ಬೆಳಗಾವಿ : ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ವಿಧಾನ ಪರಿಷತ್ತಿನ ಕಲಾಪದ ಶೂನ್ಯ ವೇಳೆಯಲ್ಲಿ ಎರಡು ಸದನ ಸಮಿತಿಗಳ ಕಾಲಾವಕಾಶ ವಿಸ್ತರಣೆ ಪ್ರಸ್ತಾವನೆಗಳನ್ನು ಮಂಡಿಸಲಾಯಿತು.
ಪ್ರಾಥಮಿಕ ಶಾಲೆಯಿಂದ ಪ್ರೌಢ ಶಾಲೆಗೆ, ಪ್ರೌಢ ಶಾಲೆಯಿಂದ ಪದವಿ ಪೂರ್ವ ಕಾಲೇಜುಗಳಿಗೆ ಪದೋನ್ನತಿ ಹೊಂದಿದ ಶಿಕ್ಷಕರುಗಳು ಹಾಗೂ 10, 15, 20, 25 ಮತ್ತು 30 ವರ್ಷಗಳ ಕಾಲಬದ್ಧ ವೇತನ ಮುಂಬಡ್ತಿ ಸೌಲಭ್ಯಗಳನ್ನು ಪಡೆದಿರುವ ಶಿಕ್ಷಕರುಗಳ ನಡುವಿನ ವೇತನ ತಾರತಮ್ಯವನ್ನು ಸರಿಪಡಿಸುವ ಕುರಿತು ರಚಿಸಲಾಗಿರುವ ವಿಶೇಷ ಸದನ ಸಮಿತಿಯ ಅವಧಿಯನ್ನು 2025 ರ ಡಿಸೆಂಬರ್ 02 ರಿಂದ ಆರು ತಿಂಗಳವರೆಗೆ ವಿಸ್ತರಿಸುವ ಪ್ರಸ್ತಾವನೆಯನ್ನು ವಿಶೇಷ ಸದನ ಸಮಿತಿಯ ಅಧ್ಯಕ್ಷರಾದ ಪುಟ್ಟಣ್ಣ ಅವರು ಮೇಲ್ಮನೆಯಲ್ಲಿ ಮಂಡಿಸಿದರು.
ಪರಿಷತ್ತಿನ ಸರ್ವ ಸದಸ್ಯರು ಧ್ವನಿಮತದ ಮೂಲಕ ಪ್ರಸ್ತಾವನೆ ಅಂಗೀಕಾರಕ್ಕೆ ಒಪ್ಪಿಗೆ ಸೂಚಿಸಿದರು.
ರಾಜ್ಯದಲ್ಲಿ 2020-21ನೇ ಸಾಲಿನಲ್ಲಿ ಹೊಸದಾಗಿ ನರ್ಸಿಂಗ್ ಮತ್ತು ಅಲೈಡ್ ಹೆಲ್ತ್ ಸೈನ್ಸಸ್ ಕಾಲೇಜುಗಳಿಗೆ ಮೂಲ ಸೌಕರ್ಯಗಳಿಲ್ಲದಿದ್ದರೂ ಅನುಮತಿ ನೀಡಿ, ಇಂಡಿಯನ್ ನರ್ಸಿಂಗ್ ಕೌನ್ಸಿಲ್ ಅವರು ಹೊರಡಿಸಿರುವ ಮಾರ್ಗಸೂಚಿಗಳನ್ನು ಉಲ್ಲಂಘಿಸಿರುವ ವಿಷಯವನ್ನು ಪರಿಶೀಲಿಸಿ ವರದಿಯನ್ನು ಸಲ್ಲಿಸಲು ರಚಿಸಲಾಗಿರುವ ವಿಶೇಷ ಜಂಟಿ ಸದನ ಸಮಿತಿಯ ಅವಧಿಯನ್ನು 2025 ರ ಜುಲೈ 14 ರಿಂದ ಹನ್ನೆರಡು ತಿಂಗಳವರೆಗೆ ವಿಸ್ತರಿಸುವ ಪ್ರಸ್ತಾವನೆಯನ್ನು ವಿಶೇಷ ಜಂಟಿ ಸದನ ಸಮಿತಿಯ ಅಧ್ಯಕ್ಷರಾದ ಎಸ್ ವ್ಹಿ. ಸಂಕನೂರ ಮಂಡಿಸಿದರು.
ಪರಿಷತ್ತಿನ ಎಲ್ಲ ಸದಸ್ಯರು ಧ್ವನಿಮತದ ಮೂಲಕ ಪ್ರಸ್ತಾವನೆಯ ಅಂಗೀಕಾರಕ್ಕೆ ಒಪ್ಪಿಗೆ ಸೂಚಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಅವರು, ಪ್ರಸ್ತಾವನೆಯ ಅಂಗೀಕಾರವನ್ನು ಘೋಷಿಸಿದರು.
