ಸಮಗ್ರ ಸುದ್ದಿ

ಚಿಕ್ಕನಾಯಕನಹಳ್ಳಿ ಒಂದೇ ಕ್ಷೇತ್ರದಲ್ಲಿ 2,800 ಕೋಟಿ ರೂ. ಮೊತ್ತದ ಯೋಜನೆ ಕಾಮಗಾರಿ ಪ್ರಗತಿ: ಡಿಸಿಎಂ ಡಿ.ಕೆ. ಶಿವಕುಮಾರ್‌

Share

ಬೆಳಗಾವಿ : ಚಿಕ್ಕನಾಯಕನಹಳ್ಳಿ ತಾಲ್ಲೂಕು ಒಂದರಲ್ಲೇ ಕಾವೇರಿ ನೀರಾವರಿ ನಿಗಮ ನಿಯಮಿತ, ವಿಜೆಎನ್‌ ಎಲ್, ಭದ್ರಾ ಮೇಲ್ದಂಡೆ ಯೋಜನೆಗಳನ್ನು ಪಡೆದುಕೊಂಡಿದ್ದಾರೆ. ಸುಮಾರು 2,800 ಕೋಟಿ ರೂ. ಮೊತ್ತದ ಕಾಮಗಾರಿಗಳು ಇದೊಂದೇ ತಾಲ್ಲೂಕಿನಲ್ಲಿ ನಡೆಯುತ್ತಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಹೇಳಿದರು.

ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆ ಪರಿಷತ್ ‌ಸದಸ್ಯರಾದ ರಮೇಶ್‌ ಬಾಬು ಅವರು ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ಕೈಗೊಂಡಿರುವ ನೀರಾವರಿ ಯೋಜನೆಗಳು ಯಾವುವು ಹಾಗೂ ಎಷ್ಟು ಯೋಜನೆಗಳು ಪ್ರಗತಿಯಲ್ಲಿವೆ ಎನ್ನುವ ಪ್ರಶ್ನೆಗೆ ಉತ್ತರಿಸಿದರು.

ಕೇಂದ್ರ ಸರ್ಕಾರ ಭದ್ರಾ ಮೇಲ್ದಂಡೆಗೆ ಘೋಷಿಸಿದ 5,300 ಕೋಟಿ ರೂ. ಹಣ ನೀಡಿದರೆ, ಸಾಕಷ್ಟು ಕೆಲಸಗಳನ್ನು ಮುಗಿಸಬಹುದು. ನಾನು ಪದೇ, ಪದೇ ಕೇಂದ್ರ ಸರ್ಕಾರ ಹಣ ಕೊಟ್ಟಿಲ್ಲ ಎಂದರೆ ವಿಪಕ್ಷಗಳಿಗೆ ಬೇಸರವಾಗಬಹುದು. ಅವರು ಕೊಡದೇ ಇದ್ದರು, ಈ ಭಾಗದ ಕೆಲಸಗಳನ್ನು ಪೂರ್ಣಗೊಳಿಸಬೇಕಿದೆ. ಇನ್ನು ಈ ಭಾಗದಲ್ಲಿ ಅರಣ್ಯ ಭೂಮಿ ಬಳಕೆಗೆ ಅನುಮತಿ ಸಿಗಬೇಕಿದೆ. ಅನುಮತಿ ಸಿಕ್ಕರೆ ಹೆಚ್ಚಿನ ಕೆಲಸ ಮುಗಿದಂತೆ ಎಂದು ತಿಳಿಸಿದರು.

ಶಿರೂರು ಏತ ನೀರಾವರಿ ಯೋಜನೆ ಕುರಿತು ಬಿಜೆಪಿಯ ಪಿ.ಎಚ್. ಪೂಜಾರ್‌ ಅವರ ಪ್ರಶ್ನೆಗೆ ಉತ್ತರಿಸಿದ ಡಿಸಿಎಂ ಅವರು, ಬಾಗಲಕೋಟೆ ತಾಲ್ಲೂಕಿನ ಸುಮಾರು 10,224.57 ಹೆಕ್ಟೇರ್‌ ಪ್ರದೇಶಕ್ಕೆ 1.6 ಟಿಎಂಸಿ ನೀರನ್ನು ಬಳಸಿ ಸುಮಾರು ಶಿರೂರು ಏತ ನೀರಾವರಿ ಯೋಜನೆ ಮೂಲಕ ನೀರುಣಿಸುವ ಯೋಜನೆ ಪ್ರಗತಿಯಲ್ಲಿದೆ. ಈ ಯೋಜನೆಯನ್ನು ಎರಡು ಹಂತಗಳಲ್ಲಿ ಅನುಮೋದನೆ ನೀಡಲಾಗಿದೆ ಎಂದರು.

ಒಂದನೇ ಹಂತದಲ್ಲಿ ಕಾಲುವೆ, ಜಾಕ್‌ ವೆಲ್‌, ಪಂಪ್‌ ಹೌಸ್‌ ಘಟಕಗಳ ಕೆಲಸ ಪ್ರಗತಿಯಲ್ಲಿದೆ. ಎರಡನೇ ಹಂತದ ಕಾಮಗಾರಿಗೆ 157 ಕೋಟಿ ರೂ. ಅಂದಾಜು ಪಟ್ಟಿಯನ್ನು 21.02.2024 ರಂದು ಸಮಿತಿ ಪರಿಶೀಲನೆ ಮಾಡಿದೆ. 04.07.2024 ರಂದು ಟೆಂಡರ್‌ ಪ್ರಕಟಣೆಯನ್ನು ಸಹ ಹೊರಡಿಸಲಾಗಿದೆ. ತಾಂತ್ರಿಕ ಮೌಲ್ಯಮಾಪನವನ್ನು ಮಾಡಲಾಗಿದೆ. 02.06.2025 ರಂದು ಮಂಡಳಿ ಉಪಸಮಿತಿ ಮುಂದೆ ಟೆಂಡರ್‌ ಮೌಲ್ಯವನ್ನು ಸಲ್ಲಿಕೆ ಮಾಡಲಾಗಿದೆ. ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆದ ನಂತರ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಎರಡು ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ನಮ್ಮ ಸರ್ಕಾರ ಬದ್ಧವಾಗಿದೆ:

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಸುಮಾರು 2 ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ನಾವು ಇದಕ್ಕಾಗಿ ನಮ್ಮದೇ ಆದ ಸಮಯ ನಿಗದಿ ಮಾಡಿಕೊಂಡಿದ್ದೇವೆ. ಇದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ ಎಂದು ಪರಿಷತ್‌ ವಿಪಕ್ಷ ನಾಯಕ ನಾರಾಯಣಸ್ವಾಮಿ ಅವರಿಗೆ ಪ್ರತಿಕ್ರಿಯೆ ನೀಡಿದರು.

ಬಿಜೆಪಿಯ ಹಣಮಂತ ನಿರಾಣಿ ಅವರು ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಏನು ಕ್ರಮ ತೆಗೆದುಕೊಂಡಿದೆ ಎನ್ನುವ ಪ್ರಶ್ನೆಗೆ ಮುಖ್ಯಮಂತ್ರಿಯವರು ಉತ್ತರಿಸಿದ ನಂತರ ಡಿಸಿಎಂ ಅವರು ಮಾತನಾಡಿ ಸ್ಪಷ್ಟನೆ ನೀಡಿದರು.

ಶಿಕ್ಷಣ ಇಲಾಖೆಯಲ್ಲಿ 50 ಸಾವಿರ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಹೇಳಿದ್ದಾರೆ. ಒಳಮೀಸಲಾತಿ ವಿಚಾರ ಬಾಕಿ ಇರುವ ಕಾರಣಕ್ಕೆ ಒಂದಷ್ಟು ಭರ್ತಿ ಕೆಲಸ ಬಾಕಿಯಿದೆ ಎಂದರು.


Share

You cannot copy content of this page