲೂ ಇದಕ್ಕೆ ನೆರವು ಪಡೆದುಕೊಳ್ಳುವ ಸ್ಥಿತಿ ಬಂದಿದ್ದು, 6300 ಕೋಟಿ ರೂಪಾಯಿ ಹಣಕಾಸಿನ ಸಚಿವರನ್ನು ಒಪ್ಪಿಸಿಲಾಗಿದೆ. ಸಿಎಂ ಡಿ.ಕೆ. ಶಿವಕುಮಾರ್ ಬಹಳ ಬುದ್ದಿವಂತರಿದ್ದಾರೆ. ಅವರು ಯಾರಿಗೆ ಜಾದು ಮಾಡುತ್ತಾರೊ ಗೊತ್ತಿಲ್ಲ. ಕೇಂದ್ರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿ 16 ಸಾವಿರ ಕೋಟಿ ಬಾಕಿ ಇತ್ತು. ಅದನ್ನು ತರುವ ಕೆಲಸ ಮಾಡಿದರು. ಅರ್ಬನ್ ಚಾಲೆಂಜಿಂಗ್ ಫಂಡ್ ಇದೆ ಅದರಲ್ಲಿ 8 ಸಾವಿರ ಕೋಟಿ ಬೆಂಗಳೂರಿಗೆ ತರುವ ವ್ಯವಸ್ಥೆ ಮಾಡಿದ್ದಾರೆ. ಭದ್ರಾ ಯೋಜನೆಗೂ ಹಣ ನೀಡುವುದಾಗಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವ ಸಿ.ಆರ್. ಪಾಟೀಲ್ ಹೇಳಿದ್ದಾರೆ. ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಮಾತನಾಡಿದ್ದೇನೆ. ಅವರು ಸಿಡಬ್ಲುಸಿಯಿಂದ ಪಿಆರ್ ಡಿ ಗೆ ಬಂದರೆ ಎಲ್ಲ ರೀತಿಯ ಸಹಕಾರ ನೀಡುವುದಾಗಿ ಅವರು ಹೇಳಿದ್ದಾರೆ.

ಮಧ್ಯ ಕರ್ನಾಟಕದಲ್ಲಿ ಏನಾದರೂ ನೀರಾವರಿಗಳು ಆಗಿದ್ದರೆ ಅದು ಪರಮ ಪೂಜ್ಯರ ಆಶೀರ್ವಾದದಿಂದ ಅವರ ಸ್ಫೂರ್ತಿಯಿಂದ ಮತ್ತು ಅವರ ಹಠದಿಂದ ಈ ನೀರಾವರಿ ಯೋಜನೆಗಳು ಆಗಿವೆ. ​ಉಮ್ರಾಣಿ ಅಮೃತಪುರ ನೀರಾವರಿ ಯೋಜನೆ ಸುಮಾರು 20 ವರ್ಷದಿಂದ ಹಾಗೆ ಬಿದ್ದಿತ್ತು. ನಾನು ನೀರಾವರಿ ಸಚಿವನಾದ ಮೇಲೆ ಅವರು ಹೇಳಿದರು ಇದು ನೋಡಪ್ಪ 20 ವರ್ಷದಿಂದ ಬಿದ್ದಿದೆ ನೀನಾದರೂ ಮಾಡ್ತೀಯೋ ಇಲ್ಲೋ ನೋಡೋಣ ಅಂದರು. ಅದನ್ನು ಪೂರ್ತಿ ಮಾಡಿ ಎಲ್ಲ ಕೆರೆಗಳಿಗೆ ತಾವೇ ಸ್ವಂತ ಪಾದಯಾತ್ರೆಯನ್ನು ಮಾಡಿ ನೀರನ್ನು ಹರಿಸಿರುವಂತಹ ಜಗದ್ಗುರುಗಳು ನೋಡಿದಾಗ ಅವರಿಗೆ ಆ ಭಕ್ತರು ಆ ಭೂಮಿ ಆ ನೀರಿನ ಬಗ್ಗೆ ಇರುವಂತಹ ಒಂದು ಪ್ರೀತಿ ನನಗೆ ನಿಜವಾಗಲೂ ಆಶ್ಚರ್ಯವನ್ನು ಉಂಟುಮಾಡುತ್ತೆ. ಅದೇ ರೀತಿ ಜಗಳೂರು ರೇವಣಸಿದ್ಧೇಶ್ವರ ನೀರಾವರಿ ಮತ್ತು ಭರಮ ಸಾಗರ್ ಏತ ನೀರಾವರಿ ಮಾಡಬೇಕಾದರೆ ನಮಗೂ ಕೂಡ ಸರ್ಕಾರದಲ್ಲಿ ಪೂರ್ಣ ಪ್ರಮಾಣದ ಅನುದಾನ ನೀಡಿ ಯೋಜನೆ ಜಾರಿಗೊಳಿಸಿದೆವು. ಈಗ ಆ ಭಾಗದ ಎಲ್ಲ ಕೆರೆಗಳು ತುಂಬಿವೆ ಎಂದು ಹೇಳಿದರು.

​ನದಿ ಜೋಡಣೆ: ನದಿ ಜೋಡಣೆಯು ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತಾದರೂ, ಈಗ ಎಂ.ಒ.ಯು ಸೈನ್ ಮಾಡಲಾಗಿದೆ. ನಮಗೆ ಪೂರ್ಣ ಪ್ರಮಾಣದ ನ್ಯಾಯ ಸಿಗಬೇಕಿದೆ. ಭದ್ರಾ ಮೇಲ್ದಂಡೆ ಮತ್ತು ಎತ್ತಿನ ಹೊಳೆ ಯೋಜನೆಗಳು ಜಾರಿಯಾದರೆ ಮಧ್ಯ ಕರ್ನಾಟಕದ ಬಹುತೇಕ ತಾಲೂಕುಗಳಿಗೆ ನ್ಯಾಯ ಒದಗಿಸಲು ಈ ಯೋಜನೆಗಳು ಅತ್ಯಂತ ಪ್ರಮುಖವಾಗಿವೆ ಎಂದು ಹೇಳಿದರು.

​ಜೀವನ ಮೌಲ್ಯಗಳು:
ಮನುಷ್ಯ ಬದುಕುವುದು ಸಂತೋಷ, ಸಂಪತ್ತು ಮತ್ತು ಸಮಾಧಾನಕ್ಕಾಗಿ, ನಮ್ಮ ಗುರಿ ಮುಟ್ಟಲು ಕಠಿಣ ಪರಿಶ್ರಮ, ಶ್ರದ್ಧೆ ಮತ್ತು ತಾಳ್ಮೆಯಿಂದ ಬದುಕು ಸಾರ್ಥಕವಾಗುತ್ತದೆ. ಹಿರಿಯ ಜಗದ್ಗುರುಗಳು ಬದುಕಿ ಶ್ರಮವಹಿಸಿ ಸಾಧಿಸಿದ್ದರು. ಸಾಧಕನಿಗೆ ಸಾವು ಅಂತ್ಯವಲ್ಲ, ಸಾವಿನ ನಂತರವೂ ಬದುಕುವವನು ಸಾಧಕ ಎಂದು ಸ್ವಾಮಿ ವಿವೇಕಾನಂದರು ಹೇಳಿದ್ದರು ಎಂದು ಹೇಳಿದರು.

ಈ ಸಂದರ್ಭದಲ್ಲಿ ತರಳಬಾಳು ಮಠದ ಪೀಠಾಧಿಪತಿಗಳಾದ ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳು, ಸಾಣೇಹಳ್ಳಿಯ ತರಳಬಾಳು ಶಾಖಾಮಠದ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸಚಿವರಾದ ಬಸವಂತಪ್ಪ, ಚಲುವರಾಯಸ್ವಾಮಿ, ಕೆ ಹೆಚ್ ಮುನಿಯಪ್ಪ, ಟಿ. ರಘುಮೂರ್ತಿ, ಶಾಸಕರಾದ ಯುಬಿ ಬಣಕಾರ, ಡಾ.ಎಂ ಚಂದ್ರಪ್ಪ, ಶಿವಗಂಗ ಬಸವರಾಜ್, ಡಿಜಿ ಶಾಂತನಗೌಡ, ಹೆಚ್ ಡಿ ತಮ್ಮಯ್ಯ, ಬಿ.‌ದೇವೇಂದ್ರಪ್ಪ, ವಿಧಾನಪರಿಷತ್ ಸದಸ್ಯ ಸಿ ಟಿ ರವಿ, ಮಾಜಿ ಕೇಂದ್ರ ಸಚಿವ ಜಿ.ಎಂ ಸಿದ್ದೇಶ್, ಶ್ರೀಮತ್ ಸಾಧು ಸದ್ದರ್ಮ ವೀರಶೈವ ಸಂಘದ ಅಧ್ಯಕ್ಷರು ಎಚ್ ಆರ್ ಬಸವರಾಜಪ್ಪ ಮತ್ತಿತರರು ಉಪಸ್ಥಿತರಿದ್ದರು.


Share

You cannot copy content of this page