ಸಮಗ್ರ ಸುದ್ದಿ

ರೂ.1731 ಕೋಟಿ ವೆಚ್ಚದಲ್ಲಿ ವೃಷಭಾವತಿ ಏತ ನೀರಾವರಿ ಯೋಜನೆ ಜಾರಿ – ಸಚಿವ ಎನ್.ಎಸ್.ಬೋಸರಾಜು

Share

ಬೆಳಗಾವಿ: ವೃಷಭಾವತಿ ಏತ ನೀರಾವರಿ ಯೋಜನೆಗೆ ಹಿಂದಿನ ಸರ್ಕಾರ 2017-18ರಲ್ಲಿ ರೂ.851 ಕೋಟಿ ವೆಚ್ಚದಲ್ಲಿ ಯೋಜನೆ ರೂಪಿಸಿತ್ತು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಿ.ಎಸ್.ಟಿ ಹಾಗೂ ಇತರೆ ವೆಚ್ಚಗಳೊಂದಿಗೆ ರೂ.1081 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಅನುಷ್ಠಾನಗೊಳಿಸಿತ್ತು. ನಂತರ ಹೆಚ್ಚುವರಿಯಾಗಿ ರೂ.650 ಕೋಟಿ ಹಣವನ್ನು ಬಿಡುಗಡೆ ಯೋಜನೆಗೆ ರೂಪಿಸಿದ್ದು, ಒಟ್ಟು ರೂ.1,731 ಕೋಟಿ ವೆಚ್ಚದಲ್ಲಿ ವೃಷಭಾವತಿ ಏತನ ನೀರಾವರಿ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್.ಬೋಸರಾಜು ಹೇಳಿದರು.

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನಮಂಡಲದ ಅಧಿವೇಶನದಲ್ಲಿಂದು ಶಾಸಕ ಶ್ರೀನಿವಾಸಯ್ಯ ಅವರ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿ ಅವರು ಮಾತನಾಡಿದರು.

ಏಷ್ಯಾ ಖಂಡದಲ್ಲಿಯೇ ಮಾದರಿ ಎನಿಸಿದ ವೃಷಭಾವತಿ ಏತ ನೀರಾವರಿ ಯೋಜನೆಯನ್ನು ಲೋಕಸಭೆಯ ಸಂಸದರ ತಂಡ ಹಾಗೂ ಜಲಶಕ್ತಿ ಮಂತ್ರಾಲಯ ಮೆಚ್ಚಿಕೊಂಡಿದೆ. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ತ್ಯಾಜ್ಯ ನೀರು ಸಂಸ್ಕರಣಾ ಘಟಕಗಳಿಂದ 148 ಎಂ.ಎಲ್.ಡಿ ನೀರನ್ನು ಸಂಸ್ಕರಿಸುತ್ತಿದೆ. ಇದನ್ನು ಸಣ್ಣ ನೀರಾವರಿ ಇಲಾಖೆ ಕೆ.ಸಿ. ವ್ಯಾಲಿ ಹಾಗೂ ಹೆಚ್.ಎನ್. ವ್ಯಾಲಿಗಳ ಮೂಲಕ ಬೆಂಗಳೂರು, ತುಮಕೂರು, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸಲಾಗುತ್ತಿದೆ ಎಂದರು.

ಇದರಿಂದ ಈ ಪ್ರದೇಶಗಳಲ್ಲಿ ಅಂರ್ತಲಮಟ್ಟ 1500 ಅಡಿಗಳಿಂದ 250 ಅಡಿಗಳಿಗೆ ಏರಿಕೆಯಾಗಿದೆ. ಎರಡು ಹಂತದಲ್ಲಿ ತ್ಯಾಜ್ಯ ನೀರನ್ನು ಸಂಸ್ಕರಿಸಲಾಗುತ್ತಿದ್ದು, ಇದರಿಂದ ರೈತರಿಗೆ ಯಾವುದೇ ಹಾನಿಯಾಗುವುದಿಲ್ಲ. ಈ ಕುರಿತು ದೇಶದ ಪ್ರತಿಷ್ಠಿತ ವಿಜ್ಞಾನ ಹಾಗೂ ಸಂಶೋಧನಾ ಸಂಸ್ಥೆಗಳು ವರದಿ ನೀಡಿ ಧೃಡಪಡಿಸಿವೆ.

ಯೋಜನೆಯ ಮುಖ್ಯ ಉದ್ದೇಶ ಕೆರೆಗಳ ಮರುಪೂರಣದಿಂದ ಅಂರ್ತಜಲ ಮಟ್ಟವನ್ನು ಹೆಚ್ಚಿಸುವುದಾಗಿದೆ. ಕೆರೆಗಳಲ್ಲಿ ಸಂಗ್ರಹವಾಗುವ ಸಂಸ್ಕರಿಸಿದ ನೀರು ನೇರವಾಗಿ ಜನರು ಹಾಗೂ ಜಾನುವಾರುಗಳಿಗೆ ಬಳಕೆ ಯೋಗ್ಯವಾಗಿರುವುದಿಲ್ಲ. 3ನೇ ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಿಸಿ ಕೆರೆಗಳಿಗೆ ತುಂಬಿಸುವ ಪ್ರಸ್ತಾವನೆ ಸರ್ಕಾರದ ಮಟ್ಟದಲ್ಲಿ ಇರುವುದಿಲ್ಲ ಎಂದು ಸಚಿವ ಎನ್.ಎಸ್.ಬೋಸರಾಜು ಸ್ಪಷ್ಟಪಡಿಸಿದರು.

ಶಾಸಕ ಶ್ರೀನಿವಾಸಯ್ಯ ಮಾತನಾಡಿ, ನೆಲಮಂಗಲ ಕ್ಷೇತ್ರ ವ್ಯಾಪ್ತಿಯಲ್ಲಿ ವೃಷಭಾವತಿ ಏತ ನೀರಾವರಿ ಯೋಜನೆಯಡಿ 68 ಕೆರೆಗಳನ್ನು ತುಂಬಿಸಲಾಗುತ್ತಿದೆ. ಇತ್ತೀಚೆಗೆ ನಿವೃತ್ತ ನ್ಯಾಯಾಧೀಶರು, ವೈದ್ಯರು, ವಿಜ್ಞಾನಿಗಳು, ಸಾಮಾಜಿಕ ಹೋರಾಟಗಾರು ಸಂಸ್ಕರಿಸಿದ ತ್ಯಾಜ್ಯ ನೀರು ಕಲುಷಿತದಿಂದ ಮುಕ್ತವಾಗಿಲ್ಲ. ದನಕರಗಳು ಕುಡಿಯಲು ಸಹ ಯೋಗ್ಯವಾಗಿಲ್ಲ ಎಂದು ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ 3 ಹಂತದಲ್ಲಿ ತ್ಯಾಜ್ಯ ನೀರು ಸಂಸ್ಕರಿಸುವುದಾದರೆ ಮಾತ್ರ ಕ್ಷೇತ್ರದ ಕೆರೆಗಳಿಗೆ ನೀರು ತುಂಬಿಸಲಿ, ಇಲ್ಲವಾದರೆ ಕೆರೆ ನೀರು ತುಂಬಿಸುವುದು ಬೇಡ ಎಂದು ಸಚಿವರಲ್ಲಿ ಕೋರಿದರು. ಇದಕ್ಕೆ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಧ್ವನಿಗೂಡಿಸಿದರು.

ಕೆರೆ ನೀರು ತುಂಬಿಸುವ ಯೋಜನೆಗೆ ಬೇಡಿಕೆ ಹೆಚ್ಚಿದೆ. ಶಾಸಕರು ತಮ್ಮ ಕ್ಷೇತ್ರ ವ್ಯಾಪ್ತಿಯ ಕೆರೆಗಳನ್ನು ತುಂಬಿಸುವುದು ಬೇಡಾ ಎಂದರೆ, ಬೇರೆ ಕ್ಷೇತ್ರಗಳ ಕೆರೆ ಯೋಜನೆಯಿಂದ ನೀರು ತುಂಬಿಸಲು ಇಲಾಖೆಗೆ ಯಾವುದೇ ಅಭ್ಯಂತರವಿಲ್ಲ ಎಂದು ಸಚಿವ ಎನ್.ಎಸ್.ಬೋಸರಾಜು ತಿಳಿಸಿದರು.

ಸಚಿವರು ಕೆರೆಗಳಿಗೆ ನೀರು ತುಂಬಿಸುವುದನ್ನು ನಿಲ್ಲಿಸುವುದಕ್ಕೂ ಮುನ್ನಾ ಸಂಬಂದಪಟ್ಟ ಶಾಸಕರೊಂದಿಗೆ ಸಭೆ ನಡೆಸಿ ಅವರ ಒಪ್ಪಿಗೆ ಪಡೆಯುವಂತೆ ಸಭಾಧ್ಯಕ್ಷ ಯು.ಟಿ.ಖಾದರ್ ಸಲಹೆ ನೀಡಿದರು.


Share

You cannot copy content of this page