ಸಮಗ್ರ ಸುದ್ದಿ

ಸಾಮಾಜಿಕ ಭ್ರದತಾ ಯೋಜನೆಯಡಿ 24.50 ಲಕ್ಷ ಅಕ್ರಮ ಫಲಾನುಭವಿಗಳು |ನಿಖರ ಫಲಾನುಭವಿಗಳ ಮಾಹಿತಿ ಪಡೆಯಲು ಪರಿಶೀಲನೆ : ಸಚಿವ ಕೃಷ್ಣ ಭೈರೇಗೌಡ

Share

ಬೆಳಗಾವಿ : ರಾಜ್ಯದಲ್ಲಿ ನಿಖರವಾಗಿ ಕುಟುಂಬದ ಆದಾಯ ನಿರ್ಧರಿಸುವ ವ್ಯವಸ್ಥೆಯಿಲ್ಲ. ಇದರ ಲಾಭ ಪಡೆದು ಕೆಳ ಹಂತದ ಅಧಿಕಾರಿಗಳು ಆದಾಯ ಪ್ರಮಾಣ ಪತ್ರಗಳನ್ನು ಮನಬಂದಂತೆ ನೀಡುತ್ತಿದ್ದಾರೆ. ಇದರ ಫಲವಾಗಿ ರಾಜ್ಯದ ಸಾಮಾಜಿಕ ಭದ್ರತಾ ಯೋಜನೆಗಳು ದುರ್ಬಳಕೆಯಾಗುತ್ತಿದೆ. ಸುಮಾರು 24.50 ಲಕ್ಷ ಅಕ್ರಮ ಫಲಾನುಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾಹಿತಿ ನೀಡಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿಂದು ಶಾಸಕ ಡಾ.ಭರತ್ ಶೆಟ್ಟಿ ವೈ ಅವರ ಗಮನ ಸೆಳೆಯುವ ಸೂಚನೆಗೆ ಸಚಿವರು ಉತ್ತರಿಸಿದರು.

ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳ ಆಧಾರ್ ಜೋಡಣೆ ಸಂದರ್ಭದಲ್ಲಿ ನಿಗದಿಪಡಿಸಿದ ವಯೋಮಿತಿಗೂ ಕಡಿಮೆ ವಯಸ್ಸಿನವರು ಸೌಲಭ್ಯ ಪಡೆಯುತ್ತಿದ್ದಾರೆ. ಇದರೊಂದಿಗೆ ಸುಮಾರು 10 ಸಾವಿರಕ್ಕೂ ಅಧಿಕ ಆದಾಯ ತೆರಿಗೆ ಪಾವತಿದಾರರು, ಹೆಚ್.ಆರ್.ಎಂ.ಎಸ್‍ನಲ್ಲಿ ಮಾಹಿತಿ ಇರುವ ಸರ್ಕಾರಿ ನೌಕರರು ಸಹ ಸಾಮಾಜಿಕ ಭದ್ರತಾ ಯೋಜನೆಯ ಸೌಲಭ್ಯ ಪಡೆಯುತ್ತಿರುವುದು ಗಮನಕ್ಕೆ ಬಂದಿದೆ. ಅಕ್ರಮ ಫಲಾನುಭವಿಗಳ ಪರಿಶೀಲನೆ ಕಾರ್ಯ ಪ್ರಗತಿಯಲ್ಲಿದೆ. ಕೂಡಲೇ ಪತ್ತೆ ಹಚ್ಚಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಸಚಿವ ಕೃಷ್ಣ ಭೈರೇಗೌಡ ಹೇಳಿದರು.

ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಗೆ ಅರ್ಜಿ ಸಲ್ಲಿಸುವ ಆದಾಯ ಮಿತಿಯನ್ನು ಬಿ.ಪಿ.ಎಲ್. ಕಾರ್ಡು ಮಾದರಿಯಲ್ಲಿ 1.2 ಲಕ್ಷಕ್ಕೆ ಹೆಚ್ಚಿಸುವಂತೆ ಮನವಿಗಳು ಕೇಳಿ ಬಂದಿವೆ. ಸದ್ಯ ಸರ್ಕಾರದ ಗೃಹಲಕ್ಷ್ಮಿ ಸೇರಿದಂತೆ ಪಂಚ ಗ್ಯಾರಂಟಿ ಹಾಗೂ ಇತರೆ ಯೋಜನೆಗಳಿಂದಲೇ ಪ್ರತಿ ಕುಟುಂಬಕ್ಕೆ 32,000 ಕ್ಕಿಂತಲೂ ಹೆಚ್ಚು ಹಣ ಜಮೆಯಾಗುತ್ತಿದೆ.

ಈ ಹಿನ್ನಲೆಯಲ್ಲಿ ರಾಜ್ಯದಲ್ಲಿ ಕುಟುಂಬದ ಆದಾಯ ಮಿತಿ ನಿಖರವಾಗಿ ನಿರ್ಧರಿಸುವ ವ್ಯವಸ್ಥೆ ಜಾರಿಗೊಳಿಸಿದ ಬಳಿಕ ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಗೆ ಆದಾಯ ಮಿತಿ ಹೆಚ್ಚಿಸುವುದಾಗಿ ಸಚಿವರು ತಿಳಿಸಿದರು.


Share

You cannot copy content of this page