ಸಮಗ್ರ ಸುದ್ದಿ

ಕಾರ್ಮಿಕ ಕಿಟ್ ವಿತರಣೆ ನಿಯಮಕ್ಕೆ ಮಾರ್ಪಾಡು ತರಲು ಚಿಂತನೆ – ಕಾರ್ಮಿಕ ಸಚಿವ ಸಂತೋಷ್ ಲಾಡ್

Share

ಬೆಳಗಾವಿ: ಕಾರ್ಮಿಕ ಇಲಾಖೆಯಡಿ ವಿವಿಧ ವೃತ್ತಿ ಮಾಡುತ್ತಿರುವ ರಾಜ್ಯದ ಕಾರ್ಮಿಕರಿಗೆ 7 ಲಕ್ಷ ಟೂಲ್ ಕಿಟ್ ವಿತರಿಸಲಾಗಿದೆ. ಒಮ್ಮೆ ಕಾರ್ಮಿಕ ಕಿಟ್ ಪಡೆದರೆ ಮತ್ತ್ತೊಮ್ಮೆ ಅದೇ ಕಾರ್ಮಿಕರಿಗೆ ಕಿಟ್ ನೀಡಲು ಸದ್ಯ ಇರುವ ನಿಯಮಗಳಲ್ಲಿ ಅವಕಾಶವಿಲ್ಲ. ಈ ನಿಯಮಕ್ಕೆ ಮಾರ್ಪಾಡು ತಂದು 5 ವರ್ಷಗಳ ಕಾಲಮಿತಿಯನ್ನು ನಿಗದಿಪಡಿಸಲು ಚಿಂತನೆ ನಡೆಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿಂದು ಶಾಸಕ ಹರೀಶ್ ಪೂಂಜಾ ಅವರ ಗಮನ ಸೆಳೆಯುವ ಸೂಚನೆಗೆ ಅವರು ಉತ್ತರಿಸಿದರು.

ಕಾರ್ಮಿಕರ ಕಲ್ಯಾಣ ಮಂಡಳಿಯಲ್ಲಿ ಈ ವಿಷಯವನ್ನು ಪ್ರಸ್ತಾಪಿಸಿ ಟೂಲ್ ಕಿಟ್ ಪಡೆಯುವ ಫಲಾನುಭವಿಗಳಿಗೆ ಕಾಲಮಿತಿ ನಿಗದಿ ಮಾಡಲಾಗುವುದು. ಶೇ.13ರಷ್ಟು ಕಾರ್ಮಿಕ ಮಹಿಳೆಯರು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ವರದಿ ಬಂದಿದೆ. ಆದ್ದರಿಂದ ಸರ್ಕಾರ ಪೌಷ್ಠಿಕ ಆಹಾರದ ಕಿಟ್‍ಗಳನ್ನು ನೀಡಲು ಸಿದ್ದತೆ ನಡೆಸಿದೆ. ವ್ಯಾಸಂಗ ಮಾಡುತ್ತಿರುವ ಕಾರ್ಮಿಕರ ಮಕ್ಕಳಿಗೆ ಈ ಹಿಂದೆ ಶಾಲಾಕಿಟ್ ನೀಡಲಾಗುತ್ತಿತ್ತು. ಇದರ ಬದಲಾಗಿ ವಿದ್ಯಾರ್ಥಿವೇತನ ನೀಡುತ್ತಿರುವುದಾಗಿ ಸಚಿವ ಸಂತೋಷ್ ಲಾಡ್ ಸ್ಪಷ್ಟಪಡಿಸಿದರು.

ಇದೇ ವೇಳೆ ರಾಣೆಬೆನ್ನೂರು ಇ.ಎಸ್.ಐ ಆಸ್ಪತ್ರೆಗೆ ಅಗತ್ಯವಿರುವ ವೈದ್ಯರನ್ನು ನೇಮಿಸುವುದಾಗಿ ಸಚಿವ ಸಂತೋಷ್ ಲಾಡ್ ಶಾಸಕ ಪ್ರಕಾಶ್ ಕೆ.ಕೋಳಿವಾಡ ಅವರ ಗಮನ ಸೆಳೆಯುವ ಪ್ರಶ್ನೆಗೆ ಉತ್ತರಿಸಿದರು.


Share

You cannot copy content of this page