ಸಮಗ್ರ ಸುದ್ದಿ

ಪರಿಸರ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳ ಕೇಂದ್ರಗಳಾಗಿ ಕರಾವಳಿ ಪ್ರದೇಶದಲ್ಲಿನ ದ್ವೀಪಗಳ ಅಭಿವೃದ್ಧಿ : ಸಚಿವ ಮಂಕಾಳ ಎಸ್ ವೈದ್ಯ

Share

ಬೆಳಗಾವಿ: ರಾಜ್ಯದ ಕರಾವಳಿ ಪ್ರದೇಶದಲ್ಲಿನ 106 ದ್ವೀಪಗಳನ್ನು ಪರಿಸರ ಹಾಗೂ ಪ್ರವಾಸೋದ್ಯಮ ಚಟುವಟಿಕೆಗಳ ಕೇಂದ್ರಗಳಾಗಿ ಅಭಿವೃದ್ಧಿ ಪಡಿಸಲು ಉದ್ದೇಶಿಸಲಾಗಿದೆ ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಸಚಿವರಾದ ಮಂಕಾಳ ಎಸ್ ವೈದ್ಯ ಅವರು ತಿಳಿಸಿದ್ದಾರೆ.

ಅವರು ವಿಧಾನ ಪರಿಷತ್ ನಲ್ಲಿ ಸದಸ್ಯ ರಮೇಶ್ ಬಾಬು ಅವರ ಚುಕ್ಕೆ ಗುರುತಿನ ಪ್ರಶ್ನೆಗೆ ಉತ್ತರಿಸಿ, ಉತ್ತರ ಕನ್ನಡ ಜಿಲ್ಲೆಯಲ್ಲಿನ 7 ದ್ವೀಪಗಳನ್ನು ಪರಿಸರ ಪ್ರವಾಸೋದ್ಯಮವಾಗಿ ಸಾರ್ವಜನಿಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲು ವ್ಯವಹರಣಾ ಸಲಹೆಗಾರರನ್ನು ಆಯ್ಕೆ ಮಾಡಲಾಗಿದ್ದು, ಕಾರ್ಯ ಸಾಧ್ಯತಾ ವರದಿ ತಯಾರಿಸಲಾಗುತ್ತಿದೆ ಎಂದರು.

ಉಡುಪಿ ಜಿಲ್ಲೆಯ 7 ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 1 ದ್ವೀಪಗಳಿಗೆ Feasibility Report ತಯಾರಿಸಲಾಗಿದೆ. ಈ ಪೈಕಿ 3 ದ್ವೀಪಗಳಾದ ದರಿಯಾ ಬಹದ್ದೂರ್ ಘಡ, ಮಲ್ಪೆ ಮತ್ತು ಅಯಾಬಾ ದ್ವೀಪಗಳನ್ನು ಅಭಿವೃದ್ಧಿಪಡಿಸಲು GIS (Master Plan) ಸಿದ್ಧಪಡಿಸಲಾಗಿದೆ. ರಾಜ್ಯವು ಸುಮಾರು 185.21 ನಾಟಿಕಲ್ ಮೈಲಿ (ಸುಮಾರು 343 ಕಿ.ಮೀ) ಕಡಲ ತೀರವನ್ನು ಹೊಂದಿದ್ದು, ರಾಜ್ಯದಲ್ಲಿ ಒಟ್ಟು 13 ಸಣ್ಣ ಬಂದರುಗಳು ಹಾಗೂ ಒಂದು ಬೃಹತ್ ಬಂದರು (ನವ ಮಂಗಳೂರು ಬಂದರು) ಇರುತ್ತದೆ.

2024-25ನೇ ಸಾಲಿನಲ್ಲಿ ಕಾರವಾರ ಬಂದರಿನಲ್ಲಿ 5,50,502 ಮೆಟ್ರಿಕ್ ಟನ್ ಸರಕು ನಿರ್ವಹಣೆ ಹಾಗೂ ಹಳೇ ಮಂಗಳೂರು ಬಂದರಿನಲ್ಲಿ 55,505 ಮೆಟ್ರಿಕ್ ಟನ್ ಸರಕು ನಿರ್ವಹಣೆ ವಾರ್ಷಿಕ ವಹಿವಾಟು ಮಾಡಲಾಗಿದ್ದು, ಉಳಿದ ಬಂದರುಗಳಲ್ಲಿ ಯಾವುದೇ ವಾಣಿಜ್ಯ ಸರಕು ವಹಿವಾಟು ನಡೆಯುತ್ತಿರುವುದಿಲ್ಲ.

ರಾಜ್ಯದಲ್ಲಿ ಮೀನುಗಾರರಿಗೆ ತೊಂದರೆಯಾಗದಂತೆ ಬಂದರುಗಳನ್ನು ಮತ್ತು ಕರಾವಳಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಮಾಡಲಾಗುವುದು ಎಂದರು.


Share

You cannot copy content of this page