ಬೆಳಗಾವಿ : ಅರಣ್ಯ ಹಕ್ಕು ಕಾಯಿದೆಯಡಿ ಅನುಸೂಚಿತ ಬುಡಕಟ್ಟು ಹೊರತುಪಡಿಸಿ ಇತರ ಪಾರಂಪರಿಕ ಅರಣ್ಯವಾಸಿಗಳು ಸಲ್ಲಿಸಿದ್ದ ಶೇ.99ರಷ್ಟು ಅರ್ಜಿ ತಿರಸ್ಕೃತವಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿಂದು ಶಾಸಕ ಶಿವರಾಮ್ ಹೆಬ್ಬಾರ್ ಅವರ ಗಮನ ಸೆಳೆಯುವ ಸೂಚನೆಗೆ ಪ್ರತಿಕ್ರಿಯಿಸಿದ ಸಚಿವರು, ಅರಣ್ಯ ಹಕ್ಕು ಕೋರಿ ಬಂದಿರುವ ಎರಡು ಲಕ್ಷ 41 ಸಾವಿರಕ್ಕೂ ಹೆಚ್ಚು ಅರ್ಜಿಗಳ ಪೈಕಿ ಕೇವಲ 2000 ಅರ್ಜಿ ಪುರಸ್ಕೃತವಾಗಿದ್ದು ಅವರಿಗೆ ಹಕ್ಕು ನೀಡಲಾಗಿದೆ. ಕಾರಣ ಇತರ ಪಾರಂಪರಿಕ ಅರಣ್ಯವಾಸಿಗಳಿಗೆ ತಾವು ಅಥವಾ ತಮ್ಮ ಪೂರ್ವಜರು 75 ವರ್ಷ ಅರಣ್ಯದಲ್ಲಿದ್ದೆವು ಎಂದು ಸಾಬೀತು ಪಡಿಸಲು ದಾಖಲೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದರು.
ಈ ಸಮಸ್ಯೆ ಮನಗಂಡು, ಸರ್ಕಾರ ಅರಣ್ಯ ವಾಸಿ ಅನುಸೂಚಿತ ಬುಡಕಟ್ಟು ಸಮುದಾಯದವರಿಗೆ ಸಮಾನವಾಗಿ ಇತರ ಪಾರಂಪರಿಕ ಅರಣ್ಯ ವಾಸಿಗಳನ್ನೂ ಪರಿಗಣಿಸುವಂತೆ ಉಭಯ ಸದನಗಳಲ್ಲಿ ನಿರ್ಣಯ ಕೈಗೊಂಡು ಕಳಿಸಿತ್ತು. ಆದರೆ ಅದನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ ಎಂದರು.
ಈಗ ಅರ್ಜಿಗಳ ಮರು ಪರಿಶೀಲನೆ ಮಾಡಬೇಕೆಂದರೆ ಬುಡಕಟ್ಟು ಇಲಾಖೆಯೇ ಮಾಡಬೇಕು. ಕೇವಲ ನಕ್ಷೆಗಳನ್ನು ಮತ್ತು ಉಪಗ್ರಹ ಆಧಾರಿತ ಚಿತ್ರಗಳನ್ನು ನೀಡುವ ಜವಾಬ್ದಾರಿ ಮಾತ್ರವೇ ಅರಣ್ಯ ಇಲಾಖೆಗಿದೆ. ಕಾಯಿದೆ ಬದಲಾವಣೆ ಆಗುವವರೆಗೆ ಹಕ್ಕು ನೀಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
.ಶಿವರಾಮ್ ಹೆಬ್ಬಾರ್ ಮಾತನಾಡಿ ಬುಡಕಟ್ಟು ಸಮುದಾಯಕ್ಕೆ ಸರಿಸಮನಾಗಿ ಇತರ ಪಾರಂಪರಿಕ ಅರಣ್ಯವಾಸಿಗಳನ್ನೂ ಪರಿಗಣಿಸುವಂತೆ ಪ್ರತಿಪಕ್ಷ ನಾಯಕರು ಕೇಂದ್ರದ ಮೇಲೆ ಒತ್ತಡ ಹೇರಿ ಕಾನೂನಿಗೆ ತಿದ್ದುಪಡಿ ತರದೆ ಹೋದರೆ ರಾಜ್ಯದ 4 ಲಕ್ಷಕ್ಕೂ ಹೆಚ್ಚು ಕುಟುಂಬಗಳು ಸಂಕಷ್ಟಕ್ಕೆ ಈಡಾಗುತ್ತವೆ ಎಂದು ಹೇಳಿದರು.
