ಬೆಂಗಳೂರು:ಕರ್ನಾಟಕ ಸರ್ಕಾರದ ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆಯಡಿ ಕಾರ್ಯನಿರ್ವಹಿಸುವ ಕರ್ನಾಟಕ ಇನ್ನೋವೇಷನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್), ಜಾಗತಿಕ ವಾಯ್ಸ್ ಎಐ ಸಂಸ್ಥೆಯಾದ ಎಲೆವನ್‌ಲ್ಯಾಬ್ಸ್ ಇಂಕ್. ಜೊತೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಮಾಡಿದೆ. ಜವಾಬ್ದಾರಿಯುತ ಎಐ ಬಳಕೆ, ನಾಗರಿಕ ಸೇವೆಗಳು ಮತ್ತು ಸಾಮಾಜಿಕ ಒಳಿತಿಗಾಗಿ ವಾಯ್ಸ್ ಎಐನ ಸಾಧ್ಯತೆಗಳನ್ನು ಅನ್ವೇಷಿಸುವುದು ಈ ಸಹಭಾಗಿತ್ವದ ಉದ್ದೇಶವಾಗಿದೆ.
ಈ ಸಹಭಾಗಿತ್ವವು ಮೂರು ಪ್ರಮುಖ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಲಿದೆ — ವಾಯ್ಸ್ ಎಐ ಸುರಕ್ಷತಾ ಚೌಕಟ್ಟು ರೂಪಿಸುವುದು, ಮಾತನಾಡುವ ಸಾಮರ್ಥ್ಯ ಕಳೆದುಕೊಂಡವರಿಗೆ ಎಐ ಆಧಾರಿತ ಧ್ವನಿ ಪುನರ್‌ಸ್ಥಾಪನೆಯ ಮೂಲಕ ನೆರವು ನೀಡುವುದು ಹಾಗೂ ಸರ್ಕಾರಿ ಸೇವೆಗಳನ್ನು ನಾಗರಿಕರಿಗೆ ಇನ್ನಷ್ಟು ಸುಲಭವಾಗಿ ತಲುಪಿಸಲು ವಾಯ್ಸ್ ಎಐ ಬಳಕೆಯ ಸಾಧ್ಯತೆಗಳನ್ನು ಅನ್ವೇಷಿಸುವುದು.
ಈ ಸಹಭಾಗಿತ್ವದ ಕುರಿತು ಮಾತನಾಡಿದ ಕರ್ನಾಟಕ ಸರ್ಕಾರದ ಮಾನ್ಯ ಗೃಹ, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ಇ-ಆಡಳಿತ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು, ಎಐ ಅಂತಿಮವಾಗಿ ಜನರ ಬದುಕಿನಲ್ಲಿ ಅದು ತರುವ ಬದಲಾವಣೆಯ ಆಧಾರದ ಮೇಲೆ ಅಳೆಯಲ್ಪಡಬೇಕು. ವಾಯ್ಸ್ ಎಐ ಸರ್ಕಾರವನ್ನು ಇನ್ನಷ್ಟು ಸುಲಭವಾಗಿ ತಲುಪುವಂತೆ ಹಾಗೂ ನಾಗರಿಕ-ಕೇಂದ್ರಿತವಾಗಿಸುವ ಅವಕಾಶವನ್ನು ಒದಗಿಸುತ್ತದೆ. ಆದರೆ ಇದರೊಂದಿಗೆ ಸುರಕ್ಷತೆ, ಒಪ್ಪಿಗೆ, ನಂಬಿಕೆ ಮತ್ತು ದುರ್ಬಳಕೆ ತಡೆಗಟ್ಟುವಿಕೆಯಂತಹ ಹೊಸ ಜವಾಬ್ದಾರಿಗಳೂ ಬರುತ್ತವೆ.
ಎಲೆವನ್‌ಲ್ಯಾಬ್ಸ್‌ನೊಂದಿಗಿನ ಈ ಸಹಭಾಗಿತ್ವದ ಮೂಲಕ ಕರ್ನಾಟಕವು ಈ ಎರಡೂ ಆಯಾಮಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಹೊಂದಿದೆ – ವಾಯ್ಸ್ ಎಐ ಅನ್ನು ಜವಾಬ್ದಾರಿಯುತವಾಗಿ ಬಳಸಲು ಬಲವಾದ ಸುರಕ್ಷತಾ ಕ್ರಮಗಳನ್ನು ರೂಪಿಸುವುದರ ಜೊತೆಗೆ, ನಮ್ಮ ನಾಗರಿಕರು ಎದುರಿಸುತ್ತಿರುವ ನೈಜ ಸವಾಲುಗಳಿಗೆ ಪರಿಹಾರ ಒದಗಿಸುವ ಬಳಕೆಗಳನ್ನು ಅನ್ವೇಷಿಸುವುದು.
ಮಾತನಾಡುವ ಸಾಮರ್ಥ್ಯ ಕಳೆದುಕೊಂಡವರಿಗೆ ತಮ್ಮದೇ ಧ್ವನಿಯಲ್ಲಿ ಮತ್ತೆ ಸಂವಹನ ನಡೆಸಲು ನೆರವಾಗುವ ಸಾಧ್ಯತೆ ಸಾರ್ವಜನಿಕ ಹಿತಕ್ಕಾಗಿ ತಂತ್ರಜ್ಞಾನವನ್ನು ಬಳಸುವ ಅತ್ಯಂತ ಪರಿಣಾಮಕಾರಿ ಉದಾಹರಣೆಯಾಗಿದೆ. ಕರ್ನಾಟಕದಲ್ಲಿನ ಆವಿಷ್ಕಾರಗಳು ಕೇವಲ ತಂತ್ರಜ್ಞಾನದ ಮುಂಚೂಣಿಯಲ್ಲಿರುವುದಷ್ಟೇ ಅಲ್ಲದೆ, ಜನರಿಗೆ ಅರ್ಥಪೂರ್ಣ ಫಲಿತಾಂಶಗಳನ್ನು ನೀಡುವ ರೀತಿಯಲ್ಲಿ ಜವಾಬ್ದಾರಿಯುತವಾಗಿ ಬಳಕೆಯಾಗಬೇಕು ಎಂಬುದು ನಮ್ಮ ಉದ್ದೇಶ,” ಎಂದು ಹೇಳಿದರು.
ಎಲೆವನ್‌ಲ್ಯಾಬ್ಸ್‌ನ ಸಹ-ಸಂಸ್ಥಾಪಕ ಮತ್ತು ಸಿಇಒ ಮಾಟಿ ಸ್ಟಾನಿಶೆವ್ಸ್ಕಿ ಅವರು, “ಭಾರತದ ರಾಜ್ಯ ಸರ್ಕಾರದೊಂದಿಗಿನ ನಮ್ಮ ಮೊದಲ ಸಹಭಾಗಿತ್ವ ಇದಾಗಿರುವುದಕ್ಕೆ ನಮಗೆ ಹೆಮ್ಮೆಯಿದೆ. ಜನರು ತಂತ್ರಜ್ಞಾನದೊಂದಿಗೆ ಸಂವಹನ ನಡೆಸುವ ಅತ್ಯಂತ ಸಹಜ ಮಾಧ್ಯಮವೆಂದರೆ ಧ್ವನಿ. ಕರ್ನಾಟಕ ಇನ್ನೋವೇಷನ್ ಅಂಡ್ ಟೆಕ್ನಾಲಜಿ ಸೊಸೈಟಿಯೊಂದಿಗೆ ಕಾರ್ಯನಿರ್ವಹಿಸುವ ಮೂಲಕ ನಾಗರಿಕ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪಿಸಲು ಹಾಗೂ ತಮ್ಮ ಧ್ವನಿಯನ್ನು ಕಳೆದುಕೊಂಡವರಿಗೆ ಅದನ್ನು ಪುನರ್‌ಸ್ಥಾಪಿಸಲು ವಾಯ್ಸ್ ಎಐ ಹೇಗೆ ನೆರವಾಗಬಹುದು ಎಂಬುದನ್ನು ಅನ್ವೇಷಿಸಲು ನಾವು ಉತ್ಸುಕರಾಗಿದ್ದೇವೆ,” ಎಂದು ಹೇಳಿದರು.
ವಾಯ್ಸ್ ಎಐಗೆ ಸುರಕ್ಷತಾ ಚೌಕಟ್ಟು
ವಾಯ್ಸ್ ಎಐ ಅತ್ಯಂತ ವಾಸ್ತವಿಕ ಕೃತಕ ಧ್ವನಿಗಳನ್ನು ಸೃಷ್ಟಿಸುವ ಸಾಮರ್ಥ್ಯವನ್ನು ವೇಗವಾಗಿ ಪಡೆಯುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರ ಮತ್ತು ಎಲೆವನ್‌ಲ್ಯಾಬ್ಸ್ ರಾಜ್ಯಕ್ಕಾಗಿ ಯಾವುದೇ ಒಂದು ನಿರ್ದಿಷ್ಟ ತಂತ್ರಜ್ಞಾನಕ್ಕೆ ಸೀಮಿತವಾಗಿರದ ವಾಯ್ಸ್ ಎಐ ಸುರಕ್ಷತಾ ಚೌಕಟ್ಟನ್ನು ರೂಪಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿವೆ.
ಎಲೆವನ್‌ಲ್ಯಾಬ್ಸ್, ಕರ್ನಾಟಕದ ರೆಸ್ಪಾನ್ಸಿಬಲ್ ಎಐ ಚೌಕಟ್ಟಿಗೆ ತನ್ನ ಪರಿಣತಿಯನ್ನು ಒದಗಿಸಲಿದೆ. ಧ್ವನಿ ಮತ್ತು ಆಡಿಯೋ ಎಐಗೆ ಸಂಬಂಧಿಸಿದ ಅಪಾಯಗಳ ಕುರಿತು ಇದರಲ್ಲಿ ನಿರ್ದಿಷ್ಟ ಗಮನ ಹರಿಸಲಾಗುವುದು.
ಡೀಪ್‌ಫೇಕ್ ಪತ್ತೆ, ಆಡಿಯೋ ಪ್ರೊವೆನನ್ಸ್ ಮತ್ತು ವಾಟರ್‌ಮಾರ್ಕಿಂಗ್, ಧ್ವನಿ ಕ್ಲೋನಿಂಗ್‌ಗೆ ಒಪ್ಪಿಗೆ, ಸಾರ್ವಜನಿಕ ವ್ಯಕ್ತಿಗಳ ಧ್ವನಿ ಕ್ಲೋನಿಂಗ್‌ಗೆ ನಿರ್ಬಂಧ ಹಾಗೂ ಧ್ವನಿ ವಂಚನೆ ಮತ್ತು ನಕಲಿ ಗುರುತಿನ ಬಳಕೆಯಿಂದ ರಕ್ಷಣೆ ಸೇರಿದಂತೆ ಹಲವು ಸುರಕ್ಷತಾ ಕ್ರಮಗಳನ್ನು ಈ ಸಹಭಾಗಿತ್ವದಡಿ ಪರಿಶೀಲಿಸಲಾಗುವುದು.
ಸಾರ್ವಜನಿಕವಾಗಿ ಕಾರ್ಯನಿರ್ವಹಿಸುವ ಸರ್ಕಾರಿ ಪ್ರತಿನಿಧಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಧ್ವನಿಯನ್ನು ಅನಧಿಕೃತವಾಗಿ ಕ್ಲೋನ್ ಮಾಡುವುದರಿಂದ ರಕ್ಷಿಸುವ ಕ್ರಮಗಳನ್ನೂ ಅನ್ವೇಷಿಸಲಾಗುವುದು. ಕೃತಕ ಧ್ವನಿಗಳನ್ನು ನೈಜ ಧ್ವನಿಗಳಿಂದ ಪ್ರತ್ಯೇಕಿಸುವುದು ಹೆಚ್ಚು ಕಷ್ಟವಾಗುತ್ತಿರುವ ಹಿನ್ನೆಲೆಯಲ್ಲಿ ಇದು ಮಹತ್ವದ ವಿಷಯವಾಗಿದೆ.
ವಾಯ್ಸ್ ಎಐನಿಂದ ಉಂಟಾಗಬಹುದಾದ ಹೊಸ ಅಪಾಯಗಳ ಕುರಿತು ಸರ್ಕಾರಿ ಅಧಿಕಾರಿಗಳು ಮತ್ತು ಸಂಬಂಧಿತ ಸಂಸ್ಥೆಗಳಲ್ಲಿ ಅರಿವು ಹಾಗೂ ಸಿದ್ಧತೆಯನ್ನು ಹೆಚ್ಚಿಸಲು ಜ್ಞಾನ ಹಂಚಿಕೆ ಮತ್ತು ಸಾಮರ್ಥ್ಯ ವೃದ್ಧಿ ಕಾರ್ಯಕ್ರಮಗಳನ್ನೂ ಸಹಭಾಗಿತ್ವದಡಿ ಕೈಗೊಳ್ಳಲಾಗುವುದು.
ಧ್ವನಿ ಕಳೆದುಕೊಂಡವರಿಗೆ ಮತ್ತೆ ಮಾತನಾಡಲು ಎಐ ನೆರವು
ಈ ಸಹಭಾಗಿತ್ವದ ಪ್ರಮುಖ ಸಾರ್ವಜನಿಕ ಹಿತಾಸಕ್ತಿಯ ಉಪಕ್ರಮವೆಂದರೆ ಮಾತನಾಡುವ ಸಾಮರ್ಥ್ಯ ಕಳೆದುಕೊಂಡವರಿಗೆ ವಾಯ್ಸ್ ಎಐ ಮೂಲಕ ಮತ್ತೆ ಸಂವಹನ ನಡೆಸಲು ನೆರವು ನೀಡುವುದು.
ಎಂಒಯು ಅಡಿಯಲ್ಲಿ, ರಾಜ್ಯ ಸರ್ಕಾರ ಅಥವಾ ಅದರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಗಳು ಮತ್ತು ಸಂಘಟನೆಗಳು ಗುರುತಿಸುವ ಅರ್ಹ ನಾಗರಿಕರಿಗೆ ಎಲೆವನ್‌ಲ್ಯಾಬ್ಸ್ ತನ್ನ ‘ಒನ್ ಮಿಲಿಯನ್ ವಾಯ್ಸಸ್’ ಕಾರ್ಯಕ್ರಮದಡಿ ಉಚಿತ ಜೀವಿತಾವಧಿ ಪರವಾನಗಿಗಳನ್ನು ಒದಗಿಸಲಿದೆ.
ಈ ತಂತ್ರಜ್ಞಾನದ ಮೂಲಕ ಅರ್ಹ ವ್ಯಕ್ತಿಗಳು ತಮ್ಮದೇ ಧ್ವನಿಯ ಕೃತಕ ರೂಪವನ್ನು ಬಳಸಿಕೊಂಡು ಸಂವಹನ ನಡೆಸಬಹುದು. ಇದರಲ್ಲಿ ಕನ್ನಡದಲ್ಲಿಯೂ ಸಂವಹನ ನಡೆಸುವ ಸಾಧ್ಯತೆ ಇದೆ. ಬಾಯಿ ಮತ್ತು ಗಂಟಲು ಕ್ಯಾನ್ಸರ್, ಎಎಲ್‌ಎಸ್ ಹಾಗೂ ಇತರ ನರವೈಜ್ಞಾನಿಕ ಅಥವಾ ಕ್ಷೀಣಗೊಳ್ಳುವ ಕಾಯಿಲೆಗಳಿಂದ ಮಾತನಾಡುವ ಸಾಮರ್ಥ್ಯ ಕಳೆದುಕೊಂಡವರಿಗೆ ಈ ಉಪಕ್ರಮ ನೆರವಾಗಲಿದೆ.
ಈ ಉಪಕ್ರಮದ ಅನುಷ್ಠಾನವನ್ನು ಅನ್ವೇಷಿಸಲು ಹಾಗೂ ಎಲೆವನ್‌ಲ್ಯಾಬ್ಸ್‌ನ ವಾಯ್ಸ್ ತಂತ್ರಜ್ಞಾನದ ಉಚಿತ ಸೌಲಭ್ಯದಿಂದ ಪ್ರಯೋಜನ ಪಡೆಯಬಹುದಾದ ಅರ್ಹ ಫಲಾನುಭವಿಗಳನ್ನು ಗುರುತಿಸಲು ಕೆಐಟಿಎಸ್ ಈಗಾಗಲೇ ಮೈಸೂರಿನ ಎಐಐಎಸ್‌ಎಚ್ — ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಜೊತೆ ಚರ್ಚೆ ನಡೆಸುತ್ತಿದೆ.
ಈ ಉಪಕ್ರಮವು ಎಐ ತಂತ್ರಜ್ಞಾನವನ್ನು ನೇರವಾಗಿ ಮಾನವ ಘನತೆ ಮತ್ತು ಒಳಗೊಳ್ಳುವಿಕೆಯ ಸೇವೆಗೆ ಬಳಸುವ ಮಹತ್ವದ ಹೆಜ್ಜೆಯಾಗಿದೆ. ತಮ್ಮ ಸಹಜ ಧ್ವನಿಯಲ್ಲಿ ಮಾತನಾಡುವ ಸಾಮರ್ಥ್ಯ ಕಳೆದುಕೊಂಡವರಿಗೆ ಮತ್ತೆ ಸಂವಹನ ನಡೆಸಲು ಹಾಗೂ ದೈನಂದಿನ ಜೀವನದಲ್ಲಿ ಹೆಚ್ಚು ಸಕ್ರಿಯವಾಗಿ ಭಾಗವಹಿಸಲು ವಾಯ್ಸ್ ತಂತ್ರಜ್ಞಾನ ನೆರವಾಗಲಿದೆ.
ಸರ್ಕಾರಿ ಸೇವೆಗಳನ್ನು ಇನ್ನಷ್ಟು ಸುಲಭವಾಗಿ ತಲುಪಿಸಲು ವಾಯ್ಸ್ ಎಐ
ನಾಗರಿಕರು ಸರ್ಕಾರಿ ಸೇವೆಗಳು ಮತ್ತು ಮಾಹಿತಿಯನ್ನು ಪಡೆಯುವ ವಿಧಾನವನ್ನು ಸುಧಾರಿಸಲು ವಾಯ್ಸ್ ಎಐ ಅನ್ನು ಹೇಗೆ ಬಳಸಬಹುದು ಎಂಬುದನ್ನೂ ಸಹಭಾಗಿತ್ವದಡಿ ಅನ್ವೇಷಿಸಲಾಗುವುದು.
ನಾಗರಿಕರ ಸಹಾಯವಾಣಿ, ಕುಂದುಕೊರತೆ ಪರಿಹಾರ, ಸರ್ಕಾರಿ ಮಾಹಿತಿ ಮತ್ತು ವಿವಿಧ ಸೌಲಭ್ಯಗಳಿಗೆ ಪ್ರವೇಶ, ಹಾಗೂ ಕನ್ನಡ ಸೇರಿದಂತೆ ಕರ್ನಾಟಕದಲ್ಲಿ ಮಾತನಾಡುವ ವಿವಿಧ ಭಾಷೆಗಳಲ್ಲಿ ವಾಯ್ಸ್ ಆಧಾರಿತ ಇಂಟರ್‌ಫೇಸ್‌ಗಳು ಇದರ ಸಂಭಾವ್ಯ ಬಳಕೆಗಳಲ್ಲಿ ಸೇರಿವೆ.
ರಾಜ್ಯ ಸರ್ಕಾರ ಮತ್ತು ಎಲೆವನ್‌ಲ್ಯಾಬ್ಸ್ ಸೂಕ್ತ ಬಳಕೆಯ ಸಂದರ್ಭಗಳನ್ನು ಗುರುತಿಸಿ ಡೆಮೊ ಮತ್ತು ಪೈಲಟ್ ಯೋಜನೆಗಳನ್ನು ಕೈಗೊಳ್ಳಲಿವೆ. ಕರ್ನಾಟಕ ಸರ್ಕಾರದೊಂದಿಗೆ ನಡೆದ ಚರ್ಚೆಗಳ ಸಂದರ್ಭದಲ್ಲಿ ನಾಗರಿಕರೊಂದಿಗೆ ಸಂವಹನ ಮತ್ತು ಸಾರ್ವಜನಿಕ ಸೇವೆಗಳಲ್ಲಿ ವಾಯ್ಸ್ ಎಐ ಬಳಕೆಯ ಹಲವು ಸಾಧ್ಯತೆಗಳನ್ನು ಎಲೆವನ್‌ಲ್ಯಾಬ್ಸ್ ಪ್ರದರ್ಶಿಸಿದೆ.
ಬಹುಭಾಷಿಕ ಜನಸಂಖ್ಯೆ ಮತ್ತು ಬಲವಾದ ತಂತ್ರಜ್ಞಾನ ಪರಿಸರ ವ್ಯವಸ್ಥೆಯನ್ನು ಹೊಂದಿರುವ ಕರ್ನಾಟಕಕ್ಕೆ, ಸಾಂಪ್ರದಾಯಿಕ ಡಿಜಿಟಲ್ ಇಂಟರ್‌ಫೇಸ್‌ಗಳನ್ನು ಬಳಸಲು ಕಷ್ಟಪಡುವ ನಾಗರಿಕರು ಸೇರಿದಂತೆ ಎಲ್ಲರಿಗೂ ಡಿಜಿಟಲ್ ಸರ್ಕಾರಿ ಸೇವೆಗಳನ್ನು ಇನ್ನಷ್ಟು ಸಹಜ ಮತ್ತು ಸುಲಭವಾಗಿ ತಲುಪಿಸಲು ವಾಯ್ಸ್ ಇಂಟರ್‌ಫೇಸ್‌ಗಳು ಹೊಸ ಅವಕಾಶವನ್ನು ಒದಗಿಸುತ್ತವೆ.
ಮುಂದಿನ ಹಂತದಲ್ಲಿ ಈ ಮೂರು ಕ್ಷೇತ್ರಗಳಲ್ಲಿ ನಿರ್ದಿಷ್ಟ ಬಳಕೆಯ ಸಂದರ್ಭಗಳು ಮತ್ತು ಪೈಲಟ್ ಯೋಜನೆಗಳನ್ನು ಗುರುತಿಸಲಾಗುವುದು. ಅವುಗಳ ವ್ಯಾಪ್ತಿ, ಅನುಷ್ಠಾನದ ಕ್ರಮ ಮತ್ತು ವೇಗವನ್ನು ರಾಜ್ಯ ಸರ್ಕಾರ ನಿರ್ಧರಿಸಲಿದೆ.
ಈ ಎಂಒಯು ಸ್ವಯಂಪ್ರೇರಿತ ಮತ್ತು ಕಾನೂನುಬದ್ಧವಾಗಿ ಬಾಧ್ಯತೆಯಿಲ್ಲದ ಒಪ್ಪಂದವಾಗಿದ್ದು, ಭವಿಷ್ಯದ ಯಾವುದೇ ಖರೀದಿ ಅಥವಾ ಟೆಂಡರ್ ನಿರ್ಧಾರಗಳ ಮೇಲೆ ಯಾವುದೇ ಪೂರ್ವನಿರ್ಧಾರಿತ ಪರಿಣಾಮ ಬೀರುವುದಿಲ್ಲ. ನಿರ್ದಿಷ್ಟ ಉಪಕ್ರಮಗಳನ್ನು ಪರಸ್ಪರ ಒಪ್ಪಿಗೆಯ ವ್ಯವಸ್ಥೆಗಳ ಮೂಲಕ, ಅನ್ವಯವಾಗುವ ಅನುಮೋದನೆಗಳು ಮತ್ತು ಕಾನೂನುಗಳಿಗೆ ಒಳಪಟ್ಟು ಮುಂದುವರಿಸಲಾಗುವುದು.
ಈ ಎಂಒಯುಗೆ ಕರ್ನಾಟಕ ಇನ್ನೋವೇಷನ್ ಅಂಡ್ ಟೆಕ್ನಾಲಜಿ ಸೊಸೈಟಿ, ಎಲೆಕ್ಟ್ರಾನಿಕ್ಸ್, ಐಟಿ ಮತ್ತು ಬಿಟಿ ಇಲಾಖೆ, ಕರ್ನಾಟಕ ಸರ್ಕಾರದ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಅವಿನಾಶ್ ಮೆನನ್ ರಾಜೇಂದ್ರನ್, ಐಎಎಸ್, ಮತ್ತು ಎಲೆವನ್‌ಲ್ಯಾಬ್ಸ್ ಇಂಕ್.ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಾಟಿಯುಷ್ “ಮಾಟಿ” ಸ್ಟಾನಿಶೆವ್ಸ್ಕಿ ಅವರು ಅಕ್ಟೋಬರ್ 6, 2026ರಂದು ಸಹಿ ಹಾಕಿದರು.
