ಸಮಗ್ರ ಸುದ್ದಿ

ರೈತರ ಬೆಳೆ ಸಮೀಕ್ಷೆಗೆ GPS ಆಧಾರಿತ ಮೊಬೈಲ್ ತಂತ್ರಾಂಶ ಬಳಕೆ: ಸಚಿವ ಎನ್.ಚಲುವರಾಯಸ್ವಾಮಿ

Share

ಬೆಳಗಾವಿ : ರೈತರ ಅನುಕೂಲಕ್ಕಾಗಿ ಜಮೀನುಗಳಲ್ಲಿ ಬೆಳೆದ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲು ಡಿಪಿಎಆರ್ ಇಲಾಖಾ ವತಿಯಿಂದ ಅಭಿವೃದ್ಧಿ ಪಡಿಸಿರುವ ಜಿ.ಪಿ.ಎಸ್ ಆಧಾರಿತ ಆ್ಯಂಡ್ರಾಯ್ಡ್ ಮೊಬೈಲ್ ತಂತ್ರಾಂಶವನ್ನು ಬಳಸಿ ರೈತರ ಬೆಳೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ತಿಳಿಸಿದರು..

ತರೀಕೆರೆ ವಿಧಾನಸಭಾ ಕ್ಷೇತ್ರದ ಶಾಸಕ ಶ್ರೀನಿವಾಸ್ ಜಿ.ಹೆಚ್. ರವರ ಚುಕ್ಕೆ ಗುರುತಿನ ಪ್ರಶ್ನೆಗೆ ವಿಧಾನಸಭೆಯಲ್ಲಿಂದು ಉತ್ತರಿಸಿದ ಸಚಿವರು, ರಾಜ್ಯದ ಎಲ್ಲಾ ಕಂದಾಯ ಗ್ರಾಮಗಳಲ್ಲಿ ಖಾಸಗಿ ಕೃಷಿ ಜಮೀನುಗಳಲ್ಲಿ ಬೆಳೆ ಸಮೀಕ್ಷೆಯನ್ನು ಕೈಗೊಳ್ಳಲಾಗುತ್ತಿದ್ದು ಸ್ವತಃ ರೈತರೇ “ಬೆಳೆ ಸಮೀಕ್ಷೆ ರೈತರ ಆಪ್” ನಲ್ಲಿ ಬೆಳೆ ಮಾಹಿತಿ ನಮೂದಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಸಚಿವರು ತಿಳಿಸಿದರು..

2017 ನೇ ಸಾಲಿನಿಂದ ಸರ್ಕಾರಿ ಅಧಿಕಾರಿಗಳ ( ಕಂದಾಯ, ಕೃಷಿ , ತೋಟಗಾರಿಕೆ, ಹಾಗೂ ರೇಷ್ಮೆ) ಮೂಲಕ ಬೆಳೆ ಸಮೀಕ್ಷೆಯನ್ನು ಪ್ರಾರಂಭಿಸಲಾಗಿದ್ದು, 2018-19 ನೇ ಸಾಲಿನಿಂದ ಆಯಾ ಗ್ರಾಮಗಳಲ್ಲಿ ಲಭ್ಯವಿರುವ ಮಾಹಿತಿ ತಂತ್ರಜ್ಞಾನದ ಬಗ್ಗೆ ತಿಳುವಳಿಕೆ ಇರುವ ಯುವಕರನ್ನು (ಖಾಸಗಿ ನಿವಾಸಿಗಳು) ಬಳಸಿಕೊಂಡು ಖಾಸಗಿ ನಿವಾಸಿಗಳ ಆಪ್ ಮೂಲಕ ಸಮೀಕ್ಷೆ ಕೈಗೊಳ್ಳಲಾಗುತ್ತಿದೆ.

ಕಾರ್ಯಕ್ರಮದ ಉದ್ದೇಶ ಜಿಪಿಎಸ್ ಆಧಾರಿತ ಮೊಬೈಲ್ ಅಪ್ಲಿಕೇಶನ್ ಬಳಸಿ ರೈತರ ಜಮೀನಿನ ಸರ್ವೆ ನಂಬರ್, ಉಪ ಸರ್ವೆ ನಂಬರ್ ವಾರು ಬೆಳೆ ಪ್ರದೇಶದ ನಿಖರ ಮಾಹಿತಿ ದಾಖಲಿಸಬಹುದು ಎಂದು ಸಚಿವರು ತಿಳಿಸಿದರು.

ಇನ್ನೂ 2020- 21 ನೇ ಸಾಲಿನಿಂದ ರೈತರೇ ಸ್ವತಃ ತಮ್ಮ ಜಮೀನಿನಲ್ಲಿ ಬೆಳದ ಬೆಳೆಯನ್ನು ರೈತರ ಆಪ್ ಮೂಲಕ ನಮೂದಿಸಲು ಅವಕಾಶ ಕಲ್ಪಿಸಿದ್ದು, 2024- 25 ನೇ ಸಾಲಿನಲ್ಲಿ ರೈತರ ಬೆಳೆಯ ನೈಜ ಛಾಯಾಚಿತ್ರ ದಾಖಲಾತಿಯನ್ನು ಖಚಿತಪಡಿಸಿಕೊಳ್ಳಲು ಮೊಬೈಲ್ ಆಪ್ ನಲ್ಲಿ ” Tilt angle ಮತ್ತು “AI tool” ವೈಶಿಷ್ಟ್ಯಗಳನ್ನು ಅಳವಡಿಸಲಾಗಿದೆ.

ಪ್ರಸ್ತುತ ರೈತರ ಮೊಬೈಲ್ ಆಪ್ ಹಾಗೂ ಖಾಸಗಿ ನಿವಾಸಿಗಳ ಆಪ್ ಮುಖಾಂತರ ಪೂರ್ವ ಮುಂಗಾರು, ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮುಗಳಲ್ಲಿ ಬೆಳೆ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ಹೇಳಿದರು.


Share

You cannot copy content of this page