ಬೆಂಗಳೂರು: ನಮ್ಮ ವಿದ್ಯಾರ್ಥಿ-ಯುವ ಸಮುದಾಯ ಸಂಶೋಧನೆ, ತಂತ್ರಜ್ಞಾನ, ನೂತನ ಆವಿಷ್ಕಾರಗಳ ಮೂಲಕ ‘ವಿಕಸಿತ ಭಾರತ’ಕ್ಕೆ ಅನನ್ಯ ಕೊಡುಗೆ ನೀಡಬೇಕಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಪ್ರಲ್ಹಾದ ಜೋಶಿ ಕರೆ ನೀಡಿದರು.
ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ಧ IIT ಮದ್ರಾಸ್ ಹಳೆಯ ವಿದ್ಯಾರ್ಥಿಗಳ ಸಂಘದ 7ನೇ ಆವೃತ್ತಿಯ ‘ಸಂಗಮ್ 2026’ ಸಮಾವೇಶ ಉದ್ದೇಶಿಸಿ ಮಾತನಾಡಿದರು.
ಆತ್ಮನಿರ್ಭರ ಭಾರತ, ಸ್ವಾವಲಂಬಿ ಭಾರತ ನಿರ್ಮಾಣದ ಆಶಯದಲ್ಲಿ ಪ್ರಧಾನಿ ಮೋದಿ ಅವರು ವಿಕಸಿತ ಭಾರತದತ್ತ ಪ್ರೇರಣೆಯ ಹೆಜ್ಜೆಯಿರಿಸಿದ್ದಾರೆ. ಇದಕ್ಕೆ ದೇಶದ ವಿದ್ಯಾರ್ಥಿ-ಯುವ ಜನತೆಯ ಪಾತ್ರವೂ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.
ತಂತ್ರಜ್ಞಾನ, ಶಿಕ್ಷಣ, ಉದ್ಯಮ ಹಾಗೂ ಉದ್ಯಮಶೀಲತೆಗಳ ನವ ಸಂಗಮವು ಭಾರತವನ್ನು ‘ವಿಕಸಿತ ಭಾರತ – 2047’ನತ್ತ ಮುನ್ನಡೆಸುತ್ತಿದ್ದು, ಇದು ನಾವೀನ್ಯತೆಯ ಸಾಕಾರರೂಪವಾಗಿದೆ ಎಂದು ಹೇಳಿದರು.
ಯುವ ನಾವೀನ್ಯಕಾರರಿಗೆ ಅಗತ್ಯ ಮಾರ್ಗದರ್ಶನ, ತಂತ್ರಜ್ಞಾನದ ವಾಣಿಜ್ಯೀಕರಣಕ್ಕೆ ವೇಗ ನೀಡುವುದು, ಡೀಪ್-ಟೆಕ್ ಉದ್ಯಮಶೀಲತೆಗೆ ಬೆಂಬಲ ನೀಡುವುದು ಹಾಗೂ ಜಾಗತಿಕ ಮಟ್ಟದಲ್ಲಿ ಭಾರತದ ಇನ್ನೋವೇಶನ್ ವ್ಯವಸ್ಥೆಯನ್ನು ಬಲಪಡಿಸುವ ಮೂಲಕ ರಾಷ್ಟ್ರೀಯ ವಿಕಾಸದ ಪಯಣದಲ್ಲಿ ಮತ್ತಷ್ಟು ಸಕ್ರಿಯ ಪಾತ್ರ ವಹಿಸಬೇಕೆಂದು ಸಲಹೆ ನೀಡಿದರು.
ವೈಜ್ಞಾನಿಕ ಸಂಶೋಧನೆ ಮತ್ತು ಜ್ಞಾನವನ್ನು ಆಧುನಿಕ ತಂತ್ರಜ್ಞಾನ, ಉದ್ಯಮಗಳು ಹಾಗೂ ವಾಸ್ತವಿಕ ಸವಾಲುಗಳಿಗೆ ಪರಿಹಾರಗಳನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದನ್ನು ಐಐಟಿ ಮದ್ರಾಸ್ ನಿರಂತರವಾಗಿ ಸಾಬೀತುಪಡಿಸುತ್ತಿದೆ ಎಂದು ಸಚಿವರು ಶ್ಲಾಘಿಸಿದರು.
