ಸಮಗ್ರ ಸುದ್ದಿ

ಕಾಮಗಾರಿ ಬಿಲ್ ಪಾವತಿ ವ್ಯವಸ್ಥೆಯಲ್ಲಿ ಸಮಗ್ರ ಸುಧಾರಣೆ : ಕೃಷ್ಣ ಬೈರೇಗೌಡ

Share

ಬೆಂಗಳೂರು: ಗುತ್ತಿಗೆದಾರರ ಬಿಲ್‌ಗಳ ಪರಿಶೀಲನೆ ಮತ್ತು ಪಾವತಿ ಪ್ರಕ್ರಿಯೆಯನ್ನು ಇನ್ನಷ್ಟು ವೇಗ, ಪಾರದರ್ಶಕ ಹಾಗೂ ಜವಾಬ್ದಾರಿಯುತವಾಗಿಸಲು ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಹಲವು ಕ್ರಾಂತಿಕಾರಿ ಸುಧಾರಣೆಗಳನ್ನು ಜಾರಿಗೆ ತರಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸರ್ಕಾರಿ ಅನುದಾನದ ಕಾಮಗಾರಿಗಳಾಗಲಿ ಅಥವಾ ನಗರ ಪಾಲಿಕೆಗಳ ಸ್ವಂತ ನಿಧಿಯ ಕಾಮಗಾರಿಗಳಾಗಲಿ, ಎಲ್ಲಕ್ಕೂ ಈ ಹೊಸ ನಿಯಮಗಳು ಏಕರೂಪವಾಗಿ ಅನ್ವಯಿಸಲಿವೆ.

ಸಾರ್ವಜನಿಕ ಕಾಮಗಾರಿಗಳ ಬಿಲ್‌ ಸಲ್ಲಿಕೆ ಮತ್ತು ಪಾವತಿಯಲ್ಲಿ ಎದುರಾಗುತ್ತಿದ್ದ ಸುದೀರ್ಘ ವಿಳಂಬ ಹಾಗೂ ಅನಿಶ್ಚಿತತೆಗೆ ಮುಕ್ತಿ ನೀಡುವುದು ಈ ಸುಧಾರಣೆಗಳ ಪ್ರಮುಖ ಉದ್ದೇಶವಾಗಿದೆ. ಈ ಹಿಂದಿನ ಹಂತ-ಹಂತದ ಕೈ ಬರಹದ ಪರಿಶೀಲನೆಗಳ ಬದಲಿಗೆ, ಪ್ರತಿಯೊಂದು ಹಂತದಲ್ಲೂ ಸ್ಪಷ್ಟ ಹೊಣೆಗಾರಿಕೆ, ಕೆಲಸಕ್ಕೆ ವೇಗ ತುಂಬುವ ಹಾಗೂ ಪಾರದರ್ಶಕವಾದ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುತ್ತಿದೆ.

ಈ ಹೊಸ ವ್ಯವಸ್ಥೆಯು ಕೇವಲ ಪಾವತಿಯನ್ನು ವೇಗಗೊಳಿಸುವುದು ಮಾತ್ರವಲ್ಲದೆ, ಬೆಂಗಳೂರಿನ ಐದೂ ನಗರ ಪಾಲಿಕೆಗಳಲ್ಲಿ ಗುತ್ತಿಗೆದಾರರ ಪಾವತಿ ಪ್ರಕ್ರಿಯೆಯನ್ನು ನಂಬಿಕೆಗೆ ಅರ್ಹವಾಗಿಸಲಿದೆ. ಜೊತೆಗೆ ಕಾಮಗಾರಿಗಳ ಗುಣಮಟ್ಟ, ಒಪ್ಪಂದಗಳ ನಿರ್ವಹಣೆ ಮತ್ತು ಆರ್ಥಿಕ ಶಿಸ್ತನ್ನು ಬಲಪಡಿಸಲಿದೆ.

ವೇಗದ ಮತ್ತು ಸರಳ ಬಿಲ್ ವಿಲೇವಾರಿ

ಹೊಸ ವ್ಯವಸ್ಥೆಯಡಿ, ಬಿಲ್‌ಗಳು ಸಮಗ್ರ ಆರ್ಥಿಕ ನಿರ್ವಹಣಾ ವ್ಯವಸ್ಥೆ (IFMS) ತಂತ್ರಾಂಶದ ಮೂಲಕ ಹಂತ-ಹಂತವಾಗಿ ಸರಳವಾಗಿ ವಿಲೇ ಆಗಲಿವೆ. ಪ್ರತಿಯೊಂದು ಬಿಲ್ ಅನ್ನು ಮೊದಲು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ (PMC) ಪರಿಶೀಲಿಸುತ್ತದೆ. ನಂತರ ಸ್ಥಳೀಯ ಇಂಜಿನಿಯರ್‌ಗಳು ತಪಾಸಣೆ ನಡೆಸಿ ದೃಢೀಕರಿಸುತ್ತಾರೆ. ತದನಂತರ ಚೀಫ್ ಇಂಜಿನಿಯರ್ ಅವರಿಂದ ಪ್ರಿ-ಆಡಿಟ್ ಮತ್ತು ಅನುಮೋದನೆ ದೊರೆತ ಬಳಿಕ, ಜೇಷ್ಠತೆಯ (Seniority) ಆಧಾರದ ಮೇಲೆ ಪಾವತಿ ಪ್ರಕ್ರಿಯೆ ನಡೆಯುತ್ತದೆ.

ಈ ಸರಳೀಕೃತ ಪ್ರಕ್ರಿಯೆಯಿಂದಾಗಿ ಅನಗತ್ಯ ಅನುಮೋದನೆಗಳ ಹಂತಗಳು ಕಡಿಮೆಯಾಗಿ, ಬಿಲ್ ವಿಲೇವಾರಿಯಲ್ಲಿ ಆಗುತ್ತಿದ್ದ ವಿಳಂಬ ತಪ್ಪಲಿದೆ.

ನೇರ ಮತ್ತು ಕಾಗದರಹಿತ ಪಾವತಿ

ಗುತ್ತಿಗೆದಾರರ ನೋಂದಾಯಿತ ಬ್ಯಾಂಕ್ ಖಾತೆಗಳಿಗೆ IFMS ತಂತ್ರಾಂಶದ ಮೂಲಕ OTP ಆಧಾರಿತ ದೃಢೀಕರಣದೊಂದಿಗೆ ನೇರವಾಗಿ ಹಣ ಜಮಾ ಆಗಲಿದೆ. ಇದರಿಂದ ಹಳೆಯ ಮಾದರಿಯ ಮ್ಯಾನುವಲ್ RTGS ವ್ಯವಸ್ಥೆಗೆ ಪೂರ್ಣವಿರಾಮ ಬೀಳಲಿದೆ. ಮಧ್ಯವರ್ತಿಗಳ ಹಸ್ತಕ್ಷೇಪವಿಲ್ಲದೆ, ಪ್ರಕ್ರಿಯೆ ಹೆಚ್ಚು ಸುರಕ್ಷಿತ ಹಾಗೂ ಪಾರದರ್ಶಕವಾಗಲಿದೆ.

ಕಾಲಮಿತಿ ನಿಗದಿ ಮತ್ತು ಸ್ವಯಂಚಾಲಿತ ಅನುಮೋದನೆ

ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ (PMC) ಪರಿಶೀಲನೆ ಮತ್ತು ಗುಣಮಟ್ಟ ತಪಾಸಣೆ ಸೇರಿದಂತೆ ಬಿಲ್ ವಿಲೇವಾರಿಯ ಪ್ರತಿಯೊಂದು ಹಂತಕ್ಕೂ ನಿರ್ದಿಷ್ಟ ಕಾಲಮಿತಿ ಇರುತ್ತದೆ. ಉದಾಹರಣೆಗೆ, ಸ್ಥಳೀಯ ಇಂಜಿನಿಯರ್‌ಗಳು ತಪಾಸಣೆ ನಡೆಸಿ ವರದಿ ನೀಡಲು 7 ದಿನಗಳ ಕಾಲಾವಕಾಶವಿರುತ್ತದೆ. ನಿಗದಿತ ಅವಧಿಯಲ್ಲಿ ಅಧಿಕಾರಿಗಳು ಕ್ರಮ ಕೈಗೊಳ್ಳದಿದ್ದರೆ, ಆ ಬಿಲ್ “ಸ್ವಯಂಚಾಲಿತವಾಗಿ ಅನುಮೋದನೆಗೊಂಡಿದೆ” (Deemed Approved) ಎಂದು ಪರಿಗಣಿತವಾಗಿ ಮುಂದಿನ ಹಂತಕ್ಕೆ ಸಾಗಲಿದೆ.

ಇದರ ಜೊತೆಗೆ, ಅಧಿಕಾರಿಗಳ ಜವಾಬ್ದಾರಿಯನ್ನೂ ಸ್ಪಷ್ಟಪಡಿಸಲಾಗಿದೆ. ಯಾವುದೇ ಅಧಿಕಾರಿಯು ನಿಗದಿತ ಸಮಯದಲ್ಲಿ ಪರಿಶೀಲಿಸದೆ ಬಿಟ್ಟು, ಮುಂದೆ ಆ ಕಾಮಗಾರಿಯಲ್ಲಿ ಲೋಪದೋಷ ಕಂಡುಬಂದರೆ, ಅದಕ್ಕೆ ಸಂಬಂಧಿಸಿದ ಅಧಿಕಾರಿಯನ್ನೇ ನೇರ ಹೊಣೆಗಾರರನ್ನಾಗಿ ಮಾಡಲಾಗುತ್ತದೆ.

ಯಾವುದೇ ಬಿಲ್ ಅನ್ನು ತಡೆಹಿಡಿಯಬೇಕಾದರೆ ಅಥವಾ ತಿರಸ್ಕರಿಸಬೇಕಾದರೆ, ಅದಕ್ಕೆ ಸೂಕ್ತ ಕಾರಣವನ್ನು ತಂತ್ರಾಂಶದಲ್ಲಿ ಕಡ್ಡಾಯವಾಗಿ ದಾಖಲಿಸಬೇಕು. ಈ ಸೌಲಭ್ಯವು IFMS ಸಾಫ್ಟ್‌ವೇರ್‌ನಲ್ಲೇ ಇರುವುದರಿಂದ ಗುತ್ತಿಗೆದಾರರಿಗೆ ತಮ್ಮ ಬಿಲ್ ಎಲ್ಲಿದೆ ಮತ್ತು ಯಾವ ಕಾರಣಕ್ಕೆ ತಡೆಹಿಡಿಯಲಾಗಿದೆ ಎಂಬ ಸ್ಪಷ್ಟ ಮಾಹಿತಿ ಸಿಗಲಿದೆ.

ಆರಂಭದಿಂದ ಅಂತಿಮ ಪಾವತಿಯವರೆಗೆ ಡಿಜಿಟಲ್ ಕಣ್ಗಾವಲು

ಕಾಮಗಾರಿಯ ಟೆಂಡರ್ ಹಂಚಿಕೆಯಿಂದ ಹಿಡಿದು ಅಂತಿಮ ಪಾವತಿಯವರೆಗಿನ ಎಲ್ಲಾ ಪ್ರಕ್ರಿಯೆಗಳನ್ನು IFMS ಪ್ಲಾಟ್‌ಫಾರ್ಮ್‌ಗೆ ತರಲಾಗುತ್ತಿದೆ. ಇದರಿಂದ ಪ್ರತಿಯೊಂದು ಸಾರ್ವಜನಿಕ ಕಾಮಗಾರಿಯ ಹಂತ-ಹಂತದ ಮಾಹಿತಿಯೂ ಡಿಜಿಟಲ್ ರೂಪದಲ್ಲಿ ಲಭ್ಯವಿರುತ್ತದೆ.

ನೈಜ ಪ್ರಗತಿಗೆ ಅನುಗುಣವಾಗಿ ಬಿಲ್ ಪಾವತಿ

ತಾಂತ್ರಿಕ ಮೇಲ್ವಿಚಾರಣೆಯನ್ನು ಮತ್ತಷ್ಟು ಬಿಗಿಗೊಳಿಸಲಾಗಿದೆ. ಇಂಜಿನಿಯರ್‌ಗಳು ಸ್ಥಳದಲ್ಲಿ ನಡೆಯುವ ಕಾಮಗಾರಿಯ ಪ್ರಗತಿಯನ್ನು ‘ರಿಯಲ್-ಟೈಮ್ ಇನ್ಫರ್ಮೇಷನ್ ಮಾನಿಟರಿಂಗ್ ಸಿಸ್ಟಮ್’ (RIMS)ನಲ್ಲಿ ದಾಖಲಿಸುವುದು ಕಡ್ಡಾಯ. ಪ್ರತ್ಯಕ್ಷವಾಗಿ ನಡೆದ ಕಾಮಗಾರಿಯ ಆಧಾರದ ಮೇಲಷ್ಟೇ ಬಿಲ್ ವಿಲೇವಾರಿಯಾಗುತ್ತದೆ. ಇಂಜಿನಿಯರ್‌ಗಳಿಗಿಂತ ಮುಂಚಿತವಾಗಿಯೇ ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕನ್ಸಲ್ಟೆಂಟ್ (PMC) ಸಂಸ್ಥೆಯು ಬಿಲ್ ಪರಿಶೀಲಿಸಲಿದ್ದು, ಗುಣಮಟ್ಟದ ನಿಯಮಗಳನ್ನು ಪಾಲಿಸಲಾಗಿದೆಯೇ ಎಂಬುದನ್ನು ಇಂಜಿನಿಯರ್‌ಗಳು ಖಚಿತಪಡಿಸಲಿದ್ದಾರೆ.

ಆಡಳಿತಾತ್ಮಕ ವಿಳಂಬ ತಡೆಯಲು ಮತ್ತೊಂದು ಪ್ರಮುಖ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಅಂತಿಮ ಭದ್ರತಾ ಠೇವಣಿ (FSD) ಬಿಡುಗಡೆಯನ್ನು ಇನ್ಮುಂದೆ ಆಯಾ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಹಂತದಲ್ಲೇ ಪೂರ್ಣಗೊಳಿಸಬಹುದು. ಇದಕ್ಕಾಗಿ ಉಪ ನಿಯಂತ್ರಕರು ಹಣಕಾಸು (DCF) ಅಥವಾ ಆಯುಕ್ತರ ಕಚೇರಿಗೆ ಕಡತ ಕಳುಹಿಸುವ ಅಗತ್ಯವಿರುವುದಿಲ್ಲ.

ಹೆಚ್ಚಿನ ಸಾರ್ವಜನಿಕ ಪಾರದರ್ಶಕತೆ

ಪ್ರತಿಯೊಂದು ಕಾಮಗಾರಿ ನಡೆಯುವ ಸ್ಥಳದಲ್ಲಿಯೂ ಅದಕ್ಕೆ ಜವಾಬ್ದಾರರಾದ ಇಂಜಿನಿಯರ್ ಮತ್ತು ಗುತ್ತಿಗೆದಾರರ ಹೆಸರನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕಾಗುತ್ತದೆ. ಸಾರ್ವಜನಿಕರಿಗಾಗಿ ಆನ್‌ಲೈನ್ ಡ್ಯಾಶ್‌ಬೋರ್ಡ್ ಲಾಂಚ್ ಮಾಡಲಾಗುತ್ತಿದ್ದು, ಇದರ ಮೂಲಕ ನಗರದಲ್ಲಿ ನಡೆಯುತ್ತಿರುವ ಮತ್ತು ಪೂರ್ಣಗೊಂಡಿರುವ ಕಾಮಗಾರಿಗಳ ಸ್ಥಿತಿಗತಿಯನ್ನು ಸಾರ್ವಜನಿಕರು ನೇರವಾಗಿ ವೀಕ್ಷಿಸಬಹುದು.

ಹೊಸ ಆಂತರಿಕ ಲೆಕ್ಕಪರಿಶೋಧನಾ ವಿಭಾಗ

ಆರ್ಥಿಕ ಶಿಸ್ತನ್ನು ಕಾಪಾಡಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಮತ್ತು ನಗರ ಪಾಲಿಕೆಗಳಲ್ಲಿ ಪ್ರತ್ಯೇಕ ‘ಆಂತರಿಕ ಲೆಕ್ಕಪರಿಶೋಧನಾ ವಿಭಾಗ’ವನ್ನು ಸ್ಥಾಪಿಸಲಾಗುತ್ತಿದೆ. ಇದು ಪ್ರಸ್ತುತ ಇರುವ ಮುಖ್ಯ ಲೆಕ್ಕಪರಿಶೋಧಕರ ವಾರ್ಷಿಕ ಆಡಿಟ್‌ಗೆ ಪೂರಕವಾಗಿ ನಿಯಮಿತವಾಗಿ ಆಂತರಿಕ ತಪಾಸಣೆ ನಡೆಸಲಿದೆ.

ಸಾರ್ವಜನಿಕ ಕಾಮಗಾರಿ ನಿರ್ವಹಣೆಯಲ್ಲಿ ಹೊಸ ಅಧ್ಯಾಯ

ಈ ಸುಧಾರಣೆಗಳು ಬೆಂಗಳೂರಿನ ಐದೂ ನಗರ ಪಾಲಿಕೆಗಳ ಕಾಮಗಾರಿ ನಿರ್ವಹಣಾ ಶೈಲಿಯಲ್ಲಿ ದೊಡ್ಡ ಬದಲಾವಣೆ ತರಲಿವೆ. ಕಾಮಗಾರಿಯ ಪ್ರಗತಿ, ಬಿಲ್ ವಿಲೇವಾರಿ, ಗುಣಮಟ್ಟ ನಿಯಂತ್ರಣ, ಪಾವತಿ ಮತ್ತು ಆಡಿಟ್—ಎಲ್ಲವನ್ನೂ ಒಂದೇ ಡಿಜಿಟಲ್ ಚೌಕಟ್ಟಿನಡಿ ತರುವುದರಿಂದ ವಿಳಂಬ ಕಡಿಮೆಯಾಗಿ, ಪಾರದರ್ಶಕತೆ ಹೆಚ್ಚಲಿದೆ.

ಪ್ರಾಮಾಣಿಕವಾಗಿ ಕೆಲಸ ಮಾಡುವ ಗುತ್ತಿಗೆದಾರರಿಗೆ ಅನಗತ್ಯ ಅಲೆದಾಟ ತಪ್ಪಿಸಿ, ಗುಣಮಟ್ಟದ ಕೆಲಸದತ್ತ ಗಮನಹರಿಸಲು ಈ ವ್ಯವಸ್ಥೆ ನೆರವಾಗಲಿದೆ. ನಗರದಲ್ಲಿ ಸಾರ್ವಜನಿಕ ಕಾಮಗಾರಿಗಳನ್ನು ಸಮಯಕ್ಕೆ ಸರಿಯಾಗಿ ಮತ್ತು ಉತ್ತಮ ಗುಣಮಟ್ಟದಲ್ಲಿ ಪೂರ್ಣಗೊಳಿಸುವುದು ಜಿಬಿಎ ಮುಖ್ಯ ಆಶಯವಾಗಿದೆ.


Share

You cannot copy content of this page