ಬೆಳಗಾವಿ: ಉತ್ತರ ಕರ್ನಾಟಕ ಭಾಗದ ಜ್ವಲoತ ಸಮಸ್ಯೆಗಳ ಬಗ್ಗೆ ವಿಧಾನ ಪರಿಷತ್ ನಲ್ಲಿ ಸುಧೀರ್ಘ ವಿಶೇಷ ಚರ್ಚೆ ನಡೆಯಿತು.
ಉತ್ತರ ಕರ್ನಾಟಕ ಭಾಗದ ಜ್ವಲಂತ ಸಮಸ್ಯೆಗಳಾದ ಕೃಷ್ಣಾ ಮೇಲ್ದಂಡೆ ಯೋಜನೆ, ಮಹದಾಯಿ, ಕಳಸಾ ಬಂಡೂರಿ ಯೋಜನೆಗಳ ಅನುಷ್ಠಾನದ ಬಗ್ಗೆ, ಅರಣ್ಯ ಭೂಮಿ ಅತಿಕ್ರಮಣ, ಸಂತ್ರಸ್ತರ ಸಮಸ್ಯೆ ಹಾಗೂ ಪರಿಹಾರೋಪಾಯಗಳು, ರೈತರು ಎದುರಿಸುತ್ತಿರುವ ಸಮಸ್ಯೆಗಳು ಮತ್ತು ಪರಿಹಾರಗಳು, ಉದ್ಯೋಗ ಸೃಷ್ಟಿಗೆ ಕೈಗೊಳ್ಳಬೇಕಾಗಿರುವ ಕ್ರಿಯಾ ಯೋಜನೆಗಳು, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ, ಕೈಗಾರಿಕೆಗಳ ಸ್ಥಾಪನೆ ಕುರಿತು, ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ಬಗ್ಗೆ ಹಾಗೂ ಕನ್ನಡ ಶಾಲೆಗಳ ಪುನರ್ ನಿರ್ಮಾಣ ಸೇರಿದಂತೆ ನಾನಾ ವಿಷಯಗಳ ಬಗ್ಗೆ ಚರ್ಚೆ ನಡೆಯಿತು.
ಸದಸ್ಯರಾದ ಸುಶೀಲ್ ನಮೋಶಿ ಮಾತನಾಡಿ, ಉತ್ತರ ಕರ್ನಾಟಕ ಭಾಗಕ್ಕೆ 371 ಜೆ ಅನುಷ್ಠಾನಗೊಂಡಿದ್ದು, ಅದರಲ್ಲಿನ ಕೆಲವು ಲೋಪಗಳನ್ನು ಸರಿಪಡಿಸಬೇಕಿದೆ, ಈ ಭಾಗದಲ್ಲಿ ನೇಮಕಾತಿಗಳು ನಿರಂತರವಾಗಿ ನಡೆಯಬೇಕು, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಒತ್ತಾಯಿಸಿದರು.
ಸದಸ್ಯ ಜಕ್ಕಪ್ಪ ನವರ್ ಮಾತನಾಡಿ, ಕೃಷ್ಣ ಮೇಲ್ದoಡೆ 3 ನೇ ಹಂತದ ಕಾಮಗಾರಿ ಶೀಘ್ರದಲ್ಲಿ ಮುಕ್ತಾಯ ಗೊಳ್ಳಬೇಕು, ಎಲ್ಲಾ ಇಲಾಖೆ ಗಳಲ್ಲಿನ ಹಣದ ಸಮರ್ಪಕ ಮತ್ತು ಸಂಪೂರ್ಣ ಬಳಕೆ ಮಾಡುವುದರ ಮೂಲಕ ಅಭಿವೃದ್ಧಿಗೊಳಿಸಬೇಕೆಂದರು.
ಸದಸ್ಯ ವೈ. ಎಂ. ಸತೀಶ್ ಮಾತನಾಡಿ, ಭ್ರಷ್ಟಾಚಾರಕ್ಕೆ ನಿಯಂತ್ರಣ ಹಾಕಿ, ವಿದ್ಯಾಭ್ಯಾಸಕ್ಕೆ ಹೆಚ್ಚಿನ ಒತ್ತು ನೀಡಿ, ಈ ಭಾಗದ ಯೋಜನೆಗಳ ಅನುಷ್ಠಾನಕ್ಕೆ ಕಾಲಮಿತಿ ನಿಗಧಿ ಗೊಳಿಸಿ ಪೂರ್ಣಗೊಳಿಸಬೇಕು ಎಂದರು.
ಸದಸ್ಯ ಎಂ. ನಾಗರಾಜ್ ಮಾತನಾಡಿ, ಈ ಭಾಗದಲ್ಲಿ ಹೆಚ್ಚಿನ ಕೈಗಾರಿಕೆಗಳನ್ನು ಸ್ಥಾಪಿಸಿ ಉದ್ಯೋಗ ಸೃಷ್ಟಿಸಬೇಕು, ಹೆಚ್ಚಿನ ಸಂಖ್ಯೆಯ ಕೆ. ಪಿ. ಎಸ್. ಶಾಲೆಗಳನ್ನು ತೆರೆದು ಶಿಕ್ಷಣಕ್ಕೆ ಆದ್ಯತೆ ನೀಡಬೇಕು, ಇ. ಎಸ್. ಐ. ಆಸ್ಪತ್ರೆ ಹಾಗೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಆರಂಭಿಸಬೇಕು ಎಂದರು.
ಈ ಭಾಗದ ಅಭಿವೃದ್ಧಿಗಾಗಿ ಉನ್ನತ ಮಟ್ಟದ ಸಮಿತಿ ರಚಿಸಿ, ತಜ್ಞರ ವರದಿ ಪಡೆದು ಸಮಗ್ರವಾಗಿ ಅಭಿವೃದ್ಧಿ ಗೊಳಿಸಬೇಕೆಂದು ಸದಸ್ಯ ತಿಪ್ಪಣ್ಣಪ್ಪ ಕಮಕನೂರ್ ಒತ್ತಾಯಿಸಿದರು.
ಸದಸ್ಯ ತಳವಾರ ಸಾಬಣ್ಣ ಮಾತನಾಡಿ, ಪ್ರಾದೇಶಿಕ ಅಸಮತೊಲನೆ ನಿವಾರಿಸಿ, ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದರು.
ಉತ್ತರ ಕರ್ನಾಟಕ ಭಾಗಕ್ಕೆ ಅಟೊಮೊಬೈಲ್, ಸ್ಟೀಲ್, ಫಾರ್ಮಸುಟಿಕಲ್ ಸೇರಿದಂತೆ ವಿವಿಧ ಕ್ಲಸ್ಟರ್ ಗಳನ್ನು ಸ್ಥಾಪಿಸಿ, ಇಲ್ಲಿನ ಯುವ ಜನತೆಗೆ ಉದ್ಯೋಗ ಸೃಷ್ಟಿಸಬೇಕು, ಈ ಭಾಗದ ಅಭಿವೃದ್ಧಿಗೆ ನ್ಯಾಯ ಕೊಡಿಸುವ ಜವಾಬ್ದಾರಿ ಎಲ್ಲರಿಗೂ ಇದೆ, ರಾಜ್ಯ ಸರ್ಕಾರ ಪ್ರತಿ ವರ್ಷದ ಬಜೆಟ್ ನಲ್ಲಿ ವಿಶೇಷ ಅನುದಾನ ಘೋಷಣೆ ಮಾಡಬೇಕು ಎಂದರು.
ಸದಸ್ಯರಾದ ಹೇಮಲತಾ ನಾಯಕ್, ರಮೇಶ್ ಬಾಬು ಚರ್ಚೆಯಲ್ಲಿ ಭಾಗಿಯಾದರು.
